ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಪ್ಪನ ಅಗ್ರಹಾರದಲ್ಲಿ ಯಾರು ಮಾಡುತ್ತಿದ್ದಾರೆ ಕಿತಾಪತಿ?

By Kiran B Hegde
|
Google Oneindia Kannada News

ಬೆಂಗಳೂರು, ನ. 15: ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಹಿಳಾ ಖೈದಿಗಳಿಗೆ ಲೈಂಗಿಕ ಕಿರುಕುಳ ಆರೋಪ ಪ್ರಕರಣ ಅಚ್ಚರಿಯ ತಿರುವು ಪಡೆದಿದೆ.

ಲೈಂಗಿಕ ಕಿರುಕುಳ ಆರೋಪ ಹೊರಿಸಿ ಹೈಕೋರ್ಟ್‌ಗೆ ತಲುಪಿರುವ ಪತ್ರ ನಾವು ಬರೆದದ್ದಲ್ಲ ಎಂದು ಮಹಿಳಾ ಖೈದಿಗಳು ವಿಚಾರಣೆಗೆ ತೆರಳಿದ್ದ ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧಾ ಅವರಲ್ಲಿ ತಿಳಿಸಿದ್ದಾರೆ. ಅಲ್ಲದೆ, ಪತ್ರ ಬರೆದಿರುವುದು ಯಾರು ಎಂಬುದರ ಕುರಿತು ಸರ್ಕಾರವೇ ತನಿಖೆ ನಡೆಸಲಿ ಎಂದು ತಿಳಿಸಿದ್ದಾರೆ.

jail

ಸಚಿವೆ ಉಮಾಶ್ರೀ ಭೇಟಿ: ನಂತರ ಮಧ್ಯಾಹ್ನ ಪರಪ್ಪನ ಅಗ್ರಹಾರದ ಜೈಲಿಗೆ ಭೇಟಿ ನೀಡಿದ ಸಚಿವೆ ಉಮಾಶ್ರೀ ಮಹಿಳಾ ಖೈದಿಗಳನ್ನು ಯೋಗಕ್ಷೇಮ ವಿಚಾರಿಸಿದರು. ಆದರೆ, ಅವರಿಗೂ ಈ ಪತ್ರ ಬರೆದದ್ದು ನಾವಲ್ಲ, ನಮಗೇನೂ ತಿಳಿದಿಲ್ಲ ಎಂದಷ್ಟೇ ಹೇಳಿದ್ದಾರೆ.

ಪ್ರಕರಣವೇನು: ಪರಪ್ಪ ಅಗ್ರಹಾರದ ಜೈಲಿನ ಮಹಿಳಾ ಖೈದಿಗಳು ಬರೆದಿದ್ದು ಎನ್ನಲಾದ ಎರಡು ಪತ್ರಗಳು ಹೈಕೋರ್ಟ್‌ಗೆ ತಲುಪಿದ್ದವು. ಇದರಲ್ಲಿ ಮಹಿಳಾ ಖೈದಿಗಳನ್ನು ಒತ್ತಾಯಪೂರ್ವಕವಾಗಿ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳಲಾಗುತ್ತಿದೆ. ಜೈಲಿನ ವಾರ್ಡನ್‌ಗಳು 200-300 ರೂ. ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. [ಸೆಂಟ್ರಲ್ ಜೈಲಿನಲ್ಲಿ ಮಹಿಳಾ ಖೈದಿಗಳಿಗೆ ಲೈಂಗಿಕ ಕಿರುಕುಳ]

ಈ ಪತ್ರಗಳನ್ನೇ ದೂರು ಎಂದು ಸ್ವೀಕರಿಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಶುಕ್ರವಾರ ರಾಜ್ಯ ಸರ್ಕಾರ ಆದೇಶಿಸಿತ್ತು.

ಅಧಿಕಾರಿಗಳು 15 ದಿನಗಳಲ್ಲಿ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಬೇಕು. ನಂತರ ಜೈಲಿನ ಅಧಿಕಾರಿಗಳು ತಪ್ಪಿತಸ್ಥರು ಎಂದು ಕಂಡುಬಂದಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಸೂಚಿಸಿದ್ದರು.

ಹೈಕೋರ್ಟ್‌ಗೆ ಬಂದಿರುವ ಪತ್ರ...

ಇವರಿಗೆ,
ಹೈಕೋರ್ಟ್ ಮುಖ್ಯನ್ಯಾಯಾಧೀಶರು
ಬೆಂಗಳೂರು

ಸ್ವಾಮಿ, ಈ ಮೂಲಕ ತಮಗೆ ತಿಳಿಸುವುದೇನೆಂದರೆ, ನಮಗೆ ಜೈಲಿನಲ್ಲಿ ಜೀವಿಸುವುದು ಕಷ್ಟವಾಗುತ್ತಿದೆ. ವಾರ್ಡನ್‍ಗಳಾದ ಸೌಭಾಗ್ಯ, ಗಾಯತ್ರಿ, ಸುನಂದಾ, ಮಂಜುಳ, ಇಂದುಮತಿ ದುಡ್ಡಿಗಾಗಿ ಕಾಟ ಕೊಡುತ್ತಿದ್ದಾರೆ. ಹಣ ಕೊಟ್ಟರೆ ನಮ್ಮ ಕಡೆ ಗಮನ ಹರಿಸುತ್ತಾರೆ.

