ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುಟ್ಟೇನಹಳ್ಳಿ ಡಬಲ್ ಮರ್ಡರ್ : ಆರೋಪಿಗಳು ಅಂದರ್ ಆಗಿದ್ದೇ ಥ್ರಿಲ್ಲಿಂಗ್ !

|
Google Oneindia Kannada News

ಬೆಂಗಳೂರು, ಏಪ್ರಿಲ್ 14: ಎರಡು ಮುಗ್ಧ ಜೀವ ತೆಗೆದಿದ್ದ ಪಾತಕಿ ಕಾಲಿಗೆ ಗುಂಡು ಹಾರಿಸಿ ಹೆಡೆಮುರಿ ಕಟ್ಟುವಲ್ಲಿ ಪುಟ್ಟೇನಹಳ್ಳಿ ಸೂಪರ್ ಕಾಪ್ ಕಿಶೋರ್ ಯಶಸ್ವಿಯಾಗಿದ್ದಾರೆ. ಖತರ್ ನಾಕ್ ಡಕಾಯಿತ ಅಂಬಾರಿ ಅಲಿಯಾಸ್ ಮಂಜುನಾಥ್ ಎಂಬ ಪಾತಕಿ ಎರಡು ಕೊಲೆ ಮಾಡುವ ಮುನ್ನ ಕೊಲೆಯಾದ ವ್ಯಕ್ತಿಗೆ 12 ರೂ. ಸಾಲ ಕೊಟ್ಟು ಸ್ನೇಹ ಸಂಪಾದಿಸಿದ್ದ! ಸಣ್ಣ ಕ್ಲೂ ಇಲ್ಲದೇ ಇಬ್ಬರನ್ನು ಹತ್ಯೆ ಮಾಡಿ ಚಿನ್ನಾಭರಣ ದೋಚಿದ್ದ ಪಾತಕಿ ಪತ್ತೆಗೆ ನೆರವು ನೀಡಿದ್ದು ಕಳವು ಆಗಿದ್ದ ಬೈಕ್ ಹಾಗೂ ಆತನ ಲವರ್‌ಗೆ ಹೋಗಿದ್ದ ಮೊಬೈಲ್ ಕರೆ ! ಕ್ಲೂ ಇಲ್ಲದ ಡಬಲ್ ಮರ್ಡರ್ ಪ್ರಕರಣವನ್ನು ಕೇವಲ ಒಂದು ವಾರದಲ್ಲಿ ಪತ್ತೆ ಮಾಡಿರುವ ಪೊಲೀಸ್ ಇನ್‌ಸ್ಪೆಕ್ಟರ್ ತನಿಖಾ ಶೈಲಿ ಇದೀಗ ಪೊಲೀಸ್ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Recommended Video

ಮನೆಕಳ್ಳತನ ವೇಳೆ ಇಬ್ಬರನ್ನ ಹತ್ಯೆಗೈದಿದ್ದ ಆರೋಪಿಯ ಮೇಲೆ ಗುಂಡು ಹಾರಿಸಿ ಬಂಧಿಸಿದ ಪೊಲೀಸ್ | Oneindia Kannada

ಒಡಿಶಾ ಮೂಲದ ದೇವಾಮೃತ್ ಮೆಹ್ರಾ ಲಾಕ್‌ಡೌನ್‌ನಿಂದ ಕೆಲಸ ಕಳೆದಕೊಂಡಿದ್ದ. ಹೊಸ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದ ಈತನಿಗೆ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸವೂ ಸಿಕ್ಕಿತ್ತು. ಉಳಿದುಕೊಳ್ಳುವ ಸಲುವಾಗಿ ಬೆಂಗಳೂರಿನಲ್ಲಿಯೇ ಗೆಳೆಯ ದೀಪ್ ದೇವ್ ಬಸು ಎಂಬಾತನನ್ನು ಸಂಪರ್ಕಿಸಿದ್ದ. ತನ್ನ ತಾಯಿ ಮಮತಾ ಬಸು ಇರುವ ಮನೆಯಲ್ಲಿಯೇ ಮನೆ ಖಾಲಿಯಿದ್ದು ಅಲ್ಲಿ ಉಳಿದುಕೊಳ್ಳಲು ದೇವಾಮೃತ್ ಮೆಹ್ರಾಗೆ ಗೆಳೆಯ ಸೂಚಿಸಿದ್ದ. ಈ ಹಿನ್ನೆಲೆಯಲ್ಲಿ ಒಡಿಶಾದಿಂದ ಬೆಂಗಳೂರಿಗೆ ಬಂದಿದ್ದ ದೇವ್‌ ಮೃತ್ ಕೆಲಸಕ್ಕೆ ಸೇರಿಕೊಂಡಿದ್ದ. ಹೊಸ ಬದುಕು ಕಟ್ಟಿಕೊಂಡ ಖುಷಿಯಲ್ಲಿದ್ದ. ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಸಂತೃಪ್ತಿ ಬಡಾವಣೆಯಲ್ಲಿ ವಾಸವಾಗಿದ್ದ.

