ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಯ ಆಟ ಕೆಡಿಸಿದ ಕುಮಾರಣ್ಣ ಮತ್ತು ಸಿದ್ದು

By Srinath
|
Google Oneindia Kannada News

ಬೆಂಗಳೂರು, ಮೇ 17: ಇಡೀ ದೇಶ ಮೋದಿಗೆ ನಮೋ ನಮಃ ಅಂದಿದ್ದರೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ತಲಾ ಒಂದು ಆಘಾತವಾಗಿದೆ. ಒಂದು, ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಆ ಪಕ್ಷದ ಅಭ್ಯರ್ಥಿ ಬಚ್ಚೇಗೌಡರು ಸೋತಿರುವುದು ಮತ್ತು ಅತ್ತ ಪಂಜಾಬಿನ ಅಮೃತಸರದಲ್ಲಿ ಅರುಣ್ ಜೇಟ್ಲಿ ಅವರು ಸೋತಿರುವುದು. ಖಂಡಿತಾ ಇವೆರಡನ್ನೂ ಬಿಜೆಪಿ ನಿರೀಕ್ಷಿಸಿರಲಿಲ್ಲ.

ಆದರೆ ಈ ಎರಡೂ ಪ್ರಕರಣಗಳಲ್ಲಿ ವಿಘ್ನ ಸಂತೋಷಿಗಳು ಹೆಚ್ಚು ಪರಿಣಾಮ ಬೀರುವುದು ಸ್ಪಷ್ಟವಾಗಿದೆ. ಚಿಕ್ಕಬಳ್ಳಾಪುರ ಅಖಾಡಕ್ಕೆ ಲೇಟ್ ಎಂಟ್ರಿ ಕೊಟ್ಟ ಎಚ್‌ ಡಿ ಕುಮಾರಸ್ವಾಮಿ ಮತ್ತು ಅತ್ತ ಅಮೃತಸರದಲ್ಲಿ ಜೇಟ್ಲಿಗೆ ಕ್ಷೇತ್ರ ಬಿಟ್ಟುಕೊಟ್ಟ ಮಾಜಿ ಕ್ರಿಕೆಟ್ಟಿಗ ನವಜೋತ್ ಸಿಂಗ್ ಸಿದ್ದು. ಗಮನಾರ್ಹವೆಂದರೆ ಸೋತರೂ ಬಿಜೆಪಿಯ ಪ್ರಭಾವಿ ನಾಯಕರಾಗಿರುವ ಜೇಟ್ಲಿ ಮೋದಿ ಸಂಪುಟ ಸೇರ್ಪಡೆ ಖಚಿತ ಅನ್ನಬಹುದು. ಆದರೆ ಬಚ್ಚೇಗೌಡರ ವಿಷಯದಲ್ಲಿ ಹಾಗೆ ಹೇಳಲಾಗದು.

ಮೊದಲು ನಮ್ಮ ಚಿಕ್ಕಬಳ್ಳಾಪುರ ಕ್ಷೇತ್ರದ ಬಗ್ಗೆ ಹೇಳುವುದಾದರೆ ತಾವು ಸೋತಿರುವ ದುಃಖಕ್ಕಿಂತ ತಮ್ಮ ತಂದೆ ಮತ್ತು ಮಾತೃಪಕ್ಷಕ್ಕೆ ದ್ರೋಹ ಮಾಡಿದ ಬಚ್ಚೇಗೌಡರನ್ನು ಸೋಲಿಸಿ ಮನೆಗೆ ಕಳುಹಿಸಿದ ಆನಂದವನ್ನು ಇಂದು (ನಿನ್ನೆ) ಕುಮಾರಸ್ವಾಮಿಯವರಲ್ಲಿ ಕಾಣಬಹುದಾಗಿದೆ. ಜಾಣ ಕುಮಾರಸ್ವಾಮಿಗೆ ಇಲ್ಲಿ ಕಳೆದುಕೊಳ್ಳಬೇಕಿದ್ದು ಏನೂ ಇರಲಿಲ್ಲ.

