ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೇಗೂರು ಕೆರೆಯ ಶಿವನ ವಿಗ್ರಹ ವಿವಾದಕ್ಕೆ ಸತೀಶ್ ರೆಡ್ಡಿ ಮೇಲೆ ಪ್ರತಿಕಾರ?

|
Google Oneindia Kannada News

ಬೆಂಗಳೂರು, ಆ. 12: ಬೇಗೂರು ಕೆರೆಯಲ್ಲಿ ಶಿವನ ವಿಗ್ರಹ ಸ್ಥಾಪನೆ ವಿವಾದ ತಾರಕಕ್ಕೇರಿತ್ತು. ಇದರ ನಡುವೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರ ಮನೆ ಮುಂದೆ ನಿಲ್ಲಿಸಿದ್ದ ಐಷಾರಾಮಿ ಕಾರುಗಳಿಗೆ ಬೆಂಕಿ ಇಟ್ಟು ಅಪರಿಚಿತ ದುಷ್ಕರ್ಮಿಗಳು ಸುಟ್ಟು ಹಾಕಿದ್ದಾರೆ. ಬೇಗೂರು ಕೆರೆಯನ್ನು ಕೃತಕ ದ್ವೀಪವನ್ನಾಗಿ ಪರಿವರ್ತಿಸಿ ಅಲ್ಲಿ ಶಿವನ ವಿಗ್ರಹ ಸ್ಥಾಪನೆ ಮಾಡಿದ ವಿವಾದ ಉಂಟಾದ ಬೆನ್ನಲ್ಲೇ ಶಾಸಕ ಸತೀಶ್ ರೆಡ್ಡಿ ಅವರ ಮನೆಯ ಆವರಣದಲ್ಲಿ ನಿಲ್ಲಿಸಿರುವ ಕಾರುಗಳಿಗೆ ಬೆಂಕಿ ಬಿದ್ದಿದೆ. ಹೀಗಾಗಿ ಸತೀಶ್ ರೆಡ್ಡಿ ಕಾರು ಸುಟ್ಟ ಪ್ರಕರಣ ಶಿವನ ವಿಗ್ರಹ ಸ್ಥಾಪನೆ ವಿವಾದದ ಜತೆ ತಳಕು ಹಾಕಿಕೊಂಡಿದೆ.

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರ ಮನೆಗೆ ಹಿಂಬಾಗಿಲಿನ ಗೇಟಿನಿಂದ ಬಂದಿರುವ ಮೂರು ದುಷ್ಕರ್ಮಿಗಳು ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಇದರಿಂದ ಲಕ್ಷಾಂತರ ಬೆಲೆ ಬಾಳುವ ಐಶರಾಮಿ ಫಾರ್ಚುನರ್ ಹಾಗೂ ಥಾರ್ ಎರಡು ಕಾರು ಸುಟ್ಟು ಕರಕಲಾಗಿವೆ. ತನ್ನ ಚಾಲಕ ಸೆಲ್ವಂ ಮೂಲಕ ಸತೀಶ್ ರೆಡ್ಡಿ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಾಸಕ ಅಖಂಡ ಶ್ರೀನಿವಾಸ ಪ್ರಕರಣದಲ್ಲಿ ಮೈ ಮರೆತಿದ್ದ ಪೊಲೀಸರು ಈ ಪ್ರಕರಣದಲ್ಲಿ ಕ್ಷಿಪ್ರ ಕಾರ್ಯಾಚರಣೆಗೆ ಇಳಿಯುವ ಮೂಲಕ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ನಾಲ್ಕು ತಂಡ ರಚನೆ ಮಾಡಿ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ರಾತ್ರಿ 9 ಗಂಟೆ ವೇಳೆಗೆ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿರುವ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಪೊಲೀಸರ ದಂಡೇ ಆಗಮನ

