ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಂತಮೂರ್ತಿ ನೇತೃತ್ವದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ

|
Google Oneindia Kannada News

U.R. Ananthamurthy
ಬೆಂಗಳೂರು, ಅ,23 : 2013ರ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಅಂತಿಮಗೊಳಿಸುವುದು ಕಗ್ಗಂಟಾಗಿ ಪರಿಣಮಿಸಿದೆ. ಆದ್ದರಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸರ್ಕಾರ ಸೋಮವಾರ ನೂತನ ಸಮಿತಿ ರಚಿಸಿ, ಪ್ರಶಸ್ತಿ ಪಟ್ಟಿ ಅಂತಿಮಗೊಳಿಸುವ ಹೊಣೆಯನ್ನು ನೀಡಿದೆ.

ಡಾ.ಯು.ಆರ್.ಅನಂತಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸರ್ಕಾರ ರಚಿಸಿರುವ ಸಮಿತಿಯಲ್ಲಿ ಒಂಭತ್ತು ಸದಸ್ಯರಿದ್ದು, ಗುರುವಾರ ಸಮಿತಿ ಮೊದಲ ಬಾರಿಗೆ ಸಭೆ ನಡೆಸಲಿದೆ. ಈ ಸಮಿತಿಯು ಪ್ರಶಸ್ತಿ ಪಟ್ಟಿಯನ್ನು ಅಂತಿಮಗೊಳಿಸಿ ಸಿಎಂ ಸಿದ್ದರಾಮಯ್ಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರಿಗೆ ನೀಡಲಿದೆ. ನಂತರ ಪ್ರಶಸ್ತಿ ವಿಜೇತರ ಪಟ್ಟಿಬಿಡುಗಡೆಯಾಗಲಿದೆ.

ಸೆ.26 ರಂದು ಸಿಎಂ ಸಿದ್ದರಾಮಯ್ಯ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ರಚಿಸಿದ್ದರು. ಸ್ವತಃ ಸಿದ್ದರಾಮಯ್ಯ ಅಧ್ಯಕ್ಷರಾಗಿದ್ದ ಸಮಿತಿಯಲ್ಲಿ ಸಚಿವರಾದ ವಿ.ಶ್ರೀನಿವಾಸಪ್ರಸಾದ್, ಎಚ್‌.ಕೆ. ಪಾಟೀಲ್, ಕೆ.ಜೆ.ಜಾರ್ಜ್‌, ಉಮಾಶ್ರೀ, ಎಚ್‌.ಸಿ.ಮಹದೇವಪ್ಪ, ಅವರು ಸ್ಥಾನ ಪಡೆದಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ, ಜಾನಪದ ಅಕಾಡೆಮಿ, ಯಕ್ಷಗಾನ ಅಕಾಡೆಮಿ, ಶಿಲ್ಪಕಲೆ, ಲಲಿತಕಲಾ ಅಕಾಡೆಮಿಗಳ ಅಧ್ಯಕ್ಷರು ಸಮಿತಿಯ ಸದಸ್ಯರಾಗಿದ್ದರು.

ಆದರೆ, ಈ ಸಮಿತಿ ರಾಜ್ಯೋತ್ಸವ ಪ್ರಶಸ್ತಿ ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಸೋಮವಾರ ಸಿಎಂ ಸಿದ್ದರಾಮಯ್ಯ ಯು.ಆರ್.ಅನಂತಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನೂತನ ಸಮಿತಿ ರಚಿಸಿದ್ದಾರೆ. ನವೆಂಬರ್ ತಿಂಗಳು ಆರಂಭವಾಗುವುದಕ್ಕೆ ಕೆಲವು ದಿನಗಳಿ ಮಾತ್ರ ಬಾಕಿ ಉಳಿದಿದ್ದು ಸಮಿತಿ ತಕ್ಷಣ ಸಭೆ ಸೇರಿ, ಪ್ರಶಸ್ತಿ ಪಟ್ಟಿಯನ್ನು ಅಂತಿಮಗೊಳಿಸಬೇಕಾಗಿದೆ.

ಸಮಿತಿಯ ಸದಸ್ಯರು : ಯು.ಆರ್.ಅನಂತಮೂರ್ತಿ ಅಧ್ಯಕ್ಷತೆಯಲ್ಲಿ ಸುಕನ್ಯಾ ಮಾರುತಿ, ಕಲಾವಿದ ವಿ.ಜೆ.ಅಂದಾನಿ, ಸಾಹಿತಿ ಕೆ.ಮರಳಸಿದ್ಧಪ್ಪ, ಕಾ.ತ.ಚಿಕ್ಕಣ್ಣ, ಹಿ.ಶಿ.ರಾಮಚಂದ್ರೇಗೌಡ, ಮತ್ತು ಕೃಷಿ ವಿಜ್ಞಾನಿ ಬಿಸಿಲಯ್ಯ ಸದಸ್ಯರಾಗಿದ್ದಾರೆ. ಗುರುವಾರ ಸಮಿತಿ ತನ್ನ ಮೊದಲ ಸಭೆ ನಡೆಸಲಿದ್ದು, ಪ್ರಶಸ್ತಿಗಾಗಿ ಬಂದ ಅರ್ಜಿಗಳನ್ನು ಪರಿಶೀಲನೆ ನಡೆಸಲಿದೆ.

ಅರ್ಜಿಗಳ ಕಥೆ ಏನು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸುಮಾರು ಸಾವಿರ ಅರ್ಜಿಗಳು ರಾಜ್ಯೋತ್ಸವ ಪ್ರಶಸ್ತಿಗಾಗಿ ಬಂದಿವೆ. ಮುಖ್ಯಮಂತ್ರಿ ಕಚೇರಿಯಲ್ಲಿ ಎಷ್ಟು ಅರ್ಜಿಗಳಿವೆ ಎಂದು ತಿಳಿದಿಲ್ಲ. ಎಲ್ಲಾ ಅರ್ಜಿಗಳನ್ನು ಗುರುವಾರ ನಡೆಯಲಿರುವ ಆಯ್ಕೆ ಸಮಿತಿಯ ಮುಂದೆ ಇಡಲಾಗುತ್ತದೆ. ಸುಮಾರು ಎರಡು ಸಾವಿರ ಅರ್ಜಿಗಳ ಪೈಕಿ 50 ಜನರನ್ನು ಸಮಿತಿ ಆಯ್ಕೆ ಮಾಡಬೇಕಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ 50 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು. ನಂತರ ಜಗದೀಶ್ ಶೆಟ್ಟರ್ ಸರ್ಕಾರದಲ್ಲಿ ಪ್ರಶಸ್ತಿ ಪಟ್ಟಿ 50ರ ಗಡಿದಾಟಿತ್ತು. ಸದ್ಯ ಸಿಎಂ ಸಿದ್ದರಾಮಯ್ಯ ಎಷ್ಟು ಸಾಧಕರಿಗೆ ಪ್ರಶಸ್ತಿ ನೀಡುತ್ತಾರೆ ಎಂದು ಕಾದು ನೋಡಬೇಕು.

English summary
Jnanpith awardee Dr. U.R. Ananthamurthy has been selected by Karnataka govt to head the new committee to finalize the list of Kannada Rajyotsava awardees. The new committee has been formed as the old one headed by CM Siddaramaiah could not finalize the list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X