ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹರಾಜಾದ ಸಚಿನ್ ಬ್ಯಾಟ್ ಕನ್ನಡಿಗನೊಬ್ಬನ ಬಳಿ

By Prasad
|
Google Oneindia Kannada News

ಇಡೀ ಭಾರತವಲ್ಲ, ಇಡೀ ಜಗತ್ತು ಕ್ರಿಕೆಟ್ ಆಟದ 'ದೇವರು' ಸಚಿನ್ ರಮೇಶ್ ತೆಂಡೂಲ್ಕರ್ ಅವರ ಧ್ಯಾನದಲ್ಲಿ, ಗುಣಗಾನದಲ್ಲಿ ಮುಳುಗಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಕೊನೆಯ 200ನೇ ಟೆಸ್ಟ್ ಆಡುತ್ತ, ಮೊದಲ ಇನ್ನಿಂಗ್ಸ್ ನಲ್ಲಿ 74 ರನ್‌ಗೆ ಔಟಾಗಿರುವ ಸಚಿನ್ ಮತ್ತೆ ಬ್ಯಾಟ್ ಹಿಡಿಯುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ತಮ್ಮ ಬ್ಯಾಟಿನಿಂದ ಹಲವಾರು ದಾಖಲೆಗಳನ್ನು ಧೂಳಿಪಟ ಮಾಡಿರುವ ಸಚಿನ್ ಮಾತ್ರ ಜನಮಾನಸದಲ್ಲಿ ಅಚ್ಚಳಿಯ ಛಾಪು ಮೂಡಿಸಿ ತೆರೆಮರೆಗೆ ಸರಿಯುತ್ತಿದ್ದಾರೆ.

'ಮಾಸ್ಟರ್ ಬ್ಲಾಸ್ಟರ್' ಎಂದೇ ಖ್ಯಾತರಾಗಿದ್ದ ಸಚಿನ್ ತೆಂಡೂಲ್ಕರ್ ಬ್ಯಾಟು ಇನ್ನು ವಿರೋಧಿ ಬೌಲರುಗಳ ನಿದ್ದೆ ಕೆಡಿಸದೆ ಇರಬಹುದು, ಇನ್ನಾವುದೇ ದಾಖಲೆಗಳನ್ನು ಧೂಳಿಪಟ ಮಾಡದೆ ಇರಬಹುದು. ಆದರೆ, ಅವರು ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಬಳಸಿದ ಬ್ಯಾಟಿನಿಂದಾಗಿಯೇ ಕನ್ನಡಿಗರೊಬ್ಬರು ದಾಖಲೆಯ ಪುಟ ಸೇರಿದ್ದಾರೆ. ಅವರು ಹಾಸನ ಮತ್ತು ಚಿಕ್ಕಮಗಳೂರಿನಿಂದ ಪ್ರಕಟವಾಗುವ ದೈನಿಕ 'ಜನ ಮಿತ್ರ'ದ ಪ್ರಧಾನ ಸಂಪಾದಕ ಕೆಪಿಎಸ್ ಪ್ರಮೋದ್ ಅವರು.

ಸಚಿನ್ ಮೇಲಿನ ಅಭಿಮಾನ ತಮ್ಮನ್ನು ದಾಖಲೆ ಪುಟದಲ್ಲಿ ಸೇರಿಸಿದೆ ಎಂದು ಪ್ರಮೋದ್ ಅವರು ಒನ್ಇಂಡಿಯಾ ಜೊತೆ ತಮ್ಮ ಅನುಭವವನ್ನು ಹಂಚಿಕೊಂಡರು. ಸಚಿನ್ ಅವರು ಕ್ರಿಕೆಟ್ ಅಂಗಳದಿಂದ ನಿರ್ಗಮಿಸುತ್ತಿರುವ ಸಂದರ್ಭದಲ್ಲಿ, ಮಾನವೀಯತೆಯ ಸಾಕಾರಮೂರ್ತಿಯಾಗಿದ್ದ, ಇತರ ಕ್ರಿಕೆಟಿಗರಿಗೆ ಆದರ್ಶಪ್ರಾಯವಾಗಿದ್ದ, ಕೋಟ್ಯಾನುಕೋಟಿ ಕ್ರಿಕೆಟ್ ಅಭಿಮಾನಿಗಳ 'ದೇವರು' ಆಗಿರುವ ಅವರ ಬ್ಯಾಟ್ ಕೂಡ ಅನಾಥ ಮಕ್ಕಳ ಸಹಾಯಕ್ಕಾಗಿ ವಿನಿಯೋಗವಾಗಿದ್ದು ನೆನೆಯಲೇಬೇಕು.

