ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂಟಿಬಿ ನಾಗರಾಜು-ಯಡಿಯೂರಪ್ಪ ಭೇಟಿ: ಸೋಲಿನ ಭೀತಿ?

|
Google Oneindia Kannada News

ಬೆಂಗಳೂರು, ಡಿಸೆಂಬರ್ 07: ಹೊಸಕೋಟೆ ಬಿಜೆಪಿ ಅಭ್ಯರ್ಥಿ 'ಅನರ್ಹ' ಎಂಟಿಬಿ ನಾಗರಾಜು ಇಂದು ಬೆಳ್ಳಂಬೆಳಿಗ್ಗೆ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಡಾಲರ್ಸ್‌ ಕಾಲೋನಿಯಲ್ಲಿನ ಸಿಎಂ ನಿವಾಸಕ್ಕೆ ಭೇಟಿ ನೀಡಿದ ಎಂಟಿಬಿ ನಾಗರಾಜು ಅವರು ಕೆಲವು ಸಮಯ ಸಿಎಂ ಅವರೊಂದಿಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಚುನಾವಣೆಯ ಸೋಲು-ಗೆಲುವಿನ ಬಗ್ಗೆ ಮಾತುಕತೆ ಹಾಗೂ ಸಂಸದ ಬಚ್ಚೇಗೌಡ ಅವರು ಬಿಜೆಪಿ ಪರ ಪ್ರಚಾರ ಮಾಡದಿರುವ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ.

ಹೊಸಕೋಟೆಯಲ್ಲಿ ಬಿಜೆಪಿ ಸಂಸದ ಬಚ್ಚೇಗೌಡ ಸೇರಿದಂತೆ ಹಲವು ಬಿಜೆಪಿ ಮುಖಂಡರು ಎಂಟಿಬಿ ನಾಗರಾಜ್ ಪರ ಪ್ರಚಾರ ಮಾಡಲಿಲ್ಲ. ಬದಲಿಗೆ ವಿರೋಧಿ ಅಭ್ಯರ್ಥಿ ಪರ ಪ್ರಚಾರ ಮಾಡಿದರು. ಇದರ ಬಗ್ಗೆ ಎಂಟಿಬಿ ನಾಗರಾಜ್ ಇಂದು ಸಿಎಂ ಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

MTB Nagaraj Visits CM Yediyurappa Talked About Hoskote Election

ಸುಮಾರು ಅರ್ಧಗಂಟೆಗೂ ಹೆಚ್ಚು ಸಮಯ ಸಿಎಂ ಜೊತೆ ಮಾತನಾಡಿದ ಎಂಟಿಬಿ ನಾಗರಾಜ್, ಕ್ಷೇತ್ರದಲ್ಲಿ ಗೆಲುವಿನ ಬಗ್ಗೆ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ಅವರು ಎಂಟಿಬಿ ನಾಗರಾಜು ಗೆ ಧೈರ್ಯ ತುಂಬಿದ್ದು, ಕ್ಷೇತ್ರದಲ್ಲಿ ಹೆಚ್ಚಿನ ಮತದಾನ ಆಗಿದ್ದು, ಬಿಜೆಪಿ ಗೆಲುವು ನಿಶ್ಚಿತ ಎಂದು ಧೈರ್ಯ ತುಂಬಿದ್ದಾರೆ.

ಸಂಸದ ಬಚ್ಚೇಗೌಡ ಅವರು ಬಿಜೆಪಿ ಮುಖಂಡರಿಗೆ ಕರೆ ಮಾಡಿ ತಮ್ಮ ಪುತ್ರ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಗೆ ಬೆಂಬಲ ನೀಡಿ ಎಂದು ಹೇಳಿರುವ ಆಡಿಯೋ ದಾಖಲೆಗಳನ್ನು ಎಂಟಿಬಿ ನಾಗರಾಜು ಕಲೆಹಾಕಿದ್ದು, ಅದನ್ನು ಸಿಎಂ ಗೆ ನೀಡಿ ಬಚ್ಚೇಗೌಡರನ್ನು ಪಕ್ಷದಿಂದ ಹೊರಗೆ ಅಟ್ಟುವಂತೆ ಮನವಿ ಮಾಡಿದ್ದಾರೆ. ಅವರ ಜೊತೆಗೆ ಇನ್ನೂ ಕೆಲವು ಬಿಜೆಪಿ ಮುಖಂಡರ ಪಟ್ಟಿಯನ್ನೂ ಎಂಟಿಬಿ ಸಿಎಂ ಕೈಗೆ ಕೊಟ್ಟಿದ್ದಾರೆ.

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜು, 'ಬಚ್ಚೇಗೌಡ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಾನು ಸಿಎಂ ಗೆ ಮನವಿ ಮಾಡಿಲ್ಲ. ಅದು ಬಿಜೆಪಿಗೆ ಬಿಟ್ಟ ವಿಚಾರ' ಎಂದರು.

'ಹದಿನೈದು ಕ್ಷೇತ್ರದಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ಖಾಯಂ ಉಳಿದ ಮೂರು ಕ್ಷೇತ್ರದಲ್ಲಿ 50:50 ಇದೆ' ಎಂದು ಎಂಟಿಬಿ ನಾಗರಾಜ್ ಹೇಳಿದರು.

'ಕೆಲವು ಅನರ್ಹರು ಸೋತರೂ ಮಂತ್ರಿಗಿರಿ ಕೊಡಬೇಕಾ ಬೇಡವಾ ಅನ್ನೋದು ಬಿಜೆಪಿ ಹೈಕಮಾಂಡ್‌ ಗೆ ಬಿಟ್ಟ ವಿಚಾರ, ಡಿಸಿಎಂ ಸ್ಥಾನವನ್ನು ಯಾರಿಗೆ ಕೊಡಬೇಕು, ಯಾರಿಗೆ ಬಿಡಬೇಕು ಎಂಬುದನ್ನೂ ಸಹ ಹೈಕಮಾಂಡ್ ತೀರ್ಮಾನ ಮಾಡುತ್ತದೆ' ಎಂದು ಎಂಟಿಬಿ ನಾಗರಾಜ್ ಹೇಳಿದರು.

English summary
MTB Nagaraj Visits CM Yediyurappa and talked about Hoskote election and also gave complaint on MP Bachegowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X