ಸಿಎಂ ಬೊಮ್ಮಾಯಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ನರೇಂದ್ರ ಮೋದಿ
ಬೆಂಗಳೂರು, ಜನವರಿ 11: ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ದೂರವಾಣಿ ಕರೆ ಮಾಡಿ ಆರೋಗ್ಯ ಕುರಿತು ವಿಚಾರಿಸಿದ್ದಾರೆ. ಮಂಗಳವಾರ ಸಂಜೆ 4:30ಕ್ಕೆ ದೂರವಾಣಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಿಎಂಗೆ ಕರೆ ಬಂದಿದೆ.
ಸುಮಾರು ಐದು ನಿಮಿಷಗಳ ಕಾಲ ಸಿಎಂ ಹಾಗೂ ಪ್ರಧಾನಿ ನಡುವೆ ಮಾತುಕತೆ ನಡೆದಿದ್ದು, ತಮಗೆ ಕೋವಿಡ್ ತಗಲಿರುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ವಿವರಣೆ ನೀಡಿದರು. ಸೂಕ್ತ ಚಿಕಿತ್ಸೆ ಪಡೆಯಿರಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.
ತಮ್ಮ ಜೊತೆಗೆ ಕುಟುಂಬದ ಇಬ್ಬರು ಸದಸ್ಯರಿಗೂ ಸೋಂಕು ತಗುಲಿದೆ ಎಂದಾಗ ಎಲ್ಲರೂ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ ಎಂದು ನೀಡಿದ ಪ್ರಧಾನಿ ಮೋದಿ ಹೇಳಿದ್ದಾರೆ. ಇದೇ ವೇಳೆ ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿ ಬಗ್ಗೆಯೂ ಪ್ರಧಾನಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.
ಇದೀಗ ಬೆಂಗಳೂರಿನಲ್ಲಿ ವರ್ಚುವಲ್ ಆಗಿ ಸಭೆ ನಡೆಸುತ್ತಿದ್ದೇನೆ, ಜನವರಿ 13ರಂದು ಸಂಜೆ ತಾವು ಕರೆದಿರುವ ಕೋವಿಡ್ ವರ್ಚುಯಲ್ ಸಭೆಗೆ ಪೂರ್ವಭಾವಿ ರೂಪದಲ್ಲಿ ಈ ಸಭೆ ನಡೆಸುತ್ತಿದ್ದೇನೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಲಸಿಕೆ ಅಭಿಯಾನವನ್ನು ತೀವ್ರಗೊಳಿಸಲಾಗಿದೆ. ತಜ್ಞರು ನೀಡುವ ಸಲಹೆಗಳನ್ನು ಆಧರಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಹೀಗೆ ರಾಜ್ಯದಲ್ಲಿನ ಕುರಿತು ಸಿಎಂ ಬೊಮ್ಮಾಯಿ ಪ್ರಧಾನಿ ಮೋದಿಗೆ ವಿವರಣೆ ನೀಡಿದ್ದಾರೆ.
ಧನ್ಯವಾದ ತಿಳಿಸಿದ ಸಿಎಂ ಬೊಮ್ಮಾಯಿ
ನಿಮ್ಮ ಆತ್ಮೀಯ ಕಾಳಜಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ನಿಮ್ಮ ಹಾರೈಕೆಗಳು ಖಂಡಿತವಾಗಿಯೂ ನನ್ನ ಚೇತರಿಕೆಗೆ ಉತ್ತೇಜನ ನೀಡುತ್ತವೆ ಮತ್ತು ನಮ್ಮ ಜನರಿಗೆ ಹೆಚ್ಚಿನ ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸಲು ನನಗೆ ಶೀಘ್ರವಾಗಿ ಗುಣವಾಗಲು ಸಹಾಯ ಮಾಡುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.