ಬಿಡಿಎಗೆ 100ಕೋಟಿ ನಷ್ಟ, ಅಧಿಕಾರಿಗಳ ವಿರುದ್ಧ ಎಫ್ಐಆರ್
ಬೆಂಗಳೂರು ಜು.3: ಹಗರಣಗಳಿಂದಲೇ ಪದೇ ಪದೆ ಸುದ್ದಿ ಆಗುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಯಲ್ಲಿ ಇದೀಗ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ.
ಬಿಡಿಎ ಸ್ವಾಧೀನಪಡಿಸಿಕೊಂಡ ಜಾಗಕ್ಕೆ ಕಾನೂನು ಬಾಹಿರವಾಗಿ ಬದಲಿ ಜಾಗವನ್ನು ಪಡೆದು ಮಾರಾಟ ಮಾಡುವ ಮೂಲಕ ಪ್ರಾಧಿಕಾರಕ್ಕೆ 100 ಕೋಟಿ ರು. ನಷ್ಟ ಉಂಟು ಮಾಡಲಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಶನಿವಾರ ಎಫ್ಐಆರ್ದಾಖಲಾಗಿದೆ.
ಸಾರ್ವಜನಿಕರಿಗೆ ನಿವೇಶನ ಒದಗಿಸುವ ಪ್ರಾಧಿಕಾರದಲ್ಲಿ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಪ್ರಾಧಿಕಾರವು ಸ್ವಾಧೀನಪಡಿಸಿಕೊಂಡ ಜಾಗಕ್ಕೆ ಕಾನೂನು ಬಾಹಿರವಾಗಿ ಬದಲಿ ಜಾಗವನ್ನು ಪಡೆದು ನಾಗರಾಜ್ ಹಾಗೂ ಬಿಡಿಎ ಅಧಿಕಾರಿಗಳು ಆ ಜಾಗವನ್ನು ಮಾರಾಟ ಮಾಡಿದ್ದಾರೆ.
ಈ ಮೂಲಕ ಪ್ರಾಧಿಕಾರಕ್ಕೆ 100 ಕೋಟಿ ರು. ನಷ್ಟ ವಾಗಲು ಕಾರಣರಾಗಿದ್ದಾರೆ. ಈ ಕುರಿತು ಬಿಡಿಎ ಅಧ್ಯಕ್ಷ ಮತ್ತು ಶಾಸಕರೂ ಆದ ಎಸ್. ಆರ್. ವಿಶ್ವನಾಥ್ ಸೂಚನೆ ಮೇರೆಗೆ ಬೆಂಗಳೂರು ಮೆಟ್ರೋ ಪಾಲಿಟನ್ ಟಾಸ್ಕ್ ಫೋರ್ಸ್ (ಬಿಎಂಟಿಎಫ್) ನಲ್ಲಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಈ ಬಿಎಂಟಿಎಫ್ ಸರ್ಕಾರಿ ವ್ಯಾಪ್ತಿಯ ಆಸ್ತಿ ರಕ್ಷಿಸಲು ಮತ್ತು ರಾಜ್ಯದಲ್ಲಿ ಸ್ಥಾಪಿಸಲಾದ ವಿಶೇಷ ಪೊಲೀಸ್ ವ್ಯವಸ್ಥೆ ಆಗಿದೆ. ಇಲ್ಲಿ ನಾಗರಾಜ್ ಎಂಬುವವರ ಜೊತೆ ಅಧಿಕಾರಿಗಳು ಕೈ ಜೋಡಿಸಿದ್ದಾರೆ ಎಂದು ದೂರು ದಾಖಲಿಸಲಾಗಿದೆ. ಹೊರತು ಇನ್ನಿತರ ಅಧಿಕಾರಿಗಳ ಹೆಸರು ಇಲ್ಲವೇ ಎಷ್ಟು ಮಂದಿ ಸಿಬ್ಬಂದಿ ಶಾಮೀಲಾಗಿದ್ದಾರೆ ಎಂದು ನಮೂದಿಸಲಾಗಿಲ್ಲ.

ಹಗರಣ ಬಗ್ಗೆ ಎಸ್.ಆರ್.ವಿಶ್ವನಾಥ್ ಹೇಳಿದ್ದೇನು?
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಡಿಎ ಅಧ್ಯಕ್ಷ ಎಸ್. ಆರ್. ವಿಶ್ವವನಾಥ್, "ಬೆಂಗಳೂರು ಪೂರ್ವ ತಾಲೂಕಿನ ಕೆ. ಆರ್. ಪುರ ಹೋಬಳಿಯ ಬಾಣಸವಾಡಿ ಗ್ರಾಮದ ಸರ್ವೆ ಸಂಖ್ಯೆ 73ನಂಬರ್ನಲ್ಲಿದ್ದ ಈರಣ್ಣ ಎಂಬುವವರಿಗೆ ಸೇರಿದ 4ಎಕರೆ 13ಗುಂಟೆ ಜಮೀನನ್ನು 1986ರಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು. ಇದಕ್ಕೆ ನೀಡಬೇಕಾದ ಪರಿಹಾರ ಮೊತ್ತವನ್ನು ನಾಗರಿಕ ನ್ಯಾಯಾಲಯದಲ್ಲಿ ಠೇವಣಿ ಇಡಲಾಗಿತ್ತು" ಎಂದು ತಿಳಿಸಿದರು.

