ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಗಿಣಿ ಜೊತೆಗಿನ ಬಿಜೆಪಿ ನಾಯಕರ ಫೋಟೊ, ವಿಡಿಯೋ ಇದೆ: ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಸೆ. 07: ವಿಧಾನ ಮಂಡಲ ಮಳೆಗಾಲದ ಅಧಿವೇಶನದಲ್ಲಿ ಸರ್ಕಾರವನ್ನು ಪೇಚಿಗೆ ಸಿಲುಕಿಸಲು ವಿರೋಧ ಪಕ್ಷ ಕಾಂಗ್ರೆಸ್‌ 'ಕೈ'ಗೆ ಹಲವು ಅಸ್ತ್ರಗಳನ್ನು ಬಿಜೆಪಿಯೇ ಕೊಟ್ಟಂತಾಗಿದೆ. ಕೊರೊನಾ ವೈರಸ್, ಲಾಕ್‌ಡೌನ್, ಜಿಡಿಪಿ ಕುಸಿತ, ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಭ್ರಷ್ಟಾಚಾರದ ಆರೋಪ ಹಾಗೂ ಇದೀಗ ಡ್ರಗ್ಸ್ ವಿಚಾರದಲ್ಲಿ ಬಂಧನಕ್ಕೆ ಒಳಗಾದವರೊಂದಿಗೆ ಬಿಜೆಪಿ ನಾಯಕರ ಒಡನಾಟ. ಹೀಗೆ ರಾಜ್ಯ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಪಕ್ಷ ಈಗಾಗಲೇ ಸಿದ್ಧತೆ ನಡೆಸಿದೆ. ಇದೇ ಹಿನ್ನೆಲೆಯಲ್ಲಿ ಇವತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ತಮ್ಮ ಪಕ್ಷದ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರೊಂದಿಗೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಚರ್ಚೆ ನಡೆಸಿದರು.

Recommended Video

Raginiನಾ ಬಿಟ್ಟು ಬಿಡಿ ಅಂತಿದ್ದಾರಂತೆ ಈ ದೊಡ್ಡ ಮನುಷ್ಯ | Oneindia Kannada

ಸದನದ ಮೊದಲ ದಿನವೇ ಡ್ರಗ್ಸ್ ವಿಚಾರ ಪ್ರಸ್ತಾಪ ಮಾಡಲು ಕಾಂಗ್ರೆಸ್ ತೀರ್ಮಾನ ಮಾಡಿದೆ. ವಿಧಾನಸಭೆ, ವಿಧಾನ ಪರಿಷತ್ ಎರಡೂ ಸದನಗಳಲ್ಲಿಯೂ ಡ್ರಗ್ಸ್ ವಿಚಾರ ಪ್ರಸ್ತಾಪಿಸಲು ಶಾಸಕರ ಜೊತೆಗಿನ ಸಭೆಯ‌ಲ್ಲಿ ನಿರ್ಧಾರ ಮಾಡಲಾಗಿದೆ. ಸದನದ ಆರಂಭದಲ್ಲಿಯೇ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾದ ಹಾವಳಿಯನ್ನು ಪ್ರಸ್ತಾಪ ಮಾಡಲು ಸಿದ್ದರಾಮಯ್ಯ ತೀರ್ಮಾನ ಮಾಡಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಕಾಂಗ್ರೆಸ್ ಶಾಸಕರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಭರವಸೆಯೊಂದನ್ನು ಕೊಟ್ಟಿದ್ದಾರೆ. ಅದೇನು ಇಲ್ಲಿದೆ ಮಾಹಿತಿ.

ಬೆಂಗಳೂರು ಕಾಂಗ್ರೆಸ್ ಶಾಸಕರು

ಬೆಂಗಳೂರು ಕಾಂಗ್ರೆಸ್ ಶಾಸಕರು

ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ವಿಚಾರವಾಗಿ ಸದನದಲ್ಲಿ ಮಂಡಿಸಲು ಮಹತ್ವದ ದಾಖಲೆಗಳನ್ನು ಒದಗಿಸುವ ಭರವಸೆಯನ್ನು ಬೆಂಗಳೂರು ಶಾಸಕರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕೊಟ್ಟಿದ್ದಾರೆ. ಮೊದಲಿಗೆ ನಟಿ ರಾಗಿಣಿ ದ್ವಿವೇದಿ ವಿಚಾರ ಪ್ರಸ್ತಾಪಕ್ಕೆ ತೀರ್ಮಾನ ಮಾಡಲಾಗಿದೆ. ನಿಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡಿದವರೇ ಡ್ರಗ್ಸ್ ಕೇಸ್‌ ನಲ್ಲಿದ್ದಾರಲ್ಲಪ್ಪಾ? ಎಂದು ಪ್ರಸ್ತಾಪಿಸುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ತಯಾರಿ ನಡೆಸಿದೆ.