lok-sabha-election-result-2014-bn-bachegowda-arun-jaitley-defeats-set-back-for-bjp

ಫಲಿತಾಂಶದ ನಂತರ ಅವರು ಕಳೆದುಕೊಂಡಿದ್ದೂ ಏನೂ ಇಲ್ಲ. ಅಲ್ಲಿ ರಾಮನಗರದ ಶಾಸಕತ್ವ ಸುಭದ್ರವಾಗಿದೆ. ಜತೆಗೆ, ಬೋನಸ್ ಆಗಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವೂ ಒಲಿದುಬರಲಿದೆ. 'ನಾನು ರಾಜ್ಯ ರಾಜಕಾರಣದಲ್ಲೇ ಇರಬೇಕು ಎಂಬುದು ಜನರ ಅಪೇಕ್ಷೆ' ಎಂದು ಕುಮಾರಸ್ವಾಮಿ ಅದಾಗಲೇ ಹೇಳಿಯಾಗಿದೆ. ಹಾಗಾಗಿ ಪಕ್ಷದ ರಾಜ್ಯಾಧ್ಯಕ್ಷರಾಗಿ ರಾಜ್ಯದಲ್ಲೇ ರಾಜಕಾರಣ ಮಾಡಿಕೊಂಡಿರುತ್ತಾರೆ.

ಆದರೆ ದೊಡ್ಡಗೌಡರನ್ನು ವಿಪರೀತವಾಗಿ ಸಾರ್ವಜನಿಕವಾಗಿಯೇ ಎದುರು ಹಾಕಿಕೊಂಡಿದ್ದು ಕುಮಾರಸ್ವಾಮಿ ರೂಪದಲ್ಲಿ ಬಚ್ಚೇಗೌಡರಿಗೆ ಮುಳುವಾಯಿತು ಅನ್ನಬಹುದು. ಏಕೆಂದರೆ, ಕಾಂಗ್ರೆಸ್ಸಿನ ಮೊಯ್ಲಿ ಅವರನ್ನು ಸೋಲಿಸಬೇಕು ಎಂಬುದಕ್ಕಿಂತ ಹೆಚ್ಚಾಗಿ ಬಚ್ಚೇಗೌಡರ ವಿರುದ್ಧ ಸೇಡು ತೀರಿಸಿಕೊಳ್ಳಲು ದೊಡ್ಡಗೌಡರಿಂದ ರಣವೀಳ್ಯ ಪಡೆದವರಂತೆ ಕೊನೆಯ ಕ್ಷಣದಲ್ಲಿ ಎಂಟ್ರಿಕೊಟ್ಟರು. (ಎಲ್ಲ ತೀರ್ಮಾನ ದೇವೇಗೌಡರ ಅಡುಗೆ ಮನೆಯಿಂದಲೇ)

ಆರು ತಿಂಗಳಿಂದ ಕ್ಷೇತ್ರದಲ್ಲಿ ಬೇಸ್ ಹಾಕಿಕೊಂಡು ಬಂದಿದ್ದ ಬಚ್ಚೇಗೌಡರು ಕುಮಾರಣ್ಣನ ತಂತ್ರಕ್ಕೆ ನಿರುತ್ತರರಾದರು. ಹಳ್ಳಿ ಹಳ್ಳಿಯಲ್ಲೂ 'ಅದ್ಯಾರೋ ಮೋದಿಯಂತೆ, ಮತ್ತು ನಮ್ಮದೇ ಬಚ್ಗೌಡ್ರಿಗೆ' ವೋಟ್ ಮಾಡ್ತೀವಿ ಎಂದು ಮುಗ್ಧ ಮತದಾರರು ಎದೆಯುಬ್ಬಿಸಿ ಹೇಳುತ್ತಿದ್ದರು. ಆದರೆ ಇವರಿಬ್ಬರ ಜಗಳದಲ್ಲಿ ಸ್ವತಃ ತಮಗೇ ಆಶ್ಚರ್ಯವಾಗುವಂತೆ ಮೊಯ್ಲಿ ಅವರು ನಿರಾಯಾಸವಾಗಿ ಗೆದ್ದುಬಿಟ್ಟರು.

