ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓಮಿಕ್ರಾನ್ ಚಿಕಿತ್ಸೆಗೆ ಮೆಡಿಕಲ್ ಕಾಲೇಜುಗಳಲ್ಲಿ ಸಿದ್ಧತೆ- ಡಾ.ಕೆ.ಸುಧಾಕರ್

|
Google Oneindia Kannada News

ಬೆಂಗಳೂರು ಡಿಸೆಂಬರ್ 3: ಬೆಂಗಳೂರಿನಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ವೈರಸ್ ಕಾಣಿಸಿಕೊಂಡಿದ್ದರಿಂದ ತುರ್ತು ಕ್ರಮಗಳಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು ರಾಜ್ಯದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಜೊತೆಗೆ ಕೊರೊನಾ ಮೂರನೇ ಅಲೆಯನ್ನು ನಿಯಂತ್ರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ವೈದ್ಯಕೀಯ ಕಾಲೇಜುಗಳ ನಿರ್ದೇಶಕರೊಂದಿಗೆ ಆರೋಗ್ಯ ಸೌಧದಲ್ಲಿ ವಿಡಿಯೋ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, "ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಗೆ ಸಿದ್ಧತೆಯ ಬಗ್ಗೆ ಇಂದು ಸಭೆಯಲ್ಲಿ ಚರ್ಚಿಸಲಾಯಿತು. ಇದಕ್ಕೆ ನಾವು ಕೆಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಕೋವಿಡ್ ಸಂಭವನೀಯ ಮೂರನೇ ಅಲೆಗೆ ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಲು ಸೂಚಿಸಲಾಗಿದೆ. 18 ಸಾವಿರ ದಾದಿಯರಿಗೆ ಒಂದು ತಿಂಗಳ ತರಬೇತಿ, ಮಕ್ಕಳ ಐಸಿಯು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಜೊತೆಗೆ ಜಿಲ್ಲಾಮಟ್ಟದಲ್ಲಿ ತೃತೀಯ ಹಂತದ ಆರೋಗ್ಯ ಸೇವೆ ನೀಡಲು 21 ವೈದ್ಯಕೀಯ ಕಾಲೇಜುಗಳಿದ್ದು, ಸಂಭವನೀಯ ಮೂರನೇ ಅಲೆ ಅಥವಾ ಹೊಸ ಓಮಿಕ್ರಾನ್ ವೈರಸ್ ಸಂಬಂಧಿತ ಚಿಕಿತ್ಸೆ ತಯಾರಿ ಕುರಿತು ಚರ್ಚಿಸಲಾಗಿದೆ. ವೈದ್ಯಕೀಯ ಕಾಲೇಜುಗಳ ಎಚ್‍ಒಡಿ, ಪ್ರೊಫೆಸರ್, ಹಿರಿಯ ವೈದ್ಯರು ಸೇರಿದಂತೆ ಪ್ರತಿಯೊಬ್ಬರೂ ಸಮಯೋಚಿತವಾಗಿ ವರ್ತಿಸಬೇಕು. ಗೃಹ ವೈದ್ಯರು, ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿಗಳು ಸೇರಿ ಪರಿಣಾಮಕಾರಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ" ಎಂದು ತಿಳಿಸಿದರು.