ಆ ದಿನ ನಡೆದಿದ್ದು ಏನು ?

ಆ ದಿನ ನಡೆದಿದ್ದು ಏನು ?

ಏ. 7 ರಂದು ಸಿಗರೇಟು ಸೇದಲು ಚಿಲ್ಲರೆ ಅಂಗಡಿ ಸಮೀಪ ಹೋಗಿದ್ದ ದೇವಾಮೃತ್ ಮೆಹ್ರಾ ಅಂಗಡಿಗೆ ಗೂಗಲ್ ಪೇ ಮಾಡಲು ಪ್ರಯತ್ನಿಸಿದ್ದ. ಆದರೆ, ತಾಂತ್ರಿಕ ದೋಷದಿಂದ ಹಣವನ್ನು ಚಿಲ್ಲರೆ ಅಂಗಡಿಗೆ ಕೊಡಲು ಸಾಧ್ಯವಾಗಿಲ್ಲ. ಪಕ್ಕದಲ್ಲಿಯೇ ಇದ್ದ ಡಕಾಯಿತ ಮಂಜುನಾಥ್ 12 ರೂ. ಪಾವತಿಸಿದ್ದ. ಇದಕ್ಕೆ ದೇವಾಮೃತ್ ಮೆಹ್ರಾ ಮುಗಳು ನಗೆಯಿಂದ ಥ್ಯಾಂಕ್ಯೂ ಅಂತ ಹೇಳಿದ್ದ. ಈ ಪಾತಕಿ 12 ರೂ. ಪಾವತಿಸುವ ಹಿಂದೆ ಕಿರಾತಕ ಪ್ಲಾನ್ ರೂಪಿಸಿದ್ದ. ದೇವ್‌ ಕೈಯಲ್ಲಿ ದುಬಾರಿ ಮೌಲ್ಯದ ಮೊಬೈಲ್ ಇತ್ತು. ಈತನ ಮೊಬೈಲ್ ಎಗರಿಸುವ ಪ್ಲಾನ್ ಮಾಡಿದ್ದ. ಕೊತ್ತನೂರು ದಿಣ್ಣೆಯಲ್ಲಿಯೇ ವಾಸವಾಗಿದ್ದ ಪಾತಕಿ ಮಂಜುನಾಥ್, ದೇವಾಮೃತ್ ಮೆಹ್ರಾನನ್ನು ಹಿಂಬಾಲಿಸಿಕೊಂಡೇ ಮನೆಗೆ ಹೋಗಿದ್ದ. ಡೂಪ್ಲೆಕ್ಸ್ ಮನೆ ನೋಡಿದಾಗ, ಮಹಿಳೆಯೊಬ್ಬಳು ಕಂಡಿದ್ದಳು. ಆಕೆ ಕೊರಳಿನಲ್ಲಿ ಚಿನ್ನದ ಸರ ಮತ್ತು ಕಿವಿಯೋಲೆ ನೋಡಿದ್ದ. ಈತ ಶ್ರೀಮಂತ ಮನೆತನವನಿದ್ದು, ದರೋಡೆ ಮಾಡಬೇಕು ಅಂತ ಅವತ್ತೇ ಪ್ಲಾನ್ ರೂಪಿಸಿದ್ದ ಕಿರಾತಕ ಅಂಬಾರಿ.

