• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೆಕ್ಕೆ ಬಡಿದುಕೊಂಡು ಬಂದ ಚಿಟ್ಟೆ ಸೃಷ್ಟಿಸಿದ ಸೋಜಿಗ

By ಪ್ರಸಾದ ನಾಯಿಕ
|

ಬೆಂಗಳೂರು, ಜ. 6 : ಆಕಸ್ಮಿಕವೋ, ಕಾಕತಾಳೀಯವೋ, ಪವಾಡವೋ, ಆಹ್ವಾನ ಇತ್ತೋ ಇಲ್ಲವೋ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ಸಭಾಂಗಣಕ್ಕೆ ಕಪ್ಪುಬಣ್ಣದ ಸುಂದರ ಚಿಟ್ಟೆಯೊಂದು ರೆಕ್ಕೆ ಬಡಿದುಕೊಂಡು 'ವಿಶೇಷ' ಅತಿಥಿಯಾಗಿ ಹಾರಿಬಂದಿತ್ತು. ಸ್ವಚ್ಛಂದವಾಗಿ ಹಾರಾಡಿಕೊಂಡು ಎಲ್ಲರ ಗಮನ ಸೆಳೆದಿತ್ತು. ಚಿಟ್ಟೆಯ ಆಗಮನ ಸಾಂದರ್ಭಿಕವೂ ಆಗಿತ್ತು ಮತ್ತು ಸೋಜಿಗವೂ ಆಗಿತ್ತು.

ಅದು ಹವ್ಯಾಸಿ ಬರಹಗಾರ, ಸಾಫ್ಟ್ ವೇರ್ ಇಂಜಿನಿಯರ್ ವಿದ್ಯಾಶಂಕರ ಹರಪನಹಳ್ಳಿ ಅವರು ಮೊಬೈಲ್ ಬಳಸಿ ಬರೆದಿರುವ 'ಕನಸಿನ ಚಿಟ್ಟೆಯ ಹಿಡಿಯಲು ಹೊರಟು' ಎಂಬ ಪ್ರಪ್ರಥಮ ಕನ್ನಡ ಕಾದಂಬರಿ ಮತ್ತು 'ಶುಭಸಂಕಲ್ಪ' ಎಂಬ ಸ್ಫೂರ್ತಿದಾಯಕ ಸಣ್ಣಕಥೆಗಳ ಸಂಕಲನದ ಬಿಡುಗಡೆಯ ಸಂದರ್ಭ. ಚಿಟ್ಟೆಗೆ ಕೈಗಳಿದ್ದರೆ ಚಪ್ಪಾಳೆ ತಟ್ಟುತ್ತಿತ್ತೇನೋ, ಬಾಯಿಯಿದ್ದರೆ ಇನ್ನೊಂದಿಷ್ಟು ಚಪ್ಪಾಳೆ ಹೊಡೀರಲೋ ಎಂದು ಮಾತಾಡುತ್ತಿತ್ತೇನೋ! ವಿದ್ಯಾಶಂಕರ ಪರವಾಗಿ ಆ ಚಿಟ್ಟೆಗೊಂದು ವಂದನಾರ್ಪಣೆ.

ಜ.5ರ ಭಾನುವಾರದ ಚುಮುಚುಮು ಚಳಿಯ ಸಂಜೆ, ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣ ಪರಿಷನ್ಮಂದಿರ ಫೇಸ್ ಬುಕ್ ಕುಟುಂಬದ ಸಮ್ಮಿಲನದಂತಿತ್ತು. ಹೆಚ್ಚಾನುಹೆಚ್ಚು ಫೇಸ್ ಬುಕ್ ಸ್ನೇಹಿತರೇ ಆದ್ದರಿಂದ, ಫೇಸ್ ಟು ಫೇಸ್ ಸಿಕ್ಕಾಗ ಆತ್ಮೀಯವಾಗಿ ನಕ್ಕವರೆಷ್ಟೋ, ಫೇಸ್ ಟು ಫೇಸ್ ಸಿಕ್ಕಾಗ ಮುಖ ತಿರುಗಿಸಿದವರೆಷ್ಟೋ, ಫೇಸ್ ಬುಕ್ಕಲ್ಲಿ ಇನ್ನಷ್ಟು ಸ್ನೇಹಿತರನ್ನು ಸಂಪಾದಿಸುತ್ತೇನೆಂದು ಶುಭಸಂಕಲ್ಪ ಮಾಡಿದವರೆಷ್ಟೋ.

