NCB ಕಾರ್ಯಾಚರಣೆ: ಸುಡೋಫೆಡ್ರಿನ್ ಡ್ರಗ್ ಜಾಲ ಪತ್ತೆ !
ಬೆಂಗಳೂರು, ನವೆಂಬರ್ 24: ಸುಡೋಫೆಡ್ರಿನ್ ಮಾದಕ ವಸ್ತು ಮಾತ್ರೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಕ್ರಮ ಸಾಗಣೆ ಮಾಡಿ ಮಾರಾಟ ಮಾಡುತ್ತಿದ್ದ ಡ್ರಗ್ ಜಾಲವನ್ನು ಬೆಂಗಳೂರು ಘಟಕದ ಎನ್ ಸಿಬಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿ 20 ಲಕ್ಷ ರೂ. ಮೌಲ್ಯದ 6870 ಕೆ.ಜಿ. ಸುಡೋ ಫೆಡ್ರಿನ್ ಮಾತ್ರೆ ವಶಪಡಿಸಿಕೊಂಡಿದ್ದಾರೆ.
ನೈಜೀರಿಯಾ ಮೂಲದ ಒನವೋ, ಸಿ. ಓಕ್ವೊರ್, ಡಿ. ಸುಕ್ಲಾ ಹಾಗೂ ಮರಿಯಾ ಬಂಧಿತರು. ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧಾರದ ಮೇಲೆ ಬೆಂಗಳೂರಿನ ಎನ್ ಸಿಬಿ ಅಧಿಕಾರಿಗಳು ಬೆಂಗಳೂರಿನ ಅಮೃತಹಳ್ಳಿಯಿಂದ ತೆರಳಿದ್ದ ಎರಡು ಕೊರಿಯರ್ ಬೆನ್ನು ಬಿದ್ದಿದ್ದರು. ಪರಿಶೀಲಿಸಿದಾಗ ನಿಷೇಧಿತ ಸುಡೋಫೆಡ್ರಿನ್ 6870 ಕೆಜಿ ತೂಕದ ಮಾದಕ ವಸ್ತುಗಳು ಪತ್ತೆಯಾಗಿದ್ದವು. ಇದರ ಮಾಹಿತಿ ಆಧರಿಸಿ ಪರಿಶೀಲಿಸಿದಾಗ ಬೆಂಗಳೂರಿನ ಮರಿಯಾ ಮತ್ತು ಡಿ. ಸುಕ್ಲಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಷೇಧಿತ ಸುಡೋಫೆಡ್ರಿನ್ ಸಾಗಿಸಲು ಯತ್ನಿಸಿದ್ದ ಸಂಗತಿ ಬೆಳಕಿಗೆ ಬಂದಿದೆ. ಮರಿಯಾ ಮತ್ತು ಸುಕ್ಲಾ ನೀಡಿದ ಮಾಹಿತಿ ಮೇರೆಗೆ ದಕ್ಷಿಣ ಆಫ್ರಿಕಾ ಮೂಲದ ಪ್ರಮುಖ ಕಿಂಗ್ ಪಿನ್ ಗಳಾದ ಒನವೋ ಮತ್ತು ಸಿ. ಓಕ್ವರ್ ಅವರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಸುಡೋ ಫೆಡ್ರಿನ್ ಏನು ? : ಸುಡೋ ಫೆಡ್ರಿನ್ ಇದೊಂದು ಮದ್ದು. ಮಾನಸಿಕ ಸ್ಥಿತಿ ಹದಗೆಟ್ಟ ಸ್ಥಿತಿಯಲ್ಲಿ ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳುವ ಔಷಧಿ. ಇದು ಮಾನಸಿಕ ಸ್ಥಿತಿ ಹದಗೆಟ್ಟಾಗ ಶಮನ ಕೊಡಬಲ್ಲದು. ಅದರಲ್ಲೂ, ಭ್ರಮೆ, ವಿಭ್ರಮೆ, ಹುಸಿ ದೃಶ್ಯಗಳು ಹೆಚ್ಚಾಗಿ ಇರುವಂತಹ ರೋಗಿಗಳಿಗೆ ನೀಡುವ ಮದ್ದು. ಆದರೆ ಇದನ್ನು ಮಾದಕ ವಸ್ತುಗಳನ್ನಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಮನೋವೈದ್ಯ ಡಾ. ಎ. ಶ್ರೀಧರ್ ತಿಳಿಸಿದ್ದಾರೆ. ಸುಡೋ ಫೇಡ್ರಿನ್ ಸೇವನೆಯಿಂದ ಖುಷಿ ಸಿಗುತ್ತದೆ. ಉಲ್ಲಾಸ ಹೆಚ್ಚಾಗುತ್ತದೆ. ಮೆದುಳಿನಲ್ಲಿ ಹೊಸ ಚೈತನ್ಯ ಹೆಚ್ಚಿಸುವ ಗ್ರಂಥಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಮಾದಕ ವ್ಯಸನಿಗಳು ಇದನ್ನು ಹೆಚ್ಚಾಗಿ ಸೇವಿಸುತ್ತಿದ್ದಾರೆ. ಇದೊಂದು ಅಪಾಯಕಾರಿ ಬೆಳವಣಿಗೆ. ರೋಗ ನಿಯಂತ್ರಕ ರಾಸಾಯನಿಕ ವಸ್ತು ದುಶ್ಟಟ ವ್ಯಸನಿಗಳು ಇದರ ಮೊರೆ ಹೋಗುತ್ತಿರುವುದು ಅಪಾಯಕಾರಿ ಎಂದು ಡಾ. ಎ.ಶ್ರೀಧರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಸುಡೋ ಫೆಡ್ರಿನ್ ಉತ್ಪಾದಿಸಲಾಗುತ್ತದೆ. ರೋಗ ನಿರೋಧಕ ಔಷಧಿಯನ್ನಾಗಿ ಬರ್ಮಾ ಮತ್ತು ಇತರೆ ಕೆಲವು ರಾಷ್ಟ್ರಗಳಿಗೆ ಕಳುಹಿಸಲಾಗುತ್ತಿತ್ತು. ಇದರ ದುರುಪಯೋಗ ಹೆಚ್ಚಾಗಿದ್ದೇ ಭಾರತದಲ್ಲಿ ನಿಷೇಧ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಈ ರೋಗ ಸಮನ ವಸ್ತು ಮಾದಕ ವಸ್ತುವಾಗಿ ರೂಪಾಂತರಗೊಂಡು ವಿದೇಶಕ್ಕೆ ಅಕ್ರಮ ಸಾಗಣೆ ಮಾಡಲಾಗುತ್ತಿದೆ.