• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಶ್ ಜನ್ಮದಿನದ ಸಂಭ್ರಮ ಮತ್ತು ಬದಲಾದ ಆಟ

By ಒನ್ ಇಂಡಿಯಾ ಡೆಸ್ಕ್
|

ಬೆಂಗಳೂರು, ಜನವರಿ 8: 'ನಾನು ಹೆಜ್ಜೆ ಇಟ್ಟಾಗಿದೆ, ಆಟದ ರೇಂಜ್ ಚೇಂಜ್ ಆಗಿದೆ. ಇನ್ಮುಂದೆ ಈ ಟೆರ್ರಿಟರಿ ನಿಂದು ಆ ಟೆರ್ರಿಟರಿ ನಂದು ಅನ್ಬೇಡಿ. ಈ ವರ್ಲ್ಡ್ ಇನ್ನುಮುಂದೆ ನನ್ನ ಟೆರಿಟರಿ. ನಿನ್ನ ಹಾವು ಏಣಿ ಆಟಕ್ಕೆ ಮುಂಗುಸಿ ಇಳಿದಿದೆ'- ತಮ್ಮ ಜನ್ಮದಿನದ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಅಭಿಮಾನಿಗಳ ಮುಂದೆ 'ರಾಕಿಂಗ್ ಸ್ಟಾರ್' ಯಶ್ ಹೇಳಿದ 'ಕೆಜಿಎಫ್ 2' ಸಿನಿಮಾದ ಡೈಲಾಗ್ ಹಲವು ಅರ್ಥಗಳನ್ನು ಪ್ರತಿಧ್ವನಿಸುವಂತಿತ್ತು.

'ಕೆಜಿಎಫ್' ಚಿತ್ರದ ಮೊದಲ ಭಾಗ ಬಿಡುಗಡೆಯಾದ ಸಂದರ್ಭದಿಂದ ಯಶ್ ಹೆಜ್ಜೆ ಇರಿಸುವ ಬಗೆ ಮತ್ತು ಆಟದ ರೇಂಜ್ ಬದಲಾಗಿರುವುದು ಹೌದು. ಈ ಬದಲಾವಣೆಯನ್ನು ಅವರು ಹಾಗೂ ಅವರ ಅಭಿಮಾನಿಗಳು ಹೆಮ್ಮೆಯಿಂದ ಪ್ರದರ್ಶಿಸುತ್ತಿದ್ದಾರೆ. ಕೆಜಿಎಫ್ ತಂದುಕೊಟ್ಟ ಕೀರ್ತಿ ಅವರ 'ರೇಂಜ್'ಅನ್ನು ಬದಲಿಸಿದೆ. ಅದಕ್ಕೆ ಬುಧವಾರ ಅವರ ಜನ್ಮದಿನದಂದು ಬಂದಿದ್ದ ಜನಸ್ತೋಮವೇ ಸಾಕ್ಷಿ.

ಸಾಮಾನ್ಯವಾಗಿ ತಮ್ಮ ನೆಚ್ಚಿನ ಕಲಾವಿದರ ಜನ್ಮದಿನ ಆಚರಿಸಲು ಅವರ ಅಭಿಮಾನಿಗಳು ಮಧ್ಯರಾತ್ರಿಯೇ ಮನೆಮುಂದೆ ಸಾಲುಗಟ್ಟಿನಿಂತಿರುತ್ತಾರೆ. 'ಬಾಸ್', 'ಅಣ್ಣ', 'ಗುರು' ಎಂದು ತಮ್ಮ ನೆಚ್ಚಿನ ನಟನ ಕೈಕುಲುಕಿ ಭಾರಿ ಗಾತ್ರದ ಕೇಕ್ ಕತ್ತರಿಸಿ ಸಂಭ್ರಮಿಸುತ್ತಾರೆ. ಈ ಸಂಭ್ರಮ ಬೆಳಗಿನವರೆಗೂ ನಡೆದು, ಹೊತ್ತೇರುವ ವೇಳೆ ಕರಗುತ್ತದೆ. ಆದರೆ, ಯಶ್ ವಿಚಾರದಲ್ಲಿ ಬುಧವಾರ ಕಂಡ ದೃಶ್ಯ ಬೇರೆಯೇ ಇದೆ.