ಅಲ್ಲಿ ಆಫ್ ಕೋರ್ಸ್ ವಿದ್ಯಾಶಂಕರ ಇದ್ದರು, ಅವರ ಧರ್ಮಪತ್ನಿ ಶೋಭಾ ಇದ್ದರು, ಒನ್ಇಂಡಿಯಾ ಕನ್ನಡ ಸಂಪಾದಕ ಎಸ್.ಕೆ. ಶಾಮ ಸುಂದರ, ಉದಯವಾಣಿ ಪುರವಣಿ ಸಂಪಾದಕ ಗಿರೀಶ್ ಹತ್ವಾರ್ (ಜೋಗಿ), ಯುವ ಪತ್ರಕರ್ತೆ ಚೇತನಾ ತೀರ್ಥಹಳ್ಳಿ, ಸಿಂಪಲ್ ನಿರ್ದೇಶಕ ಸುನಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪ್ರೇಕ್ಷಕರ ಸಾಲಿನಲ್ಲಿ ಮೊದಲನೆಯವರಾಗಿ ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಂ ಅವರು ಕುಳಿತಿದ್ದರು. ಸಂಭಾಂಗಣವೂ ಆಲ್ಮೋಸ್ಟ್ ತುಂಬಿತ್ತು. ವೇದಿಕೆಯ ಮೇಲಿದ್ದವರ ಮಾತುಗಳು ಕೆಳಗಿವೆ ಓದಿರಿ.

ಪುಸ್ತಕ ಬಿಡುಗಡೆ ಎಂದರೆ ಬೆಂಗಳೂರಿನ ಕನ್ನಡಿಗರಿಗೆ ಅದೇನೋ ಸಡಗರ. ಪುಸ್ತಕ ಕೊಳ್ಳುವ ನೆಪದಲ್ಲಿ ಹಳೆಯ, ಧಾವಂತದ ಜೀವನದಲ್ಲಿ ದಿನನಿತ್ಯ ಭೇಟಿಯೇ ಆಗದ ಸ್ನೇಹಿತರನ್ನು ಕಂಡು ಉಭಯಕುಶಲೋಪರಿ ವಿಚಾರಿಸುವ ಅವಕಾಶ. ಮಾತುಕತೆಗೆ ಒಳ್ಳೆ ವೇದಿಕೆ ನಿರ್ಮಾಣವಾಗಿತ್ತು. ವೇದಿಕೆಯ ಮೇಲೆಯೂ ಮಾತಿನ ಸುಧೆ ಹರಿಯಿತು. [ಕಾರ್ಯಕ್ರಮದ ಚಿತ್ರಗಳು]

ವಿದ್ಯಾಶಂಕರ ಅವರಿಗೆ ಒಳ್ಳೆ ಭಾಷೆಯಿದೆ

ವಿದ್ಯಾಶಂಕರ ಅವರಿಗೆ ಒಳ್ಳೆ ಭಾಷೆಯಿದೆ

ಶಾಮ ಸುಂದರ : ವಿದ್ಯಾಶಂಕರ ಅವರಿಗೆ ಒಳ್ಳೆ ಭಾಷೆಯಿದೆ, ಕಾಗುಣಿತ ತಪ್ಪಿಲ್ಲದೆ ಬರೆಯುವ ತಾಕತ್ತಿದೆ. ಅವರ ಶುಭ ಸಂಕಲ್ಪದಲ್ಲಿ ಡೆರೆಕ್ ರೆಡ್ಮಂಡ್ ಸೇರಿದಂತೆ ಹಲವಾರು ಸ್ಫೂರ್ತಿ ತುಂಬುವ ಪರಿಚಿತ, ಖ್ಯಾತ ವ್ಯಕ್ತಿಗಳ ಬಗ್ಗೆ ಬರೆದಿದ್ದಾರೆ. ಕೆಲ ದಿನಗಳ ಹಿಂದೆ ಅಮೆರಿಕದ ಕನ್ನಡತಿಯೊಬ್ಬರು ಬೆಂಗಳೂರಿಗೆ ಬಂದಿದ್ದರು, ಎರಡೂ ಮೊಳಕಾಲುಗಳ ಕ್ಯಾಪ್ ಬದಲಾವಣೆಗೆಂದು. ಅಮೆರಿಕದಲ್ಲಿಯೇ ಮಾಡಿಸಬಹುದಾಗಿದ್ದ ಆಪರೇಷನ್ ಅನ್ನು ಕನ್ನಡದ ಮೇಲಿನ ಪ್ರೀತಿಯಿಂದ ಬೆಂಗಳೂರಿಗೆ ಬಂದಿದ್ದರು.

