ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಿಕ್ಷುಕರೊಡನೆ ಹೋಳಿಗೆ ಸವಿದ ಸಚಿವ ಆಂಜನೇಯ

By Prasad
|
Google Oneindia Kannada News

ಬೆಂಗಳೂರು, ಮೇ 13 : ಸಮಾಜದ ಉಪೇಕ್ಷೆಗೆ ಒಳಗಾಗಿ ನಿರಾಶ್ರಿತರೆಂಬ ಹಣೆಪಟ್ಟಿಕಟ್ಟಿಕೊಂಡಿರುವ ಭಿಕ್ಷುಕರಿಗೆ ಹೊಸಬಟ್ಟೆ ವಿತರಿಸಿ, ಭರ್ಜರಿ ಭೋಜನದ ವ್ಯವಸ್ಥೆ ಮಾಡುವುದರ ಜೊತೆಗೆ ಸಹಪಂಕ್ತಿ ಭೋಜನ ಮಾಡುವ ಮೂಲಕ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ಅವರು ಸರ್ಕಾರದ ವಾರ್ಷಿಕೋತ್ಸವವನ್ನು ವಿಶಿಷ್ಟವಾಗಿ ಆಚರಿಸಿದರು.

ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷದ ಅವಧಿ ಪೂರ್ಣಗೊಳಿಸಿದ ಸಂದರ್ಭದಲ್ಲಿ ಮಂಗಳವಾರ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಭಿಕ್ಷುಕರ ಪರಿಹಾರ ಮತ್ತು ಪುನರ್ವಸತಿ ಕೇಂದ್ರದಲ್ಲಿ, ವಿಧಾನಸೌಧದ ಗೋಡೆ ಒಡೆಸಿ ವಿವಾದಕ್ಕೀಡಾಗಿದ್ದ ಆಂಜನೇಯರವರು ಸರ್ಕಾರದ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದರು.


ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಮಾಗಡಿ ರಸ್ತೆಯ ಕೇಂದ್ರ ಪರಿಹಾರ ಸಮಿತಿ ಹಾಗೂ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಮಂಗಳವಾರ ಹಬ್ಬದ ಸಂಭ್ರಮ. ಎಲ್ಲರಿಂದಲೂ ಪರಿತ್ಯಕ್ತರಾಗಿ ಬದುಕು ನೂಕುತ್ತಿರುವ ನಿರಾಶ್ರಿತರಿಗೆ ಸಚಿವರ ಸಹಪಂಕ್ತಿ ಭೋಜನ, ಸಮಾಲೋಚನೆ, ಸಾಂತ್ವನ ಜೀವನೋತ್ಸಾಹ ಮೂಡಿಸಿದವು. ಈ ಸಂದರ್ಭವನ್ನು ಸ್ಮರಣೀಯಗೊಳಿಸಲು ವ್ಯವಸ್ಥೆ ಮಾಡಲಾಗಿದ್ದ ಹೋಳಿಗೆ ಊಟ ಭಿಕ್ಷುಕರರಿಗೆ ಹಬ್ಬದ ನೆನಪು ತಂದಿತ್ತು.

ಪ್ರತಿ ದಿನ ಭಿಕ್ಷುಕರು ನಿಯಮದಂತೆ ಸಮವಸ್ತ್ರವನ್ನು ಧರಿಸಬೇಕಾಗುತ್ತದೆ. ಆದರೆ ಈ ದಿನ ಅವರಿಗೆ ಇಷ್ಟವಾದ ಸಮವಸ್ತ್ರವಲ್ಲದ ಬೇರೆ ಬೇರೆ ಬಣ್ಣದ ಶರ್ಟ್ ಮತ್ತು ಪ್ಯಾಂಟ್ ಪುರುಷರು ಮತ್ತು ವಿವಿಧ ಬಣ್ಣದ ಸೀರೆ ಮತ್ತು ರವಿಕೆಯನ್ನು ಮಹಿಳೆಯರು ಧರಿಸಿದ್ದು ವಿಶೇಷವಾಗಿತ್ತು.

