ಬೆಂಗಳೂರಿನಲ್ಲಿ ಉದ್ದಿಮೆ ಆರಂಭಿಸುವುದು ಮೊದಲಿಗಿಂತ ಬಲು ಸುಲಭ
ಬೆಂಗಳೂರು, ಫೆಬ್ರವರಿ.02: ಸಿಲಿಕಾನ್ ಸಿಟಿಯಲ್ಲಿ ವ್ಯಾಪಾರ ಶುರು ಮಾಡುವ ಕನಸು ಹೊತ್ತಿದ್ದೀರಾ. ಆ ಕನಸನ್ನು ಈಡೇರಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಮಹತ್ವದ ಕ್ರಮ ತೆಗೆದುಕೊಂಡಿದೆ. ಉದ್ದಿಮೆ ಆರಂಭಿಸುವ ವ್ಯಾಪಾರಿಗಳಿಗೆ ಬಿಬಿಎಂಪಿ ಸಿಹಿ ಸುದ್ದಿ ನೀಡಿದೆ.
2020-21ನೇ ಸಾಲಿನಲ್ಲಿ ಹೊಸ ಉದ್ದಿಮೆ ಪರವಾನಗಿ ಪಡೆಯುವುದು ಮತ್ತು ನವೀಕರಣ ಪ್ರಕ್ರಿಯೆಯನ್ನು ಬಿಬಿಎಂಪಿ ಮತ್ತಷ್ಟು ಸರಳೀಕರಣಗೊಳಿಸಿದೆ. ಮೊದಲ ಬಾರಿಗೆ 1 ರಿಂದ 5 ವರ್ಷಗಳ ಅವಧಿವರೆಗೂ ಲೈಸೆನ್ಸ್ ಪಡೆದುಕೊಳ್ಳಲು ಪಾಲಿಕೆಯು ಅವಕಾಶ ಕಲ್ಪಿಸಿದೆ.
ಹೊಸ ಕಟ್ಟಡ ನಿರ್ಮಾಣಕ್ಕೆ ನಿರ್ಬಂಧ: ಹೈಕೋರ್ಟ್ ಎಚ್ಚರಿಕೆ
ಬಿಬಿಎಂಪಿ ಹೊಸ ನೀತಿ ಅನ್ವಯ ಬೆಂಗಳೂರಿನಲ್ಲಿರುವ ವಾಣಿಜ್ಯ ಮಳಿಗೆ ಮಾಲೀಕರು ಮತ್ತು ವ್ಯಾಪಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ 1 ರಿಂದ 5 ವರ್ಷಗಳವರೆಗೂ ಪರವಾನಗಿ ಪಡೆದುಕೊಳ್ಳಲು ಅನುಮತಿ ಸಿಗಲಿದೆ. ಅದೇ ರೀತಿ ಪರವಾನಗಿಯನ್ನು ನವೀಕರಣಗೊಳಿಸಬಹುದು.
ಪರವಾನಗಿ ಪಡೆಯಲು ಆನ್ ಲೈನ್ ನಲ್ಲೇ ಅವಕಾಶ
ಬೆಂಗಳೂರಿನಲ್ಲಿ ಈಗಾಗಲೇ 48 ಸಾವಿರ ವ್ಯಾಪಾರಿಗಳು ತಮ್ಮ ಉದ್ದಿಮೆಗೆ ಲೈಸೆನ್ಸ್ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ನಗರದಲ್ಲಿ ಉದ್ದಿಮೆ ಆರಂಭಿಸುವ ಮತ್ತು ಈಗಾಗಲೇ ಉದ್ದಿಮೆ ಆರಂಭಿಸಿದ್ದು, ಪರವಾನಗಿ ನವೀಕರಣಗೊಳಿಸಲು ಬಯಸುವ ಉದ್ಯಮಿಗಳು ಆನ್ ಲೈನ್ ನಲ್ಲೇ ಅರ್ಜಿ ಸಲ್ಲಿಸಬಹುದು. ಇನ್ನು, ಆನ್ ಲೈನ್ ನಲ್ಲೇ ಶುಲ್ಕ ಪಾವತಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಪರವಾನಗಿ ಶುಲ್ಕ ಏರಿಕೆ ಇಲ್ಲ ಎಂದ ಬಿಬಿಎಂಪಿ
ಕಳೆದ 2016 ಫೆಬ್ರವರಿಯಲ್ಲಿ ಬಿಬಿಎಂಪಿ ಪರವಾನಗಿ ಶುಲ್ಕದಲ್ಲಿ ಏರಿಕೆ ಮಾಡಿತ್ತು. ಅದಾಗಿ ಇಂದಿನವರೆಗೂ ಈ ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಬಾರಿ ಪರವಾನಗಿ ಶುಲ್ಕದಲ್ಲಿ ಯಾವುದೇ ಏರಿಕೆ ಇಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.
ಪರವಾನಗಿ ಪಡೆಯಲು ಯಾವ ಉದ್ಯಮಕ್ಕೆ ಎಷ್ಟು ಶುಲ್ಕ?