ಚುನಾವಣೆ ಸಂದರ್ಭದಲ್ಲಿ ಇಡೀ ಕ್ಷೇತ್ರದಲ್ಲಿ ದಟ್ಸ್ ಕನ್ನಡ ತಂಡ ಓಡಾಡಿತ್ತು. ಜನರ ನಾಡಿ ಮಿಡಿತವನ್ನು ಅಳೆಯುತ್ತಾ ಚುನಾವಣೆಯಲ್ಲಿ ಗೆಲುವು ಯಾರದಾಗಬಹುದು ಎಂಬ ಸಣ್ಣಮಟ್ಟದ ಲೆಕ್ಕಾಚಾರ ನಡೆಸಿತ್ತು. ಕುಮಾರಸ್ವಾಮಿ ಅಖಾಡಕ್ಕೆ ದಿಢೀರನೆ ಧುಮುಕುವವರೆಗೂ ಬಚ್ಚೇಗೌಡರದ್ದೇ ಕ್ಷೇತ್ರ ಅನ್ನುತ್ತಿದ್ದರು ಮತದಾರರು. ಹಾಗಂತ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುತ್ತಿದ್ದಂತೆ ಬಚ್ಚೇಗೌಡರ ಪರ ಅಚಲವಾಗಿದ್ದ ಮತದಾರರು ಕುಮಾರಸ್ವಾಮಿಗೆ ಮತ ಹಾಕಿ ಗೆಲ್ಲಿಸುತ್ತಾರೆ ಅಂತಲ್ಲ.

ಆದರೆ ಆಟ ಕೆಡಿಸಿದ ಕುಮಾರಸ್ವಾಮಿ ಮತ ವಿಭಜನೆಯಾಗುವಂತೆ ಮಾಡಿದರು. ಕುಮಾರಸ್ವಾಮಿಗೆ ಬಿದ್ದ ಮತಗಳೆಲ್ಲಾ ಬಚ್ಚೇಗೌಡರ ಪಾಲಾಗಿ ಭರ್ಜರಿ ಗೆಲುವು ದಾಖಲಿಸಬೇಕಿತ್ತು. ಆದರೆ ಆಟ ಕೆಡಿಸಿದ ಕುಮಾರಸ್ವಾಮಿ ತಾವೂ ಗೆಲ್ಲಲಿಲ್ಲ. ಮೊಯ್ಲಿ ಗೆಲುವಿನೆ ಅಂತರ ನೋಡಿದಾಗ ಇದು ಸುಸ್ಪಷ್ಟವಾಗುತ್ತದೆ. ಕೇವl 9 ಸಾವಿರ ಮತಗಳ ಅಂತರದಿಂದ ಮೊಯ್ಲಿ ಗೆಲುವು ದಾಖಲಿಸಿದ್ದಾರೆ. ಇನ್ನು ಮೂರನೇ ಸ್ಥಾನಕ್ಕಿಳಿದ ಕುಮಾರಸ್ವಾಮಿ ಗೆದ್ದ ಮತಗಳು 3 ಲಕ್ಷಕ್ಕೂ ಹೆಚ್ಚು. ಅದೆಲ್ಲಾ ಖಂಡಿತಾ ಬಚ್ಚೇಗೌಡರ ಖಾತೆಗೆ ಜಮೆಯಾಗಬೇಕಿದ್ದ ಮತಗಳು.

