ಬೆಂಗಳೂರಿನಲ್ಲಿ ಬುಧವಾರ ಭಾರೀ ಮಳೆ: ಆರೆಂಜ್ ಅಲರ್ಟ್ ಘೋಷಣೆ
ಬೆಂಗಳೂರು, ಮೇ 18: ವಿವಿಧೆಡೆಯಲ್ಲಿ ಚಂಡಮಾರುತಗಳು ನಿರ್ಮಾಣವಾಗಿರುವ (Cyclone Formation) ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಮಳೆಗಳಾಗುತ್ತಿವೆ. ಬೆಂಗಳೂರಿನಲ್ಲಿ ಹಲವು ದಿನಗಳಿಂದ ಮಳೆರಾಯ ತಂಪೆರೆಯುತ್ತಿದ್ಧಾನೆ. ನಿನ್ನೆ ಮಂಗಳವಾರ ಸುರಿದ ಧಾರಾಕಾರ ಮಳೆಗೆ ಬಹುತೇಕ ಬೆಂಗಳೂರು ತೊಯ್ದು ಹೋಗಿತ್ತು. ಇಂದು ಬುಧವಾರ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ (Indian Meteorological Department) ಬೆಂಗಳೂರಿಗೆ ಆರೆಂಜ್ ಅಲರ್ಟ್ ಘೋಷಿಸಿದೆ.
ಬೆಂಗಳೂರು ಮಾತ್ರವಲ್ಲ, ಬೆಂಗಳೂರು ಗ್ರಾಮಾಂತರ ಸೇರಿ ರಾಜ್ಯದ ದಕ್ಷಿಣ ಭಾಗದ ಹಲವು ಪ್ರದೇಶಗಳು ಮತ್ತು ಕರಾವಳಿ ಭಾಗದ ಪ್ರದೇಶಗಳಲ್ಲಿ ಇಂದು ಬುಧವಾರ ಜೋರು ಮಳೆ ಬೀಳುವ ನಿರೀಕ್ಷೆ ಇದೆ. ಇದು ಇವತ್ತು ಮಾತ್ರವಲ್ಲ ಮುಂದಿನ ನಾಲ್ಕೈ ದಿನಗಳವರೆಗೂ ವರುಣನ ಅರ್ಭಟ ನಡೆಯಬಹುದು ಎಂದು ಐಎಂಡಿ ಮಂಗಳವಾರ ಮುನ್ಸೂಚನೆ ನೀಡಿದೆ. ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಕೆಲ ಭಾಗಗಳಲ್ಲಿ ಮುಂದಿನ ಐದು ದಿನ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಬಹುದು ಎಂದು ಇಲಾಖೆ ಎಚ್ಚರಿಸಿದೆ.
ಚಂಡಮಾರುತ, ಕರ್ನಾಟಕದ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಚಂಡಮಾರುತಗಳ ನಿರ್ಮಾಣ:
ಭಾರತದ ಪಶ್ಚಿಮದ ಅರಬ್ಬೀ ಸಮುದ್ರದಲ್ಲಿರುವ ಲಕ್ಷದ್ವೀಪದಲ್ಲಿ ಚಂಡಮಾರುತ ನಿರ್ಮಾಣವಾಗಿದೆ. ಇಲ್ಲಿ ಭೂಮಿ ವಾತಾವರಣದ ಮಧ್ಯಂತರ ಮಟ್ಟದಲ್ಲಿ (Middle Tropospheric Level) ಮಾರುತ ಇದೆ. ಉತ್ತರ ತಮಿಳುನಾಡಿನ ಕರಾವಳಿಯಲ್ಲಿ ಇನ್ನೊಂದು ಚಂಡಮಾರುತ ಎದ್ದಿದೆ. ಇವೆರೆಡರ ಜೊತೆಗೆ ಅರೇಬಿಯಾ ಸಮುದ್ರದಿಂದ ಪಶ್ಚಿಮಕ್ಕೆ ಕೆಳಗಿನ ಮಟ್ಟದಲ್ಲಿ ಬಲವಾಗಿ ಬೀಸುತ್ತಿರುವ ಬಿರುಗಾಳಿಯು ದಕ್ಷಿಣದ ಕೇರಳ, ಕರ್ನಾಟಕ ಹಾಗು ತಮಿಳುನಾಡಿನಲ್ಲಿ ಭಾರೀ ಮಳೆಗೆ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಮುಂಗಾರು ಆರಂಭ:
ಚಂಡಮಾರುತದಿಂದ ಮಾತ್ರವಲ್ಲ ಸಹಜ ಮುಂಗಾರು ಕೂಡ ಆರಂಭವಾಗುತ್ತಿದೆ. ಭಾರತದ ಪೂರ್ವ ಕರಾವಳಿ ಆಚೆ ಇರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪ್ರದೇಶಕ್ಕೆ ಈಗಾಗಲೇ ನೈರುತ್ಯ ಮುಂಗಾರು (South West Monsoon) ಅಡಿ ಇಟ್ಟು ಸುತ್ತಮುತ್ತಲ ಪ್ರದೇಶಗಳಲ್ಲಿ ವ್ಯಾಪಕ ಮಳೆ ತರಿಸುತ್ತಿದೆ.
