ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಿವ್ಯಾ ಹಾಗರಗಿ ಜಾಮೀನು ಪಡೆಯಲೆಂದೇ ಬಂಧಿಸದ ಸರ್ಕಾರ; ಸಿದ್ದರಾಮಯ್ಯ ಆರೋಪ

|
Google Oneindia Kannada News

ಬೆಂಗಳೂರು, ಏಪ್ರಿಲ್ 27: ಪಿಎಸ್‌ಐ ನೇಮಕಾತಿ ಅಕ್ರಮ ವಿಚಾರವಾಗಿ ಈವರೆಗೂ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಬಂಧಿಸದ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಬೆಂಗಳೂರಿನ ಕ್ವೀನ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ನೂತನ ಪದಾಧಿಕಾರಿಗಳ ಸಭೆ ನಂತರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ ಮಾತನಾಡಿ, ಪಿಎಸ್‌ಐ ಅಕ್ರಮ ನೇಮಕಾತಿ ಆರೋಪಿ ದಿವ್ಯಾ ಹಾಗರಗಿ ಮೊದಲು ಜಾಮೀನು ಪಡೆಯಲೆಂದೇ ರಾಜ್ಯ ಸರ್ಕಾರ ಬಂಧಿಸುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಾಲು ಸಾಲು ಹಗರಣಗಳು ನಡೆಯಲು ಆರಂಭವಾಗಿದೆ. ಪಿಎಸ್ಐ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಿಜೆಪಿ ನಾಯಕಿ. ಇಲ್ಲಿಯವರೆಗೆ ಆಕೆಯನ್ನು ಬಂಧನ ಮಾಡಿಲ್ಲ. ಹಗರಣ ಬೆಳಕಿಗೆ ಬಂದು 15 ದಿನಗಳಾದರೂ ಅವರನ್ನು ಬಂಧಿಸಿಲ್ಲ. ಅವರು ಜಾಮೀನು‌ ತೆಗೆದುಕೊಳ್ಳಲಿ ಎಂದು ಕಾಯ್ತಿದ್ದಾರೆ. ಭ್ರಷ್ಟರನ್ನು ರಕ್ಷಿಸುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.

PSI Recruitment Scam: Opposition Leader Siddaramaiah Outraged On State Govt For Not Arrested of Divya Hagaragi

ಇದೇ ವೇಳೆ ಕಾಂಗ್ರೆಸ್ ಪಕ್ಷದ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರದ ಬೆಲೆಯೇರಿಕೆ ನೀತಿಯನ್ನು ಖಂಡಿಸಿದ್ದಾರೆ. ತೆರಿಗೆ ಹೆಚ್ಚಳದ ಮೂಲಕ ಜನರನ್ನು ಸುಲಿಗೆ ಮಾಡುತ್ತಿರುವ ಬಿಜೆಪಿ ಸರ್ಕಾರದ ನಿಲುವಿಗೆ ನನ್ನ ವಿರೋಧವೂ ಇದೆ ಎಂದು ಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್‌ಗೆ ನೂತನವಾಗಿ 40 ಜನ ಉಪಾಧ್ಯಕ್ಷರು
ಇಂದು ಪ್ರದೇಶ ಕಾಂಗ್ರೆಸ್‌ಗೆ ನೂತನವಾಗಿ 40 ಜನ ಉಪಾಧ್ಯಕ್ಷರು ಹಾಗೂ 109 ಜನ ಪ್ರಧಾನ ಕಾರ್ಯದರ್ಶಿಗಳು ನೇಮಕವಾಗಿದ್ದಾರೆ. ಇಂದು ಈ ಎಲ್ಲಾ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿಯಿದೆ, ನಮ್ಮ ಬಳಿ ಹೆಚ್ಚು ಸಮಯ ಇಲ್ಲದೆ ಇರುವುದರಿಂದ ಇಂದಿನಿಂದ 24*7 ಕೆಲಸ ಮಾಡಬೇಕು ಎಂದು ಪಕ್ಷದ ಹಿರಿಯ ನಾಯಕರೆಲ್ಲ ಸೇರಿ ಸಲಹೆ ನೀಡಿದ್ದೇವೆ.

PSI Recruitment Scam: Opposition Leader Siddaramaiah Outraged On State Govt For Not Arrested of Divya Hagaragi

ಒಂದು ಕಡೆ ಬೆಲೆಯೇರಿಕೆ ಸಮಸ್ಯೆಯಾದರೆ, ಇನ್ನೊಂದೆಡೆ ಈ ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ. ಸರ್ಕಾರದ ಎಲ್ಲಾ ಇಲಾಖೆಗಳಿಗೂ 40% ಕಮಿಷನ್ ನೀಡಬೇಕು ಎಂದು ಗುತ್ತಿಗೆದಾರರ ಸಂಘದವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೂನ್ 07, 2021ರಲ್ಲಿ ಪತ್ರ ಬರೆದಿದ್ದಾರೆ. ಆದರೆ ಪ್ರಧಾನಿಗಳು ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ತಮ್ಮನ್ನು ತಾವು ಚೌಕಿದಾರ ಎಂದು ಹೇಳುತ್ತಿದ್ದರು, ನಾನು ತಿನ್ನಲ್ಲ, ಬೇರೆಯವರಿಗೂ ತಿನ್ನಲು ಬಿಡಲ್ಲ ಎನ್ನುತ್ತಿದ್ದ ಪ್ರಧಾನಿಗಳು ಇಷ್ಟು ದಿನದ ವರೆಗೆ ಮೌನವಾಗಿರುವುದು ನೋಡಿದರೆ ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಕೇಂದ್ರ ಸರ್ಕಾರದ ಕುಮ್ಮಕ್ಕು ಇದೆ ಎಂಬುದು ಗೊತ್ತಾಗುತ್ತಿದೆ ಎಂದು ಹರಿಹಾಯ್ದರು.