ಆಂಜನೇಯ, ಖ್ಯಾತ ಕವಿ ಸಿದ್ದಲಿಂಗಯ್ಯ, ಸಾಹಿತಿ ಡಾ|| ಎಲ್. ಹನುಮಂತಯ್ಯ ಹಾಗೂ ಮತ್ತಿತರರು ಭಿಕ್ಷುಕರ ಜೊತೆ ಸಹ ಭೋಜನ ಮಾಡಿದ್ದು ಗಮನಾರ್ಹವಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಆಂಜನೇಯ ಅವರು, ಕಳೆದ ಒಂದು ವರ್ಷದಲ್ಲಿ ಸಿದ್ದರಾಮಯ್ಯರವರ ಸರ್ಕಾರ ಅನೇಕ ಜನಪರ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ ಎಂದರು.

Minister enjoys sumptuous meals with beggars

ರಾಜ್ಯದಲ್ಲಿ ಭಿಕ್ಷಾಟನಾ ನಿಷೇಧ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಸರ್ಕಾರ ಬದ್ಧವಾಗಿದ್ದು, ಭಿಕ್ಷುಕರ ಪರಿಹಾರ ಮತ್ತು ಪುನರ್ವಸತಿ ಕಾರ್ಯಕ್ರಮಗಳನ್ನು ಕಾಲಮಿತಿಯಲ್ಲಿ ಹಮ್ಮಿಕೊಳ್ಳಲಾಗುವುದು. ಅನಾಥ ಪ್ರಜ್ಞೆ ಮೂಡದ ಹಾಗೇ ಪ್ರೀತಿ, ವಿಶ್ವಾಸ, ವಾತ್ಸಲ್ಯದಿಂದ ಭಿಕ್ಷುಕರನ್ನು ನೋಡಿಕೊಂಡು ಅವರಲ್ಲಿ ಭರವಸೆ ಮೂಡಿಸಿ ಆತ್ಮವಿಶ್ವಾಸವನ್ನು ತುಂಬಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ನಿರಾಶ್ರಿತರಿಗೆ ವಿವಿಧ ಸ್ವಉದ್ಯೋಗ ಯೋಜನೆಗಳ ತರಬೇತಿ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ಎಲ್ಲಾ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಮಾಡುವ ಮೂಲಕ ಕರ್ನಾಟಕವನ್ನು ಭಿಕ್ಷಾಟನಾ ರಹಿತ ರಾಜ್ಯವನ್ನಾಗಿ ಪರಿವರ್ತಿಸಲಾಗುವುದು. ರಾಜ್ಯದಲ್ಲಿನ ಎಲ್ಲಾ 14 ಭಿಕ್ಷುಕರ ಪುನರ್ವಸತಿ ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಿ ನಿರಾಶ್ರಿತರ ಕಷ್ಟ ಸುಖಗಳಿಗೆ ಸ್ಪಂದಿಸಲಾಗುವುದೆಂದು ತಿಳಿಸಿದರು.

ಖ್ಯಾತ ಕವಿ ಡಾ||ಸಿದ್ದಲಿಂಗಯ್ಯ ಮಾತನಾಡಿ, ಪರಿಹಾರ ಕೇಂದ್ರದ ಸಿಬ್ಬಂದಿ ವರ್ಗ ಮಾಡುತ್ತಿರುವ ಸೇವೆ ಅನನ್ಯವಾಗಿದ್ದು, ಕೇಂದ್ರದಲ್ಲಿರುವ ಯಾವ ನಿರಾಶ್ರಿತರಿಗೂ ಕೂಡ ಅನಾಥ ಪ್ರಜ್ಞೆ ಕಾಡದೇ ಸ್ವಂತ ಮನೆಯಲ್ಲಿ ವಾಸ ಮಾಡುವಂತೆ ಇರುವ ಭಾವನೆಯಿಂದ ಇದ್ದಾರೆಂದು ಪ್ರಶಂಸೆ ಮಾಡಿದರು.

English summary
Social welfare Minister H Anjaneya and laureates Siddalingaiah, Hanumanthappa enjoy sumptuous meals with beggars and celebrate the 1st anniversary of Siddaramaiah govt in a unique way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X