ಬೆಂಗಳೂರು ಡ್ರಗ್ಸ್ ಮಾಫಿಯಾ ಕುರಿತು ದಾಖಲೆ ಸಮೇತ ಸದನದಲ್ಲಿ ಸರ್ಕಾರದ ಹಲವು ವೈಫಲ್ಯಗಳನ್ನು ಸದನದಲ್ಲಿ ಪ್ರಶ್ನಿಸಲು ಕಾಂಗ್ರೆಸ್ ನಿರ್ಧಾರ ಮಾಡಿದೆ.

ಬಿಜೆಪಿ ಮತ್ತು ರಾಗಿಣಿ

ಬಿಜೆಪಿ ಮತ್ತು ರಾಗಿಣಿ

ನಟಿ ರಾಗಿಣಿಯವರಿಗೂ ನಮಗೂ ಸಂಬಂಧ ಇಲ್ಲ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ಅವರು ಚುನಾವಣಾ ಪ್ರಚಾರದಲ್ಲಿ ಬಿಜೆಪಿ ನಾಯಕರ ಜೊತೆ ಭಾಗಿಯಾಗಿರುವ ಫೋಟೋ ಮತ್ತು ವೀಡಿಯೋ ಇದೆ. ತನಿಖೆ ನಡೆಯಲಿ. ಇದಕ್ಕೆ ನಮ್ಮ ತಕರಾರು ಏನೂ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶಾಸಕರ ಸಭೆ ಬಳಿಕ ಹೇಳಿಕೆ ಕೊಟ್ಟಿದ್ದಾರೆ.

ನಮ್ಮ ಸರ್ಕಾರದ ಅವಧಿಯಲ್ಲಿ ಈ ಮಾಫಿಯಾಕ್ಕೆ ಕಡಿವಾಣ ಹಾಕುವ ಪ್ರಯತ್ನ ನಡೆದಿತ್ತು. ಎನ್‍ಸಿಬಿಯವರು ಈಗ ತನಿಖೆ ಕೈಗೆತ್ತಿಕೊಂಡಿದ್ದಾರೆ. ಸಿಸಿಬಿಯೂ ತನಿಖೆಯಲ್ಲಿ ಕೈ ಜೋಡಿಸಿದೆ. ವಿದ್ಯಾರ್ಥಿಗಳು, ಸಿನಿಮಾ ನಟರು, ರಾಜಕಾರಣಿಗಳು, ಅವರ ಮಕ್ಕಳು ಸೇರಿದಂತೆ ಈ ಮಾಫಿಯಾದಲ್ಲಿ ಯಾರೇ ಭಾಗಿಯಾಗಿದ್ದರೂ ಶಿಕ್ಷೆಯಾಗಲಿ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಲಿ. ಅದಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ.

ಪೊಲೀಸರ ಬಳಿ ಸಾಕ್ಷ್ಯಾಧಾರ ಇದ್ದರೆ ಯಾರ ವಿರುದ್ಧವಾದರೂ ಕ್ರಮ ಕೈಗೊಳ್ಳಲಿ ಎಂದರು.


ಡ್ರಗ್ ಮಾಫಿಯಾದಲ್ಲಿ ಭಾಗಿಯಾದವರನ್ನು ತನಿಖೆಯಿಂದ ಪಾರು ಮಾಡಲು ಪ್ರಭಾವಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಮಾತಿಗೆ ಹೇಳಬಾರದು. ನನಗಂತೂ ಆ ಕುರಿತು ಮಾಹಿತಿ ಇಲ್ಲ. ಆ ಕುರಿತಾಗಿ ನಾವೂ ಈ ಬಗ್ಗೆ ಅಧಿವೇಶನದಲ್ಲಿಯೂ ಚರ್ಚೆ ಮಾಡಲು ನಿರ್ಧರಿಸಿದ್ದೇವೆ.

ಜಮೀರ್ ಅಹಮ್ಮದ್ ಭಾಗಿ?

ಜಮೀರ್ ಅಹಮ್ಮದ್ ಭಾಗಿ?

