ಸರ್ಕಾರಿ ಶಾಲೆಗಳ ಬಗ್ಗೆ ನಿರ್ಲಕ್ಷ್ಯ: ಬೆಂಗಳೂರಲ್ಲಿ ಎಎಪಿ ಪ್ರತಿಭಟನೆ
ಬೆಂಗಳೂರು, ಮೇ 20: ಕಳೆದ ಏಳೂವರೆ ವರ್ಷಗಳಿಂದ ಮುಚ್ಚಲ್ಪಟ್ಟಿರುವ ಬೆಂಗಳೂರಿನ ಗವಿಪುರಂ ಗುಟ್ಟಳ್ಳಿಯ ಕೆಂಪೇಗೌಡ ಮುಖ್ಯರಸ್ತೆಯ ಸರ್ಕಾರಿ ಬಾಲಕರ ಪ್ರೌಢಶಾಲೆಯನ್ನು ತೆರೆದು ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿಸಬೇಕೆಂದು ಆಗ್ರಹಿಸಿ ಎಎಪಿ ಪಕ್ಷದ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಭಾಸ್ಕರ್ ರಾವ್ ನೇತೃತ್ವದಲ್ಲಿ ಎಎಪಿ ಬೆಂಗಳೂರಿನ ಯುವ ಘಟಕ ಅಧ್ಯಕ್ಷ ಪ್ರಕಾಶ್ ಸೇರಿದಂತೆ ಹಲವಾರು ಕಾರ್ಯಕರ್ತರು ಶಾಲೆಯ ಬೀಗ ತೆಗೆಯಿಸಿ ಶಾಲೆ ಕಟ್ಟಡವನ್ನು ಪರಿಶೀಲನೆ ನಡೆಸಿದರು. ಸರ್ಕಾರಿ ಶಾಲೆ ಉಳಿಸಿ, ಮಕ್ಕಳ ಭವಿಷ್ಯ ಉಳಿಸಿ, ಮಕ್ಕಳ ಭವಿಷ್ಯಕ್ಕಾಗಿ ನಮ್ಮ ಹೋರಾಟ ಎಂದರು.
ಕೇರಳದಲ್ಲಿ ಎಎಪಿ-ಟ್ವೆಂಟಿ20 ಮೈತ್ರಿ; ಉಚಿತ ವಿದ್ಯುತ್ ಭರವಸೆ
ಶಾಲಾ ಕಟ್ಟಡ ವೀಕ್ಷಣೆ ಮಾಡಿ ಮಾತನಾಡಿದ ಎಎಪಿ ಮುಖಂಡ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, "ಏಳುವರೆ ವರ್ಷಗಳಿಂದ ಈ ಶಾಲೆ ಮುಚ್ಚಿದೆ. ಇಂತಹ ಎಲ್ಲಾ ಸೌಲಭ್ಯವಿರುವ ಒಳ್ಳೆಯ ಕಟ್ಟಡವನ್ನು ಮುಚ್ಚಿರುವುದು ನಿಜಕ್ಕೂ ದುಃಖದ ವಿಚಾರ. ಇನ್ನೆರಡು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಈವರೆಗೂ ಜನರ ಕೈಗೆ ಸಿಗದ ಆಡಳಿತಾರೂಢ ಬಿಜೆಪಿ ನಾಯಕರು ಚುನಾವಣೆ ಸಮೀಪಿಸುತ್ತಿದ್ದಂತೆ ಮನೆ ಬಾಗಿಲಿಗೆ ಬರಲಿದ್ದಾರೆ. ಎಎಪಿ ಆಡಳಿತವಿರುವ ದೆಹಲಿಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯವಾಗಿರುವಾಗ, ಐಟಿ ಸಿಟಿ ಬೆಂಗಳೂರಿನಲ್ಲಿ ಏಕೆ ಸಾಧ್ಯವಾಗುವುದಿಲ್ಲ?" ಎಂದು ಪ್ರಶ್ನಿಸಿ ಎಂದರು.
