• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೊಸ ತಾಲೂಕುಗಳಲ್ಲಿ ಮಿನಿ ವಿಧಾನಸೌಧ ರಚನೆಗೆ ಸೂಚನೆ: ದೇಶಪಾಂಡೆ

By Nayana
|

ಬೆಂಗಳೂರು, ಜು.21: ಹೊಸದಾಗಿ ರಚಿಸಲಾಗಿರುವ ಒಟ್ಟು 50 ತಾಲೂಕು ಗಳ ಪೈಕಿ ಇನ್ನೂ ಮಿನಿ ವಿಧಾನಸೌಧದ ಸೌಲಭ್ಯವನ್ನೇ ಹೊಂದಿರದ 44 ತಾಲೂಕುಗಳಲ್ಲಿ ಸೂಕ್ತ ಸ್ಥಳವನ್ನು ಗುರುತಿಸುವಂತೆ ಸಂಬಂಧಪಟ್ಟ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಪ್ರಾದೇಶಿಕ ಆಯುಕ್ತರಿಗೆ ಸಚಿವ ಆರ್.ವಿ.ದೇಶಪಾಂಡೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇದರ ಜತೆಗೆ, ಹೊಸ ತಾಲೂಕುಗಳಲ್ಲಿ ಸಾರ್ವಜನಿಕರಿಗೆ ಅತ್ಯಗತ್ಯವಾಗಿರುವ 14 ಪ್ರಮುಖ ಕಚೇರಿಗಳನ್ನು ಕ್ಷಿಪ್ರ ಗತಿಯಲ್ಲಿ ಆರಂಭಿಸಬೇಕು. ಇದಕ್ಕಾಗಿ ಆರ್ಥಿಕ ಇಲಾಖೆಗೆ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಅವರು ಆದೇಶಿಸಿದ್ದಾರೆ.

ವಿಧಾನಸೌಧ ಮೊಗಸಾಲೆಯಲ್ಲಿ ಹುಟ್ಟುಹಬ್ಬ ಆಚರಣೆ: ಭಾರಿ ವಿವಾದ

ಈ ಸಂಬಂಧ ಸಂಬಂಧಿಸಿದ ಎಲ್ಲ ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ನಡೆಸಿರುವ ಸಚಿವರು, ಹೊಸ ತಾಲ್ಲೂಕುಗಳಲ್ಲಿ ಮಿನಿ ವಿಧಾನಸೌಧವನ್ನು ನಿರ್ಮಿಸದೆ ಹೋದರೆ ಅವುಗಳ ರಚನೆಯ ಹಿಂದಿರುವ ಮೂಲ ಆಶಯವೇ ವಿಫಲವಾಗುತ್ತದೆ. ಹೊಸ ತಾಲೂಕುಗಳ ಪೈಕಿ ಇದುವರೆಗೆ ಕೇವಲ 6 ಕಡೆ ಮಾತ್ರ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸ್ಥಳ ಗುರುತಿಸಿರುವುದು ನಿರಾಶಾದಾಯಕವಾದ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.

ಇದರ ಜತೆಗೆ, ಅಕ್ರಮ-ಸಕ್ರಮ ಯೋಜನೆಯಡಿ ಅರ್ಹರು ಸಲ್ಲಿಸಿರುವ 94ಸಿ ಮತ್ತು 94ಸಿಸಿ ಅರ್ಜಿಗಳನ್ನು ಹಾಗೂ ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ಕೃಷಿ ಮಾಡಿಕೊಂಡು ಸಾಗುವಳಿ ಚೀಟಿಗಾಗಿ ಸಾರ್ವಜನಿಕರು ಸಲ್ಲಿಸಿರುವ ನಮೂನೆ 50 ಮತ್ತು 53ರ ಅರ್ಜಿಗಳನ್ನು ಕೂಡ ತ್ವರಿತ ಗತಿಯಲ್ಲಿ ವಿಲೇವಾರಿ ಮಾಡಬೇಕೆಂದು ಸಚಿವರು ನಿರ್ದೇಶಿಸಿದ್ದಾರೆ.

ಮುಖ್ಯವಾಗಿ, 94ಸಿ ಮತ್ತು 94ಸಿಸಿ ಅರ್ಜಿಗಳಡಿಯಲ್ಲಿ ಮಂಜೂರಾತಿ ನೀಡಿಯೂ ಎಲ್ಲೆಲ್ಲಿ ಹಕ್ಕುಪತ್ರ ನೀಡಿಲ್ಲವೋ ಅಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಇನ್ನು 3 ತಿಂಗಳಲ್ಲಿ ಹಕ್ಕುಪತ್ರಗಳನ್ನು ವಿತರಿಸಬೇಕು. ಒಂದು ವೇಳೆ, ಇಂತಹ ಅರ್ಜಿಗಳನ್ನು ಪುರಸ್ಕರಿಸಲು ಸಾಧ್ಯವಾಗದಿದ್ದಲ್ಲಿ ಅವುಗಳನ್ನು ನಿಯಮಾನುಸಾರ ತಿರಸ್ಕರಿಸಿ, ಅರ್ಜಿದಾರರಿಗೆ ಸೂಕ್ತ ಕಾರಣವನ್ನು ವಿವರಿಸಬೇಕು. ಎಂದು ಸಚಿವ ದೇಶಪಾಂಡೆ ನಿರ್ದೇಶಿಸಿದ್ದಾರೆ.

