ಸ್ಯಾಂಡಲ್ ವುಡ್ ಡ್ರಗ್ ಡೀಲ್ : ಆದಿತ್ಯ ಆಳ್ವಾಗೆ ಡೋಪಿಂಗ್ ಪರೀಕ್ಷೆ !
ಬೆಂಗಳೂರು, ಜನವರಿ, 14 : ಸ್ಯಾಂಡಲ್ ವುಡ್ ಡ್ರಗ್ ಜಾಲ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ದಿವಂಗತ ಜೀವರಾಜ್ ಆಳ್ವಾ ಅವರ ಪುತ್ರ ಆದಿತ್ಯ ಆಳ್ವಾ ನನ್ನು ಡೋಪಿಂಗ್ ಪರೀಕ್ಷೆಗೆ ಒಳಪಡಿಸಲಾಗಿದೆ. ಆಳ್ವಾ ತಲೆ ಕೂದಲು, ರಕ್ತ, ಮೂತ್ರದ ಮಾದರಿ ಹಾಗೂ ಉಗಿರಿನ ಭಾಗ ವನ್ನು ಪಡೆದು ಡೋಪಿಂಗ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಪರೀಕ್ಷೆ ಮೂಲಕ ಡ್ರಗ್ ಸೇವನೆ ಕುರಿತ ವೈಜ್ಞಾನಿಕ ಸಾಕ್ಷಾಧಾರಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಸಿಸಿಬಿ ಪೊಲೀಸರು ನಿರತರಾಗಿದ್ದಾರೆ.
ಚಾಲಕನ ಮೊಬೈಲ್ ಬಳಸಿ ಆದಿತ್ಯ ಆಳ್ವಾ ಸಿಕ್ಕಿಬಿದ್ದಿದ್ದು ಹೇಗೆ ?
ಸ್ಯಾಂಡಲ್ ವುಡ್ ಡ್ರಗ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ನಟಿ ಸಂಜನಾ, ರಾಗಿಣಿ ದ್ವಿವೇದಿ , ವೀರೇನ್ ಖನ್ನಾ, ರಾಹುಲ್ ತೋನ್ಸೆ ಮತ್ತಿತರ ಆರೋಪಿಗಳನ್ನು ಈ ಪರೀಕ್ಷೆಗೆ ಒಳಪಡಿಸಲಾಗಿತ್ತು. ರಾಗಿಣಿ ಡೋಪಿಂಗ್ ಪರೀಕ್ಷೆಗೆ ಒಳಪಡಿಸಿದಾಗ ಮೂತ್ರದಲ್ಲಿ ನೀರು ಬೆರೆಸಿ ಪೊಲೀಸರ ದಿಕ್ಕು ತಪ್ಪಿಸಿದ್ದರು. ಇದು ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿತ್ತು. ಆನಂತರ ಇದೀಗ ಆದಿತ್ವಾ ಆಳ್ವಾಗೆ ಡೋಪಿಂಗ್ ಪರೀಕ್ಷೆ ನಡೆಸಲಾಗಿದೆ.
ಆದಿತ್ಯ ಆಳ್ವಾ ಪೇಜ್ ತ್ರೀ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಈ ಪಾರ್ಟಿಗೆ ಬರುವ ಗ್ರಾಹಕರಿಗೆ ಡ್ರಗ್ ಮಾರಾಟ ಮಾಡಲಾಗುತ್ತಿತ್ತು. ಸ್ಯಾಂಡಲ್ ವುಡ್ ನಟಿಯರು ಡ್ರಗ್ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಪ್ರಮುಖ ಆರೋಪಿ ವೀರೇನ್ ಖನ್ನಾ ಜತೆ ಗುರುತಿಸಿಕೊಂಡಿದ್ದ ಆದಿತ್ಯಾ ಆಳ್ವಾ ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದ ಆರನೇ ಆರೋಪಿಯಾಗಿದ್ದರು. ಬಂಧನದ ಭೀತಿಯಿಂದ ತಲೆ ಮರೆಸಿಕೊಂಡಿದ್ದ ಆಳ್ವಾನನ್ನು ಇತ್ತೀಚೆಗೆ ಚೆನ್ನೈನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದರು.