ಆರ್. ಆರ್. ನಗರ ಉಪ ಚುನಾವಣೆ ಚಿತ್ರಣ; ಗೆಲುವಿಗಾಗಿ ಪಕ್ಷಗಳ ಕಸರತ್ತು!
ಬೆಂಗಳೂರು, ಅಕ್ಟೋಬರ್ 16 : ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರ ಬೆಂಗಳೂರಿನ ರಾಜರಾಜೇಶ್ವರಿ ನಗರ. 2008ರ ಬಳಿಕ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಲು ಮುಂದಾಗಿದೆ. ಕಳೆದ ಎರಡು ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಗೆದ್ದಿದ್ದ ಮುನಿರತ್ನ ಅವರು ಬಿಜೆಪಿಯ ಅಭ್ಯರ್ಥಿ.
ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಕಾರಣವಾದ ಶಾಸಕರಲ್ಲಿ ಮುನಿರತ್ನ ಸಹ ಒಬ್ಬರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾಗಿದ್ದ ಮುನಿರತ್ನ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಸೇರಿದ್ದಾರೆ.
ಆರ್. ಆರ್. ನಗರ ಉಪ ಚುನಾವಣೆ; ಡಿಕೆಶಿ ತುರ್ತು ಸುದ್ದಿಗೋಷ್ಠಿ
2013 ಮತ್ತು 2018ರ ಚುನಾವಣೆಯಲ್ಲಿ ಆರ್. ಆರ್. ನಗರದಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದು ಗೆದ್ದಿದ್ದ ಮುನಿರತ್ನ ಈಗ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುವ ನಿರೀಕ್ಷೆ ಇದೆ. ಜೆಡಿಎಸ್ ಸಹ ಕ್ಷೇತ್ರದಲ್ಲಿ ಮತಬ್ಯಾಂಕ್ ಹೊಂದಿದ್ದು, ಕಡೆಗಣಿಸುವಂತಿಲ್ಲ.
ಆರ್. ಆರ್. ನಗರ ಉಪ ಚುನಾವಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ
ಆರ್. ಆರ್. ನಗರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಸಂಸದರು ಡಿ. ಕೆ. ಸುರೇಶ್, ಡಿ. ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದು. ಆದ್ದರಿಂದ, ಉಪ ಚುನಾವಣೆ ಕಾಂಗ್ರೆಸ್ಗೆ ಪ್ರತಿಷ್ಠೆಯಾಗಿದೆ.
ಆರ್. ಆರ್. ನಗರ ಉಪ ಚುನಾವಣೆ; ಮುನಿರತ್ನಗೆ ಬಿಜೆಪಿ ಟಿಕೆಟ್

ಕ್ಷೇತ್ರದಲ್ಲಿ ಮುನಿರತ್ನ ಪ್ರಭಾವ
ಎರಡು ಬಾರಿ ಕಾಂಗ್ರೆಸ್ನಿಂದ ಗೆದ್ದಿದ್ದ ಮುನಿರತ್ನ ಅವರು ಈ ಬಾರಿ ಬಿಜೆಪಿ ಅಭ್ಯರ್ಥಿ. ಪಕ್ಷಾತೀತವಾಗಿ ಕ್ಷೇತ್ರದಲ್ಲಿ ಉತ್ತಮ ಸಂಘಟನೆಯನ್ನು ಅವರು ಹೊಂದಿದ್ದಾರೆ. ಬಿಬಿಎಂಪಿಯ ಕೌನ್ಸಿಲ್ ಅವಧಿ ಮುಗಿದಿದೆ. ಆರ್. ಆರ್. ನಗರ ವ್ಯಾಪ್ತಿಯ 9 ವಾರ್ಡ್ ಪೈಕಿ 5ರಲ್ಲಿ ಕಾಂಗ್ರೆಸ್ ಗೆದ್ದಿತ್ತು. 3ರಲ್ಲಿ ಬಿಜೆಪಿ, 1 ಜೆಡಿಎಸ್ ಗೆದ್ದುಕೊಂಡಿದ್ದವು. ಕಾಂಗ್ರೆಸ್ನ ನಾಲ್ವರು ಪಾಲಿಕೆ ಸದಸ್ಯರು ಮುನಿರತ್ನ ಜೊತೆ ಬಿಜೆಪಿಗೆ ಹೋಗಿದ್ದಾರೆ. ಬಿಜೆಪಿಯ 3, ಕಾಂಗ್ರೆಸ್ನ ನಾಲ್ವರು ಮುನಿರತ್ನ ಗೆಲ್ಲಿಸಲು ಪಣತೊಟ್ಟಿದ್ದಾರೆ.

ಡಿಕೆಶಿ ಸಹೋದರರ ಪ್ರತಿಷ್ಠೆ
ಆರ್. ಆರ್. ನಗರ ಚುನಾವಣೆಯಲ್ಲಿ ಡಿಕೆಶಿ ಸಹೋದರರ ಪ್ರತಿಷ್ಠೆ ಅಡಗಿದೆ. ಐಎಎಸ್ ಅಧಿಕಾರಿಯಾಗಿದ್ದ ದಿ. ಡಿ. ಕೆ. ರವಿ ಪತ್ನಿ ಕುಸುಮಾ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಡಿ. ಕೆ. ಸುರೇಶ್ ಹೊಂದಿರುವ ಪ್ರಭಾವ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ತಂತ್ರ, ಕಾಂಗ್ರೆಸ್ ಪಕ್ಷದ ಹೆಸರು ಮುಂತಾದವುಗಳ ಮೂಲಕ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕು. ಎರಡು ಬಾರಿ ಗೆದ್ದ ಕ್ಷೇತ್ರವನ್ನು ಕಾಂಗ್ರೆಸ್ ಉಳಿಸಿಕೊಳ್ಳಲಿದೆಯೇ? ಕಾದು ನೋಡಬೇಕಿದೆ.

ಒಕ್ಕಲಿಗರ ಮತಗಳು ನಿರ್ಣಾಯಕ
ಆರ್. ಆರ್. ನಗರ ಕ್ಷೇತ್ರದಲ್ಲಿ 1.35 ಲಕ್ಷ ದಷ್ಟು ಒಕ್ಕಲಿಗರ ಮತಗಳಿವೆ. 2018ರ ಚುನಾವಣೆಯಲ್ಲಿ ಜೆಡಿಎಸ್ನಿಂದ ಕಣಕ್ಕಿಳಿದಿದ್ದ ಜಿ. ಎಚ್. ರಾಮಚಂದ್ರ 60,360 ಮತಗಳನ್ನು ಪಡೆದಿದ್ದರು. ಆದ್ದರಿಂದ, ಜೆಡಿಎಸ್ ಸಹ ನಿರ್ಣಾಯಕವಾಗುತ್ತದೆ. ಜ್ಞಾನ ಭಾರತಿ ಕೃಷ್ಣಮೂರ್ತಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಪಕ್ಷ ಸಂಘಟನೆ ವಿಚಾರದಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಅಷ್ಟು ಪ್ರಭಾವಿಯಾಗಿಲ್ಲ.

ಬಿಜೆಪಿ ಸರ್ಕಾರ ರಾಜ್ಯದಲ್ಲಿದೆ
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದೆ. ಎರಡು ಬಾರಿ ಕ್ಷೇತ್ರದಲ್ಲಿ ಗೆದ್ದಿರುವ ಮುನಿರತ್ನ ಬಿಜೆಪಿ ಅಭ್ಯರ್ಥಿ. ಆದ್ದರಿಂದ, 2008ರ ಬಳಿಕ ಮತ್ತೊಮ್ಮೆ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಲು ಪಕ್ಷ ಬಯಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿ ನಡೆಯುವ ನಿರೀಕ್ಷೆ ಇದೆ.
ಆರ್. ಆರ್. ನಗರ ವ್ಯಾಪ್ತಿಯಲ್ಲಿ ಜಾಲಹಳ್ಳಿ, ಜೆ. ಪಿ. ಪಾರ್ಕ್, ಯಶವಂತಪುರ, ಎಚ್ಎಂಟಿ, ಲಕ್ಷ್ಮೀದೇವಿ ನಗರ, ಲಗ್ಗೆರೆ, ಕೊಟ್ಟಿಗೆ ಪಾಳ್ಯ, ಜ್ಞಾನ ಭಾರತಿ, ರಾಜರಾಜೇಶ್ವರಿ ನಗರ ವಾರ್ಡ್ಗಳಿವೆ.

2018ರ ಫಲಿತಾಂಶ
2018ರ ಚುನಾವಣೆಯಲ್ಲಿ ಮುನಿರತ್ನ (ಕಾಂಗ್ರೆಸ್) 1,08,064 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯ ತುಳಸಿ ಮುನಿರಾಜು ಗೌಡ 82,572 ಮತಗಳನ್ನು ಪಡೆದಿದ್ದರು. ಜೆಡಿಎಸ್ನ ಜಿ. ಎಚ್. ರಾಮಚಂದ್ರ 60,360 ಮತಗಳನ್ನು ಪಡೆದಿದ್ದರು.
ಈ ಬಾರಿ ಮುನಿರತ್ನ ಬಿಜೆಪಿಯಿಂದ ಅಭ್ಯರ್ಥಿ. ಹೆಚ್. ಕುಸುಮಾ ಕಾಂಗ್ರೆಸ್ನಿಂದ, ಜೆಡಿಎಸ್ನಿಂದ ಕೃಷ್ಣಮೂರ್ತಿ ಅಭ್ಯರ್ಥಿಯಾಗಿದ್ದಾರೆ.