ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೆಗೆಟಿವ್ ಪಬ್ಲಿಸಿಟಿ ಬಿಜೆಪಿ ಸೋಲಿಗೆ ಕಾರಣ: ಎಎಪಿ

By ಮಹೇಶ್ ಮಲ್ನಾಡ್
|
Google Oneindia Kannada News

ಬೆಂಗಳೂರು, ಫೆ.10: ಎಲ್ಲರ ನಿರೀಕ್ಷೆಗೂ ಮೀರಿ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ (ಎಎಪಿ) ಪ್ರಚಂಡ ಜಯಭೇರಿ ಬಾರಿಸಿದೆ.15 ವರ್ಷಗಳ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್, ಮೋದಿ ಅಲೆ ಲಾಭದೊಂದಿಗೆ ಕಣಕ್ಕಿಳಿದ ಬಿಜೆಪಿ ಮಕಾಡೆ ಮಲಗಿದೆ. ಎಎಪಿ ಈ ಗೆಲುವು ಇಡೀ ದೇಶಕ್ಕೆ ಹೊಸ ಹಾದಿ ತೋರಲಿದೆ ಎಂದು ಕರ್ನಾಟಕ ಎಎಪಿ ಘಟಕದ ವಕ್ತಾರ ಮಹಾಂತೇಶ್ ಅರಳಿ ಒನ್ ಇಂಡಿಯಾಕ್ಕೆ ಹೇಳಿದ್ದಾರೆ.

70 ಸದಸ್ಯ ಬಲದ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ಆಮ್ ಆದ್ಮಿ ಕಳೆದ 2013ರ ಚುನಾವಣೆಯಲ್ಲಿ 28 ಸ್ಥಾನ ಗಳಿಸಿತ್ತು, ಈ ಬಾರಿ 67ಕ್ಕೂ ಅಧಿಕ ಸ್ಥಾನ ಗಳಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. [ಚಿತ್ರಗಳಲ್ಲಿ: ನೆಲಕಚ್ಚಿದ ಕಮಲ, ಎಎಪಿಗೆ ಅಭೂತಪೂರ್ವ ಜಯ]

ಬೆಂಗಳೂರಿನ ಜೈನ್ ಭವನದಲ್ಲಿ ಚುನಾವಣಾ ಫಲಿತಾಂಶ ಲೈವ್ ಕವರೇಜ್ ವೀಕ್ಷಿಸಿದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲು ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು ಆಗಮಿಸಿದ್ದು ವಿಶೇಷವಾಗಿತ್ತು. ದೆಹಲಿಯಲ್ಲಿ ಎಎಪಿ ಅದ್ಭುತ ಜಯದಿಂದ ಉತ್ತೇಜನಗೊಂಡಿರುವ ಬೆಂಗಳೂರು ಘಟಕ ಪಾದಯಾತ್ರೆ ಹಮ್ಮಿಕೊಂಡಿದೆ. ಇದಕ್ಕಾಗಿ ಪೊಲೀಸರ ಅನುಮತಿಯನ್ನು ಪಡೆದುಕೊಂಡಿದೆ ಎಂದು ಮಹಾಂತೇಶ್ ಹೇಳಿದರು. [ಚುನಾವಣಾ ಫಲಿತಾಂಶ : ಯಾರು, ಏನು ಹೇಳಿದರು?]

ಎಎಪಿ ಗೆಲುವಿಗೆ ಏನು ಕಾರಣ? ದೆಹಲಿ ಜನತೆ ಕೇಜ್ರಿವಾಲ್ ರನ್ನು ಮತ್ತೆ ಆಯ್ಕೆ ಮಾಡಿದ್ದೇಕೆ? ಕಿರಣ್ ಬೇಡಿ ಬಿಜೆಪಿಗೆ ಹೋಗಿದ್ದೇ ಸೋಲಿಗೆ ಕಾರಣವಾಯ್ತೆ? ದೆಹಲಿ ಗೆಲುವು ಕರ್ನಾಟಕಕ್ಕೆ ಏನು ಲಾಭ? ಎಂಬ ಪ್ರಶ್ನೆಗಳಿಗೆ ಮಹಾಂತೇಶ್ ಅರಳಿ ಉತ್ತರಿಸಿದ್ದಾರೆ.

ದೆಹಲಿ ಗೆಲುವು ಕರ್ನಾಟಕಕ್ಕೆ ಏನು ಲಾಭ?

ದೆಹಲಿ ಗೆಲುವು ಕರ್ನಾಟಕಕ್ಕೆ ಏನು ಲಾಭ?