ಡ್ರಗ್ ಮಾಫಿಯಾದಲ್ಲಿ ಶಾಸಕ ಜಮೀರ್ ಅಹಮದ್ ಅವರು ಭಾಗಿಯಾಗಿದ್ದಾರೆ ಎಂಬುದಕ್ಕೆ ಪುರಾವೆ ಇದೆಯೇ? ಸಾಕ್ಷ್ಯ ಇದ್ದರೆ ಪೊಲೀಸರಿಗೆ ತೋರಿಸಲಿ. ರಾಜಕಾರಣಕ್ಕಾಗಿ ಸುಖಾಸುಮ್ಮನೆ ಒಬ್ಬರ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ಯಾರೇ ಕಾನೂನು ಉಲ್ಲಂಘನೆ ಮಾಡಿದ್ದರೂ ಕ್ರಮ ಕೈಗೊಳ್ಳಲಿ. ತನಿಖೆ ಮಾಡುತ್ತಿರುವುದು ನಾನು ಅಥವಾ ಮಾಧ್ಯಮದವರಲ್ಲ. ಪೊಲೀಸರು ಆ ಕೆಲಸ ಮಾಡುತ್ತಿದ್ದಾರೆ. ಯಾರೇ ಆರೋಪ ಮಾಡಿದ್ದರೂ ತನಿಖೆ ನಡೆಯಲಿ. ಸಾಕ್ಷ್ಯಾಧಾರ ಸಿಕ್ಕರೆ ಪೊಲೀಸರು ಕ್ರಮ ಕೈಗೊಳ್ಳಲಿ. ಅದಕ್ಕೆ ನಾವು ಅಡ್ಡಿಪಡಿಸುವ ಪ್ರಶ್ನೆಯೇ ಇಲ್ಲ. ಡ್ರಗ್ ಮಾಫಿಯಾ ನಿಯಂತ್ರಣಕ್ಕೆ ಸರ್ಕಾರ ಕಠಿಣವಾದ ಕಾನೂನು ಜಾರಿಗೆ ತರಲಿ. ಅದಕ್ಕೆ ನಮ್ಮ ಪಕ್ಷ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ತೆರೆದಿದ್ದ ಕೋವಿಡ್ ಆರೈಕೆ ಕೇಂದ್ರ ಮುಚ್ಚುವ ಹಂತಕ್ಕೆ ಬಂದಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಸೋಂಕಿತರು ಹೋಂ ಕ್ವಾರಂಟೈನ್ ಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಯಾವ ಕಾರಣಕ್ಕೆ ಈ ಕೇಂದ್ರ ಮುಚ್ಚಲಾಗುತ್ತಿದೆ ಎಂಬುದರ ಕುರಿತು ಮಾಹಿತಿ ಪಡೆದುಕೊಳ್ಳುತ್ತೇನೆ ಎಂದರು.

ಕೈಗಾರಿಕೆ ವಲಯದ ಕುಸಿತ

ಕೈಗಾರಿಕೆ ವಲಯದ ಕುಸಿತ

ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 8ರಿಂದ 17ನೇ ಸ್ಥಾನಕ್ಕೆ ಕುಸಿದಿದೆ. 2017-18ರಲ್ಲಿ ಕರ್ನಾಟಕ 8ನೇ ಸ್ಥಾನದಲ್ಲಿತ್ತು. ಅದಕ್ಕೂ ಮೊದಲು 2012-13ನೇ ಸಾಲಿನಲ್ಲಿ 13ನೇ ಸ್ಥಾನದಲ್ಲಿತ್ತು. ಈಗ 17ನೇ ಸ್ಥಾನಕ್ಕೆ ಹೋಗಿದೆ. ಅದಕ್ಕೆ ಈ ಹಿಂದೆ ಆಡಳಿತ ನಡೆಸಿದವರು ಕಾರಣ ಎಂದು ವಿಜಯೇಂದ್ರ ಅವರು ಹೇಳುತ್ತಾರೆ. ಬಿಜೆಪಿ ಕಳೆದ ಒಂದು ವರ್ಷದಿಂದ ಅಧಿಕಾರದಲ್ಲಿ ಇಲ್ಲವೇ. ಸರ್ಕಾರ ನಡೆಸುತ್ತಿರುವವರು ಏನನ್ನು ಕಡಿದು ಕಟ್ಟೆ ಹಾಕಿದ್ದಾರೆ. 17ನೇ ಸ್ಥಾನಕ್ಕೆ ಹೋಗಲು 8ನೇ ಸ್ಥಾನದಲ್ಲಿದ್ದಾಗ ಸರ್ಕಾರ ನಡೆಸಿದವರು ಕಾರಣವೇ ಅಥವಾ 17ನೇ ಸ್ಥಾನದಲ್ಲಿರುವಾಗ ಇರುವ ಸರ್ಕಾರ ಕಾರಣವೇ? ಜನರಿಗೆ ತಪ್ಪು ಮಾಹಿತಿ ಕೊಡಬಾರದು ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