ಬೆಂಗಳೂರಿನಲ್ಲಿ ವಿವಿಧ ಉದ್ಯಮಗಳ ಆರಂಭಕ್ಕೆ ಪರವಾನಗಿ ಪಡೆಯಲು ಒಂದೊಂದು ಶುಲ್ಕವನ್ನು ವಿಧಿಸಲಾಗುತ್ತದೆ. ಹಾಗಿದ್ದಲ್ಲಿ ಯಾವ ಉದ್ಯಮದ ಪರವಾನಗಿಗೆ ಎಷ್ಟು ಶುಲ್ಕ ಎಂಬುದರ ಪಟ್ಟಿ ಇಲ್ಲಿದೆ ನೋಡಿ.
ಉದ್ಯಮ | ಶುಲ್ಕ |
ಪಾನಿಪುರಿ ಚಾಟ್ಸ್ | 1,000 |
ಮೆಸ್ | 2,000 |
ಕಾಫಿ / ಟೀ ಸ್ಟಾಲ್ | 2,000 |
ಚಿತ್ರಮಂದಿರ | 2,000 |
ಕ್ಯಾಂಟೀನ್ | 5,000 |
ದರ್ಶಿನಿ ಹೋಟೆಲ್ | 5,000 |
ಪಿಜಿ / ಹಾಸ್ಟೆಲ್ | 10,000 |
ಬ್ರೆಡ್, ಬಿಸ್ಕೆಟ್, ಕಾಂಡಿಮೆಂಟ್ಸ್ | 10,000 |
ಎಣ್ಣೆ ಉತ್ಪಾದನೆ ಮತ್ತು ಸಂಸ್ಕರಣೆ | 10,000 |
ಪೆಟ್ರೋಲ್ ಬಂಕ್ | 10,000 |
ನಾನ್ ಎಸಿ ಹೋಟೆಲ್ | 10,000 |
ಎಸಿ ಹೋಟೆಲ್ | 20,000 |
ಸೂಪರ್ ಮಾರ್ಕೆಟ್ | 20,000 |
ನರ್ಸಿಂಗ್ ಹೋಮ್ / ಆಸ್ಪತ್ರೆ | 50,000 |
ಮಾಲ್ | 50,000 |
ಕಿರಾಣಿ ಅಂಗಡಿ | 1 ಲಕ್ಷ |
3 ಸ್ಟಾರ್ ಹೋಟೆಲ್ | 2 ಲಕ್ಷ |
5 ಸ್ಟಾರ್ ಹೋಟೆಲ್ | 3 ಲಕ್ಷ |
7 ಸ್ಟಾರ್ ಹೋಟೆಲ್ | 4 ಲಕ್ಷ |
ಪರವಾನಗಿ ಶುಲ್ಕ ಪಾವತಿಸದಿದ್ದಲ್ಲಿ ದಂಡ ಫಿಕ್ಸ್
ಬೆಂಗಳೂರಿನಲ್ಲಿ ಉದ್ದಿಮೆ ನಡೆಸುತ್ತಿರುವ ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ಫೆ.29ರೊಳಗೆ ಪರವಾನಗಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ. ಈ ಕಾಲಮಿತಿಯಲ್ಲಿ ಶುಲ್ಕ ಪಾವತಿಸಿದರೆ ಯಾವುದೇ ದಂಡ ವಿಧಿಸಲಾಗುವುದಿಲ್ಲ. ಬದಲಾಗಿ ಮಾರ್ಚ್.01 ರಿಂದ 31ರ ಅವಧಿಯಲ್ಲಿ ಶುಲ್ಕ ಪಾವತಿಸುವ ಉದ್ಯಮಿಗಳಿಗೆ ಶೇ.25ರಷ್ಟು ದಂಡ ವಿಧಿಸಲಾಗುತ್ತದೆ. ಈ ಮಿತಿಯನ್ನು ದಾಟಿದ ಉದ್ಯಮಿಗಳಿಗೆ ಶೇ.100ರಷ್ಟು ದಂಡ ವಿಧಿಸುವುದಾಗಿ ಬಿಬಿಎಂಪಿ ತಿಳಿಸಿದೆ.
ಲೈಸೆನ್ಸ್ ಬೇಕಾದಲ್ಲಿ ಈ ದಾಖಲೆಗಳ ಸಲ್ಲಿಕೆ ಕಡ್ಡಾಯ
ಇನ್ನು, ಉದ್ಯಮ ಪರವಾನಗಿ ಪಡೆಯಲು ಹೆಚ್ಚೇನು ದಾಖಲೆಗಳು ಬೇಕಾಗಿಲ್ಲ. ಕಟ್ಟಡ ಮಾಲೀಕರೊಂದಿಗೆ ಮಾಡಿಕೊಂಡ ಬಾಡಿಗೆಯ ಕರಾರು ಪತ್ರ ಅಥವಾ ಭೋಗ್ಯಕ್ಕೆ ಹಾಕಿಕೊಂಡ ಕರಾರು ಪತ್ರ ಜೊತೆಗೆ ವಿದ್ಯುತ್ ಬಿಲ್ ಪಾವತಿಸಿದರೆ ಸಾಕು. ಬಿಬಿಎಂಪಿ ನಿಮಗೆ ಹೊಸ ಉದ್ಯಮ ಆರಂಭಿಸಲು ಪರವಾನಗಿ ನೀಡುತ್ತದೆ.