ಈ ನೈರುತ್ಯ ಮುಂಗಾರು ಇಡೀ ಅಂಡಮಾನ್ ಪ್ರದೇಶವನ್ನು ವ್ಯಾಪಿಸುವುದಲ್ಲದೇ ಬಂಗಾಳ ಕೊಲ್ಲಿಯ ದಕ್ಷಿಣ ಹಾಗೂ ಮಧ್ಯಪೂರ್ವದ ಕೆಲ ಪ್ರದೇಶಗಳಿಗೆ ಅಡಿ ಇಡುವಂತಹ ವಾತಾವರಣ ಇದ್ದು, ಅಲ್ಲೆಲ್ಲಾ ಮುಂದಿನ ಎರಡು ದಿನಗಳು ಮುಂಗಾರು ಮಳೆ ಬೀಳುವ ನಿರೀಕ್ಷೆ ಇದೆ.

ನೈರುತ್ಯ ಮುಂಗಾರು ಮೇ 27ಕ್ಕೆ ಕೇರಳವನ್ನು ತಲುಪುವ ಸಾಧ್ಯತೆ ಇದೆ ಎಂದು ಕಳೆದ ವಾರವಷ್ಟೇ ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿತ್ತು. ಸಾಮಾನ್ಯವಾಗಿ ಜೂನ್ ಒಂದಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ ಆಗುತ್ತದೆ. ಆದರೆ, ಅಸನಿ ಚಂಡಮಾರುತದ ಕಾರಣದಿಂದ ಮುಂಗಾರು ಈ ಬಾರಿ ಐದು ದಿನ ಮುಂಚೆಯೇ ಅಡಿ ಇಡುತ್ತಿದೆ.
ಭಾರತದ 21 ರಾಜ್ಯಗಳಲ್ಲಿ ಮುಂದಿನ 5 ದಿನ ಮಳೆಯೋ ಮಳೆ!
ಹವಾಮಾನ ಇಲಾಖೆಯ ಅಲರ್ಟ್ಗಳ ಅರ್ಥವೇನು?
ಹವಾಮಾನ ವೈಪರೀತ್ಯದ ಸಾಧ್ಯತೆ ಇದ್ದರೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡುತ್ತದೆ. ವೈಪರೀತ್ಯದ ತೀವ್ರತೆ ಆಧಾರದ ಮೇಲೆ ಗ್ರೀನ್, ಯೆಲ್ಲೋ, ಆರೆಂಜ್ ಮತ್ತು ರೆಡ್ ಅಲರ್ಟ್ ನೀಡುತ್ತದೆ. ಗ್ರೀನ್ ಅಲರ್ಟ್ ಎಂದರೆ ಭಯ ಪಡುವ ಅಗತ್ಯ ಇಲ್ಲ, ಆರಾಮವಾಗಿ ಇರಬಹುದು ಎಂದರ್ಥ. ಯೆಲ್ಲೋ ಅಲರ್ಟ್ ಎಂದರೆ ಸ್ವಲ್ಪ ಹುಷಾರಾಗಿರಬೇಕು, ಗಮನಿಸುತ್ತಿರಬೇಕು ಎಂದರ್ಥ. ಆರೆಂಜ್ ಅಲರ್ಟ್ ಎಂದರೆ ಹವಾಮಾನ ವೈಪರೀತ್ಯ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿ ಎಂದು ಎಚ್ಚರಿಸುವ ಕರೆಯಾಗಿರುತ್ತದೆ. ರೆಡ್ ಅಲರ್ಟ್ ಎಂದರೆ ಕೂಡಲೇ ಕಾರ್ಯತತ್ಪರರಾಗಬೇಕೆಂದು ಕೊಡಲಾಗುವ ತುರ್ತು ಕರೆಯಾಗಿರುತ್ತದೆ.
(ಒನ್ಇಂಡಿಯಾ ಸುದ್ದಿ)