ಅಭಿಮಾನಿಗಳಿಗೆ ಹಬ್ಬ

ಅಭಿಮಾನಿಗಳಿಗೆ ಹಬ್ಬ

ಸಾವಿರಾರು ಅಭಿಮಾನಿಗಳು ಯಶ್ ಜನ್ಮದಿನದಲ್ಲಿ ಪಾಲ್ಗೊಂಡಿದ್ದರು. ಇವರಲ್ಲಿ ಹೆಚ್ಚಿನವರು ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಆಗಿದ್ದರು. ಇಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಾರೆ ಎಂಬ ನಿರೀಕ್ಷೆ ಯಶ್ ಅವರಿಗೂ ಇತ್ತು. ಅದಕ್ಕಾಗಿ ನಂದಿಲಿಂಕ್ಸ್ ಗ್ರೌಂಡ್‌ನಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿತ್ತು. ಮೈದಾನದಲ್ಲಿ ಎಲ್ಲಿ ನೋಡಿದರೂ ಯಶ್ ಚಿತ್ರ, ಹೂವಿನ ಹಾರ ಹಿಡಿದ ಅಭಿಮಾನಿಗಳು. ಅವರನ್ನು ನಿಯಂತ್ರಿಸಲು ಹತ್ತಾರು ಪೊಲೀಸರು ಹರಸಾಹಸಪಡುತ್ತಿದ್ದರು. ಕೆಲವರಿಗೆ ಲಾಠಿ ಏಟಿನ ರುಚಿಯೂ ಸಿಕ್ಕಿತು.

ಸೆಲ್ಫಿ ಪಡೆದವರು ಧನ್ಯ!

ಸೆಲ್ಫಿ ಪಡೆದವರು ಧನ್ಯ!

ತಿರುಮಲ ತಿರುಪತಿ ದೇವಾಲಯದಲ್ಲಿ ದೇವರ ದರ್ಶನಕ್ಕಾಗಿ ಭಕ್ತರು ಸರದಿಯಲ್ಲಿ ಬರುವಂತೆ ಸಾಲಿನಲ್ಲಿ ಅಭಿಮಾನಿಗಳು ಬರಬೇಕಿತ್ತು. ವೇದಿಕೆಯ ನಡುವೆ ನಿಂತಿದ್ದ ಯಶ್ ಅವರ ಕೈಕುಲುಕಿ ಅಥವಾ ಸೆಲ್ಫಿ ತೆಗೆದು ಕ್ಷಣದಲ್ಲಿ ಅಲ್ಲಿಂದ ಹೊರಬೇಕಿತ್ತು. ಇದೂ ಕೂಡ ದೇವರ ದರ್ಶನ ಪಡೆದು ಪುನೀತರಾಗುವ ಭಕ್ತರಂತೆ. ಯಶ್ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಧನ್ಯರಾಗುತ್ತಿದ್ದರು. ಕೆಲವರಿಗೆ ಆ ಭಾಗ್ಯ ಸಿಗುತ್ತಿರಲಿಲ್ಲ. ಯಶ್ ಸುತ್ತಲೂ ಕೋಟೆ ಕಟ್ಟಿ ನಿಂತಿದ್ದ 'ರಕ್ಷಕರು' ಅಭಿಮಾನಿಗಳನ್ನು ಎಳೆದುಹಾಕುತ್ತಿದ್ದರು.