ಇಂಥ ಮಹಿಳೆಯರ ಬಗ್ಗೆ ಬರೆಯಬೇಕು

ಇಂಥ ಮಹಿಳೆಯರ ಬಗ್ಗೆ ಬರೆಯಬೇಕು

ಅವರಿಗೆ ಸ್ತನ ಕ್ಯಾನ್ಸರ್ ಇರುವುದು ಕೆಲವೇ ದಿನಗಳ ಹಿಂದೆ ತಿಳಿದುಬಂದಿತ್ತು. ಎರಡೂ ನೋವುಗಳು ಮನೋಸ್ಥೈರ್ಯವನ್ನೇ ಕಸಿದಿತ್ತು. ಆದರೂ ಮೊಳಕಾಲು ಚಿಕಿತ್ಸೆಗೇ ಪ್ರಾಶಸ್ತ್ಯ ನೀಡಿ ನಂತರ ಅಮೆರಿಕಕ್ಕೆ ತೆರಳಿದರು. ಕೆಲವೇ ದಿನದಲ್ಲಿ ಕಚೇರಿಯಲ್ಲಿ ಅದ್ಭುತ ಸೇವೆ ಸಲ್ಲಿಸಿದ್ದಕ್ಕಾಗಿ ಅವರಿಗೆ ಅತ್ಯುತ್ತಮ ಉದ್ಯೋಗಿ ಪ್ರಶಸ್ತಿ ದೊರೆತಿತ್ತು. ಅವರ ಜೀವನೋತ್ಸಾಹ ಅದ್ಭುತ. ರೆಡ್ಮೆಂಡ್ ಬಗ್ಗೆ ಎಲ್ಲರೂ ಬರೆಯುತ್ತಾರೆ. ಆದರೆ, ನಾವು ಇಂಥ ಮಹಿಳೆಯರಿಂದಲೂ ಸ್ಫೂರ್ತಿ ಪಡೆಯಬೇಕು, ಅವರ ಬಗ್ಗೆ ಹುಡುಕುಡುಕಿ ಬರೆಯಬೇಕು.

ಫೇಸ್ ಬುಕ್ ಬರಹಗಾರರನ್ನು ಹಾಳು ಮಾಡುತ್ತಿದೆಯೇನೋ

ಫೇಸ್ ಬುಕ್ ಬರಹಗಾರರನ್ನು ಹಾಳು ಮಾಡುತ್ತಿದೆಯೇನೋ

ಜೋಗಿ : ದಕ್ಷಿಣ ಕನ್ನಡದಲ್ಲಿ ಸ್ಥಳೀಯ ಜನರನ್ನು ಬ್ಯಾಂಕ್ ಗಳು ಹಾಳು ಮಾಡಿದ ಹಾಗೆ ಫೇಸ್ ಬುಕ್ ಕೂಡ ಬರಹಗಾರರನ್ನು ಹಾಳು ಮಾಡುತ್ತಿದೆಯೇನೋ ಎಂಬ ಸಂದೇಹ ಬರುತ್ತಿದೆ. ಫೇಸ್ ಬುಕ್ ಸ್ಟೇಟಸ್ ಅಪ್ಡೇಟ್ ಮಾಡುತ್ತಿರಬೇಕು ಎನ್ನುವ ಧಾವಂತದಲ್ಲಿ ಬರೆಯಲಾಗುವ ಬರಹಗಳು ಸತ್ವವನ್ನು ಕಳೆದುಕೊಂಡಿರುತ್ತವೆ. ಹಿರಿಕಿರಿಯರೆನ್ನದೆ ಫೇಸ್ ಬುಕ್ ಎಲ್ಲರನ್ನೂ ಬೆಸೆದಿದೆಯೇನೋ ನಿಜ, ಆದರೆ ಆ ಬರಹಗಳು ಚಿಂತನೆ, ಗಾಂಭೀರ್ಯವನ್ನು ಬಿಂಬಿಸುತ್ತಿಲ್ಲ ಎಂಬುದು ಕೂಡ ಅಷ್ಟೇ ನಿಜ.