Sachin Tendulkar's autographed Bat with Kannadiga

ಸಚಿನ್ ತೆಂಡೂಲ್ಕರ್ ಅವರು 2011ರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೂರು ಪಂದ್ಯಗಳಲ್ಲಿ ಬಳಸಿದ್ದ, ಸ್ವತಃ ಅವರೇ ತಮ್ಮ ಹಸ್ತಾಕ್ಷರ ಮೂಡಿಸಿರುವ ಬ್ಯಾಟನ್ನು ಕೆಪಿಎಸ್ ಪ್ರಮೋದ್ ಅವರು ದಾಖಲೆಯ 5 ಲಕ್ಷ ರು. ನೀಡಿ ಹರಾಜಿನಲ್ಲಿ ಕೊಂಡಿದ್ದರು. ಇಷ್ಟು ಮಾತ್ರವಲ್ಲ, ಅದೇ ಹರಾಜಿನಲ್ಲಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಎಲ್ಲ ಕ್ರಿಕೆಟ್ ಪಟುಗಳು ಹಸ್ತಾಕ್ಷರ ಮಾಡಿದ್ದ ಮತ್ತೊಂದು ಬ್ಯಾಟ್, ಧೋನಿ ಮತ್ತು ರಾಹುಲ್ ದ್ರಾವಿಡ್ ಬಳಸಿದ್ದ ಕೈಗವಸುಗಳನ್ನು ಕೂಡ ಕೊಂಡಿದ್ದರು.

ಇದರಲ್ಲಿ ವಿಶೇಷತೆಯೇನಿದೆ ಎಂದು ಕೇಳಬಹುದು. ಈ ಹರಾಜಿನಲ್ಲಿ ಸೇರಿಸಲಾಗಿದ್ದ ಹಣವೆಲ್ಲ ವಿಶ್ವವಿಖ್ಯಾತ ಕ್ರೀಡಾಪಟು ಮಾಲತಿ ಹೊಳ್ಳ ಅವರು ವಿಕಲಾಂಗ ಮಕ್ಕಳ ಅಭ್ಯದಯಕ್ಕಾಗಿ ನಡೆಸುತ್ತಿರುವ 'ಮಾತೃ' ಫೌಂಡೇಷನ್ ಎಂಬ ಸಮಾಜಸೇವಾ ಸಂಸ್ಥೆಗೆ ದಾನವಾಗಿ ಹೋಗಿದೆ. ಮಾಜಿ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್, ಸೈಯದ್ ಕಿರ್ಮಾನಿ ಮುಂತಾದವರು ಟ್ರಸ್ಟಿಗಳಾಗಿರುವ ಮಾತೃ ಫೌಂಡೇಷನ್ ವಿಶ್ವಕಪ್ ಸಂದರ್ಭದಲ್ಲಿ ಭಾರತೀಯ ಕ್ರಿಕೆಟಿಗರ ವಸ್ತುಗಳನ್ನು ಹರಾಜು ಹಾಕಿ ದೇಣಿಗೆ ಸಂಗ್ರಹಿಸಿತ್ತು.

