ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಮಾಜಮುಖಿ ಗುದ್ಲೆಪ್ಪ ಹಳ್ಳಿಕೇರಿ, ವನಿತಾರಿಗೆ ಸನ್ಮಾನ

By Mahesh
|
Google Oneindia Kannada News

ಬೆಂಗಳೂರು, ಜು.30: ಬಸವನಗುಡಿಯ ಸಮಾಜ ಸೇವಕರ ಸಮಿತಿಯು ತನ್ನ 12ನೇ ವಾರ್ಷಿಕೋತ್ಸವದ ಅಂಗವಾಗಿ ಆಗಸ್ಟ್ 1 ರಂದು ನಗರದಲ್ಲಿ ಸಮಾಜ ಸೇವಕರ ದಿನಾಚರಣೆಯನ್ನು ಹಮ್ಮಿಕೊಂಡಿದೆ.

2002 ಆಗಸ್ಟ್ 1 ರಂದು ಆರಂಭವಾದ ಬೆಂಗಳೂರಿನ 'ಸಮಾಜ ಸೇವಕರ ಸಮಿತಿ' ಯು ಬರುವ ಆಗಸ್ಟ್ 1 ರಂದು ಸಂಜೆ 6 ಗಂಟೆಗೆ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ತನ್ನ 12ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.

ಪ್ರತಿವರ್ಷದಂತೆ ಈ ದಿನವನ್ನು 'ಸಮಾಜ ಸೇವಕರ ದಿನ' ವನ್ನಾಗಿ ಆಚರಿಸುತ್ತಿರುವ ಸಮಿತಿ ಅಂದು ಸಮಾಜದ ಏಳಿಗೆಗೆ ಸದ್ದಿಲ್ಲದೇ ದುಡಿಯುತ್ತಿರುವ ಇಬ್ಬರು ನಿಸ್ವಾರ್ಥ ಸಮಾಜ ಸೇವಕರನ್ನು ಗೌರವಿಸುತ್ತಿದೆ. ಹಿರಿಯ ಕನ್ನಡ ಭಾಷಾ ತಜ್ಞ, ಬಿ.ಎಮ್.ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಪಿ. ವಿ. ನಾರಾಯಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಇದುವರೆಗೂ ಸಮಾಜ ಸೇವಕರ ದಿನಾಚರಣೆ ನಿಮಿತ್ತ ಸುಮಾರು 26 ವಿವಿಧ ಕ್ಷೇತ್ರಗಳ ನಿಸ್ವಾರ್ಥ ಸಮಾಜ-ಸೇವಕ ಸಾಧಕರನ್ನು ಗೌರವಿಸಿರುವ ಸಮಿತಿ ಈ ಬಾರಿ ಹಾವೇರಿ ಜಿಲ್ಲೆ ಹೊಸರಿತ್ತಿಯ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಕಾರ್ಯದರ್ಶಿ ಗೋಪಣ್ಣ ಕುಲಕರ್ಣಿ ಹಾಗೂ ಬೆಂಗಳೂರಿನ ಯೋಗಶ್ರೀ ಸಂಸ್ಥೆಯ ಸೋದರಿ ವನಿತಾ ಅವರನ್ನು ಗೌರವಿಸುತ್ತಿದೆ. ಇಬ್ಬರು ಸಮಾಜಮುಖಿಗಳ ಬಗ್ಗೆ ಮುಂದೆ ಓದಿ...

ಕಾರ್ಯಕ್ರಮದ ವಿವರ :
ದಿನಾಂಕ: 1 ಆಗಸ್ಟ್ , 2014, ಸಂಜೆ ಆರರಿಂದ
ಸ್ಥಳ : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ. ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು
ಕಾರ್ಯಕ್ರಮ: ಇಬ್ಬರು ನಿಸ್ವಾರ್ಥ ಸಮಾಜ ಸೇವಕರಿಗೆ ಗೌರವ ಹಾಗೂ ಅವರ ಸಾಧನೆಯ ಕಿರುಚಿತ್ರ ಪ್ರದರ್ಶನ
ಎಲ್ಲರಿಗೂ ಮುಕ್ತ ಸ್ವಾಗತ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ಸಮಾಜ ಸೇವಕರ ಸಮಿತಿ: 94481 71069, 99863 72503

ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನ, ಹೊಸರಿತ್ತಿ, ಹಾವೇರಿ

ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನ, ಹೊಸರಿತ್ತಿ, ಹಾವೇರಿ

ಹಿರಿಯ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಗುದ್ಲೆಪ್ಪ ಹಳ್ಳಿಕೇರಿ ಯವರಿಂದ ಆರಂಭಗೊಂಡ ಗಾಂಧಿ ಗ್ರಾಮೀಣ ಗುರುಕುಲವನ್ನು ಕಳೆದ 30 ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಹೊಸರಿತ್ತಿಯ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನ. ಗಾಂಧೀಜಿಯವರ ಆದರ್ಶಗಳನ್ನು ನಿತ್ಯವೂ ಸ್ಮರಿಸುವ ಮತ್ತು ಸ್ವಾವಲಂಬಿ ಬದುಕನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದನ್ನು ಕಲಿಸುವ ಈ 'ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆ' ಗ್ರಾಮೀಣ ಬಡಮಕ್ಕಳ ಪಾಲಿನ ನಂದಗೋಕುಲ.


ಬಡ ಕುಟುಂಬಗಳಿಗೆ ಸೇರಿದ ಕೃಷಿ ಹಾಗೂ ಕೃಷಿ ಕಾರ್ಮಿಕರ ಪ್ರತಿಭಾವಂತ ೩೦೦ ಕ್ಕೂ ಹೆಚ್ಚು ಮಕ್ಕಳು ಈ ಶಾಲೆಯಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಉಚಿತ ಶಿಕ್ಷಣ, ಊಟ-ಉಪಚಾರ ನೀಡಿ ಬದುಕು ರೂಪಿಸಲಾಗುತ್ತದೆ. ರಾಜ್ಯ ಶಿಕ್ಷಣ ಪಠ್ಯ ಕ್ರಮದ ಜೊತೆಗೆ ಕೃಷಿ, ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆ ಕಲಿಸಲಾಗುತ್ತದೆ. ಗಾಂಧೀಜಿಯ ಅಚ್ಚುಮೆಚ್ಚಿನ ನೂಲು-ನೇಯ್ಗೆ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ.

ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರೀಯ ಪುರಸ್ಕಾರ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ. ಸ್ವಾವಲಂಬಿ ಜೀವನ ಸಾಗಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಇಲ್ಲಿ ನೈಸರ್ಗಿಕ ಕೃಷಿಯ ಪಾಠ ಹೇಳಿಕೊಡ ಲಾಗುತ್ತಿದೆ. ವಿದ್ಯಾರ್ಥಿಗಳೇ ಬೇಸಾಯದ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಹಳ್ಳಿಗಳು ಉದ್ದಾರವಾದರೆ ದೇಶ ಉದ್ಧಾರವಾಗುತ್ತದೆ ಎಂಬ ಆಶಯದಂತೆ ಹಳ್ಳಿಯ ಮಕ್ಕಳನ್ನು ನಿಜವಾದ ಅರ್ಥದಲ್ಲಿ ಸುಕ್ಷಿತರನ್ನಾಗಿ ಮಾಡುವುದಲ್ಲದೆ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ.