ಆಳಕ್ಕಿಳಿದು ಬರೆದಾಗ ಪ್ರೌಢಿಮೆ ಹೆಚ್ಚು

ಆಳಕ್ಕಿಳಿದು ಬರೆದಾಗ ಪ್ರೌಢಿಮೆ ಹೆಚ್ಚು

ಹಿರಿಯ ಪತ್ರಕರ್ತರೊಬ್ಬರು ಹೇಳುತ್ತಿದ್ದರು. ಕಂಪ್ಯೂಟರ್ ಮುಂದೆ ಕುಳಿತಾಗ ಏನು ಬರೆಯಬೇಕೆಂಬುದು ತಿಳಿಯದೆ ಎಲ್ಲ ಬ್ಲಾಂಕ್ ಆಗುತ್ತದೆ. ಅದೇ, ಕೈಯಲ್ಲಿ ಪೆನ್ನನ್ನು ಹಿಡಿದಾಗ ಸರಾಗವಾಗಿ ಬರೆಯಲು ಸಾಧ್ಯವಾಗುತ್ತದೆ. ತಾಂತ್ರಿಕ ಪ್ರಗತಿಯಿಂದ ಕನ್ನಡ ಮತ್ತು ತಂತ್ರಜ್ಞಾನಗಳು ಒಟ್ಟಾಗಿ ಸಾಗುತ್ತಿವೆ ಎಂಬುದೇನೋ ನಿಜ. ಅದೇ ಸಮಯದಲ್ಲಿ, ನಮ್ಮ ಚಿಂತನೆಗಳನ್ನು ಒರೆಗೆಹಚ್ಚಿ, ಹೆಚ್ಚು ಸಮಯ ತೆಗೆದುಕೊಂಡು, ವಿಷಯದ ಆಳಕ್ಕಿಳಿದು ಬರೆದಾಗ ಬರಹಗಳು ಪ್ರೌಢಿಮೆಯಿಂದ ಕೂಡಿರುತ್ತವೆ.

ಧ್ಯಾನಸ್ಥ ಸ್ಥಿತಿಗೆ ಹೋದಾಗ ಮಾತ್ರ ಸಾಧ್ಯ

ಧ್ಯಾನಸ್ಥ ಸ್ಥಿತಿಗೆ ಹೋದಾಗ ಮಾತ್ರ ಸಾಧ್ಯ

ಚೇತನಾ ತೀರ್ಥಹಳ್ಳಿ : ವಿದ್ಯಾಶಂಕರ ಹರಪನಹಳ್ಳಿ ಅವರು ಧ್ಯಾನಸ್ಥ ಸ್ಥಿತಿಯ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದಾರೆ. ಅದು ನನ್ನ ಅತ್ಯಂತ ಮೆಚ್ಚಿನ ಅಧ್ಯಾಯ ಕೂಡ. ಧ್ಯಾನ ಎಂದರೇನು? ಏಕಾಂತದಲ್ಲಿ ನಮ್ಮನ್ನು ನಾವು ಚಿಂತನೆಗೆ ಒಳಪಡಿಸಿಕೊಳ್ಳುವುದು. ಸರಿ ಯಾವುದು, ತಪ್ಪು ಯಾವುದು ಎಂಬ ಸಂಗತಿಯ ಬಗ್ಗೆ ನಮ್ಮನ್ನು ನಾವೇ ಅವಲೋಕನ ಮಾಡಿಕೊಳ್ಳುವುದು. ಆದರೆ, ಪತ್ರಕರ್ತರಾದ ನಾವು ಕೂಡ ಎಷ್ಟು ಸರಿ, ತಪ್ಪು ಬರೆಯುತ್ತೇವೆ ಎಂಬುದರ ಬಗ್ಗೆ ಚಿಂತನೆ ಮಾಡಬೇಕು. ಅದು ಧ್ಯಾನಸ್ಥ ಸ್ಥಿತಿಗೆ ಹೋದಾಗ ಮಾತ್ರ ಸಾಧ್ಯ.