2011ರ ಫೆಬ್ರವರಿ 27ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ಇಡೀ ಕ್ರೀಡಾಂಗಣವನ್ನೇ ಹುಚ್ಚೆಬ್ಬಿಸಿತ್ತು. ಭಾರತ ಮೊದಲನೇ ಇನ್ನಿಂಗ್ಸ್ ನಲ್ಲಿ ಗಳಿಸಿದ 338 ರನ್ ಬೆನ್ನತ್ತಿದ್ದ ಇಂಗ್ಲೆಂಡ್ ಕೂಡ ಬರೋಬ್ಬರಿ 338 ರನ್ ಗಳಿಸಿದ್ದರಿಂದ ಪಂದ್ಯ ಟೈ ಆಗಿತ್ತು. ಈ ಪಂದ್ಯದ ಮತ್ತೊಂದು ವಿಶೇಷವೆಂದರೆ, ಸಚಿನ್ ತೆಂಡೂಲ್ಕರ್ ಅವರ ಬ್ಯಾಟಿನಿಂದ 10 ಬೌಂಡರಿ, 5 ಭರ್ಜರಿ ಸಿಕ್ಸರ್ ಗಳಿದ್ದ 120 ರನ್ ಸಿಡಿದಿದ್ದವು. ಈ ಪಂದ್ಯದ ನಂತರ ಬೆಂಗಳೂರಿನ ಚಾನ್ಸರಿ ಪೆವಿಲಿಯನ್ ಹೋಟೆಲಿನಲ್ಲಿ ಹರಾಜು ನಡೆದಿತ್ತು.

ಮಾಲತಿ ಹೊಳ್ಳ ಅವರ ಖ್ಯಾತಿ ಮತ್ತು ಸಮಾಜಸೇವೆ ಬಗ್ಗೆ ತಿಳಿದಿದ್ದ ಅಮೆರಿಕದ ಉದಾರ ಕನ್ನಡಿಗರೊಬ್ಬರು ಸರ್ಜಾಪುರದಲ್ಲಿ ಅವರಿಗೆ 60x40 ನಿವೇಶನವನ್ನು ದಾನವಾಗಿ ನೀಡಿದ್ದರು. ಸೈಟೇನೋ ದಾನವಾಗಿ ಸಿಕ್ಕಿತ್ತು. ಆದರೆ, ಅಲ್ಲಿ ಕಟ್ಟಡ ಕಟ್ಟಿಸಲು, ಅನಾಥ ಮಕ್ಕಳಿಗೆ ಆಶ್ರಯ ನೀಡಲು ಅವರ ಬಳಿ ಹಣವಿರಲಿಲ್ಲ. ಕಟ್ಟಡಕ್ಕಾಗಿ ಹಣವನ್ನು ಒಗ್ಗೂಡಿಸುವ ಉದ್ದೇಶದಿಂದ ಕ್ರಿಕೆಟಿಗರು ಬಳಸಿರುವ ಬ್ಯಾಟ್, ಗ್ಲೌಸ್, ಸ್ಟಂಪ್, ಬಾಲ್, ಲೆಗ್ ಪ್ಯಾಡ್ ಮುಂತಾದವುಗಳ ಹರಾಜು ನಡೆದಿದ್ದು.

ಈ ಹರಾಜಿನಲ್ಲಿ ಸಚಿನ್ ತೆಂಡೂಲ್ಕರ್ ಅವರ ಹೊರತಾಗಿ ಭಾರತೀಯ ಕ್ರಿಕೆಟ್ ತಂಡ ಎಲ್ಲ ಆಟಗಾರರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹರಾಜಿನಲ್ಲಿ ಭಾಗವಹಿಸಿದ್ದ ಕೆಪಿಎಸ್ ಪ್ರಮೋದ್ ಅವರು, 5 ಲಕ್ಷ ರು.ದ ಸಚಿನ್ ಬ್ಯಾಟ್, 65 ಸಾವಿರದ ಎಲ್ಲ ಆಟಗಾರರು ಹಸ್ತಾಕ್ಷರ ಮಾಡಿದ್ದ ಮತ್ತೊಂದು ಬ್ಯಾಟ್, 24 ಸಾವಿರಕ್ಕೆ ಧೋನಿ ಗ್ಲೌಸ್ ಮತ್ತು 15 ಸಾವಿರಕ್ಕೆ ರಾಹುಲ್ ದ್ರಾವಿಡ್ ಅವರ ಕೈಗವಸನ್ನು ಕೊಂಡಿದ್ದರು.