ಗುರುಕುಲದ ಮಕ್ಕಳಿಗೆ ವೈವಿಧ್ಯಮಯ ತರಬೇತಿ

ಗುರುಕುಲದ ಮಕ್ಕಳಿಗೆ ವೈವಿಧ್ಯಮಯ ತರಬೇತಿ

ಗುರುಕುಲದ ಮಕ್ಕಳಿಗೆ ಸಾವಯವ ಬೇಸಾಯದಲ್ಲಿ ತರಬೇತಿ ನೀಡುತ್ತಾರೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ ಇತ್ಯಾದಿಗಳಲ್ಲಿ ಅವರಿಗಿರುವ ಆಸಕ್ತಿಯನ್ನು ಹೆಚ್ಚಿಸಲಾಗುತ್ತಿದೆ. ಗುರುಕುಲದ ವಿದ್ಯಾರ್ಥಿಗಳು ಖಾದಿ ಸಮವಸ್ತ್ರದ ಉಡುಪು ಧರಿಸುತ್ತಾರೆ. ಅವರ ನಡೆ ನುಡಿ ಎಲ್ಲದರಲ್ಲೂ ಗಾಂಧೀಜಿಯವರ ಸರಳತೆ ಎದ್ದು ಕಾಣುತ್ತದೆ.

ಗುರುಕುಲದ ವಿದ್ಯಾರ್ಥಿಗಳಿಗೆ ವಿಜ್ಞಾನ, ಕಲೆ, ಸಾಹಿತ್ಯ ಇತ್ಯಾದಿಗಳ ಬಗ್ಗೆ ಆಸಕ್ತಿ ಬೆಳೆಸುವ ಪ್ರಯತ್ನಗಳೂ ಇಲ್ಲಿ ನಡೆಯುತ್ತವೆ. ಉತ್ತಮ ಶಿಕ್ಷಣ, ನಗರ ಹಾಗೂ ಪಟ್ಟಣ ಪ್ರದೇಶಗಳ ಕಾನ್ವೆಂಟ್‌ನಲ್ಲಿ ಮಾತ್ರ ಸಿಗುತ್ತದೆ ಎಂಬ ಭಾವನೆ ಇದೆ.

ಆದರೆ ಗಾಂಧೀಜಿಯವರು ಹೇಳಿದ ವಿಧಾಯಕ ಕಾರ್ಯಕ್ರಮಗಳ ಮೂಲಕವೂ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯವಿದೆ ಎನ್ನುವುದಕ್ಕೆ ಹೊಸರಿತ್ತಿ ಗಾಂಧೀ ಗುರುಕುಲ ಉತ್ತಮ ಉದಾಹರಣೆ.ಮಕ್ಕಳನ್ನು ಎಲ್ಲ ರೀತಿಯಲ್ಲೂ ಸ್ವಾವಲಂಬಿಗಳಾಗಿ ರೂಪಿಸುತ್ತಿರುವ ಈ ಶಾಲೆ ಹಲವು ವರ್ಷಗಳಿಂದ ಪ್ರತಿಶತ ನೂರಕ್ಕೆ ನೂರು ಎಸ್.ಎಸ್.ಎಲ್. ಸಿ ಫಲಿತಾಂಶ ದಾಖಲಿಸುತ್ತಿರುವುದು ವಿಶೇಷ.ಬಡ ಕುಟುಂಬದಲ್ಲಿ ಹುಟ್ಟಿ ಶಿಕ್ಷಣ ಮುಂದುವರೆಸಲಾಗದೆ ಅಸಕಾಯಕರಾದ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಿನ ಆಶಾಕಿರಣ, ಗಾಂಧಿ ವಿಚಾರಧಾರೆಯನ್ನು, ಆದರ್ಶಗಳನ್ನು ನಿತ್ಯವೂ ಸ್ಮರಿಸುವ ಮತ್ತು ಮಕ್ಕಳಿಗೆ ಸ್ವಾವಲಂಬಿ ಬದುಕನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದನ್ನು ಕಲಿಸುವ 'ಗಾಂಧಿ ಗ್ರಾಮೀಣ ಗುರುಕುಲ' ದ ಪರವಾಗಿ 'ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನ' ದ ಕಾರ್ಯದರ್ಶಿ ಗೋಪಣ್ಣ ಕುಲಕರ್ಣಿ ಸಮಿತಿಯ ಗೌರವ ಸ್ವೀಕರಿಸಲಿದ್ದಾರೆ.
ಸೋದರಿ ವನಿತಾ, ಯೋಗಶ್ರೀ, ಬೆಂಗಳೂರು