ಇನ್ನು ರಾಷ್ಟ್ರಮಟ್ಟದಲ್ಲಿ ಹೇಳಬೇಕೆಂದರೆ ಬಿಜೆಪಿಯ ತಂತ್ರಗಾರಿಕೆ ಮತ್ತು ಪಕ್ಷದ ಮೆದುಳಿನಂತೆ ಕೆಲಸ ಮಾಡುತ್ತಿದ್ದ ಹಿರಿಯ ನಾಯಕ ಅರುಣ್‌ ಜೇಟ್ಲಿ ಅವರು ತಮ್ಮ ಚೊಚ್ಚಲ ಲೋಕಸಭಾ ಚುನಾವಣೆ ಸ್ಪರ್ಧೆಯಲ್ಲಿ ಸೋಲನ್ನು ಅನುಭವಿಸಿರುವುದು. ಇಲ್ಲಿ ಅವರ ಪ್ರತಿಸ್ಪರ್ಧಿ ಕ್ಯಾ. ಅಮರಿಂದರ್ ಸಿಂಗ್ ಅವರು ಗೆದ್ದರು ಅನ್ನುವುದಕ್ಕಿಂತ ಜೇಟ್ಲಿ ಸೋಲಿಗೆ ಕ್ಷೇತ್ರದ ಹಾಲಿ ಸಂಸದರಾಗಿದ್ದ ನವಜೋತ್ ಸಿಂಗ್ ಸಿದ್ದು ಕಾರಣ ಎನ್ನಬಹುದು.

ನವಜೋತ್‌ ಸಿಂಗ್‌ ಸಿದ್ದು ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ಈ ಬಾರಿ ಅವರಿಗೆ ಟಿಕೆಟ್‌ ನಿರಾಕರಿಸಿ ಜೇಟ್ಲಿಗೆ ನೀಡಲಾಗಿತ್ತು. ಬಹಿರೆಂಗವಾಗಿಯೇ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಸಿದ್ದು ಮುನಿಸಿಕೊಂಡು ಕ್ಷೇತ್ರದಿಂದ ಹೊರನಡೆದುಬಿಟ್ಟರು. ಅಪ್ಪಿತಪ್ಪಿಯೂ ಕನಿಷ್ಠ ಪಕ್ಷಕ್ಕಾದರೂ ನಿಷ್ಠರಾಗಿ ಜೇಟ್ಲಿ ಪರ ಮತಯಾಚನೆಗೆ ಬರಲಿಲ್ಲ. ಕರ್ತವ್ಯ ವಿಮುಖರಾದ ಸಿದ್ದು ಉದ್ದೇಶಪೂರ್ವಕವಾಗಿ ಐಪಿಎಲ್ ವ್ಯಾಮೋಹದಲ್ಲಿ ಮೈಮರೆತರು. (ಅರುಣ್ ಜೇಟ್ಲಿ ಮುಂದಿನ ಹಣಕಾಸು ಸಚಿವ -ಮೋದಿ)

ಇದು ಅಮೃತಸರದ ಮತದಾರರಿಗೆ ಬೇರೆಯದೇ ಸಂದೇಶವನ್ನು ರವಾನಿಸಿತು. ಕೊನೆಯ ಕ್ಷಣದಲ್ಲಿ ಖುದ್ದು ನರೇಂದ್ರ ಮೋದಿಯೇ ಬಂದು ಜೇಟ್ಲಿ ಬಗ್ಗೆ ಏನೆಲ್ಲಾ ಭರವಸೆಗಳನ್ನು ಕೊಟ್ಟರೂ ಅದು ಮತದಾರನ ಮೇಲೆ ಪ್ರಭಾವ ಬೀರಲಿಲ್ಲ. ಏಕೆಂದರೆ ಮುನಿಸಿಕೊಂಡು ಕ್ಷೇತ್ರದಿಂದ ಹೊರನಡೆದಾಗಲೇ ಮತದಾರರಿಗೆ ಸಿದ್ದು ಸಂದೇಶ ಅರ್ಥವಾಗಿತ್ತು.

English summary
Lok Sabha election 2014 Results- BN Bachegowda and Arun Jaitley defeat set back for BJP. BN Bachegowda in Chickballapur and Arun Jaitley in Amritsar constituencies are defeated. But why? Here is brief ground report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X