 ಹತ್ಯೆ ಮುನ್ನ ಭೇಟಿ

ಹತ್ಯೆ ಮುನ್ನ ಭೇಟಿ

ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಜೆ.ಪಿ.ನಗರದ ಸಂತೃಪ್ತಿ ಬಡಾವಣೆಯಲ್ಲಿ ವಾಸವಿದ್ದ ದೇವಾಮೃತ್ ನೆಮ್ಮದಿ ಜೀವನ ಕಟ್ಟಿಕೊಂಡಿದ್ದ. ಗೆಳೆಯ ದೀಪ್ ದೇವ್ ಬಸು ಕೂಡ ಆಗಾಗ ಬಂದು ಹೋಗುತ್ತಿದ್ದ. ಒಂಟಿಯಾಗಿದ್ದ ತನ್ನ ತಾಯಿ ಕುಶಲೋಪರಿ ವಿಚಾರಿಸಲು ಗೆಳೆಯನಿದ್ದಾನೆ ಎಂಬ ಸಂತಸದಲ್ಲಿ ದೀಪ್ ದೇವ್ ಬಸು ಮುಳಗಿದ್ದ. ಏ. 7 ರಂದು ರಾತ್ರಿ ದೀಪ್ ದೇವ್ ಬಸು ಮತ್ತು ದೇವ್ ಮೆಹ್ರಾ ಭೇಟಿಯಾಗಿದ್ದಾರೆ. ಆ ದಿನ ರಾತ್ರಿ 8.30 ರ ವರೆಗೂ ಮೂವರು ಮಾತನಾಡಿದ್ದಾರೆ. ಆನಂತರ ದೀಪ್ ದೇವ್ ಬಸು ತಾಯಿ ಮನೆಯಿಂದ ಪತ್ನಿಯಿದ್ದ ಮನೆಗೆ ತೆರಳಿದ್ದ. ಸ್ವಲ್ಪ ಮದ್ಯಪಾನ ಮಾಡಿದ್ದ ದೇವಾಮೃತ್ ಮೆಹ್ರಾ ಕೂಡ ನಿದ್ದೆಗೆ ಜಾರಿದ್ದ.

ಮಧ್ಯ ರಾತ್ರಿ ಕಿರಾತಕನಿಂದ ಹತ್ಯೆ

ಮಧ್ಯ ರಾತ್ರಿ ಕಿರಾತಕನಿಂದ ಹತ್ಯೆ

ದೇವ್ ಮನೆ ನೋಡಿಕೊಂಡು ಹೋಗಿದ್ದ ಡಕಾಯಿತ ಮಂಜುನಾಥ್, ಅಂದುಕೊಂಡಂತೆ ದರೋಡೆಗೆ ಪ್ಲಾನ್ ರೂಪಿಸಿದ. ಬೈಕನ್ನು ಕದ್ದು ಮಧ್ಯರಾತ್ರಿ ದೇವಾಮೃತ್ ಮೆಹ್ರಾ ತಂಗಿದ್ದ ಮನೆಗೆ ಎಂಟ್ರಿಕೊಟ್ಟಿದ್ದಾನೆ. ಏಯ್ ಇನ್ನೇನು ಬಂದಿದ್ದೀಯ ಎಂದು ದೇವಾಮೃತ್ ಮೆಹ್ರಾ ಪ್ರಶ್ನೆ ಮಾಡಿದ್ದಾನೆ. ಇದೇ ವೇಳೆ ಚಾಕುವಿನಿಂದ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಆತನ ಬಳಿಯಿದ್ದ ನಗದು , ಎಟಿಎಂ ಕಾರ್ಡ್, ಮೊಬೈಲ್ ಕದ್ದಿದ್ದಾನೆ. ಆನಂತರ ಮೇಲಿದ್ದ ಕಮಲಾ ಬಸು ತಂಗಿದ್ದ ಕೊಠಡಿಗೆ ಹೋಗಿದ್ದಾನೆ. ಅಲ್ಲಿ ಆಕೆಯನ್ನು ಕತ್ತು ಸೀಳಿ ಹತ್ಯೆ ಮಾಡಿ ಚಿನ್ನಾಭರಣ ದೋಚಿದ್ದಾನೆ. ಕೊಲೆ ಮಾಡಿದ ಬಳಿಕ ಮನೆಗೆ ಹಾಕಿದ್ದ ಸಿಸಿಟಿವಿಯ ಡಿವಿಆರ್‌ನ್ನು ಕದ್ದಿದ್ದಾನೆ. ಯಾರಿಗೂ ಅನುಮಾನ ಬಾರದಂತೆ ರಕ್ತದ ಬಟ್ಟೆಯನ್ನು ಅಲ್ಲೇ ಬಿಸಾಡಿ ದೇವಾಮೃತ್ ಮೆಹ್ರಾ ಧರಿಸಿದ್ದ ಬಟ್ಟೆಯನ್ನು ಹಾಕಿಕೊಂಡು ಕದ್ದ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಯಾವ ಕ್ಲೂ ಬಿಡದೇ ಮಂಜುನಾಥ್ ಅಲ್ಲಿಂದ ಪರಾರಿಯಾಗಿದ್ದಾನೆ. ಏ. 8 ರಂದು ಬೆಳಗ್ಗೆ ಜೋಡಿ ಕೊಲೆ ಪ್ರಕರಣ ಇಡೀ ಬೆಂಗಳೂರನ್ನು ಬೆಚ್ಚಿ ಬೀಳಿಸಿತ್ತು.

