ರಾಷ್ಟ್ರಪತಿ ಚುನಾವಣೆ: ಜೆಡಿಎಸ್ ಬೆಂಬಲ ಯಾರಿಗೆ?
ಬೆಂಗಳೂರು ಜೂ.29: ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಜೆಡಿಎಸ್ ಬೆಂಬಲ ಇರಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪರೋಕ್ಷವಾಗಿ ತಿಳಿಸಿದ್ದಾರೆ.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಬೆಂಗಳೂರಿನ ಜೆಪಿ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ದ್ರೌಪದಿ ಮುರ್ಮು ಅವರು ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಎಂದು ಘೋಷಿಸಿದಾಗಲೇ ಅವರಿಗೆ ಬಹುಮತ ಸಿಕ್ಕಿದೆ. ನಮ್ಮ ಪಕ್ಷದ ಬೆಂಬಲ ಅವಶ್ಯಕತೆ ಇಲ್ಲ. ಆದರೂ ನಮ್ಮ ಬೆಂಬಲ ಕೇಳಿರುವುದು ಅದು ಮುರ್ಮು ಅವರ ಔದಾರ್ಯ" ಎಂದು ಬೆಂಬಲ ನೀಡುವ ಬಗ್ಗೆ ಕುಮಾರಸ್ವಾಮಿ ಪರೋಕ್ಷವಾಗಿ ಹೇಳಿದರು.
"ನನ್ನ ಪ್ರಕಾರ ದ್ರೌಪದಿ ಮುರ್ಮು ಅವರು ಈಗಾಗಲೇ ಗೆದ್ದಾಗಿದೆ. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರಿಗೆ ಮುರ್ಮು ಅವರು ಎರಡು ಬಾರಿ ದೂರವಾಣಿ ಕರೆ ಮಾಡಿ ಬೆಂಬಲಕ್ಕೆ ಮನವಿ ಮಾಡಿದ್ದಾರೆ. ಬೆಂಗಳೂರಿಗೆ ಬಂದು ಮನವಿ ಮಾಡಲು ಅವರು ಸಮಯ ಕೋರಿದ್ದರು. ಅವರು ಖುದ್ದು ಬಂದು ಮನವಿ ಮಾಡುವ ಅವಶ್ಯಕತೆ ಇಲ್ಲ" ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ದ್ರೌಪದಿ ಮುರ್ಮು ಅವರ ಸಾಧನೆ ಬಗ್ಗೆ ಅರಿತಿದ್ದೇನೆ
"ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರ ಹಿನ್ನಲೆ ಏನು?, ಜೀವನದಲ್ಲಿ ಎಷ್ಟು ಕಷ್ಟ ಅನುಭವಿಸಿದ್ದಾರೆ, ತಳಮಟ್ಟದ ಸಮುದಾಯದಿಂದ ಹೇಗೆ ಬೆಳೆದು ಬಂದಿದ್ದಾರೆ, ಅವರ ರಾಜಕೀಯ ಇತಿಹಾಸ, ಅವರ ಶ್ರಮ ಏನು ಎಂಬುದನ್ನು ನಾನು ಅರಿತಿದ್ದೇನೆ. ಆದಿವಾಸಿ ಬುಟ್ಟಕಟ್ಟು ಸಮುದಾಯದ ಮಹಿಳೆಯೊಬ್ಬರು ಕೆಳಹಂತ ಈವರೆಗೆ ಬಂದಿದ್ದಾರೆ. ಇಷ್ಟು ದೊಡ್ಡ ಸಾಧನೆ ಮಾಡಿರುವುದು ಅವರು ಇತರರಿಗೆ ಸ್ಫೂರ್ತಿದಾಯಕ" ಎಂದು ಎಚ್. ಡಿ. ಕುಮಾರಸ್ವಾಮಿ ಶ್ಲಾಘಿಸಿದರು.

