ಮದುವೆಯಾಗಿರುವ ಹೆಣ್ಣು ಮಕ್ಕಳಿಗೂ ಅನುಕಂಪ ಆಧಾರಿತ ಸರ್ಕಾರಿ ನೌಕರಿ
ಬೆಂಗಳೂರು,ಜನವರಿ 22: ಮದುವೆಯಾಗಿರುವ ಹೆಣ್ಣುಮಕ್ಕಳಿಗೂ ಅನುಕಂಪ ಆಧಾರಿತ ಸರ್ಕಾರಿ ನೌಕರಿ ನೀಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಇದಕ್ಕಾಗಿ ಸರ್ಕಾರಿ ನೌಕರರ ಅನುಕಂಪ ಆಧಾರಿತ ನೇಮಕಾತಿ ಸೇವಾ ನಿಯಮಗಳಿಗೆ ತಿದ್ದುಪಡಿ ತರುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.
ಸರ್ಕಾರಿ ನೌಕರರು ಅಕಾಲಿಕ ಮರಣಕ್ಕೀಡಾದ ಸಂದರ್ಭದಲ್ಲಿ ಅನುಕಂಪ ಆಧಾರಿತ ಹುದ್ದೆಗಳನ್ನು ಕುಟುಂಬದ ಹೆಣ್ಣು ಮಕ್ಕಳಿಗೂ ಸಹ ನೀಡುವ ಮಹತ್ವದ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿದೆ.
ಸ್ವಂತ ಮಕ್ಕಳಿಲ್ಲದೇ ಸಾಕು ಮಕ್ಕಳಿದ್ದರೂ ಅವರಿಗೆ ನೌಕರಿ ನೀಡಲಾಗುವುದು. ಅನುಕಂಪದ ಆಧಾರದಲ್ಲಿ ನೌಕರಿ ಪಡೆಯಲು ಕುಟುಂಬ ಸದಸ್ಯರು ಯಾರು ಅರ್ಹರು ಎಂಬುದರ ವ್ಯಾಖ್ಯೆಯನ್ನೂ ಕರ್ನಾಟಕ ನಾಗರಿಕ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ)( ತಿದ್ದುಪಡಿ) ನಿಯಮಗಳು2020 ದಲ್ಲಿ ಸ್ಪಷ್ಟಪಡಿಸಲಾಗಿದೆ ತಿಳಿಸಿದರು.
ಮಾಹಿತಿ ನೀಡಿರುವ ಗೃಹ ಮತ್ತು ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಅವರು, ಸರ್ಕಾರಿ ನೌಕರರು ಮೃತಪಟ್ಟಾಗ ಆ ಕುಟುಂಬದಲ್ಲಿ ಗಂಡು ಮಕ್ಕಳಿಲ್ಲದೇ ಕೇವಲ ಹೆಣ್ಣು ಮಕ್ಕಳಿದ್ದರೆ ಅವರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಲು ಕಾಯ್ದೆಗೆ ತಿದ್ದುಪಡಿ ಮಾಡಿದ್ದು, ಅದಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಒಂದು ವೇಳೆ ಹೆಣ್ಣು ಮಕ್ಕಳಿಗೆ ಮದುವೆ ಆಗಿದ್ದರೂ ನೌಕರಿ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.