ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜೀವ್ ಗೌಡ ಕಂಡಂತೆ ಯುಆರ್ ಅನಂತಮೂರ್ತಿ

By ರಾಜೀವ್ ಗೌಡ, ಸಂಸದ
|
Google Oneindia Kannada News

ನಾನಿನ್ನೂ ಯೌವನದ ಹೊಸ್ತಿಲಲ್ಲಿದ್ದಾಗ 1980ರಲ್ಲಿ ಯುಆರ್ ಅನಂತಮೂರ್ತಿ ಅವರನ್ನು ಮೊದಲ ಬಾರಿ ಭೇಟಿ ಮಾಡಿದ್ದೆ. 'ಲೇಖಕ ವರ್ಷದ ವಿದ್ಯಾರ್ಥಿ' ಸ್ಪರ್ಧೆಗೆ ಅವರು ತೀರ್ಪುಗಾರರಾಗಿ ಬಂದಿದ್ದರು. ಆ ಸ್ಪರ್ಧೆಯಲ್ಲಿ ನಾನು ಫೈನಲ್ ತಲುಪಿದ್ದೆ.

ಅಲ್ಲಿಯವರೆಗೆ ನಾನು ಅವರ ಆಂಗ್ಲ ಅನುವಾದಿತ ಕೃತಿಗಳನ್ನು ಮಾತ್ರ ಓದಿದ್ದೆ. ನನಗೆ ನೆನಪಿರುವ ಪ್ರಕಾರ, ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ ಪತ್ರಿಕೆ ಅನಂತಮೂರ್ತಿ ಅವರ 'ಸಂಸ್ಕಾರ' ಕಾದಂಬರಿಯನ್ನು ಧಾರಾವಾಹಿ ರೂಪದಲ್ಲಿ ಪ್ರಕಟಿಸಿತ್ತು. ಆದರೆ, ನಾನು ಎಷ್ಟು ಚಿಕ್ಕವನಾಗಿದ್ದೆನೆಂದರೆ, ಆ ಕಾದಂಬರಿ ನನ್ನನ್ನು ಅಷ್ಟೊಂದು ತಟ್ಟಿರಲಿಲ್ಲ.

ಆದರೆ, ನಾನು ಅವರನ್ನು ಭೇಟಿಯಾದ ಒಂದು ವರ್ಷದ ಮೊದಲು ಡೆಕ್ಕನ್ ಹೆರಾಲ್ಡ್ ಪತ್ರಿಕೆ ಅನಂತಮೂರ್ತಿ ಅವರ 'ಅವಸ್ಥೆ' ಕಾದಂಬರಿಯನ್ನು ಪ್ರತಿವಾರ ಪ್ರಕಟಿಸುತ್ತಿತ್ತು. ಅನಂತಮೂರ್ತಿ ಅವರ ಹೀರೋಗಳಲ್ಲಿ ಒಬ್ಬರಾಗಿದ್ದ ಲೋಹಿಯಾವಾದಿ ಶಾಂತವೇರಿ ಗೋಪಾಲ ಗೌಡ ಅವರ ಜೀವನಾಧಾರಿತ ರಾಜಕೀಯ ಕಾದಂಬರಿ ಅದು. [ಅನಂತಮೂರ್ತಿಯವರೆ ಇದು ಸರಿಯೆ?]

Rajeev Gowda pays tribute to U.R. Ananthamurthy

ಸ್ವಾತಂತ್ರ್ಯಪೂರ್ವ ರಾಜಕಾರಣಿಗಳ ಕಥೆಗಳನ್ನು ಓದಿದ್ದ ನನಗೆ ಕರ್ನಾಟಕದ ಸ್ವಾತಂತ್ರ್ಯೋತ್ತರ ರಾಜಕಾರಣಿಗಳ ಕಥೆ ಬಹುವಾಗಿ ಪರಿಣಾಮ ಬೀರಿತು. ಮರಿ ರಾಜಕಾರಣಿಯಾಗಿ ಬೆಳೆಯುತ್ತಿದ್ದ ನನಗೆ ಆ ಕಾದಂಬರಿ ತುಂಬಾ ಸ್ಫೂರ್ತಿ ನೀಡಿತು. ಇದರ ಕಥೆಯ ಕುರಿತು ಯುಆರ್ಎ ಜೊತೆ ಚರ್ಚಿಸಿದ್ದೆ ಮತ್ತು ಪ್ರಶ್ನೋತ್ತರ ಸಮಯದಲ್ಲಿ ನಾನು ಕೇಳಿದ ಅನೇಕ ಪ್ರಶ್ನೆಗಳಿಗೆ ಅವರು ತಾಳ್ಮೆಯಿಂದ ಮತ್ತು ಮುತುವರ್ಜಿಯಿಂದ ಉತ್ತರ ನೀಡಿದ್ದರು.

ನಂತರ ಹಲವು ದಶಕಗಳ ಕಾಲ ಅವರ ಭೇಟಿಯೇ ಆಗಿರಲಿಲ್ಲ. 2000ರಲ್ಲಿ ಅಮೆರಿಕದಿಂದ ನಾನು ಮರಳಿ ಬಂದನಂತರ ಅವರನ್ನು ಮತ್ತೆ ಭೇಟಿಯಾಗುವ ಅವಕಾಶ ಸಿಕ್ಕಿತು. ಹೆಗ್ಗೋಡಿನಲ್ಲಿ ಕೆವಿ ಸುಬ್ಬಣ್ಣ ಅವರ ನೀನಾಸಂ ಕಾರ್ಯಾಗಾರದಲ್ಲಿ ಒಂದು ಬಾರಿ, ಅವರ ಮಗ ಶರತ್ ಅನಂತಮೂರ್ತಿ, ಸ್ನೇಹಿತರಾದ ಚಂದನ್ ಗೌಡ, ಗೌರಿ ಲಂಕೇಶ್ ಅವರು ಆಯೋಜಿಸಿದ್ದ ಹಲವಾರು ಸಂಜೆಕೂಟಗಳಲ್ಲಿ ಕೂಡ ಅವರನ್ನು ಭೇಟಿಯಾಗಿದ್ದೆ. [ಮೊದಲ ಭಾಷಣದಲ್ಲಿ ಸರ್ ಎಂವಿ ಸ್ಮರಿಸಿದ ಗೌಡ]

ಆಗಲೂ ಅವರು ಬದಲಾಗಿರಲಿಲ್ಲ. ನಾನು ಮೊದಲ ಬಾರಿ ಭೇಟಿಯಾಗಿದ್ದಾಗ ಹೇಗಿದ್ದರೋ, ನಂತರವೂ ಕೂಡ ಅವರು ಸುಲಭವಾಗಿ ಸಿಗುತ್ತಿದ್ದರು, ಗಮನವಿಟ್ಟು ಕೇಳುತ್ತಿದ್ದರು ಮತ್ತು ಯುವಕರನ್ನು ಪ್ರೋತ್ಸಾಹಿಸುತ್ತಿದ್ದರು. ನಂತರದ ಘಟ್ಟಗಳಲ್ಲಿ ಭಾಷಾ ರಾಜಕೀಯ ಮತ್ತು ಜಾತ್ಯತೀತತೆಯಂಥ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದರು. ಅವರ ವಿಶ್ಲೇಷಣಾತ್ಮಕ ಕಣ್ಣಲ್ಲಿ ಸಮಸ್ಯೆಗಳ ಬಗ್ಗೆ ಕೆಂಡ ಕಾಣುತ್ತಿತ್ತು ಮತ್ತು ಸಂಪ್ರದಾಯದ ಹೆಸರಿನಲ್ಲಿ ವೈಯಕ್ತಿಕ ಸ್ವಾತಂತ್ರ್ಯವನ್ನು ಕಟ್ಟಿಹಾಕುತ್ತಿದ್ದ ಸಾಮಾಜಿಕ ವ್ಯವಸ್ಥೆಯನ್ನು ಅವರು ಧಿಕ್ಕರಿಸುತ್ತಿದ್ದರು.