ಜೆಡಿಎಸ್ ಬಿಜೆಪಿಯ ಬಿ ಟೀಂ ಅಲ್ಲ
"ಇಲ್ಲಿ ಕಾಂಗ್ರೆಸ್, ಬಿಜೆಪಿ ಅನ್ನುವ ಪ್ರಶ್ನೆಯೇ ಇಲ್ಲ. ರಾಷ್ಟ್ರಪತಿ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಬಿ ಟೀಂ ಎನ್ನವ ಪ್ರಶ್ನೆಯೂ ಬರುವುದಿಲ್ಲ. ನಾವು ತೆಗೆದುಕೊಂಡ ನಿರ್ಧಾರಗಳು ಪಕ್ಷದ ಕುರಿತಾಗೇ ಹೊರತು, ಬಿಜೆಪಿ ಬಿ ಟೀಂ ಎಂದು ಪ್ರಚಾರ ಮಾಡಲು ಅನ್ವಯವಾಗುವುದಿಲ್ಲ" ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.

ದ್ರೌಪದಿ ಮುರ್ಮು ಪ್ರಶಂಸಿದ್ದ ದೇವೇಗೌಡ
ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರು ಘೋಷಣೆಯಾದ ನಂತರ ಕಳೆದ ಸೋಮವಾರ ಜೆಡಿಎಸ್ನ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದರು. ಅಲ್ಲದೇ ಬೆಂಗಳೂರಿಗೆ ಖುದ್ದು ಬಂದು ಬೆಂಬಲ ಕೇಳಲು ಸಮಯ ಕೇಳಿದ್ದರು.

ದೇವೇಗೌಡರ ಪರೋಕ್ಷ ಬೆಂಬಲ
ಇದಕ್ಕೆ ಪ್ರತಿಯಾಗಿ ದೇವೇಗೌಡರು ಪ್ರತಿಕ್ರಿಸಿದ್ದು ಪರೋಕ್ಷ ಬೆಂಬಲದ ಸುಳಿವು ನೀಡಿದ್ದಾರೆ. ದೇವೇಗೌಡರು, ದ್ರೌಪದಿ ಮುರ್ಮು ಅವರು ಒಬ್ಬ ಉತ್ತಮ ಅಭ್ಯರ್ಥಿ, ಜಾರ್ಖಂಡ್ನಲ್ಲಿ ಉತ್ತಮ ರಾಜ್ಯಪಾಲೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು ರಾಜಕೀಯ ಕ್ಷೇತ್ರದಲ್ಲಿ ಪ್ರತಿ ಹಂತದಲ್ಲಿ ನಿಷ್ಪಕ್ಷಪಾತವಾಗಿ ಕೆಲಸ ಮಾಡಿದ್ದಾರೆ. ಆದಿವಾಸಿ ಸಮುದಾಯದವರಾದ ಅವರು ಆಡಳಿತದಲ್ಲೂ ನಿಪುಣತೆ ಹೊಂದಿದಂತಹ ಮಹಿಳೆ ಎಂದು ದ್ರೌಪದಿ ಮುರ್ಮು ಕುರಿತು ಪ್ರಶಂಸೆ ವ್ಯಕ್ತಪಡಿಸುವ ಮೂಲಕ ಪರೋಕ್ಷವಾಗೆ ಬೆಂಬಲ ಸೂಚಿಸಿದ್ದರು.
ಇದೀಗ ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಸಹ ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರತಿ ಭಾರೀ ಬಿಜೆಪಿಗೆ ಪೂರಕವೆಂಬಂತೆ ಜೆಡಿಎಸ್ ನಿರ್ಧಾರಗಳನ್ನು ಪ್ರಕಟಿಸಿದಾಗ ಇಲ್ಲವೇ ಹೇಳಿಕೆ ನೀಡಿದಾಗ ಜೆಡಿಎಸ್ ಬಿಜೆಪಿ ಬಿ ಟೀಮ್ ಎನ್ನುವ ಕಾಂಗ್ರೆಸ್ ನಾಯಕರಿಗೆ ಚಾಟಿ ಬೀಸಿದ್ದಾರೆ.