• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಂದು ಮತ ಹಾಕಿದವರಿಗೆ ಉಚಿತ ಹೇರ್ ಕಟ್, ಶೇವಿಂಗ್!

|

ಬೆಂಗಳೂರು, ಏಪ್ರಿಲ್ 18 : ತಮಗೇ, ತಮ್ಮ ಪಕ್ಷಕ್ಕೇ ಮತ ಹಾಕಲೆಂದು 'ನಾಚಿಗ್ಗೇಡಿ' ರಾಜಕಾರಣಿಗಳು, ಅವರ ಕೆಲಸಕ್ಕೆ ಬಾರದ ಚೇಲಾಗಳು ವಿವಿಧ ರೀತಿಯಲ್ಲಿ ಆಮಿಷ ಒಡ್ಡುವುದು ನಮ್ಮ ಭಾರತೀಯ ಪ್ರಜಾತಂತ್ರದಲ್ಲಿ ಸಹಜ. ಲಜ್ಜೆಗೇಡಿಯಾಗಿ ಇಸಿದುಕೊಳ್ಳುವವರು ಇರುವವರೆಗೆ ಕೊಡುವವರು ಇದ್ದೇ ಇರುತ್ತಾರೆ.

ಲೋಕಸಭೆ ಚುನಾವಣೆ ಕೂಡ ಇಂತಹ ಹಲವಾರು ಅಕ್ರಮಗಳನ್ನು ನೋಡಿದೆ. ಯಾವುದೋ ಒಂದು ಕ್ಷೇತ್ರದಲ್ಲಿ, ಅಭ್ಯರ್ಥಿಯೊಬ್ಬ ಗೆಲ್ಲಲೆಂದು 150 ಕೋಟಿ ರುಪಾಯಿ ವ್ಯಯಿಸಲಾಗಿದೆ ಎಂಬುದನ್ನು ಗಮನಿಸಿದರೆ, ಭ್ರಷ್ಟಾಚಾರ ಯಾವ ಮಟ್ಟಕ್ಕೆ ಹೋಗಿದೆ ಎಂಬುದನ್ನು ಪ್ರಜ್ಞಾವಂತ ಮತದಾರರು ಊಹಿಸಬಹುದು.

ಕರ್ನಾಟಕ ಲೋಕ ಸಮರ LIVE: ಮಧುವಣಗಿತ್ತಿಯರ ಮತ ಸಂಭ್ರಮ

ರಾತ್ರಿಯಾದರೆ ಕುಡಿಯಲು ಹೆಂಡ, ಸೂರ್ಯ ನೆತ್ತಿಯ ಮೇಲಿರುವಾಗಲೇ ಹಂಚಲಾಗುವ ಗರಿಗರಿ ನೋಟುಗಳು, ಜೊತೆಗೆ ದೇವರ ಫೋಟೋ ಬೇರೆ ಆಣೆ ಮಾಡಲು. ಇನ್ನು ಸೀರೆ, ಮಿಕ್ಸಿ, ಮೊಬೈಲು, ಚಿನ್ನ-ಬೆಳ್ಳಿ ಮತ್ತಿತರ ಭೌತಿಕ ವಸ್ತುಗಳಿಗಂತೂ ಲೆಕ್ಕವೇ ಇಲ್ಲ. ನಮ್ಮ ನಾಡು ಯಾವಾಗ ಉದ್ಧಾರವಾಗುತ್ತದೋ ಆ ಮಂಜುನಾಥನೇ ಬಲ್ಲ.

