ನಾರಾಯಣ ಹೆಲ್ತ್ ಸಿಟಿಯಿಂದ ತುರ್ತು ಸ್ಪಂದನೆ ಸಂಖ್ಯೆಗೆ ಚಾಲನೆ
ಬೆಂಗಳೂರು, ಫೆಬ್ರವರಿ 24: ಸಂಪೂರ್ಣ ಸುಸಜ್ಜಿತ ಆ್ಯಂಬುಲೆನ್ಸ್ ಸೇವೆಯನ್ನು ಉಚಿತವಾಗಿ ಪಡೆಯಬಹುದು ಹಾಗೂ ನಗರದಾದ್ಯಂತ ಇದು ಸಕಾಲಿಕವಾಗಿ ತುರ್ತು ಆರೈಕೆ ಸೇವೆಯನ್ನು ಖಾತರಿಪಡಿಸುತ್ತದೆ.
ನಗರದಲ್ಲಿ ಪ್ರತಿ ವರ್ಷ ಸಂಭವಿಸುವ ಬಹುತೇಕ ಜೀವಹಾನಿಗೆ ಸಕಾಲಿಕವಾಗಿ ನೆರವು ಸಿಗದಿರುವುದೇ ಪ್ರಮುಖ ಕಾರಣ. ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ತಲುಪಲು ಬೇಕಾಗುವ ಸಮಯವನ್ನು ಕನಿಷ್ಠಗೊಳಿಸುವ ಪ್ರಯತ್ನದ ಸಲುವಾಗಿ ನಾರಾಯಣ ಹೆಲ್ತ್ ಸಿಟಿ ಇಂದು 24/7 ತುರ್ತು ಜಾಲ (Emergency Network Service) ಸೇವೆಗೆ ಚಾಲನೆ ನೀಡಿದೆ.
4ನೇ ಹಂತದ ಕ್ಯಾನ್ಸರಿನಿಂದ 4 ವರ್ಷದ ಮಗುವಿಗೆ ಮುಕ್ತಿ
ಈ ವಿನೂತನ ಸೇವೆಯು ತುರ್ತು ಆರೈಕೆ ಅಗತ್ಯವಿರುವ ಸಂದರ್ಭದಲ್ಲಿ ರೋಗಿಗಳು ಕರೆಗಳನ್ನು ಮಾಡಿದ ಕ್ಷಣದಿಂದಲೇ ಲಭ್ಯವಿದ್ದು, ನಾರಾಯಣ ಹೆಲ್ತ್ ಕಮಾಂಡ್ ಸೆಂಟರ್ ಇಂಥ ಸಂಕಷ್ಟದ ಕರೆಗಳನ್ನು ಸ್ವೀಕರಿಸಿದ ಕ್ಷಣದಿಂದ ಸೇವೆ ಲಭ್ಯವಾಗುತ್ತದೆ. ಈ ಸೇವೆಯ ಅನ್ವಯ ರೋಗಿಗಳಿಗೆ ದಿನದ 24 ಗಂಟೆಯೂ ತುರ್ತು ಸೇವೆಗಳನ್ನು ಒದಗಿಸುತ್ತದೆ. ತುರ್ತು ಆರೈಕೆ ಅಗತ್ಯವಿರುವ ಸಂದರ್ಭದಲ್ಲಿ ರೋಗಿಗಳು 97384 97384ಗೆ ಕರೆ ಮಾಡಿ ಆ್ಯಂಬುಲೆನ್ಸ್ ಸೇವೆ ಪಡೆದುಕೊಂಡು ತಮ್ಮ ಇಚ್ಚೆಯ ಆಸ್ಪತ್ರೆಗೆ ದಾಖಲಾಗಬಹುದು.
