ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೇತಾಜಿ ಹುಟ್ಟುಹಬ್ಬದಂದು ಮಕ್ಕಳಿಗಾಗಿ ಉಚಿತ ಇ-ಲೈಬ್ರರಿ

By Prasad
|
Google Oneindia Kannada News

ಬೆಂಗಳೂರು, ಜ. 22 : ಶಾಲೆ ಮಕ್ಕಳಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದ್ದರೂ ಎಲ್ಲೋ ಕೆಲವೊಂದು ಕಡೆಯಲ್ಲಿ ಕೊರತೆಗಳು ಉಳಿದೇ ಇವೆ. ಆಧುನಿಕ ಶಿಕ್ಷಣಕ್ಕೆ ಅಗತ್ಯವಾದ ಮಾಹಿತಿ ಕಣಜ ಅವುಗಳಲ್ಲಿ ಒಂದು.

ವಿದ್ಯಾರ್ಥಿಗಳಿಗೆ ಮಾಹಿತಿಯ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಬೆಂಗಳೂರಿನ ರಾಜರಾಜೇಶ್ವರಿನಗರದ ನೇತಾಜಿ ಸುಭಾಶ್‌ಚಂದ್ರ ಬೋಸ್ ಸಂಶೋಧನಾ ಮತ್ತು ಬಹು ಅಭಿವೃದ್ಧಿ ಟ್ರಸ್ಟ್ ಇ-ಲೈಬ್ರರಿ ಎಂಬ ಹೊಸ ಪರಿಕಲ್ಪನೆಯೊಂದನ್ನು ಆರಂಭಿಸುತ್ತಿದ್ದು, ಇದೇ 23ರಂದು ಸಂಜೆ 5ಕ್ಕೆ ರಾಜರಾಜೇಶ್ವರಿನಗರದ ಸುಭಾಷ್ ಭವನದಲ್ಲಿ ನೇತಾಜಿ ಗ್ರಂಥಾಲಯ ಉದ್ಘಾಟನೆಯೊಂದಿಗೆ ಈ ಆಧುನಿಕ ಮಾಹಿತಿ ಕಣಜ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ಈ ಗ್ರಂಥಾಲಯದಲ್ಲಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಲಿದಾನಗೊಂಡ ದೇಶಭಕ್ತದ ಜೀವನಚರಿತ್ರೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ವಿವಿಧ ಸಾಹಿತಿಗಳ, ವಿವಿಧ ವಿಷಯಗಳ ಮೇಲೆ 5 ಸಾವಿರಕ್ಕೂ ಅಧಿಕ ಪುಸ್ತಕಗಳೂ ಇಲ್ಲಿವೆ. ಉಳಿದಂತೆ ಅನುದಿನದ ಪತ್ರಿಕೆಗಳು, ಮ್ಯಾಗಜೀನ್‌ಗಳೂ ಲಭ್ಯ. ಅದಕ್ಕಿಂತಲೂ ಮಿಗಿಲಾಗಿ ಜಗತ್ತಿನ ಯಾವುದೇ ಮಾಹಿತಿ ಬೇಕಿದ್ದರೂ, ಯಾವುದೇ ಪುಸ್ತಕ ಬೇಕಿದ್ದರೂ, ಅದನ್ನೂ ಒದಗಿಸುವ ವಿದ್ಯುನ್ಮಾನ ಗ್ರಂಥಾಲಯ (ಇ-ಲೈಬ್ರರಿ) ಸೌಲಭ್ಯ ಇಲ್ಲಿದೆ.

