ಸಂತ್ರಸ್ತೆ ಪರವಾಗಿ ದೂರು ನೀಡಲು ಕಾರಣ ತಿಳಿಸಿದ ದಿನೇಶ್ ಕಲ್ಲಹಳ್ಳಿ
ಬೆಂಗಳೂರು, ಮಾರ್ಚ್ 2: ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಸಂತ್ರಸ್ತೆಯ ಬದಲು ತಾವೇ ದೂರು ದಾಖಲಿಸಲು ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ.
'ಬೆದರಿಕೆ ಇರುವ ಕಾರಣ ಸಂತ್ರಸ್ತೆ ಎಲ್ಲೂ ಹೊರಗೆ ಬರುತ್ತಿಲ್ಲ. ನನಗೆ ಭಯ ಆಗುತ್ತಿದೆ ದೂರು ನೀಡಿ ಎಂದು ಕುಟುಂಬದವರು ಮನವಿ ಮಾಡಿದ್ದರು. ಹೀಗಾಗಿ ನಾನು ದೂರು ಸಲ್ಲಿಸಲು ಬಂದಿದ್ದೇನೆ. ಇದು ಬಹಳ ಸೂಕ್ಷ್ಮ ವಿಚಾರ ಆಗಿರುವುದರಿಂದ ಕುಟುಂಬದವರ ಮಾಹಿತಿಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
'ಸಂತ್ರಸ್ತೆಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ. ಒಂದೆರಡು ತಿಂಗಳ ಹಿಂದೆ ಈ ಘಟನೆ ನಡೆದಿತ್ತು. ಆಗಿನಿಂದಲೂ ಬೆದರಿಕೆ ಬರುತ್ತಿದೆ. ಅವರ ಕುಟುಂಬದ ಸದಸ್ಯರು ನನ್ನನ್ನು ಸಂಪರ್ಕಿಸಿ ನನ್ನ ನೆರವು ಕೋರಿದ್ದರು. ಹೀಗಾಗಿ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದ್ದೇನೆ. ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದು ತಿಳಿಸಿದ್ದಾರೆ.
ಸಂತ್ರಸ್ತೆಯ ಕುಟುಂಬದ ಸದಸ್ಯರು ಸೋಮವಾರ ನನಗೆ ಸಿ.ಡಿ. ನೀಡಿದ್ದರು. ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹೇಳಿ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ. ಹೀಗಾಗಿ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದರು. ನಮ್ಮ ವಕೀಲರ ಜತೆ ಚರ್ಚಿಸಿ ಸಿ.ಡಿ ಮತ್ತು ದಾಖಲೆ ಇರಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.