ಶಶಿಕಲಾ ನಟರಾಜನ್ ಅಸ್ವಸ್ಥ, ಬೌರಿಂಗ್ ಆಸ್ಪತ್ರೆಗೆ ದಾಖಲು
ಬೆಂಗಳೂರು, ಜನವರಿ 20: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಮುಖ್ಯಮಂತ್ರಿ ಜಯಲಲಿತಾ ಪರಮಾಪ್ತೆ ಶಶಿಕಲಾ ನಟರಾಜನ್ ಅಸ್ವಸ್ಥಗೊಂಡಿದ್ದು, ಜೈಲಿನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸನ್ನಡತೆ ಆಧಾರದ ಮೇಲೆ ಅವಧಿಗೂ ಮುನ್ನ ಜೈಲಿನಿಂದ ಬಿಡುಗಡೆ ಮಾಡುವಂತೆ ಕೋರಿದ್ದ ಅರ್ಜಿ ತಿರಸ್ಕೃತಗೊಂಡಿದ್ದ ನಿಗದಿಯಂತೆ ಜನವರಿ 27, 2021ರಂದು ಶಶಿಕಲಾ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ನಡುವೆ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಶಶಿಕಲಾ ಅವರನ್ನು ಜೈಲಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
ಜ್ವರ, ಕಫ, ಉಸಿರಾಟ ತೊಂದರೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗಿದೆ, ಡಾ. ಮನೋಜ್ ಕುಮಾರ್ ನೇತೃತ್ವದಲ್ಲಿ ಶಶಿಕಲಾ ಆರೋಗ್ಯ ತಪಾಸಣೆ ನಡೆದಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಸನ್ನಡತೆ ಆಧಾರದ ಮೇಲೆ ಬಿಡುಗಡೆ ಬಯಸಿದ್ದ ಶಶಿಕಲಾಗೆ ಹಿನ್ನಡೆ
2014ರ ಸೆಪ್ಟೆಂಬರ್ ನಲ್ಲಿ ಸ್ಪೆಷಲ್ ಟ್ರಯಲ್ ಕೋರ್ಟ್ ನ್ಯಾ. ಜಾನ್ ಮೈಕೇಲ್ ಕನ್ಹಾ ಐಪಿಸಿ ಸೆಕ್ಷನ್ 109ರಡಿ ಜೆ ಜಯಲಲಿತಾ, ಶಶಿಕಲಾ, ಸುಧಾಕರನ್, ಇಳವರಸಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರು. ಶಶಿಕಲಾ ದತ್ತು ಪುತ್ರ ವಿಎನ್ ಸುಧಾಕರನ್, ಜೆ ಇಳವರಸಿ ಹಾಗೂ ಶಿಶಿಕಲಾ ಅವರಿಗೆ 2017ರ ಫೆಬ್ರವರಿ 15ರಂದು ಜೈಲುಶಿಕ್ಷೆ ಪ್ರಕಟವಾಗಿತ್ತು. ಈಗ 10 ಕೋಟಿ ರು ದಂಡ ಪಾವತಿಸಿದ ಬಗ್ಗೆ ನ್ಯಾಯಾಲಯದಿಂದ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಗೆ ಪತ್ರ ತಲುಪಿದ ಬಳಿಕ ಬಿಡುಗಡೆ ಕುರಿತ ಪ್ರಕ್ರಿಯೆ ಆರಂಭವಾಗಲಿದೆ.