ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾರ್ವಜನಿಕ ಗ್ರಂಥಾಲಯಗಳನ್ನೂ ಬಿಡದ ಬಿಬಿಎಂಪಿ ಸಾಲ

By ಬಾಲರಾಜ್ ತಂತ್ರಿ
|
Google Oneindia Kannada News

ಸಾರ್ವಜನಿಕರಲ್ಲಿ ವಿದ್ಯೆ, ಜ್ಞಾನ ಓದಿನ ಬಗೆಗಿನ ಅಭಿರುಚಿ ಹೆಚ್ಚಿಸುವ ಉದ್ದೇಶದಿಂದ ಸಾರ್ವಜನಿಕ ಲೈಬ್ರೆರಿಗಳ ಜಾಲಗಳನ್ನು ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ 1965ರ ಮೂಲಕ ಸರಕಾರ ಆರಂಭಿಸಿತ್ತು.

ಜನಸಾಮಾನ್ಯರ ವಿಶ್ವವಿದ್ಯಾಲಯವೆಂದೇ ಕರೆಯಲ್ಪಡುವ ಸಾರ್ವಜನಿಕ ಗ್ರಂಥಾಲಯಗಳ ಇಂದಿನ ಪರಿಸ್ಥಿತಿ ಏನು? ದೇಶದ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆಯಲ್ಲಿ ನಮ್ಮ ರಾಜ್ಯ ಮಂಚೂಣಿಯಲ್ಲಿ ಇದ್ದರೂ ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ಲೈಬ್ರೆರಿಗಳು ಇಂದು ಆರ್ಥಿಕ ಮುಗ್ಗಟ್ಟಿನಿಂದ ಹೈರಾಣವಾಗಿರುವುದು ದುರಂತ.

ಬೆಂಗಳೂರು ವ್ಯಾಪ್ತಿಯ ಲೈಬ್ರೆರಿಗಳ ಇಂದಿನ ಆರ್ಥಿಕ ದುಸ್ಥಿತಿಗೆ ಕಾರಣ ಬೃಹತ್ ಬೆಂಗಳೂರು ಮಹಾನಗರಪಾಲಿಕೆ. ಕಳೆದ ಸುಮಾರು 14 ತಿಂಗಳಿನಿಂದ ಬಿಬಿಎಂಪಿ ಲೈಬ್ರೆರಿ ಸೆಸ್ ಪಾವತಿಸದೇ ಇದ್ದದ್ದರಿಂದ ಗ್ರಂಥಾಲಯಗಳಿಗೆ ಸರಬಾರಾಜು ಆಗುತ್ತಿದ್ದ ದಿನಪತ್ರಿಕೆ ಮತ್ತು ಮ್ಯಾಗಜೀನ್ ಗಳು ಬಂದ್ ಆಗಿವೆ. (ಶೇಷಾದ್ರಿಪುರಂನಲ್ಲಿ ಮಾಧ್ಯಮ ಗ್ರಂಥಾಲಯ)

ಬಿಬಿಎಂಪಿ ಸುಮಾರು 110 ಕೋಟಿ ರೂಪಾಯಿ ಗ್ರಂಥಾಲಯ ಸೆಸ್ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಪಾವತಿಸದೇ ಬಾಕಿ ಉಳಿಸಿಕೊಂಡಿದೆ. ಇದರಿಂದ ಹತ್ತು ತಿಂಗಳಿನಿಂದ ಇಲಾಖೆ, ಪತ್ರಿಕಾ ವಿತರಕರಿಗೆ ದುಡ್ಡು ಪಾವತಿಸದೇ ಬಾಕಿ ಉಳಿಸಿಕೊಂಡಿದೆ.

Public libraries in Bengaluru go without News papers and magazines

ಇದರಿಂದಾಗಿ ಲೈಬ್ರೆರಿಗೆ ದಿನಪತ್ರಿಕೆ ಮತ್ತು ಮ್ಯಾಗಜೀನ್ ಸಪ್ಲೈ ಮಾಡುವುದನ್ನು ವಿತರಕರು ಬೇರೆ ದಾರಿ ಇಲ್ಲದೆ ನಿಲ್ಲಿಸಿದ್ದಾರೆ. ಹಾಗಾಗಿ ಬೇರೆ ಬೇರೆ ದಿನಪತ್ರಿಕೆ ಓದಲು ಬರುವ ಜನಸಾಮಾನ್ಯರಿಗೆ ತೀವ್ರ ನಿರಾಶೆಯಾಗಿದೆ. ಗ್ರಂಥಾಲಯದ ಅಧಿಕಾರಿಗಳ ಜೊತೆ ಸಾರ್ವಜನಿಕರ ವಾಗ್ಯುದ್ದ ದೈನಂದಿನ ಪರಿಪಾಠದಂತಾಗಿದೆ.