ಪೊಲೀಸರ ದಂಡೇ ಆಗಮನ

ಕಳೆದ ವರ್ಷ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಇಟ್ಟ ಪ್ರಕರಣದಲ್ಲಿ ಮೈಮರೆತಿದ್ದ ಪೊಲೀಸರು ಈ ಬಾರಿ ತ್ವರಿತವಾಗಿ ಎಚ್ಚೆತ್ತು ಡಿಸಿಪಿ ಶ್ರೀನಾಥ್ ಜೋಶಿಯೇ ಸ್ವತಃ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನೂತನ ಗೃಹ ಸಚಿವ ಆರಗ ಜ್ಞಾನೇಂದ್ರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಾಲಮಿತಿಯಲ್ಲಿ ಆರೋಪಿಗಳನ್ನು ಪತ್ತೆ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಇದಕ್ಕೂ ಮೊದಲು ಜಂಟಿ ಪೊಲೀಸ್ ಆಯುಕ್ತ ಮುರುಗನ್ ಪೊಲೀಸ್ ಆಯುಕ್ತ ಕಮಲ ಪಂತ್ ಮತ್ತಿತ್ತರರು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಇಡೀ ಪೊಲೀಸ್ ಪಟಾಲಂ ಘಟನೆ ಬಗ್ಗೆ ತಲೆ ಕೆಡಿಸಿಕೊಂಡು ಆರೋಪಿಗಳ ಶೋಧ ಕಾರ್ಯಕ್ಕಾಗಿ ತಲೆ ಕೆಡಿಸಿಕೊಂಡಿದೆ.

ಡಿಸಿಪಿ ಶ್ರೀನಾಥ್ ಜೋಶಿ ಹೇಳಿಕೆ

ಡಿಸಿಪಿ ಶ್ರೀನಾಥ್ ಜೋಶಿ ಹೇಳಿಕೆ

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಿಸಿಪಿ ಶ್ರೀನಾಥ್ ಜೋಶಿ, ಮಧ್ಯರಾತ್ರಿ 1.28 ರ ಸುಮಾರಿಗೆ ಘಟನೆ ನಡೆದಿದೆ. ನಾಲ್ವರು ದುಷ್ಕರ್ಮಿಗಳು ಸಿಸಿಟಿವಿ ಇರುವುದನ್ನು ಗಮನಿಸಿ ಹಿಂಬಾಗಲಿನಿಂದ ಬಂದಿದ್ದಾರೆ. ಅದರಲ್ಲಿ ಒಬ್ಬ ಅಡಗಿ ಬರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೇವಲ ಮೂರು ನಿಮಿಷದಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಸಿಸಿಟಿವಿ ಗಮನಿಸಿದಾಗ ಗೇಟ್ ಹಾರಿ ಬಂದು ಬೆಂಕಿ ಹಚ್ಚಿರುವುದು ಗೊತ್ತಾಗಿದೆ. ಆರೋಪಿಗಳ ಪತ್ತೆಗಾಗಿ ಪ್ರತ್ಯೇಕ ತಂಡ ರಚನೆ ಮಾಡಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಶಾಸಕ ಸತೀಶ್ ರೆಡ್ಡಿ ರಿಯಾಕ್ಷನ್

ಶಾಸಕ ಸತೀಶ್ ರೆಡ್ಡಿ ರಿಯಾಕ್ಷನ್

ಮನೆ ಮುಂದೆ ನಿಲ್ಲಿಸಿದ್ದ ಎರಡು ಕಾರುಗಳಿಗೆ ಬೆಂಕಿ ಇಟ್ಟ ಪ್ರಕರಣ ಸಂಬಂಧ ಶಾಸಕ ಸತೀಶ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದಿನ ಗೇಟ್‌ನಿಂದ ಬಂದು ಬೆಂಕಿ ಹಚ್ಚಿ ಇಬ್ಬರು ಎಸ್ಕೇಪ್ ಆಗಿದ್ದಾರೆ. ಹಿಂದಿನ ಗೇಟ್‌ನಲ್ಲಿ ಸಿಸಿಟಿವಿ ಇದೆ. ಆದರೆ ಅದರಲ್ಲಿ ಮುಖ ಸರಿಯಾಗಿ ತೋರುವುದಿಲ್ಲ. ಮುಂದಿನ ಗೇಟ್ ಬಳಿ ಪೊಲೀಸ್ ಹಾಗೂ ಸೆಕ್ಯುರಿಟಿ ಇದ್ದರು. ಎರಡು ಬೈಕ್‌ನಲ್ಲಿ ಬಂದು ಬೆಂಕಿ ಇಟ್ಟು ಎರಡನೇ ನಿಮಿಷದಲ್ಲಿ ಪರಾರಿಯಾಗಿದ್ದಾರೆ. ನನಗೆ ಯಾವುದೇ ರಾಜಕೀಯ ವೈಷಮ್ಯ ಇಲ್ಲ. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಆಗಿದೆ ಎಂದು ನನಗೆ ಅನಿಸುತ್ತಿಲ್ಲ. ಇದನ್ನು ರಾಜಕೀಯವಾಗಿ ನಾನು ತೆಗೆದುಕೊಳ್ಳುವುದಿಲ್ಲ. ಒಂದು ದುರಾಲೋಚನೆಯ ಸಂದೇಶ ರವಾನಿಸುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ. ಯಾರ ಮನೆಯಲ್ಲಿ ಯಾರು ಏನು ಬೇಕಾದರೂ ಮಾಡಬಹುದು ಎಂಬುದನ್ನು ತೋರಿಸಲು ಹೀಗೆ ಮಾಡಿದ್ದಾರೆ. ಅಪರಿಚಿತರು ಎಂಟ್ರಿಯಾಗಿ ಈ ಕೃತ್ಯ ಎಸಗಿದ್ದಾರೆ. ಕಾರಿನ ಬ್ಯಾಟರಿ ಸ್ಫೋಟಗೊಂಡಾಗ ಎಚ್ಚರವಾಯಿತು. ಕಾರುಗಳು ಶೇ. 80 ರಷ್ಟು ಸುಟ್ಟು ಕರಕಲಾದಾಗ ಅದನ್ನು ನಂದಿಸುವ ಕಾರ್ಯ ಮಾಡಲಾಯಿತು. ಅಗ್ನಿ ಶಾಮಕ ಸಿಬ್ಬಂದಿ ಕಾರಿನ ಬೆಂಕಿ ನಂದಿಸಿದರು ಎಂದು ಸತೀಶ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.