ಇನ್ನಷ್ಟು ಇಂತಹ ಪ್ರಬುದ್ಧ ಬರಹಗಳು ಬರಲಿ

ಇನ್ನಷ್ಟು ಇಂತಹ ಪ್ರಬುದ್ಧ ಬರಹಗಳು ಬರಲಿ

ವಿದ್ಯಾಶಂಕರ ಅವರು ಆ ಧ್ಯಾನಸ್ಥ ಸ್ಥಿತಿಗೆ ಹೋಗಿ ಬರೆದಿದ್ದರಿಂದಲೇ ಇಂತಹ ಅತ್ಯುತ್ತಮ ಕಾದಂಬರಿ ಬರೆಯಲು ಸಾಧ್ಯವಾಗಿದ್ದು. ಅವರ ಬರಹಗಳಲ್ಲಿ ಯಾವುದೇ ಹಮ್ಮುಬಿಮ್ಮುಗಳಿಲ್ಲದೆ ಪ್ರಾಮಾಣಿಕತೆ ಎದ್ದು ಕಾಣುತ್ತದೆ. ಮೊದಲಿನಿಂದಲೂ ಎಲ್ಲ ಅಧ್ಯಾಯಗಳು ಓದದಿದ್ದರೂ, ಧ್ಯಾನದ ಬಗ್ಗೆ ಬರೆದ ಅಧ್ಯಾಯ ಓದಿದಾಗ ಎಲ್ಲ ಹಿಂದಿನ ಅಧ್ಯಾಯಗಳನ್ನು ಓದಲು ಪ್ರೇರೇಪಣೆ ನೀಡಿತು. ಅವರಿಂದ ಇನ್ನಷ್ಟು ಇಂತಹ ಪ್ರಬುದ್ಧ ಬರಹಗಳು ಬರಲಿ.

ವಿದ್ಯಾಶಂಕರ, ನಿರ್ದೇಶಕ ಸುನಿ ಮಾತುಗಳು

ವಿದ್ಯಾಶಂಕರ, ನಿರ್ದೇಶಕ ಸುನಿ ಮಾತುಗಳು

ಎಲ್ಲಕ್ಕೂ ಮೊದಲು, ತಾವು ಬರವಣಿಗೆ ಆರಂಭಿಸಿದ ಬಗೆ, ನೀರೆರೆದು ಗೊಬ್ಬರ ಹಾಕಿ ಪ್ರೋತ್ಸಾಹಿಸಿದವರು, ತಮ್ಮ ಫೇಸ್ ಬುಕ್ ಗೆಳೆಯರು, ಅವರಿಂದ ಪುಸ್ತಕ ತರಲು ಸಿಕ್ಕ ಉತ್ತೇಜನ, ಮೊಬೈಲ್ ಕಾದಂಬರಿ ಹೊರಬಂದ ಬಗೆ ಮತ್ತು ತಾವು ಕಂಡ ಜಗತ್ತಿನ ನೋವು-ನಲಿವುಗಳ ಬಗ್ಗೆ ವಿದ್ಯಾಶಂಕರ ಹರಪನಹಳ್ಳಿ ಅವರು ಸುದೀರ್ಘವಾಗಿ ಮಾತನಾಡಿದರು. ಕೊನೆಯಲ್ಲಿ, ಕೋರಿಕೆಯನ್ನು ಮನ್ನಿಸಿ ಬಂದಿದ್ದ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ನಿರ್ದೇಶಕ ಸುನಿ ಅವರು ಕೂಡ ಅಷ್ಟೇ ಸಿಂಪಲ್ಲಾಗಿ ತಮ್ಮ ಚಿತ್ರಗಳ ಬಗೆಗೆ, ವಿದ್ಯಾಶಂಕರ ಅವರ ಶುಭಸಂಕಲ್ಪದಲ್ಲಿರುವ ಲೇಖನಗಳ ಬಗೆಗಿನ ಸಿಂಪ್ಲಿಸಿಟಿಗಳ ಬಗ್ಗೆ ನಗೆಬುಗ್ಗೆ ಎಬ್ಬಿಸುವ ಹಾಗೆ ತಮ್ಮದೇ ಸ್ಟೈಲಲ್ಲಿ ಮಾತನಾಡಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Amateur writer Vidyashankar Harapanahalli's two books were released in Bangalore at Kannada Sahitya Parishat on 5th January, 2014. Sham, Jogi, Chetana Teerthahalli, Film director Suni spoke about the books at Kannada Sahitya Parishat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more