ಬದಲಾದ ಯಶ್ ಚಾರ್ಮ್

ಬದಲಾದ ಯಶ್ ಚಾರ್ಮ್

ಈ ಎಲ್ಲ ದೃಶ್ಯಗಳು ರಾಜ್ಯದ ಸಿನಿಮಾರಂಗದ 'ಚರಿತ್ರೆ ಸೃಷ್ಟಿಸುವ ಅವತಾರ'ದಂತೆ ಕಾಣಿಸಿದರೂ ಅಚ್ಚರಿಯಿಲ್ಲ. ಹುಟ್ಟುಹಬ್ಬದಂದು ಬೃಹತ್ ಮೈದಾನದಲ್ಲಿ ಕಾರ್ಯಕ್ರಮ, 5700 ಕೆಜಿ ತೂಕದ ಕೇಕ್, ಅಭಿಮಾನಿಗಳಿಗಾಗಿ ಪುಷ್ಕಳ ಮಾಂಸಾಹಾರದ ಊಟ, ಮಿಗಿಲಾಗಿ ಮಧ್ಯರಾತ್ರಿಯಿಂದಲೂ ಯಶ್ ಮತ್ತು ಅವರ ಅಭಿಮಾನಿಗಳ ನಡುವೆಯೇ ಸುತ್ತಾಡುತ್ತಿರುವ ಕನ್ನಡ ಸುದ್ದಿವಾಹಿನಿಗಳ ಕ್ಯಾಮೆರಾಗಳು. ಇದು ನಟನೊಬ್ಬನ ಚಾರ್ಮ್ ಒಂದೇ ವರ್ಷದ ಅವಧಿಯಲ್ಲಿ ಬದಲಾದ ಚಿತ್ರಣ. ಕನ್ನಡ ಚಿತ್ರರಂಗದ ಪಾಲಿಗೆ ಇತಿಹಾಸದ ಸೃಷ್ಟಿಯೂ ಹೌದು. ಯಶ್ ಅವರಿಗಿಂತ ಮೊದಲೇ ಚಿತ್ರರಂಗಕ್ಕೆ ಬಂದು, ಎತ್ತರಕ್ಕೆ ಬೆಳೆದ ನಟರಿದ್ದರೂ ಇಷ್ಟು ಕ್ರೇಜ್ ಕಂಡಿರಲಿಲ್ಲ.

ಬೆಳೆದ ಪರಿಯ ಪ್ರದರ್ಶನ

ಬೆಳೆದ ಪರಿಯ ಪ್ರದರ್ಶನ

ತಾವೊಬ್ಬ ನಟ ಮಾತ್ರವಲ್ಲ, ಬೃಹತ್ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ 'ಹೀರೋ' ಎಂಬುದನ್ನು ಯಶ್ ತೋರಿಸಿಕೊಂಡಿದ್ದಾರೆ. ಆ ಸಂಭ್ರಮ, ಅದ್ದೂರಿತನದ ಹಿಂದೆ ಯಶ್ ಉಳಿದ ನಟರಿಗೆ ಸೆಡ್ಡು ಹೊಡೆದು ಬೆಳೆದು ನಿಂತ ಪರಿಯನ್ನು ಬಿಂಬಿಸುವ ಉತ್ಸಾಹವೂ ಢಾಳಾಗಿ ಕಾಣಿಸುತ್ತಿತ್ತು.

ಉಳಿದ ಸಮಸ್ಯೆಗಳೆಲ್ಲ ಗೌಣ

ಉಳಿದ ಸಮಸ್ಯೆಗಳೆಲ್ಲ ಗೌಣ

ಈ ಸಂಭ್ರಮ ನಟ ಮತ್ತು ಅವರ ಅಭಿಮಾನಿಗಳಿಗೆ ಸರಿ. ಆದರೆ ಸುದ್ದಿವಾಹಿನಿಗಳಿಗೂ ಸಂಭ್ರಮವಾಗಿದ್ದು ಚಿಂತನೆಗೆ ಒಳಪಡಬೇಕಾಗಿರುವುದು ಸತ್ಯ. ಕೇಂದ್ರ ಸರ್ಕಾರದ ವಿರುದ್ಧದ ಕಾರ್ಮಿಕರ ಪ್ರತಿಭಟನೆ, ಜೆಎನ್‌ಯು ವಿವಾದ, ಸಿಎಎ, ಎನ್‌ಸಿಎ ವಿರುದ್ಧದ ಆಕ್ರೋಶ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟುಗಳು, ಅಮೆರಿಕ-ಇರಾನ್ ಸಂಘರ್ಷದಿಂದ ಭಾರತದ ಮೇಲಾಗುತ್ತಿರುವ ಪರಿಣಾಮ, ರೂಪಾಯಿ ಮೌಲ್ಯ ಕುಸಿತ, ಮುಂತಾದ ಎಲ್ಲ ಸಮಸ್ಯೆಗಳೂ ಸುದ್ದಿವಾಹಿನಿಗಳಿಗೆ ಗೌಣವಾಗಿದ್ದವು.

English summary
Fans celebrating birthday of Rocking Star Yash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X