ಸೋದರಿ ವನಿತಾ, ಯೋಗಶ್ರೀ, ಬೆಂಗಳೂರು

ಬೆಂಗಳೂರಿನ ಗಿರಿನಗರದ 'ಯೋಗಶ್ರೀ' ಹಾಗೂ ಪಂಚವಟಿ ಯೋಗ ಕೇಂದ್ರದ ನಿರ್ದೇಶಕಿ, ಮಾರ್ಗದರ್ಶಕರಾಗಿರುವ ಸೋದರಿ ವನಿತಾ ದಿನನಿತ್ಯ ಸರಾಸರಿ 800 ಮಂದಿ ಎಲ್ಲ ವಯಸ್ಸಿನ ಯೋಗಾಭ್ಯಾಸಿಗಳಿಗೆ ಜಾತಿ ಮತ ಪಂಥ ಭೇದವಿಲ್ಲದೆ ಯೋಗಾಭ್ಯಾಸ ನೀಡುತ್ತಿದ್ದಾರೆ.

ಚರಿತ್ರೆ ಹಾಗೂ ಸಮಾಜ ಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸೋದರಿ ವನಿತಾ ಶಿಶು ಶಿಕ್ಷಣ ತರಬೇತಿ ಹಾಗೂ ಮಕ್ಕಳ ಮನಶಾಸ್ತ್ರ ಅಧ್ಯಯನ ದಲ್ಲಿ ವಿಶೇಷ ಅನುಭವ ಹೊಂದಿದ್ದಾರೆ.

ಯೋಗಗುರು ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮೀಜಿ ಯವರ ಮಾರ್ಗದರ್ಶನದಲ್ಲಿ ನುರಿತ ಯೋಗಪಟುವಾಗಿ ರೂಪುಗೊಂಡ ವನಿತಾ ನಂತರ ಅಜಿತಕುಮಾರ್ , ಸ್ವಾಮಿ ಆತ್ಮಾನಂದಪುರಿ ಹಾಗೂ ಬಿ. ಕೆ. ಎಸ್. ಐಯ್ಯಂಗಾರ್ ಅವರಲ್ಲಿ ಯೋಗ ತರಬೇತಿ ಪಡೆದರು. ಯೋಗದ ಜತೆ ಜತೆಗೇ ಪ್ರಾಣ ಚಿಕಿತ್ಸೆ, ರೇಖೀ ಚಿಕಿತ್ಸೆ, ಪ್ರಕೃತಿ ಚಿಕಿತ್ಸೆ, ಹೋಮಿಯೋಪತಿ, ಮನೆಮದ್ದು ಮುಂತಾದ ವಿಷಯಗಳಲ್ಲಿ ಪರಿಣಿತಿ ಗಳಿಸಿದರು.

1985 ರಲ್ಲಿ ಮಾ. ಅಜಿತ್ ರಿಂದ ಪ್ರೇರಣೆ ಪಡೆದು ಹಿಂದೂ ಸೇವಾ ಪ್ರತಿಷ್ಠಾನ ದಲ್ಲಿ ತೊಡಗಿಸಿಕೊಂಡ ವನಿತಾ ಸುಮಾರು 14 ವರ್ಷಗಳ ಕಾಲ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಯೋಗ ಹಾಗೂ ಮನೆಮದ್ದು ಶಿಬಿರಗಳನ್ನು ನಡೆಸಿದ್ದಾರೆ. ಇದುವರೆಗೂ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಇವರಿಂದ ಯೋಗ ಹಾಗೂ ಮನೆಮದ್ದಿನ ಶಿಕ್ಷಣ ಪಡೆದಿದ್ದಾರೆ.
ಒಂದು ಲಕ್ಷಕ್ಕೂ ಹೆಚ್ಚು ಮಂದಿ ತರಬೇತಿ ಪಡೆದಿದ್ದಾರೆ

ಒಂದು ಲಕ್ಷಕ್ಕೂ ಹೆಚ್ಚು ಮಂದಿ ತರಬೇತಿ ಪಡೆದಿದ್ದಾರೆ

ಸ್ವಂತ ಕೌಟುಂಬಿಕ ಜೀವನದ ಬಗ್ಗೆ ಯೋಚಿಸದೆ ಚಿಕ್ಕ ವಯಸ್ಸಿನಿಂದಲೂ ಕಳೆದ 40 ವರ್ಷಗಳಿಂದ ಸೋದರಿ ವನಿತಾ ಸಾಮಾಜಿಕ ಹಾಗೂ ಯೋಗ ಕ್ಷೇತ್ರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ.