Netaji birthday : Free E-library for govt school students

ಉಚಿತ ಸೇವೆ : ಶಾಲಾ ವಿದ್ಯಾರ್ಥಿಗಳು ಇಲ್ಲಿಗೆ ಬಂದರೆ ಅವರಿಗೆ ಬೇಕಾದ ವಿಷಯವನ್ನು ಉಚಿತವಾಗಿ ಕಂಪ್ಯೂಟರ್‌ನಿಂದ ಡೌನ್‌ಲೋಡ್ ಮಾಡಿ ಪ್ರಿಂಟೌಟ್ ತೆಗೆಸಿಕೊಡುವ ಸೌಲಭ್ಯವನ್ನು ಇಲ್ಲಿ ಮಾಡಲಾಗಿದೆ. ಬೆಂಗಳೂರು ಮಹಾನಗರದಲ್ಲಿ ಇದೇ ಪ್ರಥಮ ಬಾರಿಗೆ ಇಂತಹ ವಿಶಿಷ್ಟ ಪರಿಕಲ್ಪನೆ ರೂಪುಗೊಳ್ಳುತ್ತಿದೆ. ಆ ಮೂಲಕ ಮಕ್ಕಳಿಗೆ ನಿಜವಾದ ಅರ್ಥದಲ್ಲಿ ಜ್ಞಾನ ಹೆಚ್ಚಿಸುವ ಕಾರ್ಯವನ್ನು ಟ್ರಸ್ಟ್ ಮಾಡುತ್ತಿದೆ ಎನ್ನುತ್ತಾರೆ ಈ ಯೋಜನೆಗಳ ರೂವಾರಿ ಎಂ.ರಾಜ್‌ಕುಮಾರ್ ಅವರು.

ತಮಗೆ ಏನು ಮಾಹಿತಿ ಬೇಕು ಎಂದು ಸರ್ಕಾರಿ ಶಾಲೆ ವಿದ್ಯಾರ್ಥಿಗಳು ತಮ್ಮ ಶಾಲೆ ಮುಖ್ಯಸ್ಥರ ಪತ್ರದೊಂದಿಗೆ ಇಲ್ಲಿಗೆ ಬಂದರೆ ಉಚಿತವಾಗಿಯೇ ಅಗತ್ಯದ ಮಾಹಿತಿಯನ್ನು ಒದಗಿಸಲಾಗುತ್ತದೆ. ಕಪ್ಪು ಬಿಳುಪಿನ ಪ್ರಿಂಟೌಟ್ ಜತೆಗೆ, ಅಗತ್ಯ ಇದ್ದಾಗ ಕಲರ್ ಪ್ರಿಂಟ್ ಸೌಲಭ್ಯವೂ ಇಲ್ಲುಂಟು. ಹೀಗಾಗಿ ಯಾವುದೇ ಹೊಸ ಪ್ರಾಜೆಕ್ಟ್ ವರ್ಕ್ ಇದ್ದರೂ ಮಕ್ಕಳು ಸುಲಭವಾಗಿ ಇಲ್ಲಿಂದ ಮಾಹಿತಿ ಪಡೆದುಕೊಂಡು ತಮ್ಮ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಬಹುದು.

Netaji birthday : Free E-library for govt school students

ಶಿಕ್ಷಣ ಕ್ಷೇತ್ರದಲ್ಲಿ ಇದೊಂದು ಮಹತ್ವದ ಪ್ರಯತ್ನ ಎಂದೇ ಪರಿಗಣಿಸಲಾಗಿದ್ದು, ರಾಜರಾಜೇಶ್ವರಿ ನಗರದ ಮತ್ತು ಸುತ್ತಮುತ್ತಲಿನ ಎಲ್ಲ ಸರ್ಕಾರಿ, ಖಾಸಗಿ ಶಾಲೆ ಮಕ್ಕಳಿಗೆ ಇದು ಬಹಳ ಪ್ರಯೋಜನಕ್ಕೆ ಬರಲಿದೆ. ಆ ಮೂಲಕ ನೇತಾಜಿ ಗ್ರಂಥಾಲಯ ನಿಜವಾದ ಅರ್ಥದಲ್ಲಿ ಜ್ಞಾನ ಪ್ರಸಾರದ ಕಾರ್ಯವನ್ನು ನಡೆಸಲಿದೆ. ಶಾಲಾ ಮಕ್ಕಳಿಗೆ ಮಾತ್ರವಲ್ಲ, ಸಾರ್ವಜನಿಕರಿಗೆ ಸಹ ಅಗತ್ಯದ ಮಾಹಿತಿ ನೀಡುವ ಇ-ಲೈಬ್ರರಿ ಸೌಲಭ್ಯ ಇಲ್ಲಿದೆ. ಹೀಗಾಗಿ ರಾಜರಾಜೇಶ್ವರಿ ನಗರ ಮತ್ತು ಸುತ್ತಮುತ್ತಲಿನ ಜನರು, ಶಿಕ್ಷಕರೂ ಇದನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಇದೊಂದು ಮಹತ್ವದ ಗ್ರಂಥಾಲಯವಾಗಿ ಮುಂದಿನ ದಿನಗಳಲ್ಲಿ ಗುರುತಿಸಿಕೊಳ್ಳಲಿದೆ.