ಹಳೇ ಪೊಲೀಸಿಂಗ್ ಮೊರೆ ಹೋದ ಸೂಪರ್ ಕಾಪ್

ಹಳೇ ಪೊಲೀಸಿಂಗ್ ಮೊರೆ ಹೋದ ಸೂಪರ್ ಕಾಪ್

ಜೋಡಿ ಕೊಲೆ ಕುರಿತು ತನಿಖೆ ಆರಂಭಿಸಿದಾಗ ಪೊಲೀಸರಿಗೆ ಯಾವ ಸುಳಿವು ಸಿಕ್ಕಿರಲಿಲ್ಲ. ಸಿಸಿ ಟಿವಿ ದೃಶ್ಯಗಳು ಉಪಯೋಗಕ್ಕೆ ಬರಲಿಲ್ಲ. ಟವರ್ ಲೊಕೇಷನ್ ಮೊರೆ ಹೋದರು. ಯಾವುದೂ ಕೈಗೂಡಲಿಲ್ಲ. ಪರಪ್ಪನ ಅಗ್ರಹಾರ ಜೈಲಿನಿಂದ ಇತ್ತೀಚೆಗೆ ಬಿಡುಗಡೆಯಾಗಿರುವ ಕ್ರಿಮಿನಲ್ ಗಳ ಪಟ್ಟಿ ಹಿಡಿದು ಕೂತಿದ್ದರು. ಡಾಟಾ ಪರಿಶೀಲನೆ ಮಾಡಿದಾಗ ಇತ್ತೀಚೆಗೆ ಬಿಡುಗಡೆಯಾಗಿದ್ದ ಮೂವರ ವಿವರ ಸಿಕ್ಕಿತ್ತು. ಅದರಲ್ಲಿ ಮುಗಿಲು ಕುಮಾರ್ ಎಂಬಾತನ ವಿವರ ಸಿಕ್ಕಿತ್ತು. ಇದೇ ಸಮಯಲ್ಲಿ ಕಳ್ಳತನವಾಗಿದ್ದ ಬೈಕ್ ನ ಜಾಡು ಹಿಡಿದು ತನಿಖೆ ಆರಂಭಿಸಿದ್ದರು. ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದ ಮುಗಿಲ್ ಕುಮಾರ್ ಎಂಬ ಅಪರಾಧಿಯ ವಿವರ ಸಿಕ್ಕಿತ್ತು. ಅತನನ್ನು ವಿಚಾರಣೆ ನಡೆಸಿದಾಗ ದರೋಡೆಕೋರ ಮಂಜುನಾಥ್ ಎರಡೂವರೆ ತಿಂಗಳ ಹಿಂದೆ ಬಿಡುಗಡೆ ಆಗಿರುವ ವಿಚಾರವಷ್ಟೇ ಗೊತ್ತಾಗಿತ್ತು. ಹಲವಾರು ದರೋಡೆ ಕೃತ್ಯ ಎಸಗಿದ್ದ ಮಂಜುನಾಥ್ ನ ಸುಳಿವು ಮಾತ್ರ ಸಿಕ್ಕಿಲ್ಲ.