ಜಿಪಿಎ ಪಡೆದು ಮಾರಾಟ
"ನಾಗರಾಜ್ ಎಂಬುವವರು ಈರಣ್ಣ ಅವರ ಬಳಿ ಇದ್ದ ಆಸ್ತಿಯ ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ಪಡೆದು ತನ್ನ ಸ್ವಂತ ಜಮೀನು ಎಂದು ತೋರಿಸಿದ್ದಾರೆ. ಅಲ್ಲಿ ಬಡಾವಣೆ ನಿರ್ಮಿಸಿ ಇತರರಿಗೆ ಮಾರಾಟ ಮಾಡಿದ್ದಾರೆ. ಈ ಮಧ್ಯೆ ಕಂದಾಯ ಇಲಾಖೆ ಭೂ ಮಾಲೀಕರಿಂದ ಜಮೀನು ಪಡೆದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಆ ಮಾಲೀಕರಿಗೆ ಪರ್ಯಾಯ ಭೂಮಿ ವ್ಯವಸ್ಥೆ ಮಾಡಬೇಕೆಂದು ಕೋರಿತ್ತು. ನಿಯಮಾನು ಸಾರ ಸೂಕ್ತ ನಿರ್ಧಾರ ಕೈಗೊಳ್ಳಿ ಎಂದು ನ್ಯಾಯಾಲಯ ಅರ್ಜಿ ವಿಲೇವಾರಿ ಮಾಡಿತ್ತು" ಎಂದು ವಿಶ್ವನಾಥ್ ಹೇಳಿದರು.

ನಾಗರಾಜ್ ಅರ್ಜಿ ತಿರಸ್ಕೃರಿಸಿದ ಬಿಡಿಎ
ನಾಗರಾಜ್ ಕಂದಾಯ ನಿವೇಶನದಾರರಿಂದ ನಿವೇಶನಗಳನ್ನು ತನ್ನ ಹೆಸರಿಗೆ ಬರೆಯಿಸಿಕೊಂಡು ತನಗೆ ಬದಲಿ ನಿವೇಶನಗಳನ್ನು ಮಂಜೂರು ಮಾಡಿ ಎಂದು ಬಿಡಿಎಗೆ ಅರ್ಜಿ ಸಲ್ಲಿಸಿದ್ದರು. ಈ ರೀತಿ ಮಾಡಲು ಸಾಧ್ಯವಿಲ್ಲ ಎಂದು ಅವರ ಅರ್ಜಿಯನ್ನು ಬಿಡಿಎ ತಿರಸ್ಕರಿಸಿತ್ತು. 2012ರಲ್ಲಿ ಆಕಾವತಿ ಬಡಾವಣೆಯ ವಿವಿಧ ಸರ್ವೇ ನಂಬರ್ ಗಳಲ್ಲಿನ 4.3ಎಕರೆ ಜಮೀನು ಮಂಜೂರು ಮಾಡಲಾಗಿತ್ತು. ಈ ಜಾಗ ಬಫರ್ ಜೋನ್ ಸೇರಿದಂತೆ ಇನ್ನಿತರ ಕಾರಣ ನೀಡಿ ಇಲ್ಲಿ ಮನೆ ಮಾಡಲು ಅಸಾಧ್ಯ ಎಂದಿದ್ದ ನಾಗರಾಜ್ ಬೇರೆಡೆ ತಮಗೆ ಭೂಮಿ ನೀಡುವಂತೆ ಕೋರಿ ಬಿಡಿಎಗೆ ಅರ್ಜಿ ಸಲ್ಲಿಸಿದ್ದರು.
ಇದನ್ನು 2014ರಲ್ಲಿ ಪುರಸ್ಕರಿಸಿದ್ದ ಬಿಡಿಎ ಥಣಿಸಂದ್ರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬಿಡಿಎ ದಾರನಾಗಿರುವ ನಾಗರಾಜ್ ಅವರಿಗೆ ಜಾಗ ಮಂಜೂರು ಮಾಡಿ ಸ್ವಾಧೀನ ಪತ್ರ ನೀಡಲಾಗಿತ್ತು.

ಇದೊಂದು ಬೃಹತ್ ಹಗರಣ: ತನಿಖೆಗೆ ಆದೇಶ
ಇದೊಂದು ಬೃಹತ್ ಹಗರಣವಾಗಿದ್ದು, ದಾಖಲೆ ಪರಿಶೀಲಿಸಿ ಸೂಕ್ತ ತನಿಖೆ ನಡೆಸುವಂತೆ ವಿಶೇಷ ಕಾರ್ಯಪಡೆಗೆ ಸೂಚಿಸಿದ್ದೆವು. ಈ ಕಾರ್ಯಪಡೆಯ ಉಪ ಪೊಲೀಸ್ ವರಿಷ್ಠಾಧಿಕಾರಿ ಪಿ. ರವಿಕುಮಾರ್ ಮತ್ತವರ ತಂಡ ತನಿಖೆ ನಡೆಸಿ ವರದಿ ಸಲ್ಲಿಸಿದೆ. ಪರಿಣಾಮ ಬಿಡಿಎ 100ಕೋಟಿ ರೂ. ನಷ್ಟವಾಗಿರುವುದು ಗೊತ್ತಾಗಿದೆ. ಇದರ ಆಧಾರದಲ್ಲಿ ತಪ್ಪಿತಸ್ಥರ ವಿರುದ್ಧ ದೂರು ನೀಡಲಾಗಿದ್ದು, ವಿಶೇಷ ಕಾರ್ಯಪಡೆಯ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.