ಅಂಗೈಯಲ್ಲಿ ಮಾತ್ರ ಸ್ವರ್ಗ

ಅಂಗೈಯಲ್ಲಿ ಮಾತ್ರ ಸ್ವರ್ಗ

ಖಜಾನೆಯಲ್ಲಿ ಹಣ ಇಲ್ಲ ಎಂಬುದಕ್ಕೆ ಕೊರೊನಾ ಕಾರಣ ಎಂದು ಹೇಳುತ್ತಾರೆ. ಜಾಗತಿಕ ಬ್ಯಾಂಕ್‌ಗಳ ಮೂಲಕ ಸಾಲ ತಂದು ಕೇಂದ್ರ ಸರ್ಕಾರ ಜನರಿಗೆ ಸಹಾಯ ಮಾಡಬೇಕು. ಸಬ್ಸಿಡಿ ಇಲ್ಲ, ಸಂಬಳ ಕೊಡಲಾಗದು, ಜಿ.ಎಸ್.ಟಿ. ಪರಿಹಾರ ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳುವುದಾದರೆ ಅಧಿಕಾರದಲ್ಲಿ ಏಕಿರಬೇಕು. ಇದನ್ನು ಹೇಳಲು ಜನರು ಬಿಜೆಪಿಯವರನ್ನು ಕೇಂದ್ರದಲ್ಲಿ ಅಧಿಕಾರದಲ್ಲಿ ಕೂರಿಸಿದ್ದಾರೆಯೇ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಈ ರೀತಿ ಎಲ್ಲವನ್ನೂ ನಿರಾಕರಿಸುವುದು ಒಕ್ಕೂಟ ವ್ಯವಸ್ಥೆ, ಸಂವಿಧಾನಕ್ಕೆ ವಿರುದ್ಧವಾದ ನಡೆ. ಜನರಿಗೆ ಮಾಡುವ ದ್ರೋಹ. ಜವಾಬ್ದಾರಿಯಿಂದ ನುಣುಚಿಕೊಳ್ಳಲು ಎಲ್ಲವೂ ದೇವರ ಆಟ ಎಂದು ಹೇಳುವುದಾದರೆ ಸರ್ಕಾರದ ಜವಾಬ್ದಾರಿ ಏನು? ಇದಕ್ಕೆಲ್ಲ ನರೇಂದ್ರಮೋದಿ ಅವರ ಸರ್ಕಾರವೇ ಕಾರಣ. ಜಿಡಿಪಿ ಕಡಿಮೆಯಾದರೆ ಉದ್ಯೋಗ ಸೃಷ್ಟಿ ಆಗುವುದಿಲ್ಲ. ದೇಶದಲ್ಲಿ ಈಗ 12 ರಿಂದ 15 ಕೋಟಿ ಉದ್ಯೋಗ ಹೋಗಿದೆ ಎಂದು ವರದಿಗಳು ಹೇಳುತ್ತವೆ. ದೆಹಲಿಯಲ್ಲಿ ಮತ್ತು ಕರ್ನಾಟದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ಸ್ವರ್ಗ ಮಾಡುತ್ತೇವೆ ಎಂದರು. ಇದು ಸ್ವರ್ಗವೋ ನರಕವೋ ಎಂದಿದ್ದಾರೆ.

ಜೊತೆಗೆ ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಇದೇ ತಿಂಗಳ 16ರಂದು ಕಾಂಗ್ರೆಸ್ ಶಾಸಕಾಗ ಪಕ್ಷದ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಸದನದಲ್ಲಿ ಕೈಗೆತ್ತಿಕೊಳ್ಳಬೇಕಾದ ವಿಷಯಗಳ ಬಗ್ಗೆ ಉಭಯ ಸದನದ ಪಕ್ಷದ ಸದಸ್ಯರ ಜೊತೆ ಸಮಗ್ರವಾಗಿ ಚರ್ಚಿಸಲಾಗುವುದು. ಕೋವಿಡ್ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರ, ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರ, ಡ್ರಗ್ ಮಾಫಿಯಾ, ಡಿ.ಜೆ. ಹಳ್ಳಿ ಘಟನೆ, ಜಿಎಸ್‍ಟಿ ಹಾಗೂ ವಿವಿಧ ವಿಧೇಯಕಗಳ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಮಾಲೋಚನೆ ನಡೆಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

English summary
Opposition leader Siddaramaiah today held a video conference with his party's MLAs and MLCs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X