ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿರಿಯ ನಟ ಶಿವರಾಂ ನಿಧನ; ಗಣ್ಯರ ಸಂತಾಪ

|
Google Oneindia Kannada News

ಬೆಂಗಳೂರು, ಡಿಸೆಂಬರ್ 4: ಕೆಲವು ದಿನಗಳ ಹಿಂದೆ ಮನೆಯಲ್ಲಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಶನಿವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

Recommended Video

ಹಿರಿಯ ನಟ ಶಿವರಾಂ ಆರೋಗ್ಯ ಸ್ಥಿತಿ ಗಂಭೀರ: ಬದುಕೋ ಭರವಸೆ ಇಲ್ಲ ಎಂದ ಡಾಕ್ಟರ್ | Oneindia Kannada

ನೂರಾರು ಸಿನಿಮಾಗಳಲ್ಲಿ ಪೋಷಕ ನಟರಾಗಿ, ಮುಖ್ಯ ನಟರಾಗಿಯೂ ನಟಿಸಿದ್ದ ಶಿವರಾಂ, ವಿಷ್ಣುವರ್ಧನ್, ಡಾ. ರಾಜ್‌ಕುಮಾರ್‌ರವರಿಗೆ ಆಪ್ತರಾಗಿದ್ದರು. ಶಿವರಾಂ ಕೇವಲ ನಟರು ಮಾತ್ರವೇ ಅಲ್ಲದೆ ನಿರ್ಮಾಪಕ ಹಾಗೂ ನಿರ್ದೇಶಕರೂ ಆಗಿದ್ದರು.

ನಟ ಶಿವರಾಜ್ ಕುಮಾರ್ ಸೇರಿದಂತೆ ಹಲವರು ಆಸ್ಪತ್ರೆಗೆ ಭೇಟಿ ನೀಡಿ ಶಿವರಾಂ ಅವರ ಆರೋಗ್ಯ ವಿಚಾರಿಸಿದ್ದರು. ಶಿವರಾಂ ಅವರ ಹಿತೈಷಿಗಳು, ಅಭಿಮಾನಿಗಳು ಅವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸಿದ್ದರು ಆದರೆ ಪ್ರಾರ್ಥನೆ ಫಲಿಸಲಿಲ್ಲ. ನಟ ಶಿವರಾಂ ನಿಧನಕ್ಕೆ ಕರ್ನಾಟಕದ ರಾಜಕಾರಣಿಗಳು ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ
ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ಕಲಾವಿದ ಶಿವರಾಂ ಅವರ ನಿಧನ ತುಂಬಾ ದುಃಖದ ವಿಷಯ. ನಟ ಶಿವರಾಂ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಂತಾಪ
ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶಿವರಾಂ ನಿಧನರಾದ ಸುದ್ದಿ ಅತೀವ ನೋವನ್ನುಂಟು ಮಾಡಿದೆ. ಕನ್ನಡದ ದಿಗ್ಗಜ ಕಲಾವಿದರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದ ಅವರು, ನಿರ್ದೇಶಕ, ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದರು. ಕಿರುತೆರೆಯ ಹಲವು ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದರು.

Political Leaders and Celebs Express Condolence to Veteran Kannada Actor Shivaram Demise

ಶಿವರಾಂ ನಿಧನದಿಂದ ಕನ್ನಡನಾಡು ಹಿರಿಯ ಕಲಾವಿದರನ್ನು ಕಳೆದುಕೊಂಡಂತಾಗಿದೆ. ಅನೇಕ ಸಂದರ್ಭಗಳಲ್ಲಿ ಅವರನ್ನು ಭೇಟಿ ಮಾಡಿದ್ದು, ಅವರು ಇಂದು ನಮ್ಮೊಂದಿಗೆ ಇಲ್ಲ ಎನ್ನುವುದು ಅತೀವ ನೋವನ್ನು ತಂದಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಕುಟುಂಬ, ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಕೋರುತ್ತೇನೆ. ಓಂ ಶಾಂತಿ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ಶಾಸಕ ಎಸ್.ಎ. ರಾಮದಾಸ್ ಕೂ ಮೂಲಕ ಸಂತಾಪ
ಕನ್ನಡ ಚಲನಚಿತ್ರ ರಂಗದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕರೂ ಆದಂತಹ ಶಿವರಾಂ ಅವರು ನಿಧನ ಹೊಂದಿರುವ ಸುದ್ದಿ ನಿಜಕ್ಕೂ ದುಃಖಕರ. ಕನ್ನಡ ಚಿತ್ರರಂಗಕ್ಕೆ ಹಾಗೂ ಕನ್ನಡ ನಾಡಿಗೆ ಅವರ ಅಗಲಿಕೆಯಿಂದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಶಾಸಕ ಎಸ್.ಎ. ರಾಮದಾಸ್ ಕೂ ಮೂಲಕ ಸಂತಾಪ ಸೂಚಿಸಿದ್ದಾರೆ.

ಸಚಿವ ಮುರುಗೇಶ್ ನಿರಾಣಿ ಸಂತಾಪ
ತಮ್ಮ ಮನೋಜ್ಞ ಅಭಿನಯದ ಮೂಲಕ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದ ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಶಿವರಾಂ ಅವರ ನಿಧನದ ಸುದ್ದಿ ಕೇಳಿ ಮನಸಿಗೆ ಆಘಾತವಾಯಿತು. ಬಹುಮುಖ ಪ್ರತಿಭೆಯಾಗಿದ್ದ ಶಿವರಾಂ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಭಗವಂತನು ಅವರ ಆತ್ಮಕ್ಕೆ ಸದ್ಗತಿ ನೀಡಿ, ಕುಟುಂಬದವರು ಮತ್ತು ಅಭಿಮಾನಿಗಳಿಗೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಸಚಿವ ಮುರುಗೇಶ್ ನಿರಾಣಿ ಸಂತಾಪ ಹೇಳಿದ್ದಾರೆ.