ದೆಹಲಿಯಲ್ಲಿ ಗೆಲುವು ಕರ್ನಾಟಕಕ್ಕೆ ಅಷ್ಟೇ ಅಲ್ಲ, ಇಡೀ ದೇಶಕ್ಕೆ ಹೊಸ ಹಾದಿ, ಹೊಸ ಸಂದೇಶ ತೋರಿಸಲಿದೆ. ಲೋಕಸಭೆ, ಅಸೆಂಬ್ಲಿ ಚುನಾವಣೆ ವೇಳೆ ಮಾಡಿದ ಮೋಡಿ ಭಾಷಣದಿಂದ ಹೊಟ್ಟೆ ತುಂಬಲ್ಲ ಎಂಬುದು ಜನರಿಗೆ ಅರ್ಥವಾಗಿದೆ.

ಬರೀ ಮಾತಿನಿಂದ ಪ್ರಯೋಜನವಿಲ್ಲ,ಇಲ್ಲಿ ಪ್ರಾಕ್ಟಿಕಲ್ ಆಗಿ ಇರುವವರು ಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದರಿಂದ ಇತರೆ ರಾಜ್ಯಗಳಲ್ಲೂ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿಯಲಿವೆ.

ದೆಹಲಿ ಜನತೆ ಕೇಜ್ರಿವಾಲ್ ರನ್ನು ಮತ್ತೆ ಆಯ್ಕೆ ಮಾಡಿದ್ದೇಕೆ?

ದೆಹಲಿ ಜನತೆ ಕೇಜ್ರಿವಾಲ್ ರನ್ನು ಮತ್ತೆ ಆಯ್ಕೆ ಮಾಡಿದ್ದೇಕೆ?

ಅರವಿಂದ್ ಕೇಜ್ರಿವಾಲ್ ಅವರು 49 ದಿನ ಸಿಎಂ ಆಗಿ ಅಧಿಕಾರ ನಡೆಸಿ ರಾಜೀನಾಮೆ ನೀಡಿದ್ದೇಕೆ ಎಂಬುದು ಜನರಿಗೆ ಅರ್ಥವಾಗಿದೆ. ಅವರ ಮೇಲೆ ಜನರಿಗೆ ಸಿಟ್ಟಿತ್ತು. ಅದರೆ, ಅರವಿಂದ್ ನಿಷ್ಠಾವಂತ ಜನಪ್ರತಿನಿಧಿ, ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡರು. ಅವರೇನು ಅಪರಾಧ ಮಾಡಿಲ್ಲ. ಜನ ಅವರನ್ನು ಕ್ಷಮಿಸಿದ್ದಾರೆ ಎಂಬುದಕ್ಕೆ ಈ ಗೆಲುವೇ ಸಾಕ್ಷಿ.

ಜನ ಲೋಕಪಾಲ್ ಮಸೂದೆ ಮಂಡನೆ ಮಾಡುತ್ತೀರಾ?

ಜನ ಲೋಕಪಾಲ್ ಮಸೂದೆ ಮಂಡನೆ ಮಾಡುತ್ತೀರಾ?

ಅಧಿಕಾರಕ್ಕೆ ಬಂದ 15 ದಿನದೊಳಗೆ ಜನ ಲೋಕಪಾಲ್ ಮಸೂದೆ ಮಂಡನೆ ಮಾಡುವ ಬಯಕೆ ನಮಗಿದೆ. ಅದರೆ, ಅದು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಮಾಡಿದ ತಪ್ಪು ಮಾಡುವುದಿಲ್ಲ, ಜನರ ಅಭಿಮತದಂತೆ ಚರ್ಚೆ ನಡೆಸಿ ಬಹು ನಿರೀಕ್ಷಿತ ಜನೋಪಯೋಗಿ ಜನ ಲೋಕಪಾಲ್ ಮಸೂದೆ ಮಂಡನೆ ಮಾಡುತ್ತೇವೆ.

ಕಿರಣ್ ಬೇಡಿ ಸೇರ್ಪಡೆ ಬಿಜೆಪಿಗೆ ಮುಳುವಾಯಿತೇ?

ಕಿರಣ್ ಬೇಡಿ ಸೇರ್ಪಡೆ ಬಿಜೆಪಿಗೆ ಮುಳುವಾಯಿತೇ?