ಇವರ ಯೋಗ ಹಾಗೂ ಮನೆ ಮದ್ದು ಶಿಕ್ಷಣ ದಿಂದ ಉಪಯೋಗ ಪಡೆದವರಲ್ಲಿ ಎಲ್ಲಾ ವರ್ಗದವರೂ, ಸ್ತ್ರೀ ಪುರುಷರೂ ಮಕ್ಕಳು, ವೃದ್ಧರೂ, ಮಾನಸಿಕ ಹಾಗೂ ದೈಹಿಕ ತೊಂದರೆ ಇರುವವರು, ಖೈದಿಗಳೂ ಇರುವುದು ವಿಶೇಷ. ಇವರಿಂದ ತರಬೇತಿ ಪಡೆದ ಸಾವಿರಾರು ಮಂದಿ ಇಂದು ರಾಜ್ಯದ ಅನೇಕ ಊರುಗಳಲ್ಲಿ ಯೋಗ ಹಾಗೂ ಮನೆಮದ್ದು ಪರಿಣಿತರಾಗಿ ಶಿಕ್ಷಣ ನೀಡುತ್ತಾ ಲಕ್ಷಾಂತರ ಜನರ ಬಾಳಿಗೆ ಬೆಳಕಾಗುತ್ತಿದ್ದಾರೆ.

ಸಾವಿರಾರು ಮಂದಿ ಯೋಗದ ಮೂಲಕ ಹೊಸ ಬದುಕು ಕಂಡುಕೊಂಡಿದ್ದಾರೆ. ತಮ್ಮಿಡೀ ಬದುಕನ್ನು ಸಮಾಜ ಹಾಗೂ ಯೋಗದ ಅಭಿವೃದ್ಧಿಗೆ ಮೀಸಲಾಗಿರಿಸಿರುವ ಸೋದರಿ ವನಿತಾ ತಮ್ಮೆಲ್ಲಾ ಶಿಷ್ಯ , ಅಭಿಮಾನಿ ಆಪ್ತರ ಪಾಲಿಗೆ 'ವನಿತಕ್ಕ' ಆಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.

ಬೆಂಗಳೂರಿನ ಗಿರಿನಗರದ 'ಯೋಗಶ್ರೀ' ಹಾಗೂ ಪಂಚವಟಿ ಯೋಗ ಕೇಂದ್ರಗಳು ವನಿತಕ್ಕ ಅವರ ನಿಸ್ವಾರ್ಥ ಸೇವೆಯ ದೀಪಗಳಾಗಿ ಯೋಗ ಕ್ಷೇತ್ರದ ದೀವಿಗೆಗಳಾಗಿ ಸಮಾಜಕ್ಕೆ ಹೊಸ ದಾರಿ ತೋರುತ್ತಿವೆ. ತಮ್ಮ ಬದುಕನ್ನು ಯೋಗಕ್ಕೆ ಮುಡುಪಾಗಿಟ್ಟ, ಯೋಗದ ಮೂಲಕ ಇತರರ ಬದುಕು ಬದಲಿಸಿದ ಸೋದರಿ ವನಿತಾ ಅವರಿಗೆ ಸಮಾಜ ಸೇವಕರ ಸಮಿತಿ ಸಮಾಜ ಸೇವಕರ ದಿನದ ಗೌರವವನ್ನು ಸಮರ್ಪಿಸುತ್ತಿದೆ.

English summary
Basavanagudi's Samaja Sevakara Samiti organised Social Workers Day at indian institute of world culture, Bangalore on Aug.1. Educationist Gudleppa Hallikeri of Haveri and Yoga Teacher Vanitha will be honoured in this function, it will followed bymusical program
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X