ಈ ಸಂಬಂಧ ದಕ್ಷಿಣವಲಯ ಶ್ರೀನಿವಾಸ ನಗರ ಸಾರ್ವಜನಿಕ ಗ್ರಂಥಾಲಯದ ಅಧಿಕಾರಿ ಶ್ರೀನಿವಾಸ್ ಮತ್ತು ಶ್ರೀಮತಿ ಸೃಜಾ ಅವರನ್ನು 'ಒನ್ ಇಂಡಿಯಾ' ಸಂಪರ್ಕಿಸಿದಾಗ, ಇನ್ನೆರಡು ದಿನಗಳಲ್ಲಿ ಬಿಬಿಎಂಪಿ ಹಣ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಹತ್ತು ತಿಂಗಳಿನಿಂದ ದುಡ್ಡು ಪಾವತಿಸದೇ ಇರುವುದರಿಂದ ದಿನಪತ್ರಿಕೆಗಳು ಸಪ್ಲೈ ಆಗುತ್ತಿಲ್ಲ.

ಕೆಲವು ದಿನಗಳಲ್ಲಿ ಆಶಾದಾಯಕ ಸುದ್ದಿ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇವೆ. ಸಾರ್ವಜನಿಕರು ದಿನಪತ್ರಿಕೆ ಓದಲು ಬಂದು ಬಂದು ವಾಪಸ್ ಹೋಗುತ್ತಿದ್ದಾರೆ ಎಂದು ಶ್ರೀನಿವಾಸ್ ಬೇಸರ ವ್ಯಕ್ತ ಪಡಿಸಿದ್ದಾರೆ. ಲೈಬ್ರೆರಿಗೆ ದಿನಪತ್ರಿಕೆ ಸರಬರಾಜು ಮಾಡುವವರನ್ನು ಸಂಪರ್ಕಿಸಿದಾಗ, ಹತ್ತ್ತುಹಲವಾರು ಟೆಂಡರ್ ಪ್ರಕ್ರಿಯೆ ಮೂಲಕ ಈ ಆರ್ಡರ್ ಪಡೆದಿದ್ದೇವೆ. ದಿನಪತ್ರಿಕೆಗಳಿಗೆ ದುಡ್ಡು ಪಾವತಿಸಿ ನಾವು ದೈನಿಕಗಳನ್ನು ಖರೀದಿಸುತ್ತೇವೆ.

ಹತ್ತು ತಿಂಗಳಿನಿಂದ ನಮಗೆ ದುಡ್ಡು ಬಂದಿಲ್ಲ. ನಾವು ಎಷ್ಟೂಂತ ಸಾಲ ಮಾಡಿ ಪತ್ರಿಕೆ ಸರಬರಾಜು ಮಾಡಲಾಗುತ್ತದೆ. ಯಾಕಾದರೂ ಈ ಟೆಂಡರ್ ಪಡೆದೆವೋ ಎಂದು ವಿತರಕ ಬಸವರಾಜ್ ಮತ್ತು ಶ್ರೀನಿವಾಸ್ ನೋವು ತೋಡಿಕೊಂಡಿದ್ದಾರೆ.

ಸಾರ್ವಜನಿಕ ಗ್ರಂಥಾಲಯಕ್ಕೆ ಬರುವ ಸಾರ್ವಜನಿಕರನ್ನು ಈ ಬಗ್ಗೆ ವಿಚಾರಿಸಿದಾಗ, ಬೇರೆ ಬೇರೆ ಪತ್ರಿಕೆಗಳನ್ನು ಖರೀದಿಸಲು ನಮಗೆ ಶಕ್ತಿಯಿಲ್ಲ, ಅದಕ್ಕಾಗಿ ಲೈಬ್ರೆರಿಗೆ ಬರುತ್ತೇವೆ. ಆದರೆ ಇಲ್ಲಿ ದಿನಪತ್ರಿಕೆ ಮತ್ತು ಮ್ಯಾಗಜೀನ್ ಸಪ್ಲೈ ಬಂದ್ ಆಗಿದೆ. ಯಾವುದೋ ಹಳೆಯ ಮ್ಯಾಗಜೀನ್ ಓದಿ ವಾಪಸ್ ಹೋಗುತ್ತಿದ್ದೇವೆಂದು ಲಕ್ಷ್ಮೀನಾರಾಯಣ್ ಎನ್ನುವವರು ಬೇಸರ ವ್ಯಕ್ತ ಪಡಿಸಿದ್ದಾರೆ. (ಮಕ್ಕಳಿಗಾಗಿ ಉಚಿತ ಇ-ಲೈಬ್ರರಿ)