 ಶಿವನ ವಿಗ್ರಹ ವಿವಾದಕ್ಕೆ ಥಳಕು

ಶಿವನ ವಿಗ್ರಹ ವಿವಾದಕ್ಕೆ ಥಳಕು

ಬೇಗೂರು ಕೆರೆಯಲ್ಲಿ ಪುರಾತನ ಶಿವನ ವಿಗ್ರಹವನ್ನು ಸ್ಥಾಪನೆ ಮಾಡಿ ಸುತ್ತಲೂ ದ್ವೀಪ ನಿರ್ಮಾಣ ಮಾಡಲಾಗುತ್ತಿತ್ತು. ಕೆರೆಯಲ್ಲಿ ದೇವರ ವಿಗ್ರಹ ಪ್ರತಿಷ್ಠಾಪನೆ ವಿರೋಧಿಸಿ ಕೆಲವು ಸಂಘಟನೆಗಳು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದವು.ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಕೆರೆಯಲ್ಲಿ ವಿಗ್ರಹ ಪ್ರತಿಷ್ಠಾಪನೆ ಮಾಡುವ ಕಾರ್ಯಕ್ಕೆ ತಡೆಯಾಜ್ಞೆ ನೀಡಲಾಗಿತ್ತು. ಕೆರೆಯ ಜಾಗವನ್ನು ಕಡಿಮೆ ಮಾಡಿ ದೇವಸ್ಥಾನ, ವಿಗ್ರಹ ಸ್ಥಾಪನೆ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಎಲ್ಲ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಕಳೆದ ಎರಡು ವಾರದಿಂದ ಬೇಗೂರು ಕೆರೆಯಲ್ಲಿ ಪುರಾತನ ಶಿವನ ವಿಗ್ರಹ ಸ್ಥಾಪನೆಗೆ ಕ್ರೈಸ್ತ ಮಿಷನರಿ ಅಡ್ಡಗಾಲು ಹಾಕಿದೆ ಎಂಬ ಪೋಸ್ಟರ್‌ಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ್ದವು. ಇದರ ಬಗ್ಗೆ ಹಿಂದೂಪರ ಸಂಘಟನೆಗಳ ಸದಸ್ಯ ಗುಂಪುಗಳಲ್ಲಿ ದೊಡ್ಡ ಚರ್ಚೆಗೆ ನಾಂದಿ ಹಾಡಿತ್ತು.

