ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭೂಕಬಳಿಕೆ : ಕೆಸಿ ರಾಮಮೂರ್ತಿ ವಿರುದ್ಧ ಕ್ರಮಕ್ಕೆ ಆಗ್ರಹ

By Prasad
|
Google Oneindia Kannada News

NRIs demand action against KC Ramamurthy and family
ಬೆಂಗಳೂರು, ಡಿ. 9 : 600 ಕೋಟಿ ರು.ಗೂ ಅಧಿಕ ಮೌಲ್ಯದ ಭೂಕಬಳಿಕೆ ಆರೋಪದ ಹಿನ್ನೆಲೆಯಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಕೆಸಿ ರಾಮಮೂರ್ತಿ ಮತ್ತವರ ಕುಟುಂಬಿಕರ ವಿರುದ್ಧ ಕೊತ್ತನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದ್ದು ಎಫ್‌ಐಆರ್ ದಾಖಲಾಗಿ 40 ದಿನ ಕಳೆದರೂ ಇನ್ನೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಭೂಕಬಳಿಕೆಯಿಂದ ನೊಂದ ಎನ್‌ಆರ್‌ಐಗಳು ಪ್ರಶ್ನಿಸಿದ್ದಾರೆ.

ದೊಡ್ಡಗುಬ್ಬಿ ಸಮೀಪದ ಅಥಿನಾ ಟೌನ್‌ಶಿಪ್‌ನಲ್ಲಿ ಅನಿವಾಸಿ ಭಾರತೀಯರ ನಿವೇಶನಗಳನ್ನು ಕಬಳಿಸಲಾಗಿದೆ ಎಂದು ಆರೋಪಿಸಿ ಅನಿವಾಸಿ ಭಾರತೀಯ ಸ್ಟೀಫನ್ ವಿ ವರ್ಗೀಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಪ್ರಕರಣದ ತನಿಖೆಯನ್ನು ಕೊತ್ತನೂರು ಪೊಲೀಸರಿಗೆ ವರ್ಗಾಯಿಸಿತ್ತು.

ಪ್ರಕರಣದ ಸಂಬಂಧ ಒಟ್ಟು ಹದಿನಾಲ್ಕು ದೂರುಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದರೂ ಇನ್ನೂ ಮಾಜಿ ಐಪಿಎಸ್ ಕೆಸಿ ರಾಮಮೂರ್ತಿ ಸೇರಿದಂತೆ ಅವರ ಕುಟುಂಬ ಸದಸ್ಯರು ಹಾಗೂ ಇತರರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಸಂಶಯಕ್ಕೆ ಎಡೆ ಮಾಡಿದೆ ಎಂದು ಅವರು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಎಫ್‌ಐಆರ್‌ನಲ್ಲಿ ದಾಖಲಾಗಿರುವ ಕೆ.ಎಸ್.ಬಾಲಸುಂದರ ರೆಡ್ಡಿ, ಕೆಎಸ್. ಶಂಕರ ರೆಡ್ಡಿ, ಕೆಸಿ ರಾಮಮೂರ್ತಿ, ಕೆ.ಎಸ್.ರಾಜಗೋಪಾಲ ರೆಡ್ಡಿ, ಜಾರ್ಜ್ ವರ್ಗೀಸ್, ಸತೀಶ್ ಕುಮಾರ್, ಬಿಜು ಪರೇಲ್ ಸೇರಿದಂತೆ ಯಾರ ಮೇಲೆಯೂ ಪೊಲೀಸ್ ಇಲಾಖೆ ಕಾನೂನು ಕ್ರಮಗಳನ್ನು ಕೈಗೊಂಡಿಲ್ಲ. ಪ್ರಭಾವಿಗಳು ಎಂಬ ಕಾರಣಕ್ಕೆ ಆರೋಪಿತರನ್ನು ಬಂಧಿಸಲು ಪೊಲೀಸ್ ಇಲಾಖೆ ಹಿಂದೇಟು ಹಾಕುತ್ತಿದೆಯೇ ಎಂಬ ಅನುಮಾನ ಕಾಣುತ್ತಿದೆ ಎಂದು ಅವರು ನೊಂದು ನುಡಿದರು.

ಒಂದೆಡೆ ಸರ್ಕಾರ ಅನಿವಾಸಿ ಭಾರತೀಯರನ್ನು ತಮ್ಮ ತಾಯ್ನೆಲಕ್ಕೆ ಹೂಡಿಕೆಗೆ ಆಹ್ವಾನಿಸಿ ಅವರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡುತ್ತದೆ. ಇನ್ನೊಂದೆಡೆ ಎನ್‌ಆರ್‌ಐಗಳೇ ಆಗಿದ್ದರೂ, ಭಾರತದ ಪ್ರಜೆಗಳೇ ಆದ ನಮ್ಮ ಸಮಸ್ಯೆಗಳಿಗೆ ಸೂಕ್ತವಾಗಿ ಗೃಹ ಇಲಾಖೆ, ಸರ್ಕಾರಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂಬುದು ನಮ್ಮ ನೋವು ಎಂದು ಅವರು ಹೇಳಿದರು.