ಹೀಗೆ ನಾನಾ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಕಿಶೋರ್‌ಗೆ ಮುಗಿಲ್ ಕುಮಾರ್ ನೀಡಿದ ಮಾಹಿತಿ ಮೇರೆಗೆ ದರೋಡೆಕೋರನ ಮಂಜುನಾಥ್ ಲವ್ವರ್ ನಂಬರ್ ಸಿಕ್ಕಿತ್ತು. ಆಕೆ ಮೊಬೈಲ್ ಗೆ ಹೋಗಿದ್ದ ಕರೆ ಮಾಹಿತಿ ನೀಡಿದಾಗ ಅದೇ ನಂಬರ್ ನಿಂದ ಗುಲ್ಬರ್ಗಾಗೆ ಒಂದು ಕರೆ ಹೋಗಿತ್ತು. ಬೆಂಗಳೂರಿನ ಎಚ್‌ಎಎಲ್‌ಗೆ ಒಂದು ಕರೆ ಹೋಗಿತ್ತು. ಆ ಮೊಬೈಲ್ ನಂಬರ್ ಹೊಂದಿದವನನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದಾಗ, ಯಾರೋ ಅಪರಿಚಿತ ಮೊಬೈಲ್ ತೆಗೆದುಕೊಂಡು ಕರೆ ಮಾಡಿದ್ದಾಗಿ ತಿಳಿಸಿದ್ದ. ಇಷ್ಟೇ ಮಾಹಿತಿ ಆಧರಿಸಿ ಎಚ್‌ಎಎಲ್‌ನಲ್ಲಿ ವಾಸವಾಗಿದ್ದ ಶೇಖರ್ ಎಂಬ ವ್ಯಕ್ತಿಯ ಜಾಡು ಹಿಡಿದು ಪೊಲೀಸರು ತನಿಖೆ ನಡೆಸಿದ್ದರು.

ಕದ್ದ ಬೈಕ್ ನೀಡಿದ ಸುಳಿವು

ಕದ್ದ ಬೈಕ್ ನೀಡಿದ ಸುಳಿವು

ಶೇಖರ್ ಗೆ ಕರೆ ಮಾಡಿದ್ದ ಮಂಜುನಾಥ್, ತಾನು ಪ್ಲಂಬರ್ ಕೆಲಸಕ್ಕೆ ಬರುವುದಾಗಿ ತಿಳಿಸಿದ್ದ. ಇಷ್ಟು ಮಾಹಿತಿ ಜಾಡು ಹಿಡಿದು ಪೊಲೀಸರು ತನಿಖೆ ನಡೆಸಿದಾಗ ನಿರ್ಮಾಣ ಹಂತದ ಕಟ್ಟಡದ ಬಳಿ ಶೇಖರ್ ಇದ್ದ. ಆತನ ಬಳಿ ಕಾಣಿಸಿದ್ದು ಅಪರಾಧ ಕೃತ್ಯಕ್ಕೆ ಬಳಸಿದ್ದ ಕೆಂಪು ಬಣ್ಣದ ಆಕ್ಟೀವಾ ಕಾಣಿಸಿತ್ತು. ಅಲ್ಲಿಗೆ ಪೊಲೀಸರಿಗೆ ಖಚಿತವಾಗಿತ್ತು ಕಿರಾತಕ ಮಂಜುನಾತಥನೇ ಈ ಬೈಕ್ ಕದ್ದಿದ್ದಾನೆ ಎಂಬುದು. ಇದರ ಜಾಡು ಹಿಡಿದು ಮಂಜುನಾಥ್ ನನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾನೆ. ಈ ವೇಳೆ ಸರ್ವೀಸ್ ಪಿಸ್ತೂಲಿನಿಂದ ಪೊಲೀಸ್ ಇನ್‌ಸ್ಪೆಕ್ಟರ್ ಕಿಶೋರ್ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಮೃತನ ಕೈಯಲ್ಲಿದ್ದ ಮೊಬೈಲ್ ಗಾಗಿ ಹತ್ಯೆ ಪ್ಲಾನ್ ರೂಪಿಸಿದ್ದನ್ನು ತಿಳಿಸಿದ್ದಾನೆ. ಮಾತ್ರವಲ್ಲ ಅವನು ಸಿಗರೇಟ್ ತೆಗೆದುಕೊಂಡಿದ್ದ ಚಿಲ್ಲರೆ ಅಂಗಡಿಯಲ್ಲಿ 12 ರೂ. ಪಾವತಿಸಿದ್ದ ಅಸಲಿ ಸಂಗತಿಯನ್ನು ಬಾಯಿ ಬಿಟ್ಟಿದ್ದಾನೆ.