Political Leaders and Celebs Express Condolence to Veteran Kannada Actor Shivaram Demise


ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ
ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಅವರ ನಿಧನದಿಂದ ದುಃಖಿತನಾಗಿದ್ದೇನೆ. ದಶಕಗಳ ಕಾಲ ತಮ್ಮ ಅಮೋಘ ನಟನೆಯ ಮೂಲಕ ಕಲಾ ಸೇವೆಗೈದ ಶಿವರಾಂ ಅವರ ನೆನಪು ನಮ್ಮೊಂದಿಗೆ ಸದಾ ಜೀವಂತವಾಗಿರಲಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಕುಟುಂಬ ವರ್ಗಕ್ಕೆ ಮತ್ತು ಅಭಿಮಾನಿಗಳಿಗೆ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ಚಿತ್ರರಂಗದ ಮಾಣಿಕ್ಯ ಇನ್ನಿಲ್ಲ: ಆರ್. ಅಶೋಕ್
ಮರೆಯಲಾಗದ, ಮರೆಯಬಾರದ ಕನ್ನಡ ಚಿತ್ರರಂಗದ ಮಹಾಚೇತನ, ಸಜ್ಜನ ಕಲಾವಿದ ಶಿವರಾಂ ಅವರು ಇನ್ನಿಲ್ಲ ಎನ್ನುವುದು ಅತ್ಯಂತ ದುಃಖದ ಸಂಗತಿ. ನನ್ನ ಆತ್ಮೀಯ ಒಡನಾಡಿಗಳಾಗಿದ್ದ ಅವರು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ನಿವಾಸಿಗಳು ಹೌದು. ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಶ್ರೇಷ್ಠ ಕಲಾವಿದರಾಗಿದ್ದ ಅವರು ಅಪಾರ ದೈವಭಕ್ತರಾಗಿದ್ದರು.

ಸುಮಾರು 6 ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು ಹಿರಿಯಣ್ಣನಂತೆ ಇದ್ದರು. ಅವರ ಹೆಸರು ಪದ್ಮನಾಭನಗರ ಕ್ಷೇತ್ರದಲ್ಲಿ ಚಿರಸ್ಥಾಯಿಯಾಗಿ ಉಳಿಯಬೇಕು. ಆ ಕೆಲಸವನ್ನು ಮಾಡಲು ಮಾಡಲು ನಾನು ಬದ್ಧ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರನ್ನು ಕಳೆದುಕೊಂಡ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬದವರಿಗೆ, ಆತ್ಮೀಯರಿಗೆ, ಚಿತ್ರರಂಗದವರಿಗೆ ನೀಡಲಿ ಎಂದು ಸಚಿವ ಆರ್. ಅಶೋಕ್ ಸಂತಾಪ ಸೂಚಿಸಿದ್ದಾರೆ.

ಚಿತ್ರನಟ ಶಿವರಾಂ ನಿಧನಕ್ಕೆ ಸ್ಪೀಕರ್ ಸಂತಾಪ
ಹಿರಿಯ ಚಿತ್ರನಟ, ಸರಳ ಸಜ್ಜನಿಕೆಯ ಸಾಕಾರಮೂರ್ತಿ ಶಿವರಾಂ ಚಿತ್ರರಂಗದಲ್ಲಿ ಮತ್ತು ನಿಜ ಬದುಕೆರಡರಲ್ಲೂ ತಮ್ಮ ಸರಳತೆಯಿಂದಲೇ ಜನಮನ ಗೆದ್ದಿದ್ದರು. ವಿವಿಧ ಪಾತ್ರಗಳ ಅಭಿನಯದ ಮೂಲಕ ಕನ್ನಡ ಚಿತ್ರಪ್ರೇಮಿಗಳ ಹೃದಯ ಗೆದ್ದಿದ್ದರು. ಯಾವುದೇ ಪಾತ್ರ ನಿರ್ವಹಿಸಿದರೂ ಅದಕ್ಕೆ ಜೀವ ತುಂಬುತ್ತಿದ್ದರು.

ಸಹಜಾಭಿನಯದಿಂದ ಪ್ರೇಕ್ಷಕರ ಹೃನ್ಮನ ಸೆಳೆಯುತ್ತಿದ್ದರು. ಶರಪಂಜರ ಚಿತ್ರದ ಅಭಿನಯ ಮರೆಯಲು ಸಾಧ್ಯವೇ ಇಲ್ಲ. ಶಿವರಾಂ ಅವರದು ಸ್ನೇಹಮಯ ವ್ಯಕ್ತಿತ್ವ. ಹಲವಾರು ತಲೆಮಾರುಗಳವರೆಗೆ ಅವರು ತಮ್ಮ ಸರಳತೆ ಮತ್ತು ನಿಗರ್ವಿ ಸ್ವಭಾವದಿಂದ ಚಿತ್ರರಂಗದ ಎಲ್ಲಾ ವಿಭಾಗಗಳಲ್ಲಿ ವ್ಯಾಪಕವಾಗಿ ಗೌರವಿಸಲ್ಪಟ್ಟಿದ್ದರು. ಶಿವರಾಂ ಅವರ ಅಕಾಲಿಕ ನಿಧನದಿಂದ ಬಹುದೊಡ್ಡ ನಷ್ಟವಾಗಿದೆ ಎಂದು ಅವರ ನಿಧನಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚಿಸಿದ್ದಾರೆ.

English summary
Karnataka Political Leaders and Celebs Express Condolence to Veteran Kannada actor Shivaram demise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X