ಬೇಗೂರಿನ ಅಪಾರ್ಟ್ಮೆಂಟ್ ಬಳಿ ಚಿರತೆ, ಬೆಂಗಳೂರಿಗರೇ ಎಚ್ಚರ
ಬೆಂಗಳೂರು ಹೃದಯ ಭಾಗದಿಂದ ಕೂಗಳತೆ ದೂರದಲ್ಲಿರುವ ಬೊಮ್ಮನಹಳ್ಳಿ ಸಮೀಪದ ಬೇಗೂರು ಹಾಗೂ ಕೊಪ್ಪ ರಸ್ತೆಯ ಅಪಾರ್ಟ್ಮೆಂಟ್ ಒಂದರಲ್ಲಿ ಚಿರತೆ ನಿರಂತರವಾಗಿ ಓಡಾಡುತ್ತಿದೆ. 3 ದಿನದಿಂದ 2-3 ಬಾರಿ ಚಿರತೆ ಅಪಾರ್ಟ್ಮೆಂಟ್ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಪಾರ್ಟ್ಮೆಂಟ್ ಕಾಂಪೌಂಡ್ ಒಳಗೆ ನುಗ್ಗಿ ಬಂದಿರುವ ಚಿರತೆ ಪಾರ್ಕಿಂಗ್ ಜಾಗದಲ್ಲಿ ಓಡಾಡಿದೆ. ಮೊದಲ ಬಾರಿಗೆ ಚಿರತೆ ಇರುವುದು ಕನ್ಫರ್ಮ್ ಆದ ನಂತರ ಅರಣ್ಯಾಧಿಕಾರಿಗಳು ದೌಡಾಯಿಸಿದ್ದರು.
ಆದರೆ ನಿನ್ನೆ ರಾತ್ರಿ ಕೂಡ ಮತ್ತೆ ಚಿರತೆ ಕಂಡುಬಂದಿದೆ. ಇದು ತಿಳಿದ ತಕ್ಷಣ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದು, ಬೇಗೂರಿನ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ ವಾಸವಿರುವ ಜನರನ್ನು ಹೊರಗೆ ಬಾರದಂತೆ ಎಚ್ಚರಿಸಲಾಗಿದೆ. ಮತ್ತು ಭದ್ರವಾಗಿ ಬಾಗಿಲು, ಕಿಟಕಿ ಹಾಕಿಕೊಳ್ಳಿ ಎಂದು ಅರಣ್ಯಾಧಿಕಾರಿಗಳು ಸಂದೇಶ ರವಾನಿಸಿದ್ದಾರೆ. ಸ್ಥಳದಲ್ಲಿ ಈಗಲೂ ಕಾರ್ಯಾಚರಣೆ ನಡೆಯುತ್ತಿದ್ದು, ಎಸ್ಕೇಪ್ ಆಗಿರುವ ಚಿರತೆಗಾಗಿ ಸರ್ಚಿಂಗ್ ಆಪರೇಷನ್ ಮುಂದುವರಿದಿದೆ.
ಬೆಂಗಳೂರಿಗೆ ಬಂದ್ರೆ ಕಷ್ಟ ಕಷ್ಟ..!
ಹೌದು, ಈಗ ಎದುರಾಗಿರುವ ಆತಂಕವೂ ಅದೆ. ಬೇಗೂರಿಗೆ ನುಗ್ಗಿದ ಚಿರತೆ ಅಕಸ್ಮಾತ್ ಬೆಂಗಳೂರು ನಗರಕ್ಕೆ ಬಂದರೆ ಕಥೆ ಏನು ಎಂಬ ಭಯ ಮೂಡಿದೆ. ಹೀಗಾಗಿ ಅರಣ್ಯಾಧಿಕಾರಿಗಳು ಅಲರ್ಟ್ ಆಗಿದ್ದು, ಚಿರತೆ ನಗರ ಭಾಗಕ್ಕೆ ನುಗ್ಗದಂತೆ ಅಗತ್ಯಕ್ರಮ ಕೈಗೊಂಡಿದ್ದಾರೆ. ಇದಕ್ಕಾಗಿ ಬೋನ್ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೆ.ಆರ್. ಪುರ ವಲಯ ಅರಣ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸಹಾಯವನ್ನೂ ಪಡೆಯಲಾಗುತ್ತಿದೆ. ಅಪಾರ್ಟ್ಮೆಂಟ್ ಸೆಕ್ಯೂರಿಟಿಗಳನ್ನು ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಒಳಭಾಗದಲ್ಲಿ ಇರುವ ಗಾರ್ಡ್ಗಳನ್ನ ಗೇಟ್ನಲ್ಲಿ ನಿಯೋಜಿಸಲಾಗಿದೆ.