ನಿಜ, ಭ್ರಷ್ಟಾಚಾರ ವಿರುದ್ಧ ಹೋರಾಡುತ್ತಿರುವ ಕಿರಣ್ ಬೇಡಿ ಅವರು ಸಮರ್ಥ ಅಭ್ಯರ್ಥಿ ಯಾಗಿದ್ದರು. ಅದರೆ, ಪ್ಯಾರಚೂಟಿನಿಂದ ಧರೆಗಿಳಿಸಿ ಸಿಎಂ ಸೀಟಿಗೇರಿಸಲು ಬಿಜೆಪಿ ಮಾಡಿದ ತಂತ್ರ ಜನರಿಗೆ ಹಿಡಿಸಲಿಲ್ಲ. ಕಿರಣ್ ಬೇಡಿ ಸೇರ್ಪಡೆಯಿಂದ ಬಿಜೆಪಿಯಲ್ಲಿ ಆಂತರಿಕ ಜಗಳ ಉಂಟಾಗಿದ್ದಂತೂ ನಿಜ. ಅದರ ಪರಿಣಾಮ, ಫಲಿತಾಂಶ ಈಗ ಜನರ ಮುಂದಿದೆ.

ಎಎಪಿ ವಿರುದ್ಧದ ನೆಗಟಿವ್ ಪಬ್ಲಿಸಿಟಿ ಮುಳುವಾಯಿತು

ಎಎಪಿ ವಿರುದ್ಧದ ನೆಗಟಿವ್ ಪಬ್ಲಿಸಿಟಿ ಮುಳುವಾಯಿತು

ಆಮ್ ಅದ್ಮಿ ಪಕ್ಷದ ವಿರುದ್ಧ ಬಿಜೆಪಿ ನಡೆಸಿದ ನೆಗಟಿವ್ ಪಬ್ಲಿಸಿಟಿ ಅವರಿಗೆ ಹೊಡೆತ ಕೊಟ್ಟಿದೆ. ಅಪಪ್ರಚಾರ ಮಾಡಿದ್ದಲ್ಲದೆ, ದೇಣಿಗೆ ಸಂಗ್ರಹ ವಿಷಯದಲ್ಲಿ ಬಿಜೆಪಿ ನಡೆದುಕೊಂಡ ರೀತಿ ಜನರಿಗೆ ಅಸಹ್ಯ ಹುಟ್ಟಿಸಿದೆ. ಕೇಜ್ರಿವಾಲ್ ರನ್ನು ಮಂಗ, ನಕ್ಸಲ್ ಎಂದೆಲ್ಲ ಕರೆದರು, ಮಫ್ಲರ್ ಮ್ಯಾನ್ ಎಂದರು. ಅವರಿಗೆ ನೀಡಿದ ಬೈಗುಳಕ್ಕೆ ಜನರೇ ಉತ್ತರಿಸಿದ್ದಾರೆ.

ಬಿಬಿಎಂಪಿ ಎಲೆಕ್ಷನ್ ಗೆ ಎಎಪಿ ಸ್ಪರ್ಧಿಸುತ್ತಾ?

ಬಿಬಿಎಂಪಿ ಎಲೆಕ್ಷನ್ ಗೆ ಎಎಪಿ ಸ್ಪರ್ಧಿಸುತ್ತಾ?

ಬಿಬಿಎಂಪಿಯಲ್ಲಿ ಎಎಪಿ ಸ್ಪರ್ಧಿಸುವ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಆದರೆ, ಪ್ರತಿ ವಾರ್ಡಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಜನ ಸ್ವರಾಜ್ ಯೋಜನೆ, ದೆಹಲಿಗೆ ರೂಪಿಸುವ ಯೋಜನೆಗಳನ್ನು ಇಲ್ಲೂ ಅಳವಡಿಸಲು ಯತ್ನಿಸಲಾಗುವುದು. ಬೆಂಗಳೂರಿನ ಸಮಸ್ಯೆಗಳನ್ನು ಈಗಾಗಲೇ ಪಟ್ಟಿ ಮಾಡಲಾಗಿದೆ. ಚುನಾವಣೆ ಸ್ಪರ್ಧೆಗಿಳಿದಿದ್ದರೂ ಜನರ ಜೊತೆ ಬೆರೆತು ಸ್ಪಂದಿಸುತ್ತೇವೆ.

English summary
Aam Aadmi Party, Bengaluru has slipped into jubilation mode after the Delhi Assembly Election results hinted at a landslide victory of the party. Karnataka AAP Unit is found distributing sweets and celebrating the victory in the state. Negative Publicity reason behind BJP defeat said Mahantesh Arali to Oneindia.com.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X