ಟಾರ್ಪಲ್ ತೆರೆದು ಶಿವ ಮೂರ್ತಿಗೆ ಪೂಜೆ

ಟಾರ್ಪಲ್ ತೆರೆದು ಶಿವ ಮೂರ್ತಿಗೆ ಪೂಜೆ

ಈ ವಿವಾದದ ಬೆನ್ನಲ್ಲೇ ಪುನೀತ್ ಕೆರೆಹಳ್ಳಿ ಸೇರಿದಂತೆ ಹಲವು ಹಿಂದೂ ಕಾರ್ಯಕರ್ತರು ಶಿವನ ವಿಗ್ರಹಕ್ಕೆ ಮುಚ್ಚಿದ್ದ ಚೀಲವನ್ನು ತೆರೆದು ಪೂಜೆ ಮಾಡಿದ್ದರು. ಇದಾದ ಬೆನ್ನಲ್ಲೇ ಬೇಗೂರಿನಲ್ಲಿ ಶೇ. 40 ರಷ್ಟು ಹಿಂದೂಗಳು ಮತಾಂತರವಾಗಿದ್ದಾರೆ. ನೀರಿನ ಸಂಗ್ರಹಕ್ಕೆ ತೊಂದರೆ ಆಗುತ್ತದೆ ಎಂದು ಕ್ರೈಸ್ತ ಮಿಷನರಿಗಳು ಹೈಕೋರ್ಟ್ ನಿಂದ ಸ್ಟೇ ತಂದಿದ್ದಾರೆ. ಆದರೆ ಹಿಂದೂ ಕಲಿಗಳು ಬಂಧನಕ್ಕೆ ಒಳಗಾಗಿದ್ದ ಶಿವನ ವಿಗ್ರಹವನ್ನು ಬಂಧಮುಕ್ಗಗೊಳಿಸಿ ಭಗವ ಧ್ವಜ ಹಾರಿಸಿದ್ದಾರೆ ಎಂಬ ಪೋಸ್ಟರ್‌ಗಳು ವೈರಲ್ ಆಗಿದ್ದವು. ಕೆಲವು ಹಿಂದೂಪರ ಸಂಘಟನೆ ಕಾರ್ಯಕರ್ತರು ಬೇಗೂರು ಕೆರೆ ಸಮೀಪ ಹೋಗಿ ಶಿವನ ವಿಗ್ರಹ ಮುಚ್ಚಿದ್ದ ನೀಲಿ ಬಣ್ಣದ ಟಾರ್ಪಲ್ ತೆಗೆದು ಹಾಕಿದ್ದರು. ಘಟನಾ ಸ್ಥಳಕ್ಕೆ ಶಾಸಕ ಸತೀಶ್ ರೆಡ್ಡಿ ಕೂಡ ಭೇಟಿ ನೀಡಿದ್ದರು. ಹಿಂದೂಪರ ಸಂಘಟನೆಗಳು ತಳೆದಿದ್ದ ನಿಲುವು ಪರ ಸತೀಶ್ ರೆಡ್ಡಿ ಧ್ವನಿಯೆತ್ತಿದ್ದರು. ಈ ಹಿನ್ನೆಲೆಯಲ್ಲಿ ಕಾರುಗಳಿಗೆ ಬೆಂಕಿ ಇಡಲಾಗಿದೆಯೇ ಎಂದು ಶಂಕಿಸಲಾಗುತ್ತಿದೆ. ಈ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶತೀಶ್ ರೆಡ್ಡಿ ಹೇಳಿದ ಮಾತು ನಿಜವೇ?

ಶತೀಶ್ ರೆಡ್ಡಿ ಹೇಳಿದ ಮಾತು ನಿಜವೇ?

ಬೇಗೂರು ಕೆರೆಯ ಬಳಿ ಶಿವನ ವಿಗ್ರಹ ತೆರವು ವಿಚಾರ ಸಂಬಂಧ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದರು. ಹೀಗಾಗಿ ಬೇಗೂರು ಕೆರೆ ಬಳಿ ನಾನು ಹೋಗಿದ್ದೆ. ಶಿವನ ದೇವಸ್ಥಾನದಲ್ಲಿ ಪೂಜೆ ಮಾಡದಂತೆ ಕ್ರಿಶ್ಚಿಯನ್ ವ್ಯಕ್ತಿ ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ. ಹಾಗಾಗಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದವು. ಕೋರ್ಟ್ ತಡೆಯಾಜ್ಞೆ ಇರುವ ಕಾರಣದಿಂದ ಕಾನೂನು ರೀತಿಯಲ್ಲಿಯೇ ವಿವಾದ ಬಗೆ ಹರಿಸೋಣ ಎಂದು ಹೇಳಿ ಬಂದಿದ್ದೆ. ಈ ವಿಚಾರವಾಗಿಯೇ ನನ್ನ ಮನೆಯ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ ಎಂದು ಸತೀಶ್ ರೆಡ್ಡಿ ತಿಳಿಸಿದ್ದಾರೆ. ಶಿವನ ವಿಗ್ರಹ ವಿವಾದ ವಿಚಾರಕ್ಕೆ ಸಂಬಂಧ ಪಟ್ಟಂತೆ ಎಚ್ಚರಿಕೆ ನೀಡಲು ಈ ರೀತಿಯ ಕೃತ್ಯ ಎಸಗಿದರೇ ಎಂಬ ಶಂಕೆ ವ್ಯಕ್ತವಾಗಿದೆ. ಈ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇಬ್ಬರು ಶಂಕಿತರ ವಿಚಾರಣೆ