ಇದೇ ಸಂದರ್ಭದಲ್ಲಿ ನಾರಾಯಣ ಹೆಲ್ತ್ ಸಿಟಿ, ತುರ್ತು ಆರೈಕೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆ್ಯಂಬುಲೆನ್ಸ್ ರ್ಯಾಲಿ ಹಮ್ಮಿಕೊಂಡಿತ್ತು. ಈ ರ್ಯಾಲಿಗೆ ನಾರಾಯಣ ಹೆಲ್ತ್ ನ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ ಚಾಲನೆ ನೀಡಿದರು. ನಾರಾಯಣ ಹೆಲ್ತ್ ನ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಸಮೂಹದ ಸಿಒಒ ವಿರೇನ್ ಶೆಟ್ಟಿ, ನಾರಾಯಣ ಹೆಲ್ತ್ ಸಿಟಿ ತುರ್ತು ಸೇವೆಗಳ ವಿಭಾಗದ ಮುಖ್ಯಸ್ಥ ಹಾಗೂ ಹಿರಿಯ ಸಲಹಾ ತಜ್ಞ ಡಾ.ಶ್ರೀನಾಥ್ ಟಿ.ಎಸ್. ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನಾರಾಯಣ ಹೆಲ್ತ್ ನ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ, "ನಾರಾಯಣ ಹೆಲ್ತ್ ಸಿಟಿಯಲ್ಲಿ ನಮ್ಮ ವಿಸ್ತೃತವಾದ ದೃಷ್ಟಿಕೋನವೆಂದರೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಎಲ್ಲರಿಗೂ ಕೈಗೆಟುಕುವಂಗತೆ ಮಾಡುವುದು ಮತ್ತು ಸಮುದಾಯ ಕ್ಷೇಮವನ್ನು ಖಾತರಿಪಡಿಸುವುದು, ಅದರಲ್ಲೂ ಮುಖ್ಯವಾಗಿ ಎಲೆಕ್ಟ್ರಾನಿಕ್ ಸಿಟಿ ಮತ್ತು ಸುತ್ತಮುತ್ತಲ ಜನತೆಯ ಯೋಗಕ್ಷೇಮ ನಮ್ಮ ಆದ್ಯತೆ. ತುರ್ತು ಜಾಲ ಸೇವೆಯನ್ನು ಆರಂಭಿಸಿರುವುದು ನಮ್ಮ ಈ ದೃಷ್ಟಿಕೋನದ ವಿಸ್ತರಣೆಯಾಗಿದೆ" ಎಂದು ಹೇಳಿದರು.
ಈ ಸೇವೆಯ ಭಾಗವಾಗಿ ನಾರಾಯಣ ಹೆಲ್ತ್ ಸಿಟಿ ತನ್ನ ಆ್ಯಂಬುಲೆನ್ಸ್ ಸೇವೆಯನ್ನು ಕೂಡಾ ವಿಸ್ತರಿಸಿದೆ. ನಾರಾಯಣ ಹೆಲ್ತ್ ವತಿಯಿಂದ 15 ಆ್ಯಂಬುಲೆನ್ಸ್ಗಳನ್ನು ಹೆಚ್ಚುವರಿಯಾಗಿ ಸೇರಿಸಲಾಯಿತು. ಇವು ಸಂಪೂರ್ಣ ಸುಸಜ್ಜಿತವಾಗಿದ್ದು, ಇವು ಐಸಿಯು ಆನ್ ವ್ಹೀಲ್ಸ್ ಗಳಾಗಿ ಕಾರ್ಯನಿರ್ವಹಿಸುತ್ತವೆ ಹಾಗೂ ನಗರದ ವಿವಿಧೆಡೆಗಳಲ್ಲಿ ಇರುವ ಕಾರಣದಿಂದ ಅಗತ್ಯ ಸಂದರ್ಭಗಳಲ್ಲಿ ಕ್ಷಣಮಾತ್ರದಲ್ಲೇ ರೋಗಿಗಳು ಇದರ ಸೇವೆ ಪಡೆಯಲು ಸಾಧ್ಯವಾಗಲಿದೆ. ತುರ್ತು ಜಾಲ ಸೇವೆಯ ಮತ್ತೊಂದು ವಿಶೇಷತೆಯೆಂದರೆ, ಆ್ಯಂಬುಲೆನ್ಸ್ ಗಳು ಜಿಪಿಎಸ್ ಸಶಕ್ತ ವಾಹನಗಳಾಗಿದ್ದು, ಇದು ವಾಹನಗಳ ಪತ್ತೆಗೆ ಮತ್ತು ಹತ್ತಿರದ ಆ್ಯಂಬುಲೆನ್ಸ್ ಸೇವೆ ಪಡೆಯಲು ಅನುವು ಮಾಡಿಕೊಡುತ್ತದೆ.