ಆದರೆ ಸಿಆರ್ ಜೆಡ್ ಪ್ರದೇಶ, ಕುಮ್ಕಿ, ಗೋಮಾಳ, ಸಿ ಅಂಡ್ ಡಿ ಮತ್ತು ಡೀಮ್ಡ್ ಫಾರೆಸ್ಟ್ ಪ್ರದೇಶಗಳಲ್ಲಿ ಅನಧಿಕೃತ ಮನೆಗಳನ್ನು ನಿರ್ಮಿಸಿದ್ದಲ್ಲಿ ಅವುಗಳ ಸಕ್ರಮವನ್ನು ಕೋರಿ, ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಉಳಿದಂತೆ ಪೋಡಿಮುಕ್ತ ಗ್ರಾಮ ಅಭಿಯಾನದಡಿ ಈಗಾಗಲೇ ರಾಜ್ಯದ 9 ಸಾವಿರ ಹಳ್ಳಿಗಳನ್ನು ಪೋಡಿಮುಕ್ತ ಗ್ರಾಮಗಳು ಎಂದು ಘೋಷಿಸಲಾಗಿದೆ. ಆದರೆ, ಈ ಅಭಿಯಾನದಡಿ ರಾಜ್ಯದ ಇನ್ನೂ 21 ಸಾವಿರ ಹಳ್ಳಿಗಳನ್ನು ಪೋಡಿಮುಕ್ತ ಗ್ರಾಮ'ಗಳನ್ನಾಡಿ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು. ಜೊತೆಗೆ, ನಿಯಮಿತವಾಗಿ ಕಂದಾಯ ಅದಾಲತುಗಳನ್ನು ನಡೆಸಬೇಕು ಎಂದು ತಿಳಿಸಿದ್ದಾರೆ.

ಕಂದಾಯ ಇಲಾಖೆಯ ದಾಖಲೆಗಳ ವರ್ಗಾವಣೆ, ಭೂಮಿ, ಅಟಲ್ ಜೀ ಜನಸ್ನೇಹಿ ಕೇಂದ್ರ ಮತ್ತು ಕಾವೇರಿ ಇತ್ಯಾದಿ ತಂತ್ರಾಂಶಗಳಲ್ಲಿ ಗ್ರಾಮಗಳನ್ನು ಮ್ಯಾಪಿಂಗ್ ಮಾಡುವ ಪ್ರಕ್ರಿಯೆಯನ್ನು ಆಗಸ್ಟ್ 14ರೊಳಗೆ ಮುಗಿಸಬೇಕು ಎಂದು ಸಚಿವ ಆರ್.ವಿ.ದೇಶಪಾಂಡೆ ಆದೇಶಿಸಿದ್ದಾರೆ.

ಅಲ್ಲದೆ, ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಜನಾಂಗದವರಿಗೆ ರಾಜ್ಯದ ಯಾವುದೇ ಭಾಗದಲ್ಲೂ ಸ್ಮಶಾನ ಭೂಮಿಗೆ ಸಮಸ್ಯೆ ಎದುರಾಗಬಾರದು. ಸಮಸ್ಯೆ ಇರುವ ಕಡೆಗಳಲ್ಲಿ ಸರಕಾರಿ ಭೂಮಿ ಇದ್ದಲ್ಲಿ ಅದನ್ನು 1964ರ ಕರ್ನಾಟಕ ಭೂ ಕಂದಾಯ ಅಧಿನಿಯಮ ಕ್ಕೆ ಅನುಸಾರವಾಗಿ ಕಾಯ್ದಿರಸಬೇಕು. ಸರಕಾರಿ ಜಮೀನು ಇಲ್ಲದ ಕಡೆಗಳಲ್ಲಿ ಅಗತ್ಯ ಭೂಮಿಯನ್ನು ಖರೀದಿಸಲು ಸೂಕ್ತ ಕ್ರಮ ವಹಿಸಬೇಕು ಎಂದು ಸಚಿವರು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Revenue minister R.V.Deshpande has given instructions to all deputy commissioners of the state to take initiation of construction of mini Vidhan Soudha in all new 50 taluks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more