ಪ್ರಕರಣದ ಹಿನ್ನೆಲೆ : ಬೆಂಗಳೂರು ಮಹಾನಗರ ವ್ಯಾಪ್ತಿಯ ಬಿದರಹಳ್ಳಿ ಹೋಬಳಿ ದೊಡ್ಡಗುಬ್ಬಿಯಲ್ಲಿ ನಿರ್ಮಿತವಾದ ಅಥೆನಾ ಟೌನ್ ಶಿಪ್‌ನಲ್ಲಿ ನೂರಾರು ಅನಿವಾಸಿ ಭಾರತೀಯರು 94-95ರ ಸುಮಾರಿನಲ್ಲಿ ಸೈಟ್‌ಗಳನ್ನು ಖರೀದಿಸಿದ್ದರು. 2006ರವರೆಗೂ ಎನ್‌ಆರ್‌ಐಗಳ ಸುಪರ್ದಿಯಲ್ಲೇ ಇತ್ತು.

ಆದರೆ 2006ರಲ್ಲಿ ಅಂದು ಐಜಿಪಿ ಹುದ್ದೆಯಲ್ಲಿದ್ದ ಐಪಿಎಸ್ ಅಧಿಕಾರಿ ಕೆಸಿ ರಾಮಮೂರ್ತಿ ತಮ್ಮ ಅಧಿಕಾರ ಬೆಂಬಲ ಮತ್ತು ಅವರ ಕುಟುಂಬ ಸದಸ್ಯರ ಬೆಂಬಲದೊಂದಿಗೆ ಗೂಂಡಾಗಳ ಮೂಲಕ ಅಲ್ಲಿ ಎನ್‌ಆರ್‌ಐಗಳು ನಿರ್ಮಿಸಿದ್ದ ಶೆಡ್‌ಗೆ ನುಗ್ಗಿ ಅವುಗಳನ್ನು ಧ್ವಂಸಗೊಳಿಸಿದ್ದರು. ತಮ್ಮ ಕುಟುಂಬಿಕರದೇ ಆಗಿರುವ ಸ್ಕೇಪ್ ಪ್ರಾಪರ್ಟೀಸ್‌ಗೆ ಸೇರಿರುವ ಜಾಗ ಎಂದು ಬಿಂಬಿಸಿಕೊಂಡು ಅಸಲಿ ಮಾಲೀಕರುಗಳ ಪ್ರವೇಶಕ್ಕೆ ಅಡ್ಡಿಪಡಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸಿಐಡಿ ತನಿಖೆ ಕೂಡಾ ನಡೆಸಿತ್ತು.

ಸದ್ಯದ ಬೆಳವಣಿಗೆ : ಮಾಜಿ ಐಪಿಎಸ್ ಅಧಿಕಾರಿ ಮತ್ತು ಅವರ ಕುಟುಂಬಿಕರ ಅಕ್ರಮದಿಂದ ನೊಂದ ಎನ್‌ಆರ್‌ಐಗಳು ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆಯಲು ಪ್ರಯತ್ನ ನಡೆಸಿ ಕೊನೆಗೂ ಎನ್‌ಆರ್‌ಐಗಳ ಭೂಮಿಯನ್ನು ಫೋರ್ಜರಿ ಭೂದಾಖಲೆ ಸೃಷ್ಟಿಸಿದ್ದ ನಿಗೂಢವನ್ನು ಭೇದಿಸಿದ್ದಾರೆ.

ಈ ಎಲ್ಲಾ ನಕಲಿ ಭೂದಾಖಲೆಗಳು ಕೆಸಿ ರಾಮಮೂರ್ತಿ ಅಣ್ಣನ ಮಗ ಬಾಲಸುಂದರ ರೆಡ್ಡಿ ಸನ್ ಆಫ್ ಕೆಸಿ ಶ್ರೀನಿವಾಸ ರೆಡ್ಡಿ, ಕೆ.ಇ ಬಾಬು ಸನ್ ಆಫ್ ಕೆಸಿ ಈರಪ್ಪ ರೆಡ್ಡಿ, ಕೋಬ್ರದರ್ ರಾಜಗೋಪಾಲ ರೆಡ್ಡಿ ಮೊದಲಾದವರ ಹೆಸರಿಗೆ ಚಿಕ್ಕಬಳ್ಳಾಪುರದ ಗುಡಿಬಂಢೆಯ ಸಬ್‌ರಿಜಿಸ್ತಾರ್ ಕಛೇರಿಯಲ್ಲಿ ರಿಜಿಸ್ಟ್ರರ್ ಆಗಿವೆ.

ಈ ನಕಲಿ ದಾಖಲೆಗಳನ್ನು ಇಟ್ಟುಕೊಂಡು ಎನ್‌ಆರ್‌ಐಗಳನ್ನು ಬೀದಿಗೆ ತಳ್ಳುವ ಹುನ್ನಾರ ನಡೆದಿದ್ದು ಈ ವಿಷಯವಾಗಿ ಮುಖ್ಯಮಂತ್ರಿಗಳು, ಪೊಲೀಸ್ ಮೇಲಾಧಿಕಾರಿಗಳ ಮತ್ತು ಲೋಕಾಯುಕ್ತರ ಗಮನಕ್ಕೆ ತಂದು ನ್ಯಾಯಾಲಯದ ಮೆಟ್ಟಲು ಹತ್ತಿದ್ದೇವೆ ಎಂದು ವರ್ಗೀಸ್ ಹೇಳಿದರು.

English summary
Land scam in Bangalore : NRIs have demanded action against retired IPS officer K.C. Ramamurthy and his family for allegedly grabbing the land belonging to them. NRI Stephen V. Verghese has filed a case against Ramamurthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X