ಸಿಡಿ ಬಾಂಬ್ ಪ್ರಕರಣ: ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಆಗ್ರಹ
ಬೆಂಗಳೂರು, ಮಾರ್ಚ್.02: ರಾಜ್ಯದ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ವಯಸ್ಕ ಮಹಿಳೆಗೆ ಕೆಪಿಟಿಸಿಎಲ್ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ರಾಸಲೀಲೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಬಿಡುಗಡೆಯಾಗಿರುವ ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ.
ರಾಜ್ಯದಲ್ಲಿ ಕೊರೊನಾವೈರಸ್ ಸೋಂಕು ಮತ್ತು ಬೆಲೆ ಏರಿಕೆಯಿಂದ ಜನರು ಕಂಗಾಲಾಗಿರುವ ಸಂದರ್ಭದಲ್ಲಿ ಸಚಿವ ರಮೇಶ್ ಜಾರಕಿಹೊಳಿಯವರು ಇಡೀ ರಾಜ್ಯವೇ ತಲೆ ತಗ್ಗಿಸುವಂತಾ ಕೆಲಸ ಮಾಡಿದ್ದಾರೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೀರ್ ಹುಸೇನ್ ಕಿಡಿ ಕಾರಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಸಿಡಿ ಸ್ಫೋಟ; ರಮೇಶ್ ಜಾರಕಿಹೊಳಿ ವಿರುದ್ಧ ದೂರು
ರಾಜ್ಯದ ಜನರು ಕಷ್ಟದಲ್ಲಿ ದಿನ ಕಳೆಯುತ್ತಿರುವ ವೇಳೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಕೆಪಿಟಿಸಿಎಲ್ ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ತಮ್ಮ ಕಾಮದಾಹ ತಿರಿಸಿಕೊಳ್ಳಲು ಪಲ್ಲಂಗಕ್ಕೆ ಕರೆದು ಆಕೆಯ ಜೊತೆ ಕಾಮಲೀಲೆ ಅನಿಭವಿಸಿದ್ದು ನಿಜಕ್ಕೂ ನಾಡಿನ ಜನರು ಮತ್ತು ಸರಕಾರಕ್ಕೆ ತಲೆತಗ್ಗಿಸುವಂತಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.
ಸಚಿವ, ಶಾಸಕ ಸ್ಥಾನದಿಂದ ಕಿತ್ತೊಗೆಯುವಂತೆ ಆಗ್ರಹ
ಒಬ್ಬ ಬಿಜೆಪಿ ಶಾಸಕರಾಗಿ ಮತ್ತು ಸಚಿವನಾದ ರಮೇಶ್ ಜಾರಕಿಹೊಳಿಯ ಇಂತಹ ಹೇಯಕೃತ್ಯದಿಂದ ಸಜ್ಜನ ಸಮಾಜ ತಲೆ ತಗ್ಗಿಸುವಂತಾಗಿದೆ. ಕೂಡಲೇ ಸರಕಾರ ಈತನನ್ನು ಶಾಸಕ ಮತ್ತು ಸಚಿವ ಸ್ಥಾನದಿಂದ ಕಿತ್ತೆಸೆದು ರಾಜ್ಯದ ಮಾನ ಕಾಪಾಡಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರು ಕಳಿಸುವಲ್ಲಿ ಯಾವದೇ ಅನುಮಾನವಿಲ್ಲ. ಮಹಿಳೆಯರ ರಕ್ಷಣೆ ರಾಜ್ಯದಲ್ಲಿ ಕ್ಷೀಣಿಸುತ್ತಿದೆ. ಸರಕಾರ ತುರ್ತಾಗಿ ಕಾಮುಕ ಸಚಿವರ ರಾಜೀನಾಮೆ ಪಡೆದು, ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸುತ್ತೇವೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೀರ್ ಹುಸೇನ್ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.