Public libraries in Bengaluru go without News papers and magazines

ಗ್ರಂಥಾಲಯಕ್ಕೆಂದು ಸೀಮಿತವಾಗಿರುವ ಹಣವನ್ನು ಬಿಬಿಎಂಪಿ ಇತರ ಕೆಲಸಗಳಿಗೆ ವಿನಿಯೋಗಿಸಲು ಆವರಿಗೆ ಅನುಮತಿ ನೀಡಿದವರು ಯಾರು? ದಿನಪತ್ರಿಕೆ ಓದಲಾಗದೇ ವಾಪಸ್ ಹೋಗುತ್ತಿದ್ದೇವೆ. ಸರಕಾರ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವೆಂಕಟೇಶ್ ಶಾಸ್ತ್ರಿ ಎನ್ನುವ ಇನ್ನೊಬ್ಬ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೆಂಗಳೂರು ನಗರ ವ್ಯಾಪ್ತಿಯ ಆಸ್ತಿ ತೆರಿಗೆಯ ಸಂಗ್ರಹದಲ್ಲಿ ಶೇ.ಆರರಷ್ಟನ್ನು ಲೈಬ್ರೆರಿ ಸೆಸ್ ಗೆಂದು ಬಿಬಿಎಂಪಿ ಮೀಸಲಿಡಬೇಕು. ಈ ಹಣವನ್ನು ಬಿಬಿಎಂಪಿ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ವರ್ಗೀಕರಿಸಬೇಕು, ಇದು ಇರುವ ಕಾನೂನು. ಆದರೆ ಬಿಬಿಎಂಪಿ ಸುಮಾರು 110 ಕೋಟಿ ರೂಪಾಯಿಯನ್ನು ಇಲಾಖೆಗೆ ವರ್ಗೀಕರಿಸದೇ ಬಾಕಿ ಉಳಿಸಿಕೊಂಡಿದ್ದು ಈ ಸಮಸ್ಯೆಗೆ ಕಾರಣ.

ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಬರುವ ಸುಮಾರು 160 ಸಾರ್ವಜನಿಕ ಗ್ರಂಥಾಲಯಗಳಲ್ಲಿ (ಹೆಚ್ಚಿನ ಲೈಬ್ರೆರಿಯಲ್ಲಿ ) ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಉರ್ದು ದೈನಿಕಗಳ ಜೊತೆ ಮ್ಯಾಗಜೀನ್ ಕೂಡಾ ಲಭ್ಯವಿರುತ್ತದೆ. ಸಾರ್ವಜನಿಕ ಗ್ರಂಥಾಲಯಕ್ಕೆ ಬರುವ ಸಾರ್ವಜನಿಕರಲ್ಲಿ ಶೇ. 75ರಷ್ಟು ಜನ ದಿನಪತ್ರಿಕೆ ಓದಲು ಬರುತ್ತಾರೆ.

ಮೇಯರ್ ಶಾಂತಕುಮಾರಿಯವರನ್ನು 'ಒನ್ ಇಂಡಿಯಾ' ಸಂಪರ್ಕಿಸಿದಾಗ, ತಕ್ಷಣ ಐದು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಆದೇಶ ನೀಡಿದ್ದೇನೆ ಎಂದು ಸೋಮವಾರ (ಮಾ 9) ಹೇಳಿದ್ದಾರೆ.

ಈಗಾಗಲೇ ನಷ್ಟದಲ್ಲಿರುವ ಬಿಬಿಎಂಪಿ 110 ಕೋಟಿ ರೂಪಾಯಿಯಷ್ಟು ಭಾರೀ ಹಣವನ್ನು ಅದ್ಯಾವಾಗ ವರ್ಗೀಕರಿಸುತ್ತೋ? ಆದರೂ, ಸಾರ್ವಜನಿಕ ಗ್ರಂಥಾಲಯಕ್ಕೆ ಸಲ್ಲಬೇಕಾಗಿರುವ ಲೈಬ್ರೆರಿ ಸೆಸ್ ಅನ್ನು ಬಿಬಿಎಂಪಿ ಶೀಘ್ರದಲ್ಲಿ ಪಾವತಿಸಿ, ಸಾರ್ವಜನಿಕರ ಅಹವಾಲಿಗೆ ಸ್ಪಂದಿಸಲಿ ಎನ್ನುವುದು ಎಲ್ಲರ ಆಶಯ.

English summary
Public libraries in Bengaluru go without News papers and magazines, courtesy BBMP. Due to BBMP failing to transfer the library cess to the Department of Public Libraries, newspaper vendors suspended supply to the libraries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X