ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಚಾರ್ಯರು ಶುದ್ಧೀಕರಿಸಿದ ತ್ಯಾಜ್ಯ ನೀರನ್ನೇ ಕುಡಿದ್ರು!

By Srinath
|
Google Oneindia Kannada News

ಬೆಂಗಳೂರು, ಮೇ 31: ವೈಟ್ ಫೀಲ್ಡ್ ಬಳಿಯಿರುವ ರಾಮಗೊಂಡನಹಳ್ಳಿಯಲ್ಲಿ 8 ವರ್ಷಗಳ ಹಿಂದೆ ಟಿಝೆಡ್‌ ಎಂಬ ಅಪಾರ್ಟ್‌‌ಮೆಂಟ್‌ ನಿರ್ಮಾಣಗೊಂಡಿದ್ದು, ಅಂದಿನಿಂದಲೂ ಇಲ್ಲಿನ ನಿವಾಸಿಗಳು ದಿನನಿತ್ಯ ತಾವು ಬಳಸಿದ ನೀರನ್ನೇ ಶುದ್ಧೀಕರಿಸಿ ಕುಡಿಯುವ ನೀರು ಸೇರಿದಂತೆ ಅಡುಗೆ ಮತ್ತು ಸ್ನಾನಕ್ಕೂ ಅದನ್ನು ಬಳಸುತ್ತಿದ್ದಾರೆ. ಈ ಅಪಾರ್ಟ್‌‌ಮೆಂಟಿನಲ್ಲಿ 76 ಮನೆಗಳಿದ್ದು, ಅಲ್ಲಿ 500 ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ.

ಡಾಕ್ಟರ್ ಸರ್ಟಿಫಿಕೇಟ್ ನೀಡಿದ ವಾಮನಾಚಾರ್ಯ:
ಇಂತಹ ಮಾದರಿ ಅಪಾರ್ಟ್‌‌ಮೆಂಟಿಗೆ ನಿನ್ನೆ ಶುಕ್ರವಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ. ವಾಮನ್‌ ಆಚಾರ್ಯ ಅವರು ಭೇಟಿ ನೀಡಿ, ಅಪಾರ್ಟ್‌‌ಮೆಂಟಿನ ನಿವಾಸಿಗಳೂ ಶುದ್ಧೀಕರಿಸಿದ ತ್ಯಾಜ್ಯ ನೀರನ್ನು ಕುಡಿಯುವುದಕ್ಕೂ ಬಳಸುತ್ತಿರುವುದರ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ ಸ್ವತಃ ವೈದ್ಯರೂ ಆದ ವಾಮನ್‌ ಆಚಾರ್ಯರು ತಾವೂ ಸಹ ಆ ಕೊಳಚೆ ನೀರನ್ನು ಕುಡಿದು 'ಶುದ್ಧೀಕರಿಸಿದ ತ್ಯಾಜ್ಯ ನೀರು ಮರುಬಳಕೆಗೆ ಯೋಗ್ಯವಾಗಿದೆ' ಎಂದು ಡಾಕ್ಟರ್ ಸರ್ಟಿಫಿಕೇಟ್ ನೀಡಿದರು.

ಟಿಝೆಡ್‌ ಅಪಾರ್ಟ್‌‌ಮೆಂಟ್‌ ನಿವಾಸಿಗಳು ಪರಿಸರ ಸ್ನೇಹಿ ಜೀವನ ಅಳವಡಿಸಿಕೊಂಡಿರುವುದನ್ನು ಡಾ. ಆಚಾರ್ಯರು ಪ್ರತ್ಯಕ್ಷ ಕಂಡು ಮೆಚ್ಚುಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಶಿವಲಿಂಗೇಗೌಡ, ಪರಿಸರ ಅಧಿಕಾರಿ ಶ್ರೀ ಶಣ್ಮುಗಪ್ಪ ಮುಂತಾದವರು ಹಾಜರಿದ್ದರು.

KSPCB chairman Vaman Acharya drinks purified-recycled water at Ramagondanahalli

'ಬೆಂಗಳೂರಿನಲ್ಲಿ ಸಾವಿರಾರು ವಸತಿ ಸಮುಚ್ಚಯಗಳಿವೆ. ಎಲ್ಲ ಕಡೆಗಳಲ್ಲೂ ಇಂಥ ಅತ್ಯುತ್ತಮ ವಿಧಾನಗಳನ್ನು ಅಳವಡಿಸಿಕೊಂಡರೆ ನಗರದ ನೀರಿನ ಸಮಸ್ಯೆಗೂ ಪರಿಹಾರ; ತ್ಯಾಜ್ಯ ಭಾರವೂ ಕಡಿಮೆಯಾಗುತ್ತದೆ' ಎಂದು ಡಾ ಆಚಾರ್ಯರು ಇದೇ ಸಂದರ್ಭದಲ್ಲಿ ಮಾರ್ಮಿಕವಾಗಿ ನುಡಿದರು.