ಆದರೆ, ಬೆಂಗಳೂರಿನಲ್ಲೊಬ್ಬ ವ್ಯಕ್ತಿ ಮತಹಾಕುವುದು ಎಷ್ಟು ಪವಿತ್ರವಾದದ್ದು ಎಂಬುದನ್ನು ಬಲ್ಲರು. ಇದರಲ್ಲಿ ಯಾವುದೇ ವಿಶೇಷತೆಯಿಲ್ಲ. ಮತದಾನ ಮಾಡುವುದು ಕರ್ತವ್ಯ ಮಾತ್ರವಲ್ಲ, ಅದು ಪವಿತ್ರ ಎಂದು ನಂಬಿದವರು ಬೇಕಾದಷ್ಟಿದ್ದಾರೆ. ಆದರೆ, ಏಪ್ರಿಲ್ 18ರಂದು ಮತದಾನ ಮಾಡಿದವರಿಗೆ ಅವರೇ ಒಂದು ವಿಶೇಷ ಕೊಡುಗೆಯನ್ನು ನೀಡುತ್ತಿದ್ದಾರೆ. ಅದೂ ಉಚಿತವಾಗಿ.

ಮೈಸೂರಿನಲ್ಲಿ 'ಸೆಲ್ಫಿ ವಿತ್ ಯುವರ್ ವೋಟರ್ ಐಡಿ'ಗೆ ಭರ್ಜರಿ ರೆಸ್ಪಾನ್ಸ್

ಅದೇನೆಂದರೆ, ಮತದಾನ ಮಾಡಿ, ತಮ್ಮ ಬಳಿ ಬಂದವರಿಗೆ ಉಚಿತವಾಗಿ ಹೇರ್ ಕಟ್ ಮತ್ತು ಶೇವಿಂಗ್ ಮಾಡುವುದಾಗಿ ಮಾತು ಕೊಟ್ಟಿದ್ದರು, ಬೆಂಗಳೂರಿನ ಕೋಡಿಚಿಕ್ಕನಹಳ್ಳಿಯಲ್ಲಿ ಗುಡ್ ಲೈನ್ಸ್ ಪಾರ್ಲರ್ ನಡೆಸುತ್ತಿರುವ ಶ್ರೀನಿವಾಸ್ ಮತ್ತು ಅವರ ಮಕ್ಕಳು.

ಸುಮಾರು 40 ವರ್ಷಗಳಿಂದ ಕ್ಷೌರಿಕ ವೃತ್ತಿಯಲ್ಲಿ ಇರುವ ಶ್ರೀನಿವಾಸ್ ಮತ್ತು ಇದೀಗ ಅವರ ಜೊತೆಯಾಗಿರುವ ಅವರಿಬ್ಬರು ಮಕ್ಕಳ ವಾಗ್ದಾನ, ಯಾವುದೇ ಪಕ್ಷದ ಪ್ರಣಾಳಿಕೆಯಲ್ಲಿನ ಹುಸಿ ಭರವಸೆಯಂತಲ್ಲ. ಮಾತುಕೊಟ್ಟಂತೆ, ಇಂದು ಬೆಳಗ್ಗಿನಿಂದಲೇ ಮತದಾನ ಮಾಡಿದವರಿಗೆ ಉಚಿತವಾಗಿ ಕ್ಷೌರ ಮಾಡುತ್ತಿದ್ದಾರೆ.

ಮತದಾನ ಮಾಡದೆ ಕಳ್ತಪ್ಪಿಸಿ ನಂದಿಬೆಟ್ಟಕ್ಕೆ ಪ್ರವಾಸ ಹೋದರೆ ಹುಷಾರ್!

ಇದು ಇವರು ಪ್ರಥಮ ಬಾರಿಯೇನು ಮಾಡುತ್ತಿಲ್ಲ. ಕಳೆದ ಚುನಾವಣೆಯಲ್ಲಿಯೂ ಶ್ರೀನಿವಾಸ್ ಅವರು ಇದೇ ರೀತಿ, ಮತದಾನ ಮಾಡಿದವರಿಗೆ ಉಚಿತವಾಗಿ ಹೇರ್ ಕಟ್ ಮತ್ತು ಶೇವಿಂಗ್ ಮಾಡಿದ್ದರು. ಬೆಳಿಗ್ಗೆಯಿಂದಲೇ ಅವರ ಕ್ಷೌರದಂಗಡಿ ಮತದಾನ ಮಾಡಿ ಬಂದವರಿಂದ ತುಂಬಿ ತುಳುಕುತ್ತಿದೆ. ಎಷ್ಟೇ ಜನ ಬಂದರೂ ಯಾರನ್ನೂ ವಾಪಸ್ ಕಳಿಸುವುದಿಲ್ಲ ಎಂದು ಅವರು ಒನ್ಇಂಡಿಯಾ ಕನ್ನಡಕ್ಕೆ ಹೆಮ್ಮೆಯಿಂದ ಹೇಳಿದರು.