ಕಾರ್ಯಕ್ರಮ : ಉದ್ಘಾಟನೆ ಜ.23 ಶುಕ್ರವಾರದಂದು ಸಂಜೆ 5ಕ್ಕೆ ನೇತಾಜಿ ಸುಭಾಶ್‌ಚಂದ್ರ ಬೋಸ್ ಅವರ 118ನೇ ಜನ್ಮದಿನಾಚರಣೆ ಮತ್ತು ನೇತಾಜಿ ಗ್ರಂಥಾಲಯದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಕೆಪಿಸಿಸಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಜಿ.ಪರಮೇಶ್ವರ್ ಗ್ರಂಥಾಲಯವನ್ನು ಉದ್ಘಾಟಿಸುವರು. ಟ್ರಸ್ಟ್‌ನ ಅಧ್ಯಕ್ಷ ಜಿ.ಆರ್.ಶಿವಶಂಕರ್ ಅಧ್ಯಕ್ಷತೆ ವಹಿಸುವರು. ಕ್ರೀಡಾ ಸಚಿವ ಅಭಯಚಂದ್ರ ಜೈನ್, ಶಾಸಕ ರಮೇಶ್ ಕುಮಾರ್, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ, ಹಿರಿಯ ಕವಿ ಡಾ.ಸಿದ್ಧಲಿಂಗಯ್ಯ ಅವರು ಮುಖ್ಯ ಅತಿಥಿಯಾಗಿರುವರು.

ಇದೇ ಸಂದರ್ಭದಲ್ಲಿ ನಾಲ್ವರು ಗಣ್ಯರಾದ ಡಾ.ಪಿ.ಸದಾನಂದ ಮಯ್ಯ, ಪಂಡಿತ್ ಜಿ.ಜಿ.ಜೋಶಿ, ಎಸ್.ವಿ.ಟಿ.ಗುಪ್ತ ಮತ್ತು ಸಿ.ಪಿ.ಉಮೇಶ್ ಅವರಿಗೆ ನೇತಾಜಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪಂಡಿತ್ ಜಿ.ಜಿ.ಜೋಶಿ ಅವರ ಸಂಗೀತ ಕಛೇರಿ ಹಾಗೂ ಲಲಿತಾ ಹೆಗಡೆ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸ್ಥಳ: ಸುಭಾಷ್ ಭವನ, ನಂ. 9, 9ನೇ ಮುಖ್ಯರಸ್ತೆ, ಐಡಿಯಲ್ ಹೋಮ್ಸ್, ರಾಜರಾಜೇಶ್ವರಿ ನಗರ, ಬೆಂಗಳೂರು-98. ಗ್ರಂಥಾಲಯ ಕುರಿತ ಹೆಚ್ಚಿನ ಮಾಹಿತಿಗೆ ರಾಜ್‌ಕುಮಾರ್ ಅವರನ್ನು 99000 00126 ಸಂಖ್ಯೆಗೆ ಸಂಪರ್ಕಿಸಬಹುದು.

English summary
Netaji Subhash Chandra Bose research and development trust at Rajarajeshwari Nagar in Bengaluru is starting free e-library for government school students and teachers on 118th birthday of Netaji on 23rd January.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X