ರೇರಾ ಕಾಯ್ದೆ ವಿರುದ್ಧ ರವಿಕೃಷ್ಣಾ ರೆಡ್ಡಿರಿಂದ ರಾಜ್ಯಪಾಲರಿಗೆ ದೂರು
ಬೆಂಗಳೂರು, ಜುಲೈ 18: ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿ ಈ ಸಚಿವರುಗಳು, ಅಥವ ಅವರ ಕುಟುಂಬದವರು, ಅಥವ ಹತ್ತಿರದ ಸಹವರ್ತಿಗಳು ತೊಡಗಿರುವುದು ರಾಜ್ಯದ ಜನರಿಗೆ ಗೊತ್ತಿರುವ ವಿಚಾರವೇ ಆಗಿದೆ.
ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿರುವ ಸಚಿವರು ತಮ್ಮ ಹಿತಾಸಕ್ತಿಗೆ ಪೂರಕವಾಗಿ ತಂದಿರುವ RERA ಕಾಯ್ದೆ ಬಗ್ಗೆ ರಾಜ್ಯಪಾಲರಿಗೆ ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾರೆಡ್ಡಿ ಅವರು ಮನವಿ ಸಲ್ಲಿಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿರುವ ಸಚಿವರು ತಮ್ಮ ಹಿತಾಸಕ್ತಿಗೆ ಪೂರಕವಾಗಿ ತಂದಿರುವ RERA ಕಾಯ್ದೆ
ಮಾನ್ಯರೇ,
ಅನಿಯಂತ್ರಿತವಾಗಿದ್ದ ಮತ್ತು ಗ್ರಾಹಕರ ಹಿತಾಸಕ್ತಿಗೆ ವಿರುದ್ಧವಾಗಿ ದೇಶದ ರಿಯಲ್ ಎಸ್ಟೇಟ್ ಉದ್ಯಮವನ್ನು ಕಾನೂನುವ್ಯಾಪ್ತಿಯೊಳಗೆ ತಂದು ನಿಯಂತ್ರಣ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕಳೆದ ವರ್ಷ "ರಿಯಲ್ ಎಸ್ಟೇಟ್ ರೆಗ್ಯುಲೇಷನ್ ಮತ್ತು ಡೆವಲಪ್ಮೆಂಟ್ ಆಕ್ಟ್ - 2016" ಜಾರಿಗೆ ತಂದಿತು. ಇದನ್ನು ರಾಜ್ಯ ಸರ್ಕಾರಗಳು ನಿಯಮಾವಳಿ ರೂಪಿಸಿ ಜಾರಿಗೊಳಿಸುವ ಜವಾಬ್ದಾರಿ ಹೊಂದಿದ್ದವು. ಕಳೆದ ವಾರವಷ್ಟೇ ಇದನ್ನು ಕರ್ನಾಟಕ ಸರ್ಕಾರ ನಮ್ಮ ರಾಜ್ಯದಲ್ಲೂ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿತು.
ಆದರೆ ಈ ಅಧಿಸೂಚನೆಯಲ್ಲಿ ಈಗಾಗಲೆ ಆರಂಭವಾಗಿರುವ ಬಹುತೇಕ ಎಲ್ಲಾ ರಿಯಲ್ ಎಸ್ಟೇಟ್ ಯೋಜನೆಗಳನ್ನು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡುವ ಹುನ್ನಾರವನ್ನು ರಾಜ್ಯ ಸರ್ಕಾರ ಮಾಡಿದೆ. ಶೇ.60 ರಷ್ಟು ಮಾರಾಟವಾಗಿರುವ ಎಲ್ಲಾ ಪ್ರಸ್ತುತ ಯೋಜನೆಗಳನ್ನು ಹೊರಗಿಡುವ ಮೂಲಕ ಇದು ಈಗಾಗಲೆ ರಾಜ್ಯದಲ್ಲಿ ಕಾಮಗಾರಿ ನಡೆಯುತ್ತಿರುವ ಎಲ್ಲಾ ಯೋಜನೆಗಳ ಗ್ರಾಹಕರಿಗೆ ಕೇಂದ್ರ ಸರ್ಕಾರ ತಂದ ಕಾಯ್ದೆಯ ಲಾಭ ಮತ್ತು ಭದ್ರತೆ ಸಿಗದ ಹಾಗೆ ಮಾಡಿದ್ದಾರೆ.

