ಅಕ್ರಮ ಆಸ್ತಿ ಪ್ರಕರಣ: ಶಶಿಕಲಾ ಜೈಲು ಶಿಕ್ಷೆ ಇಂದಿಗೆ ಅಂತ್ಯ, ಆಸ್ಪತ್ರೆಯಿಂದಲೇ ಬಿಡುಗಡೆ ಸಾಧ್ಯತೆ
ಬೆಂಗಳೂರು, ಜನವರಿ 27: ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ತಮಿಳುನಾಡಿನ ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ, ಅವರ ಸಂಬಂಧಿ ಇಳವರಸಿ ಮತ್ತು ಸಹೋದರ ಸುಧಾಕರ್ ಅವರ ಜೈಲುವಾಸ ಇಂದಿಗೆ ಮುಕ್ತಾಯವಾಗಲಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದ ಮೂವರೂ ಬುಧವಾರ ಬಿಡುಗಡೆಯಾಗಲಿದ್ದಾರೆ.
ಆದರೆ ಕೋವಿಡ್ ಪಾಸಿಟಿವ್ಗೆ ಒಳಗಾಗಿರುವ ಶಶಿಕಲಾ ಮತ್ತು ಇಳವರಸಿ ಇಬ್ಬರೂ ಪ್ರಸ್ತುತ ಬೆಂಗಲೂರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಶಶಿಕಲಾ ಆರೋಗ್ಯದಲ್ಲಿ ಚೇತರಿಕೆ: ಐಸಿಯುನಿಂದ ಹೊರಕ್ಕೆ
ಜೈಲಿನಿಂದ ಬಿಡುಗಡೆ ಮಾಡುವ ಮುನ್ನ ಕೈದಿಗಳಿಂದ ವಿವಿಧ ದಾಖಲೆಗಳಿಗೆ ಸಹಿ ಹಾಕಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತದೆ. ಆದರೆ ಶಶಿಕಲಾ ಮತ್ತು ಇಳವರಸಿ ಅವರು ಆಸ್ಪತ್ರೆಯಲ್ಲಿರುವ ಕಾರಣ ಕಾರಾಗೃಹ ಅಧಿಕಾರಿಗಳು ಮಂಗಳವಾರ ಸ್ವತಃ ಆಸ್ಪತ್ರೆಗೆ ತೆರಳಿ, ಪಿಪಿಇ ಕಿಟ್ ಧರಿಸಿ ಅವರ ಸಹಿ ಸಂಗ್ರಹಿಸಿದ್ದಾರೆ. ಈ ಮೂಲಕ ಬುಧವಾರ ಅವರ ಬಿಡುಗಡೆಗೆ ಬೇಕಾದ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ.
ಶಶಿಕಲಾ ಮತ್ತು ಇಳವರಸಿ ಅನಾರೋಗ್ಯಕ್ಕೆ ತುತ್ತಾಗಿರುವುದರಿಂದ ಅವರು ಚೇತರಿಸಿಕೊಳ್ಳುವವರೆಗೂ ಕಾದು, ಬಳಿಕ ಪುನಃ ಜೈಲಿಗೆ ಕರೆದೊಯ್ದು, ಬಾಕಿ ಪ್ರಕ್ರಿಯೆಗಳನ್ನು ನಡೆಸುವುದರಿಂದ ವಿಳಂಬವಾಗಲಿದೆ. ಹೀಗಾಗಿ ಆಸ್ಪತ್ರೆಯಲ್ಲಿಯೇ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ, ಅಲ್ಲಿಂದಲೇ ಅವರ ಬಿಡುಗಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎನ್ನಲಾಗಿದೆ.
ಶಶಿಕಲಾ ಬಳಿಕ ಇಳವರಸಿಗೂ ಕೊರೊನಾ ವೈರಸ್ ಪಾಸಿಟಿವ್
ಶಶಿಕಲಾ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡುಬಂದಿದೆ. ಅವರ ಉಸಿರಾಟ ಸಮಸ್ಯೆ ಕಡಿಮೆಯಾಗಿದೆ. ಉಳಿದಂತೆ ರಕ್ತದೊತ್ತಡ, ಮದುಮೇಹ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ. ಪೊಲೀಸ್ ಅಧಿಕಾರಿಗಳು ಆಸ್ಪತ್ರೆ ವೈದ್ಯರಿಂದ ಶಶಿಕಲಾ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅವರು ಪ್ರಯಾಣಿಸುವಷ್ಟು ಚೇತರಿಸಿಕೊಂಡಿದ್ದರೆ, ತಮಿಳುನಾಡಿಗೆ ಕರೆದೊಯ್ದು ಅಲ್ಲಿ ಆಸ್ಪತ್ರೆಗೆ ದಾಖಲಿಸುವ ಬಗ್ಗೆ ಚರ್ಚೆ ನಡೆದಿದೆ. ಒಂದು ವೇಳೆ ಆಸ್ಪತ್ರೆಯಿಂದಲೇ ಅವರ ಬಿಡುಗಡೆ ಖಾತರಿಯಾದರೆ ಆಸ್ಪತ್ರೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಸಂಭವವಿದೆ. ಹೀಗಾಗಿ ಅಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲು ಚಿಂತನೆ ನಡೆಸಲಾಗಿದೆ.