ಯಾರೂ ಅಳಿಸಲಾಗದಷ್ಟು ದಾಖಲೆಗಳನ್ನು ಮಾಡಿರುವ ಸಚಿನ್ ತೆಂಡೂಲ್ಕರ್ ಬಗ್ಗೆ ಭಾರೀ ಅಭಿಮಾನ ಇಟ್ಟುಕೊಂಡಿರುವ ಪ್ರಮೋದ್ ಅವರು, "ಸಚಿನ್ ಅವರ ಸರ್ವೋತ್ಕೃಷ್ಟ ಗುಣಗಳು ಮತ್ತು ವಿಕಲಾಂಗ ಮಕ್ಕಳಿಗೆ ಅನುಕೂಲವಾಗಬಹುದೆಂಬ ಕಾರಣದಿಂದ ಹರಾಜಿನಲ್ಲಿ ಭಾಗವಹಿಸಿದೆ. ಸಚಿನ್ ಅವರ ಬಾಡಿ ಲ್ಯಾಂಗ್ವೇಜ್ ಮತ್ತು ಯಾರಿಗೂ ಕೇಡು ಬಯಸದ ಅವರ ಮನೋಭಾವವೇ ನನಗೆ ಸ್ಪೂರ್ತಿ" ಎಂದು ಒನ್ಇಂಡಿಯಾ ಜೊತೆ ಪ್ರಮೋದ್ ಅವರು ಹೆಮ್ಮೆಯಿಂದ ಹೇಳಿಕೊಂಡರು.

ಈ ಅತ್ಯಮೂಲ್ಯವಾದ ವಸ್ತುವನ್ನು ಕೆಪಿಎಸ್ ಪ್ರಮೋದ್ ಅವರು ತಮ್ಮ ಕಚೇರಿಯಲ್ಲಿ ಜತನದಿಂದ ಇಟ್ಟುಕೊಂಡಿದ್ದಾರೆ. ಇಂಥದೊಂದು ವಸ್ತು ಕರ್ನಾಟಕದಲ್ಲಿ ಯಾರ ಬಳಿಯೂ ಇಲ್ಲ ಎಂದೂ ಅವರು ಅಭಿಮಾನದಿಂದ ಹೇಳುತ್ತಾರೆ. 200ನೇ ಟೆಸ್ಟ್ ನಲ್ಲಿ ಸಚಿನ್ ಅವರು ಬಳಸಿದ ವಿಶೇಷವಾಗಿ ತಯಾರಾಗಿದ್ದ ತ್ರಿವರ್ಣವಿರುವ ಬ್ಯಾಟ್, 200ನೇ ಟೆಸ್ಟ್ ಎಂದು ಬರೆಯಲಾಗಿದ್ದ ಕ್ಯಾಪ್ ಕೂಡ ಹರಾಜಾಗಿ ನಿರ್ಗತಿಕ ಮಕ್ಕಳ ಅಭ್ಯುದಯಕ್ಕೆ ವಿನಿಯೋಗವಾಗಲಿ.

English summary
Sachin Tendulkar's batting records, humility, good deeds are all memorable. So the incident where a Kannadiga bought autographed bat of Sachin also should be remembered. KPS Pramod, editor-in-chief of Jana Mitra daily from Hassan and Chikmagalur is the proud owned of the auctioned bat of Sachin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X