ಖರ್ಗೆ ಆಶೀರ್ವಾದ ಪಡೆದು ರಾಜಕಾರಣ ಚರ್ಚಿಸಿದ ನಿಖಿಲ್ ಕುಮಾರಸ್ವಾಮಿ
ಬೆಂಗಳೂರು, ಜೂನ್ 04: ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಹೋರಾಡಿ ಸೋತ ನಂತರ ನಿಖಿಲ್ ಕುಮಾರಸ್ವಾಮಿ ಹೆಚ್ಚಿನ ಉತ್ಸಾಹದಿಂದ ರಾಜಕೀಯದಲ್ಲಿ ತೊಡಗಿಕೊಳ್ಳುತ್ತಿರುವ ಮುನ್ಸೂಚನೆ ಗೋಚರವಾಗುತ್ತಿದೆ.
ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯದ ಹಿರಿಯ ರಾಜಕಾರಣಿಗಳನ್ನು ಭೇಟಿ ಮಾಡುತ್ತಾ ಅವರ ಸಲಹೆ ಆಶೀರ್ವಾದಗಳನ್ನು ಪಡೆಯುತ್ತಿದ್ದಾರೆ. ಇಂದು ಅವರು ರಾಜ್ಯದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ನಿಖಿಲ್ ಕುಮಾರಸ್ವಾಮಿ ಭೇಟಿಯಾದ ಎಚ್.ವಿಶ್ವನಾಥ್
ನಿನ್ನೆ ಖರ್ಗೆ ಅವರ ನಿವಾಸಕ್ಕೆ ತೆರಳಿದ್ದ ನಿಖಿಲ್ ಕುಮಾರಸ್ವಾಮಿ ಅವರು ಹಿರಿಯ ರಾಜಕಾರಣಿಯೊಡನೆ ಬಹು ಸಮಯ ಚರ್ಚೆ ನಡೆಸಿ, ರಾಜಕೀಯದ ಹಲವು ಮುಖಗಳನ್ನು ಅವರಿಂದ ತಿಳಿದುಕೊಂಡಿದ್ದಾರೆ ಹೇಳಿದ್ದಾರೆ.
ಅಲ್ಲಿಯೇ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನೂ ಭೇಟಿ ಮಾಡಿರುವ ನಿಖಿಲ್, ಅವರಿಂದಲೂ ಉತ್ಸಾಹದಾಯಕ ಪ್ರೇರಣೆ ಪಡೆದಿದ್ದಾರೆ. ತಮ್ಮ ಭೇಟಿಯ ಬಗ್ಗೆ ನಿಖಿಲ್ ಅವರು ಫೇಸ್ಬುಕ್ನಲ್ಲಿ ವಿಸ್ತಾರವಾಗಿ ಬರೆದುಕೊಂಡಿದ್ದಾರೆ.

ಖುಷಿಯಿಂದ ಆಶೀರ್ವದಿಸಿದ ಖರ್ಗೆ
ಖುಷಿಯಿಂದ ತಮ್ಮನ್ನು ಖರ್ಗೆ ಅವರು ಆಶೀರ್ವಾದಿಸಿ ಮುನ್ನಡೆಯುವ ದಾರಿ ತೋರಿದರು ಎಂದಿರುವ ನಿಖಿಲ್, 'ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ನಿರ್ಣಯಕ್ಕೆ ಪೂರಕವಾಗಿ, ಜನರು ಒಪ್ಪುವಂತೆ ನಮ್ಮ ನಡೆ, ನುಡಿ, ಬದ್ಧತೆಗಳು ಇರಬೇಕು ಎಂದು ಕಿವಿಮಾತು ಹೇಳಿದ್ದಾಗಿ' ನಿಖಿಲ್ ಅವರು ಹೇಳಿದ್ದಾರೆ.

ಸ್ಪೂರ್ತಿಯ ಮಾತನ್ನಾಡಿದ ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆಯವರು ಕೂಡ ಧೈರ್ಯದಿಂದ ಮುಂದುವರಿಯುವಂತೆ ಹುರಿದುಂಬಿಸಿದ್ದಾಗಿ ಹೇಳಿರುವ ನಿಖಿಲ್, ಹಿರಿಯ ರಾಜಕಾರಣಿಗಳ ಭೇಟಿ, ಮಾತುಕತೆ ತಮಗೆ ಹೊಸ ಉತ್ಸಾಹ ತುಂಬುತ್ತಿದೆ ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ಜಮೀನಿಗಾಗಿ ಹುಡುಕಾಟ ನಡೆಸಿದ್ದಾರೆ ನಿಖಿಲ್ ಕುಮಾರಸ್ವಾಮಿ!

ನಿಖಿಲ್ರನ್ನು ಹೊಗಳಿದ್ದ ಎಸ್.ಎಂ.ಕೃಷ್ಣ
ಇತ್ತೀಚೆಗಷ್ಟೆ ನಿಖಿಲ್ ಕುಮಾರಸ್ವಾಮಿ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರನ್ನು ಭೇಟಿ ಆಗಿದ್ದರು. ಕೆಲವು ಜೆಡಿಎಸ್ ಮುಖಂಡರು, ಕಾರ್ಯಕರ್ತರೊಂದಿಗೆ ಸಭೆಗಳನ್ನು ನಡೆಸಿದ್ದರು. ಎಸ್.ಎಂ.ಕೃಷ್ಣ ಅವರು ನಿಖಿಲ್ ಅವರನ್ನು ಹೊಗಳಿ ನುಡಿದಿದ್ದನ್ನು ಇಲ್ಲಿ ಸ್ಮರಿಸಬಹುದು.

ಸೋಲು ಸಾಕಷ್ಟು ಬದಲಾಯಿಸಿದೆ ಎಂದಿದ್ದ ನಿಖಿಲ್
ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭೆ ಚುನಾವಣೆಯ ಸೋಲು ತಮಗೆ ಅತ್ಯುತ್ತಮ ಪಾಠವನ್ನು ಕಲಿಸಿದೆ ಎಂದು ಇತ್ತೀಚೆಗಷ್ಟೆ ಕಾರ್ಯಕರ್ತರ ಜೊತೆಗಿನ ಸಭೆಯಲ್ಲಿ ಹೇಳಿದ್ದರು, ಚುನಾವಣೆಗೆ ಮೊದಲು ಮತ್ತು ನಂತರದಲ್ಲಿ ತಾವು ಸಾಕಷ್ಟು ಬದಲಾಗಿ, ಪಕ್ವವಾಗಿರುವುದಾಗಿಯೂ ಹೇಳಿದ್ದರು.