"ಬಾಳಿ ಬದುಕಬೇಕಾದ ಯುವಜನತೆಗೆ ಮೊದಲು ಲಸಿಕೆ ನೀಡಿ"
ಬೆಂಗಳೂರು, ಮಾರ್ಚ್ 01: "ನನಗೆ 70 ವರ್ಷದ ಮೇಲಾಗಿದೆ. ದೀರ್ಘಾವಧಿ ಬಾಳಿ ಬದುಕಬೇಕಾದ ಯುವ ಜನತೆಗೆ ನೀವು ಕೊರೊನಾ ಲಸಿಕೆಯನ್ನು ಆದ್ಯತೆಯಲ್ಲಿ ನೀಡಬೇಕಾಗಿದೆ" ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಹಾಗೂ ಕರ್ನಾಟಕ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ತಾವು ಕೊರೊನಾ ಲಸಿಕೆ ತೆಗೆದುಕೊಳ್ಳುವುದಿಲ್ಲವೇ ಎಂದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಶ್ನಿಸಿದಾಗ ಹೀಗೆ ಉತ್ತರಿಸಿದ ಅವರು, "ಹೆಚ್ಚು ವರ್ಷ ಬದುಕಬೇಕಾದ ಯುವಜನತೆಗೆ ಮೊದಲು ಲಸಿಕೆ ನೀಡಬೇಕಿದೆ. ನಾನು 10-15 ವರ್ಷ ಬದುಕಬಹುದಷ್ಟೆ. ಆದ್ಯತೆಯನ್ನು ಅವರಿಗೆ ನೀಡಿ" ಎಂದಿದ್ದಾರೆ.
ಜನಸಾಮಾನ್ಯರಿಗೆ ತೊಂದರೆ ಮಾಡುವ ವಿಷಯಗಳಲ್ಲಿ ರಾಜಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ
ದೇಶಾದ್ಯಂತ ಸೋಮವಾರದಿಂದ ಎರಡನೇ ಹಂತದ ಕೊರೊನಾ ಲಸಿಕೆ ಅಭಿಯಾನ ಆರಂಭಗೊಂಡಿದ್ದು, 60 ವರ್ಷ ಮೇಲ್ಪಟ್ಟವರಿಗೆ ಆದ್ಯತೆಯಲ್ಲಿ ಲಸಿಕೆ ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೆಹಲಿಯ ಏಮ್ಸ್ನಲ್ಲಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಬಿಜೆಪಿಯ ಹಲವು ನಾಯಕರು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ.
ಜನರಲ್ಲಿ ಕೊರೊನಾ ಲಸಿಕೆ ಕುರಿತು ಇರುವ ಭಯ, ಹಿಂಜರಿಕೆ ಹೋಗಲಾಡಿಸಲು ಅವರವರ ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರು ಹಾಗೂ ಸಚಿವರು ಕೊರೊನಾ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಬಿಜೆಪಿಯವರು ಉಚಿತವಾಗಿ ಲಸಿಕೆಗಳನ್ನು ಪಡೆದುಕೊಳ್ಳುತ್ತಿಲ್ಲ. ಹಣ ನೀಡಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಪಕ್ಷ ತಿಳಿಸಿದೆ.