ಅವರ ಅನೇಕ ಬರವಣಿಗಳನ್ನು ಓದಿದ್ದೆ. ಅವರು ಒಬ್ಬ ಅಂತಾರಾಷ್ಟ್ರೀಯ ಮಟ್ಟದ ಸಾರ್ವಜನಿಕ ಬುದ್ಧಿಜೀವಿಯಾಗಿ ಬೆಳೆದಿರುವ ಬಗ್ಗೆ ವಿವೇಚಿಸಿಕೊಂಡಿದ್ದೆ. ಅವರ ಜೀವನ ಗಮನಿಸುತ್ತಿದ್ದ ನನಗೆ, ನಮ್ಮ ಕನ್ನಡಿಗರು ಏಕೆ ಸಾಹಿತ್ಯ ದಿಗ್ಗಜರ ಬರವಣಿಗೆ ಮಾತ್ರವಲ್ಲದೆ ಅವರು ಸಾರ್ವಜನಿಕವಾಗಿ ರಾಜಕೀಯ ವಿಷಯಗಳ ಬಗ್ಗೆ ಅವರು ತೋರುವ ಧೋರಣೆಯ ಕುರಿತು ಪೂಜ್ಯತಾಭಾವ ಹೊಂದುತ್ತೇವೆ ಎಂದು ಅರಿವಿಗೆ ಬರುತ್ತಿತ್ತು. ಈ ಕಾರಣಕ್ಕಾಗಿಯೇ ಲೋಕಸಭೆ ಚುನಾವಣೆ ಸಮಯದಲ್ಲಿ ಅನಂತಮೂರ್ತಿ ಮತ್ತು ಗಿರೀಶ್ ಕಾರ್ನಾಡ್ ಅವರು ಬಹಿರಂಗವಾಗಿ ನಂದನ್ ನಿಲೇಕಣಿ ಅವರನ್ನು ಬೆಂಬಲಿಸಿದಾಗ ರೋಮಾಂಚನಗೊಂಡಿದ್ದೆ.

ಅನಂತಮೂರ್ತಿ ಅವರು ನನ್ನ ಟಿವಿ ಚರ್ಚೆಗಳನ್ನು ಕುತೂಹಲದಿಂದ ನೋಡುತ್ತಾರೆ ಎಂದು ಅವರ ಮಗ ಶರತ್ ಅವರು ಇತ್ತೀಚೆಗೆ ಹೇಳಿದಾಗ ನಿಜಕ್ಕೂ ಪುಳಕಗೊಂಡಿದ್ದೆ. ಹೇಗಿದ್ದರೂ ಅವರು ಸುತ್ತಮುತ್ತ ಇದ್ದೇ ಇರುತ್ತಾರೆ, ಸಮಯ ಸಿಕ್ಕಾಗ ಅವರ ಬಳಿ ಹೋಗಿ ಭೇಟಿಯಾದರಾಯಿತು ಎಂದು ಆಗ ಅಂದುಕೊಂಡಿದ್ದೆ. ಆದರೆ, ವಿಷಾದನೀಯ ಸಂಗತಿಯೆಂದರೆ, ಅದು ಸಾಧ್ಯವಾಗಲೇ ಇಲ್ಲ. [ಅನಂತದಲ್ಲಿ ಲೀನವಾದ ಸಾರಸ್ವತ ಲೋಕದ ಕೀರ್ತಿ]

ಅತ್ಯಂತ ಪ್ರತಿಭಾವಂತ, ಎಲ್ಲರಿಂದ ಗೌರವಿಸಲ್ಪಟ್ಟ ಮತ್ತು ಬಹುಶಃ ವಿವಾದಾತ್ಮಕ ಬರಹಗಾರನನ್ನು ಭಾರತ ಕಳೆದುಕೊಂಡಿದೆ. ಅವರಿಲ್ಲದಿದ್ದರೇನಂತೆ, ಅವರ ಸತ್ವಯುತ ಲೇಖನಗಳು ಜೀವಂತವಿವೆ. ಅವರ ಆದರ್ಶಗಳು ಮತ್ತು ಅವರು ನಡೆಸಿದ್ದ ಚಳವಳಿಗಳು ಇಂಥ ಸವಾಲಿನ ಸಮಯದಲ್ಲಿ ನನಗೆ ಯಾವತ್ತೂ ಸ್ಫೂರ್ತಿಯುತವಾಗಿರುತ್ತವೆ. ವಿದಾಯ ಸರ್.

English summary
Member of Parliament from Karnataka Rajeev Gowda pays rich tribute to departed Jnanpith awardee Dr. U.R. Ananthamurthy by remembering how he was inspired by his powerful writings and speeches. Gowda says, though URA is not around his principles and activism will continue to inspire him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X