ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈದ್ಯರಿಗೆ ಹಾಗೂ ನರ್ಸ್ ಗಳಿಗೆ ಸರ್ಕಾರ ರಕ್ಷಣೆ ನೀಡಲು ಎಎಪಿ ಆಗ್ರಹ

|
Google Oneindia Kannada News

ಬೆಂಗಳೂರು, ಏಪ್ರಿಲ್ 9: ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮತ್ತು ವೈದ್ಯಕೀಯ ಸಿಬ್ಬಂದಿಗಳು ತಮ್ಮ ಮೇಲೆ ಕೊರೋನ ಆಕ್ರಮಿಸುವ ಸಾಧ್ಯತೆಗಳ ಹೊರತಾಗಿಯೂ ಆಸ್ಪತ್ರೆಗಳಲ್ಲಿ ಸೋಂಕಿತರ ತಪಾಸಣೆಯನ್ನು ಮಾಡುತ್ತಿದ್ದಾರೆ. ಆರೋಗ್ಯ ಕಾರ್ಯಕರ್ತರು ಸೋಂಕಿನ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಇವರೆಲ್ಲರ ರಕ್ಷಣೆಗಾಗಿ ಸರಕಾರ ಏನು ಮಾಡುತ್ತಿದೆ? ಕೇವಲ ಅವರ ಮೇಲೆ ಕರ್ತವ್ಯ ಮಾಡುವಂತೆ ಒತ್ತಡ ಹಾಕುತ್ತಿದೆಯೇ?

ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಆಸ್ಪತ್ರೆಗಳಲ್ಲಿ ಸೇವೆ ಮಾಡುತ್ತಿರುವ ಶುಶ್ರೂಷಕರಿಗೆ ಆರೋಗ್ಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕರಿಗೆ ನೀಡಲಾಗಿರುವ ಸೌಲಭ್ಯವನ್ನು ನೀಡದೆ ತಾರತಮ್ಯ ಮಾಡಲಾಗಿದೆ. ಇದನ್ನು ಕೋವಿಡ್ - 19 ಆಸ್ಪತ್ರೆಯಾಗಿ ಪರಿವರ್ತನೆ ಮಾಡಲಾಗಿರುವ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ನಿಬ್ಬಂಧಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಸರಕಾರ ಇದರ ಬಗ್ಗೆ ದಿವ್ಯ ನಿರ್ಲಕ್ಷ್ಯವನ್ನು ತೋರುತ್ತಿದೆ. ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಶಿಕ್ಷಣವನ್ನು ಪ್ರತ್ಯೇಕ ಮಾಡಿದ ಮೇಲೆ ಇಂತಹ ಬೆಳವಣಿಗೆಗಳು ನಡೆಯುತ್ತಿವೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಶುಶ್ರೂಷಕರು ಇಂದು ಕೊರೋನದ ವಿರುದ್ದ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಸರಿಯಾದ ಸೌಲಭ್ಯವನ್ನು ನೀಡಿ ಅವರ ಜೀವಕ್ಕೆ ರಕ್ಷಣೆ ನೀಡಬೇಕಾದುದು ಸರಕಾರದ ಜವಾಬ್ದಾರಿ.

ಸರಕಾರಿ ವೈದ್ಯರ ಹಾಗೆ ಖಾಸಗಿ ವೈದ್ಯರು ಕೂಡಾ ಕೊರೋನ ನಿರ್ಮೂಲನೆ ಮಾಡುವ ಸಲುವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇವರಿಗೆ ಯಾವ ರೀತಿಯ ರಕ್ಷಣೆ ನೀಡಲಾಗುತ್ತಿದೆ? ಸರಕಾರಿ ವೈದ್ಯರಿಗೆ ಐವತ್ತು ಲಕ್ಷ ರೂಪಾಯಿಯ ವಿಮೆ ನೀಡಲಾಗಿದೆ. ಆದರೆ ಇದನ್ನು ಖಾಸಗಿ ವೈದ್ಯರಿಗೆ ವಿಸ್ತರಿಸಿಲ್ಲ. ಹಾಗಾದರೆ ಇವರು ಮಾಡುತ್ತಿರುವ ಸೇವೆಗೆ ಏನು ಬೆಲೆ ಇಲ್ಲವೇ? ಅಲ್ಲದೆ ಇವರ ಮೇಲೆ ಕೆಲಸ ಮಾಡದೆ ಇದ್ದಲ್ಲಿ ಪರವಾನಗಿ ಕ್ಯಾನ್ಸಲ್ ಮಾಡುವ ಒತ್ತಡ ಕೂಡಾ ಇದೆ. ಭಯ ಮತ್ತು ಒತ್ತಡಗಳ ನಡುವೆ ಖಾಸಗಿ ವೈದ್ಯರು ತಮ್ಮ ಕ್ಲಿನಿಕ್ ಗಳನ್ನು ತೆರೆದು ಸೇವೆಯನ್ನು ಮಾಡುತ್ತಿದ್ದಾರೆ. ಇವರಿಗೆ ಕೂಡ ಸರಕಾರ ವಿಮೆಯನ್ನು ನೀಡಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸುತ್ತದೆ.

Protect Doctor and Nurses treating Covid19 patients: Karnataka AAP

ರಾಜ್ಯದಲ್ಲಿ ಖಾಸಗಿ ಕ್ಲಿನಿಕ್ ಗಳಲ್ಲಿ ಕೆಲಸ ಮಾಡುವ ವೈದ್ಯರ ಜೀವಕ್ಕೂ ಸಂಚಕಾರ ಬಂದಿದೆ. ಅವರಿಗೆ ಸರಿಯಾದ ರಕ್ಷಣೆ ಇಲ್ಲ. ಇವರನ್ನು ಕ್ಲಿನಿಕ್ ತೆರೆಯುವಂತೆ ಒತ್ತಾಯಿಸುವ ಸರಕಾರ ಅವರ ಜೀವ ರಕ್ಷಣೆಗಾಗಿ ಸುರಕ್ಷಾ ಕಿಟ್ ಗಳನ್ನು ಸರಕಾರ ನೀಡಲೇಬೇಕು. ಇದಕ್ಕಾಗಿ ವೈದ್ಯರು ಬೇಡಿಕೆ ಇಡುತ್ತಿದ್ದರೂ ಸಹ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದು ಅವರ ಜೀವದ ಪ್ರಶ್ನೆಯಾಗಿದೆ.

ಸರಕಾರ ಇನ್ನೂ ಇವರನ್ನು ನಿರ್ಲಕ್ಷ್ಯ ಮಾಡಿದರೆ ಖಾಸಗಿ ಕ್ಲಿನಿಕ್ ಗಳು ರೋಗ ಹರಡುವ ಕೇಂದ್ರಗಳು ಆಗುತ್ತವೆ. ವೈದ್ಯರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಕರೋನಾದ ವಿರುದ್ಧ ಹೋರಾಡುತ್ತಿರುವ ಇವರೆಲ್ಲರಿಗೂ ಚಪ್ಪಾಳೆ, ದೀಪಗಳ ಗೌರವಕ್ಕೂ ಮಿಗಿಲಾಗಿ ಅವರಿಗೆ ಬೇಕಾದ ಸೌಲಭ್ಯಗಳನ್ನು ನೀಡುವ ಮೂಲಕ ಗೌರವಿಸಬೇಕು ಎಂದು ಆಮ್ ಆದ್ಮಿ ಪಕ್ಷ ನಂಬಿದೆ.

English summary
Protect Doctor and Nurses treating Covid19 patients urged Karnataka Aam Aadmi Party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X