ಕ್ರಿಮಿನಲ್ ಅಂಬಾರಿ ಚರಿತ್ರೆ

ಕ್ರಿಮಿನಲ್ ಅಂಬಾರಿ ಚರಿತ್ರೆ

ಬೆಂಗಳೂರಿನಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ದರೋಡೆ ಮಾಡಿರುವ ಪಾತಕಿ ಅಂಬಾರಿ ಎಲ್ಲೂ ಮೊಬೈಲ್ ಬಳಸಲ್ಲ. ದಾರಿಯಲ್ಲಿ ಸಿಗುವ ಸಾರ್ವಜನಿಕರ ಮೊಬೈಲ್ ಬಳಿಸಿ ತನಗೆ ಬೇಕಾದವರಿಗೆ ಕರೆ ಮಾಡುತ್ತಾನೆ. ಒಂದಡೆ 24 ತಾಸು ನಿಲ್ಲಲ್ಲ. ಈತ ದರೋಡೆಗೆ ಸ್ಕೆಚ್ ಹಾಕಿದ ಅಂದರೆ 24 ತಾಸಿನಲ್ಲಿ ಮುಗಿಸಿ ಕೈತೊಳೆದುಕೊಳ್ಳುತ್ತಾನೆ. ಹೀಗೆ ನಾನಾ ಅಪರಾಧ ಕೃತ್ಯದಲ್ಲಿ ಶಾಮೀಲಾಗಿರುವ ಈತ ಪೊಲೀಸರ ಕೈಗೆ ಸಿಗಲ್ಲ. ದಾರಿಯಲ್ಲಿ ಹೋಗುವ ವ್ಯಕ್ತಿಯ ಮೊಬೈಲ್ ತೆಗೆದುಕೊಂಡು ತನ್ನ ಲವರ್ ಗೆ ಕರೆ ಮಾಡಿದ್ದ. ಕಮಲಾ ಬಸು ಹತ್ಯೆ ಮಾಡಿ ದೋಚಿದ್ದ ಆಭರಣಗಳನ್ನು ಯಾರಿಗೂ ಅನುಮಾನ ಬಾರದಂತೆ ನಾಲ್ಕು ದಿಕ್ಕಿನಲ್ಲಿ ವಿಲೇವಾರಿ ಮಾಡಿರುವ ಸಂಗತಿ ಗೊತ್ತಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾವುದೇ ಕ್ಲೂ ಇಲ್ಲದೇ ಜೋಡಿ ಕೊಲೆ ಪ್ರಕರಣವನ್ನು ಹಳೇ ಪೊಲೀಸಿಂಗ್ ಮಾದರಿಯಲ್ಲಿಯೇ ಪತ್ತೆ ಮಾಡಿದ ಪೊಲೀಸ್ ಇನ್‌ಸ್ಪೆಕ್ಟರ್ ಕಿಶೋರ್ ಕಾರ್ಯ ಶೈಲಿಯನ್ನು ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

English summary
Puthenahalli Police have solved the double murder case on the tip of a bike which had been stolen in Bengaluru. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X