"ಇಂದಿನ ಕಾಲದಲ್ಲಿ ವೋಟು ಹಾಕುವವರೇ ಕಮ್ಮಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲೂ ಮತದಾನ ತುಂಬಾ ಕಡಿಮೆಯಾಗಿತ್ತು. ಈ ಉಚಿತ ಸೇವೆಯ ಕಾರಣದಿಂದಲಾದರೂ ಈ ಬಾರಿ ಮತದಾನ ಜಾಸ್ತಿಯಾದರೆ ಸಾಕು ಎಂಬ ಕಾರಣದಿಂದ ಉಚಿತವಾಗಿ ಕ್ಷೌರ ಮಾಡುತ್ತಿದ್ದೇವೆ. ನಮಗೆ ಇದಕ್ಕಿಂತ ಖುಷಿಯ ಸಂಗತಿ ಮತ್ತೊಂದಿಲ್ಲ" ಎಂದು ಶ್ರೀನಿವಾಸ್ ತಮ್ಮ ಅನಿಸಿಕೆ ಹಂಚಿಕೊಂಡರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ತಮ್ಮ ಬಳಿಗೆ ಉಚಿತವಾಗಿ ಕ್ಷೌರ ಮಾಡಿಸಿಕೊಳ್ಳಬಯಸುವವರು ಸಂಜೆ 6 ಗಂಟೆಯೊಳಗೆ ಬರಬೇಕು. ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಾತ್ರ ಮಾಡಬೇಕೆಂದೇನಿಲ್ಲ, ಯಾವುದೇ ಕ್ಷೇತ್ರದಲ್ಲಿ ಮತದಾನ ಮಾಡಿರಬಹುದು. ಯಾವ ಪಕ್ಷಕ್ಕೆ ಮತ ಹಾಕಿದ್ದೀರಿ ಎಂದು ಕೂಡ ಕೇಳುವುದಿಲ್ಲ. ಒಟ್ಟಿನಲ್ಲಿ ಮತ ಚಲಾಯಿಸಿದ ಶಾಯಿಯಿರುವ ಬೆರಳು ತೋರಿಸಿದರೆ ಸಾಕು, ಅವರಿಗೆ ಉಚಿತ ಸೇವೆ ಗ್ಯಾರಂಟಿ ಎಂದು ಹೆಮ್ಮೆಯಿಂದ ಹೇಳುತ್ತಾರೆ ಶ್ರೀನಿವಾಸ್ ಅವರ ಮಗ ರಾಮು.

ತಮಿಳುನಾಡಿನ ಮೂಲದವರಾದ ಶ್ರೀನಿವಾಸ್ ಅವರು ಬೆಂಗಳೂರಿನಲ್ಲಿಯೇ ವೃತ್ತಿಯ ಜೊತೆಗೆ ಗೂಡು ಕಟ್ಟಿಕೊಂಡಿದ್ದಾರೆ. ದೇಶದಲ್ಲಿ ಯಾವುದೇ ಸರಕಾರ ಬರಲಿ, ಯಾವುದೇ ವ್ಯಕ್ತಿ ಪ್ರಧಾನಿಯಾಗಲಿ ಚಿಂತೆಯಿಲ್ಲ, ಆದರೆ ಸದೃಢ ಸರಕಾರ ಸ್ಥಾಪನೆಯಾಗಲಿ ಎಂದು ಆಶಯ ವ್ಯಕ್ತಪಡಿಸುತ್ತಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lok Sabha Elections 2019 : Free haircut and shaving by Bengaluru barber Srinivas and his sons. To increase percentage of voting in Bengaluru, Srinivas is giving this offer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more