ನಮ್ಮನ್ನು ಭೇಟಿ ಮಾಡಲು ಬಂದವರು ತರುವ ತಿಂಡಿಯನ್ನೂ ಕಿತ್ತುಕೊಳ್ಳುತ್ತಾರೆ. ನೀವು ಜೈಲು ಅನ್ನವನ್ನೇ ತಿಂದು ಸಾಯಬೇಕು ಅಂತಾರೆ. ಈಗ ಬಂದಿರುವ ಜೈಲರ್ ಚೆನ್ನಮ್ಮ ಕೂಡ ವಾರ್ಡನ್‍ಗಳ ತಾಳಕ್ಕೆ ಕುಣೀತಾರೆ. ದುಡ್ಡು ಕೊಡಲಿಲ್ಲ ಅಂದ್ರೆ ಸಂಬಂಧಿಕರ ಸಂದರ್ಶನಕ್ಕೆ ಅವಕಾಶ ಕೊಡಲ್ಲ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕೈದಿಯೊಬ್ಬರನ್ನು ಕರೆದುಕೊಂಡು ಹೋಗಿ, ತಮ್ಮ ಮನೆಯನ್ನೇ ಲಾಡ್ಜ್ ಮಾಡಿಕೊಂಡು ಪುರುಷ ಕೈದಿಯೊಂದಿಗೆ ಸಹಕರಿಸುವಂತೆ ಕಿರುಕುಳ ನೀಡಿದ್ದಾರೆ.

ದಯಮಾಡಿ ವಾರ್ಡನ್ ಜಯಮ್ಮರನ್ನ ವರ್ಗಾವಣೆ ಮಾಡಿ. ಅಧಿಕಾರಿಗಳು ಇವಳಿಗೆ ಹೆದರಿ ಓಡುತ್ತಾರೆ. ಮಹಿಳಾ ಕೈದಿಗಳಿಗೆ ತುಂಬಾ ಹಿಂಸೆಯಾಗಿದೆ. ಕಳೆದ ತಿಂಗಳು ಜ್ಯೋತಿ ಎನ್ನುವ ಕೈದಿಗೆ ಹೊಡೆದು ಕೈಗಳನ್ನ ಬ್ಲೇಡಿನಿಂದ ಕೊಯ್ಡು ಜಗಳ ಮಾಡಿದ್ದಾಳೆ. ನಾವು ನೀಟಾಗಿ ಇರಬಾರದಂತೆ, ಚೆನ್ನಾಗಿ ಕಾಣಬಾರದು. ನಾವು ಕೊಲೆ ಮಾಡಿಬಂದಿದ್ದೇವೆ ಅಂತಾ ಪದೇ ಪದೇ ಹೇಳುತ್ತಾಳೆ.

ಇವರು ಆರು ಜನರು ಕೊಡುತ್ತಿರುವ ಹಿಂಸೆಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ನಾಳೆ ನಮ್ಮ ಜೀವನಕ್ಕೆ ಏನಾದ್ರೂ ಆದ್ರೆ ಇವರುಗಳೇ ಕಾರಣ. ನಾವು ಕಂಪ್ಲೇಂಟ್ ಮಾಡೋಣ ಅಂದ್ರೆ, ಯಾರೂ ಸರಿಯಾಗಿ ರೌಂಡ್ಸ್‍ಗೆ ಬರೋದಿಲ್ಲ. ಅವರ ಎದುರಿಗೆ ಇವರ ಬಗ್ಗೆ ಕಂಪ್ಲೇಂಟ್ ಮಾಡಿದರೆ ಬಾಯಿಗೆ ಬಂದ ಹಾಗೆ ಬಯ್ಯುತ್ತಾರೆ.

ಗಾಯತ್ರಿ ಮತ್ತು ಸೌಭಾಗ್ಯ ವಾರ್ಡನ್‍ಗಳಿಗೆ 500 ರೂಪಾಯಿ ಕೊಟ್ಟರೆ ಪುರುಷ ಕೈದಿಗಳ ಬಳಿ, ಮಹಿಳಾ ಕೈದಿಗಳನ್ನ ತಲೆಹಿಡಿದು ಒಯ್ಯುತ್ತಾರೆ. ಪೆರೋಲ್ ಮೇಲೆ ಹೋಗುವ ಪುರುಷ ಕೈದಿಗಳನ್ನ ಇವರೇ ಮನೆಗಳಿಗೆ ಕರೆಸಿಕೊಳ್ಳುತ್ತಾರೆ. ಇನ್ನಷ್ಟು ವಿಷಯಗಳಿವೆ. ನಮಗೆ ಆಗುತ್ತಿರೋ ತೊಂದರೆಗಳನ್ನ ನಿಲ್ಲಿಸಿ. ನೆಮ್ಮದಿಯಿಂದ ಜೈಲು ಶಿಕ್ಷೆ ಅನುಭವಿಸಲು ದಾರಿ ತೋರಿಸಿ.

ಧನ್ಯವಾದಗಳೊಂದಿಗೆ
ಇಂತಿ ನೊಂದ ಮಹಿಳಾ ಕೈದಿಗಳು

English summary
Women prisoners of Parappana Agrahara jail told MLC Tara Anuradha that the letters went to high court is not written by them. Government has already directed to Department of Child and Women's Welfare officials to probe regarding allied forced sex. Officials need to submit report within next 15 days to government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X