ಕೆಲವು ದಿನಗಳ ಹಿಂದೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಎನ್ನುವವರು ಈಶ್ವರಪ್ಪ ಅವರ ವಿರುದ್ಧ 40% ಕಮಿಷನ್ ಆರೋಪ ಮಾಡಿ ಡೆತ್‌ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ, ಇದಕ್ಕೂ ಮೊದಲು ಅಬಕಾರಿ ಸಚಿವರಾಗಿದ್ದ ನಾಗೇಶ್ ಅವರು ಭ್ರಷ್ಟಾಚಾರದ ಆರೋಪದ ಮೇಲೆ ರಾಜೀನಾಮೆ ನೀಡಿದ್ದರು. ರಮೇಶ್ ಜಾರಕಿಹೊಳಿ ಅವರು ಸಿಡಿ ಹಗರಣದಲ್ಲಿ ಸಿಲುಕಿ ರಾಜೀನಾಮೆ ನೀಡಬೇಕಾಗಿ ಬಂತು. ಅಲ್ಪಸಂಖ್ಯಾತ ವಿರೋಧಿ ಹೇಳಿಕೆಗಳ ಮೂಲಕ ಸಮಾಜದಲ್ಲಿ ಬೆಂಕಿ ಹಚ್ಚುತ್ತಿದ್ದ, ಹಿಂದುತ್ವದ ಬಗ್ಗೆ ಬಹಳ ಮಾತನಾಡುತ್ತಿದ್ದ ಈಶ್ವರಪ್ಪ ಅವರು ಭ್ರಷ್ಟಾಚಾರ ಹಗರಣದಲ್ಲಿ ರಾಜೀನಾಮೆ ನೀಡಿದ್ದಾರೆ. ಇವರ ಜೊತೆ ಇನ್ನೂ ಐದಾರು ಜನರಿದ್ದಾರೆ, ಆ ಬಗ್ಗೆ ನಮ್ಮ ಬಳಿ ದಾಖಲೆ ಇದೆ, ಎಲ್ಲವನ್ನೂ ಬಯಲು ಮಾಡುತ್ತೇವೆ ಎಂದು ಗುತ್ತಿಗೆದಾರರ ಸಂಘದವರು ಹೇಳಿದ್ದಾರೆ.

ಸರ್ಕಾರ ಬರೀ ಸುಳ್ಳುಗಳನ್ನೆ ಹೇಳಿ ತನ್ನ ವೈಫಲ್ಯಗಳನ್ನು ಮರೆಮಾಚುತ್ತಿದೆ. ನಮ್ಮ‌ ಅವಧಿಯಲ್ಲಿ ಯಾವೆಲ್ಲಾ ಸಾಧನೆ ಮಾಡಿದ್ದೆವು, ಈಗ ಅವರ ಸರ್ಕಾರದಲ್ಲಿ ಏನು ಸಾದನೆ ಮಾಡಿದ್ದಾರೆ ಎಂದು ಜನರ ಮುಂದೆ ಇಡಲಿ. ಇದು ಅಭಿವೃದ್ಧಿ ಶೂನ್ಯ, ದೌರ್ಭಾಗ್ಯದ ಸರ್ಕಾರವೆಂದು ವ್ಯಂಗ್ಯವಾಡಿದರು.

ಬಿಜೆಪಿಯವರು ರಾಜ್ಯದ ಕೋಮು ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಹತ್ಯೆಯಾದ ಬಿಜೆಪಿ ಕಾರ್ಯಕರ್ತನ ಹೆಣ ಇಟ್ಟುಕೊಂಡು ನಿಷೇದಾಜ್ಞೆ ಇದ್ದರೂ ಈಶ್ವರಪ್ಪನವರು ಮುಂದೆ ನಿಂತು ಶವಯಾತ್ರೆ ಮಾಡುತ್ತಾರೆ.

ಆಳಂದಲ್ಲಿ ಭಗವಂತ್ ಖೂಬಾ 144 ಸೆಕ್ಷನ್ ಉಲ್ಲಂಘನೆ ಮಾಡಿ, ಪ್ರತಿಭಟನೆ ನಡೆಸುತ್ತಾರೆ. ಅವರ ಸರ್ಕಾರ ಹೇರಿದ ನಿಯಮವನ್ನು ಅವರೇ ಉಲ್ಲಂಘಿಸಿದ್ದಾರೆ. ಆದರೂ ಅವರ ಮೇಲೆ ಯಾವ ಕೇಸ್ ಹಾಕಿಲ್ಲ, ನಮ್ಮ ಮೇಲೆ ಮಾತ್ರ ನಾಲ್ಕೈದು ಕೇಸ್ ಹಾಕಿದ್ದಾರೆ. ಡಿ.ಕೆ. ಶಿವಕುಮಾರ್ ಮೇಲೆ 9 ಕೇಸ್ ಹಾಕಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

English summary
Opposition Leader Siddaramaiah outraged on State Govt for Not arrested of Divya Hagaragi, who Involved in PSI Recruitment Scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X