ಇಬ್ಬರು ಶಂಕಿತರ ವಿಚಾರಣೆ

ಶಾಸಕ ಸತೀಶ್ ರೆಡ್ಡಿ ಅವರ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಇಟ್ಟ ಪ್ರಕರಣ ಸಂಬಂಧ ಕಿಡಿಗೇಡಿಗಳು ಬೇಗೂರು ರಸ್ತೆಯ ಭಾರತ್ ಪೆಟ್ರೋಲಿಯಂ ಬಂಕ್ ಬಳಿ ಪೆಟ್ರೋಲ್ ಖರೀದಿ ಮಾಡಿದ್ದಾರೆ. ಈ ಕುರಿತು ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಸತತ 15 ತಾಸು ಪೊಲೀಸರು ಕಾರ್ಯಾಚರಣೆ ನಡೆಸಿ ಘಟನೆಗೆ ಸಂಬಂಧಿಸಿದ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಮತ್ತೊಬ್ಬ ಅರೋಪಿಗಾಗಿ ಶೋಧ ನಡೆಸಲಾಗುತ್ತಿದೆ. ಇಬ್ಬರು ಆರೋಪಿಗಳು ನೀಡುವ ಮಾಹಿತಿ ಮೇಲೆ ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆಯಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Recommended Video

ಚೀನಾ ಜಲಪ್ರಳಯ : ಕೊರೋನಾ ಸೃಷ್ಟಿಸಿದ ಪಾಪಕ್ಕೆ ಇದು ದೇವರು ಕೊಟ್ಟ ಶಿಕ್ಷೆನಾ? | Oneindia Kannada
ಹತ್ತು ಗಂಟೆ ಒಳಗೆ ಅರೆಸ್ಟ್ ಅಂದ ಅಶೋಕ್

ಹತ್ತು ಗಂಟೆ ಒಳಗೆ ಅರೆಸ್ಟ್ ಅಂದ ಅಶೋಕ್

ಶಾಸಕ ಸತೀಶ್ ರೆಡ್ಡಿ ಹುಟ್ಟಿ ಬೆಳೆದ ಜಾಗದಲ್ಲೇ ಬೆಂಕಿ ಇಟ್ಟಿದ್ದಾರೆ. ರೋಡಲ್ಲಿ ಗಾಂಜಾ ಹೊಡೆದು ಹೋಗುವರನ್ನೇ ಬಿಡದೇ ಅರೆಸ್ಟ್ ಮಾಡಿಸುತ್ತೇವೆ. ಇನ್ನು ಮನೆಗೆ ನುಗ್ಗಿ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಈ ರಾತ್ರಿಯೊಳಗೆ ಬಂಧಿಸಲು ಸೂಚಿಸಿದ್ದೇವೆ. ಯಾರು ಮಾಡಿದ್ದಾರೆ ಎನ್ನುವ ಮಾಹಿತಿ ಇದೆ. ಅಖಂಡ ಶ್ರೀನಿವಾಸ್ ಮನೆ ಮೇಲೂ ದಾಳಿ ನಡೆದಿತ್ತು. ಇದೀಗ ಸತೀಶ್ ರೆಡ್ಡಿ ಮನೆಯಲ್ಲೂ ಆಗಿದೆ. ನಾಲ್ಕು ತಂಡದಿಂದ ಹುಡುಕಾಟ ನಡೆದಿದೆ. ಅರೋಪಿಯನ್ನು ವಶಕ್ಕೆ ಪಡದಿರುವ ಮಾಹಿತಿ ಸಿಕ್ಕಿದೆ. ಬೆಂಗಳೂರಿನಲ್ಲಿ ಇಂತಹ ಘಟನೆ ನಡೆಯಲು ಸಾಧ್ಯವಿಲ್ಲ. ಮೂರು ಜನ ನೇರವಾಗಿ ಭಾಗಿಯಾಗಿದ್ದು, ಕೂಡಲೇ ಅವರನ್ನು ಪೊಲೀಸರು ಬಂಧಿಸಲಿದ್ದಾರೆ ಎಂದು ಸಚಿವ ಆರ್‌. ಅಶೋಕ ತಿಳಿಸಿದರು.

English summary
Bommanahalli MLA Satish Reddy's Vehicle's set on fire: Four special teams formed to hunting to the Accused: Home minister Araga Jnanedra visited the spot and gave dead line to police officers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X