ಬಜರಂಗದಳದಿಂದ ಶಸ್ತ್ರಾಸ್ತ್ರ ತರಬೇತಿ ನಡೆದಿಲ್ಲ: ಶಾಲೆ ಸ್ಪಷ್ಟನೆ
ಬಿಜೆಪಿ ನಿರ್ಲ್ಯಕ್ಷ ಕಾರಣ; ಎಎಪಿ ಬೆಂಗಳೂರು ಯುವ ಘಟಕದ ಅಧ್ಯಕ್ಷ ಪ್ರಕಾಶ್ ಎನ್. ಮಾತನಾಡಿ, "ಸ್ಥಳೀಯ ಬಿಜೆಪಿ ಶಾಸಕ ಉದಯ್ ಗರುಡಾಚಾರ್ರವರ ನಿರ್ಲಕ್ಷ್ಯದಿಂದಾಗಿ ಕ್ಷೇತ್ರದ ಸರ್ಕಾರಿ ಶಾಲೆಗಳು ಶೋಚನೀಯ ಸ್ಥಿತಿ ತಲುಪಿವೆ. ಕೇವಲ ಸುಂಕೇನಹಳ್ಳಿ ವಾರ್ಡ್ನಲ್ಲೇ ನಾಲ್ಕು ಸರ್ಕಾರಿ ಶಾಲೆಗಳ ಪೈಕಿ ಮೂರು ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿದ್ದು, ಉಳಿದಿರುವ ಇನ್ನೊಂದು ಶಾಲೆಯು ಮುಚ್ಚುವ ಹಂತದಲ್ಲಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಲಪಾಡಿ: ಭಾರಿ ಮಳೆಗೆ ಕುಸಿದ ಶಿಥಿಲಾವಸ್ಥೆಯ ಶಾಲೆ!
ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ, "ಇಂತಹ ಕಟ್ಟಡವನ್ನು ಬಿಬಿಎಂಪಿಯಾಗಲಿ , ಸರ್ಕಾರವಾಗಲಿ ಕಟ್ಟಲು ಸಾಧ್ಯವಿಲ್ಲ. ಇಂತಹ ಶಾಲೆಯನ್ನು 7 ವರ್ಷಗಳಿಂದ ಮುಚ್ಚಿದೆ ಎಂದರೆ ನಮಗೆ ಆಶ್ಚರ್ಯವಾಗುತ್ತಿದೆ. ಈ ವರ್ಷಗಳಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಆಡಳಿತ ನಡೆಸಿದ್ದು ಇಂತಹ ಶಾಲೆಗಳನ್ನು ತೆರೆಸುವ ಕಾರ್ಯ ಮಾಡಿಲ್ಲ. ಇಂತಹ ಒಳ್ಳೆಯ ಜಾಗದಲ್ಲಿ ಶಾಲೆಯನ್ನು ಮುಚ್ಚುವ ಮೂಲಕ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಸಿಗದಂತೆ ಮಾಡಿದ್ದಾರೆ" ಎಂದು ಆರೋಪಿಸಿದರು.

ಹಣದ ಕೊರತೆಯಿಲ್ಲ; "ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರಕ್ಕೆ ಹಣದ ಕೊರತೆಯಿಲ್ಲ. ಆದರೆ ಇಚ್ಛಾಶಕ್ತಿಯ ಕೊರತೆಯಿದೆ. ಎಲ್ಲೆಲ್ಲಿ ಭಾರೀ ಪ್ರಮಾಣದ ಅಕ್ರಮ ಮಾಡಲು ಸಾಧ್ಯವಿದೆಯೋ, ಅಲ್ಲಿ ಮಾತ್ರ ಬಿಜೆಪಿ ಸರ್ಕಾರವು ಹಣ ವಿನಿಯೋಗಿಸುತ್ತಿದೆ. ಭ್ರಷ್ಟ ಬಿಜೆಪಿ ಸರ್ಕಾರದ ಹಣದ ದಾಹದಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳು ಕೂಡ ದುಬಾರಿ ಬೆಲೆ ತೆತ್ತು ಖಾಸಗಿ ಶಾಲೆಗಳಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ" ಎಂದು ಗುಡುಗಿದರು.