ಈ ಹಿಂದೆ ಕೊರೊನಾ ತೀವ್ರವಾಗಿದ್ದ ಸಮಯದಲ್ಲಿ ರಾಜ್ಯದಲ್ಲಿ ಐಸಿಯುನಲ್ಲಿದ್ದ ಸೋಂಕಿತರಿಗೆ ಚಿಕಿತ್ಸೆ ನೀಡಲು ದಾದಿಯರ ಕೊರತೆಯಾಗಿತ್ತು. ಈಗ ಆ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲಾಗಿದೆ. ಅಂತಿಮ ವರ್ಷದ ನರ್ಸಿಂಗ್, ಪ್ಯಾರಾ ಮೆಡಿಕಲ್‌ನಲ್ಲಿ ಸುಮಾರು 18 ಸಾವಿರ ಮಂದಿ ಇದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಅವರಿಗೆ ಒಂದು ತಿಂಗಳ ತರಬೇತಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ ಎಂದರು. ಸಚಿವ ಸಂಪುಟ ನಿರ್ಧಾರದಂತೆ ಮಕ್ಕಳ ಐಸಿಯುಗಳ ಸಿದ್ಧತೆಗೆ ಸೂಚಿಸಲಾಗಿದೆ. ಅಗತ್ಯ ಉಪಕರಣಗಳ ಖರೀದಿ ಹಾಗೂ ಇತರ ಎಲ್ಲಾ ವ್ಯವಸ್ಥೆಗಳ ಬಗ್ಗೆ ಸಂಪೂರ್ಣ ವಿವರ ಪಡೆಯಲಾಗಿದೆ. ಸಂಸ್ಥೆಗಳು ಮುಂದಿಟ್ಟ ಸಮಸ್ಯೆಗಳಿಗೂ ಪರಿಹಾರ ಸೂಚಿಸಲಾಗಿದೆ. ಗೃಹ ವೈದ್ಯರ ಕೋವಿಡ್ ರಿಸ್ಕ್ ಭತ್ಯೆ ಬಾಕಿ ಇದ್ದು, ಹಣಕಾಸು ಇಲಾಖೆಯಿಂದ 55 ಕೋಟಿ ರೂ. ಬಿಡುಗಡೆ ಮಾಡಿಸಲಾಗಿದೆ. ಒಟ್ಟಾರೆಯಾಗಿ ಬೇಕಾಗಿದ್ದ 73 ಕೋಟಿ ರೂ. ಅನ್ನು ಒಂದೆರಡು ದಿನಗಳಲ್ಲಿ ಖಾತೆಗೆ ಜಮೆಯಾಗುವಂತೆ ಕ್ರಮ ವಹಿಸಲಾಗಿದೆ. ಪ್ರತಿ ತಿಂಗಳು ವೇತನ ಖಾತೆಗೆ ಜಮೆಯಾಗಲು ತಾಂತ್ರಿಕ ಸಮಸ್ಯೆಗಳಿದ್ದವು. ಎಚ್‍ಆರ್ ಎಂಎಸ್ ನಲ್ಲಿ ನೋಂದಣಿಗೆ ಸಂಸ್ಥೆಗಳು 20 ದಿನಗಳ ಕಾಲ ತೆಗೆದುಕೊಂಡಿವೆ. ಡಿಸೆಂಬರ್‌ನಿಂದ ವೇತನ ನೇರವಾಗಿ ಖಾತೆಗೆ ಜಮೆಯಾಗಲಿದೆ ಎಂದು ವಿವರಿಸಿದರು.

Preparation in Medical Colleges for Omicron Treatment - Dr. K. Sudhakar

ಕೋವಿಡ್ ತಾಂತ್ರಿಕ ಸಮಿತಿ ಸಲಹೆಯ ಆಧಾರದ ಮೇಲೆ ಓಮಿಕ್ರಾನ್ ಸೋಂಕಿತರಿಗೆ ವಿಶೇಷ ಐಸಿಯು ಹಾಗೂ ವಾರ್ಡ್ ಕಲ್ಪಿಸಲಾಗುವುದು. ಡೆಲ್ಟಾ ಸೋಂಕಿತರಿಗೆ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಮೀಸಲಿಡಬೇಕಾದ ಹಾಸಿಗೆ ಹಾಗೂ ಐಸಿಯು ಬಗ್ಗೆ ನಿರ್ಧರಿಸಲಾಗುವುದು. ಆಫ್ರಿಕಾದಿಂದ ಬಂದ 57 ಪ್ರಯಾಣಿಕರ ಪೈಕಿ‌ 10 ಮಂದಿ ಪತ್ತೆ ಆಗದಿರುವ ಬಗ್ಗೆ ಅಧಿಕೃತ ಮಾಹಿತಿ ಪಡೆಯಬೇಕಿದೆ. ಈ ಕುರಿತು ವಿಶೇಷ ಗಮನ ನೀಡಲಾಗಿದೆ. ಈ ಹಿಂದೆ ಪೊಲೀಸ್ ಇಲಾಖೆ ಹೀಗೆ ತಪ್ಪಿಸಿಕೊಂಡವರನ್ನು ಪತ್ತೆಹಚ್ಚಿ ಉತ್ತಮ ಕೆಲಸ ಮಾಡಿತ್ತು. ಈ ಬಾರಿಯೂ ಪೊಲೀಸ್ ಇಲಾಖೆ ದಕ್ಷತೆ ತೋರಲಿದೆ. ಆದರೆ ಈ ರೀತಿ ತಪ್ಪಿಸಿಕೊಳ್ಳುವ ಪ್ರಯಾಣಿಕರು ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯಿಂದ ವರ್ತಿಸಬೇಕು ಎಂದರು.

Recommended Video

ಓಮಿಕ್ರಾನ್ ರೂಪಾಂತರ, ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. | Oneindia Kannada | Oneindia Kannada

English summary
Health Minister Dr K Sudhakar said the state medical colleges have been instructed to make necessary preparations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X