ಇಂತಹ ತೀರ್ಮಾನವನ್ನು ರಾಜ್ಯ ಸರ್ಕಾರದ ಸಚಿವ ಸಂಪುಟ ತೆಗೆದುಕೊಂಡಿದೆ. ಆದರೆ ಈ ಸಚಿವ ಸಂಪುಟದಲ್ಲಿಯೇ ಡಿ.ಕೆ.ಶಿವಕುಮಾರ್, ಎಮ್.ಆರ್.ಸೀತಾರಾಮ್, ಎಂ.ಕೃಷ್ಣಪ್ಪ, ಕೆ.ಜೆ.ಜಾರ್ಜ್, ಎಸ್.ಎಸ್.ಮಲ್ಲಿಕಾರ್ಜುನ, ಆರ್.ರೋಷನ್ ಬೇಗ್, ಆರ್.ವಿ,ದೇಶಪಾಂಡೆ, ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ಸಂತೋಷ್ ಎಸ್. ಲಾಡ್, ಎಚ್.ಸಿ.ಮಹದೇವಪ್ಪ, ಮತ್ತು ತನ್ವೀರ್ ಸೇಟ್ ಸೇರಿದಂತೆ ಅನೇಕರು ನೇರವಾಗಿ ಅಥವ ಪರೋಕ್ಷವಾಗಿ ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿ ತೊಡಗಿದ್ದಾರೆ. ಈ ಉದ್ದಿಮೆಯಲ್ಲಿ ಈ ಸಚಿವರುಗಳು, ಅಥವ ಅವರ ಕುಟುಂಬದವರು, ಅಥವ ಹತ್ತಿರದ ಸಹವರ್ತಿಗಳು ಈ ಉದ್ದಿಮೆಯಲ್ಲಿ ತೊಡಗಿರುವುದು ರಾಜ್ಯದ ಜನರಿಗೆ ಗೊತ್ತಿರುವ ವಿಚಾರವೇ ಆಗಿದೆ. ಇದೇ ಕಾರಣಕ್ಕಾಗಿ ಈ ಸಚಿವ ಸಂಪುಟವು ತಮಗೆ ಅನುಕೂಲವಾಗುವ ರೀತಿಯಲ್ಲಿ ಕೇಂದ್ರ ಸರ್ಕಾರದ ನಿಯಮಾವಳಿಗಳನ್ನು ದುರ್ಬಲಗೊಳಿಸಿ ಜಾರಿ ಮಾಡಲಾಗಿದೆ.
ಈ ದುರ್ಬಲ ನಿಯಮಾವಳಿಗಳನ್ನು ಜಾರಿ ಮಾಡುವ ತೀರ್ಮಾನಗಳನ್ನು ಈ ಸಚಿವ ಸಂಪುಟ ತೆಗೆದುಕೊಂಡಿರುವುದು ಅನೈತಿಕವಾದುದು. ಇದು ಹಿತಾಸಕ್ತಿ ಸಂಘರ್ಷಕ್ಕೆ (Conflict of Interest) ನೈಜ ಉದಾಹರಣೆ. ಈ ಹಿನ್ನೆಲೆಯಲ್ಲಿ "ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ"ಯು ಇಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದು, ಈ ಕೂಡಲೆ ರಾಜ್ಯಪಾಲರು,
i) ಮುಖ್ಯಮಂತ್ರಿಗಳನ್ನು ಕರೆಸಿಕೊಂಡು ಈ ವಿಚಾರವಾಗಿ ಮತ್ತು ಯಾವೆಲ್ಲ ಸಚಿವರಿಗೆ ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿ ಪಾಲುದಾರಿಕೆ ಇದೆಯೋ ಅವರ ಮಾಹಿತಿಯನ್ನು ಸಾರ್ವಜನಿಕಗೊಳಿಸಬೇಕು
ಎಂದು ಕೋರಲಾಗಿದೆ.
ಇಂದು ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯನ್ನು ಈ ಪತ್ರಿಕಾಪ್ರಕಟಣೆಯೊಂದಿಗೆ ಲಗತ್ತಿಸಲಾಗಿದೆ.
ವಂದನೆಗಳೊಂದಿಗೆ,
ರವಿ ಕೃಷ್ಣಾರೆಡ್ಡಿ
ಅಧ್ಯಕ್ಷ, ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