TZED Homes ಅಪಾರ್ಟ್‌‌ಮೆಂಟಿನಲ್ಲಿರುವ 76 ಮನೆಗಳಿಂದ ಪ್ರತಿದಿನವೂ ಹೊರಬರುವ 35 ಕಿಲೋ ಲೀಟರ್‌ ತ್ಯಾಜ್ಯ ನೀರನ್ನು ಸಂಸ್ಕರಿಸುವ ವ್ಯವಸ್ಥೆ ಇಲ್ಲಿದೆ. ಮರಳು ಮತ್ತು ಇಂಗಾಲದ ಸೋಸುವಿಕೆ ಇರುವ ಓಝೋನೈಸೇಶನ್‌ ಘಟಕ, ಮರಳು-ಇಂಗಾಲದ ನ್ಯಾನೋಫಿಲ್ಟರ್‌ ಪಾಸ್‌ ಮತ್ತು ಎರಡು ಹಂತಗಳ ರಿವರ್ಸ್‌ ಆಸ್ಮೋಸಿಸ್‌ ವಿಧಾನ - ಹೀಗೆ ಒಟ್ಟು 4 ಹಂತಗಳಲ್ಲಿ ಎಲ್ಲಾ ತ್ಯಾಜ್ಯ ನೀರನ್ನು ಸಂಸ್ಕರಿಸಿ, ಅಲ್ಲಿನ 4 ಲಕ್ಷ ಲೀಟರ್‌ ಸಾಮರ್ಥ್ಯದ ಜಲಘಟಕಕ್ಕೆ ತುಂಬಲಾಗುತ್ತದೆ. ವಾರಕ್ಕೊಮ್ಮೆ ಇದೇ ವಸತಿಯಲ್ಲಿರುವ ವಿಜ್ಞಾನಿಯೊಬ್ಬರು ನೀರಿನ ಗುಣವನ್ನು ಪರೀಕ್ಷಿಸುತ್ತಾರೆ.

ಹಂಡ್ರೆಡ್ ಪರ್ಸೆಂಟ್ ನೀರಿನ ಬಳಕೆ:
ಅದರೊಳಕ್ಕೆ ಛಾವಣಿ ನೀರು ಮತ್ತು ಕೊಳವೆ ಬಾವಿ ನೀರು ಸಹ ಸೇರಿಕೊಳ್ಳುತ್ತದೆ. ಪ್ರಯೋಗಗಳ ಮೂಲಕ ನೀರಿನ ಗುಣಮಟ್ಟವನ್ನು ಪರೀಕ್ಷಿಸಿಯೇ ಇಲ್ಲಿ ಅದನ್ನು ಕುಡಿಯಲು ಬಳಸುತ್ತಿದ್ದಾರೆ. ಒಂದೂವರೆ ವರ್ಷದಿಂದ ಇಲ್ಲಿನ ನಿವಾಸಿಗಳು ತಾವು ಬಳಸಿದ ನೀರನ್ನೇ ಶುದ್ಧೀಕರಿಸಿ ಕುಡಿಯುವ ಮೂಲಕ ಪರಿಸರ ಪ್ರೀತಿ ಮೆರೆದಿದ್ದಾರೆ. ಈ ಸಂಸ್ಕರಣೆಯಲ್ಲಿ ಹೊರಬರುವ ಶೇ. 20ರಷ್ಟು ತ್ಯಾಜ್ಯ ನೀರನ್ನೂ ಕೊಳವೆ ಬಾವಿ ಮರುಪೂರಣಕ್ಕೆ ಇಂಗುಗುಂಡಿಗಳಿಗೆ ಹಾಯಿಸುತ್ತಾರೆ!

ಪರಿಸರ ಉಳಿಸಲು ಹಲವು ಹೆಜ್ಜೆಗಳು:
ಹಾಗೆ ನೋಡಿದರೆ ಈ ವಸತಿ ಸಮುಚ್ಚಯವು ಹಲವು ಪರಿಸರ ಸ್ನೇಹಿ ಸೂತ್ರಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಇದರ ನಿರ್ಮಾಣ ಹಂತದಲ್ಲೇ ಸುಮಾರು 20 ಸಾವಿರ ಟನ್‌ನಷ್ಟು ಇಂಗಾಲ ಉಳಿತಾಯವಾಗಿದೆ. ಕಾರ್ಬನ್‌ ಕ್ರೆಡಿಟ್‌ ಪಡೆಯುದಿರುವ ಮೊದಲ ಸಂಕೀರ್ಣ ಸಹ ಇದಾಗಿದೆ. ಎಲ್ಲಾ ಮನೆಗಳ ಛಾವಣಿಗಳ ಮೇಲೆ ಶೇ. 77ರಷ್ಟು ಪ್ರದೇಶದಲ್ಲಿ ಹಸಿರು ಬೆಳೆಸಬಹುದು. ಇಡೀ ಪ್ರದೇಶದಲ್ಲಿ ಶೇ. 40ರಷ್ಟು ಜಾಗದಲ್ಲಿ ನಿಸರ್ಗದತ್ತ ಭೂಗುಣವನ್ನೇ ಉಳಿಸಿಕೊಳ್ಳಲಾಗಿದೆ. ಲೋ ಫ್ಲಶ್‌ ಶೌಚಾಲಯಗಳು, ಸಂವೇದಕಗಳಿರುವ ಮೂತ್ರಾಲಯಗಳು - ಹೀಗೆ ಇಲ್ಲಿ ನೀರಿನ ಬಳಕೆಯು ಆರಂಭದ ಹಂತಗಳಲ್ಲೇ ಶೇ. 20ರಷ್ಟು ಕಡಿಮೆಯಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಡಬಲ್‌ ಗ್ಲೇಜ್ಡ್‌ ಗಾಜಿನಿಂದ ಕೂಡಿದ ಈ ಮನೆಗಳಲ್ಲಿ ಎಲ್‌ಇಡಿ ದೀಪಗಳನ್ನು ವ್ಯಾಪಕವಾಗಿ ಬಳಸಲಾಗಿದೆ. ಪ್ರದೇಶದಲ್ಲಿ ಶೇ. 5 ರಷ್ಟು ವಿದ್ಯುತ್ತನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದ ಪಡೆಯಲಾಗುತ್ತಿದೆ. ಶೇ. 82ರಷ್ಟು ಒಳಾಂಗಣದಲ್ಲಿ ಸಹಜ ಬೆಳಕು ಹರಿಯುತ್ತದೆ. ಇಲ್ಲಿನ ಈಜುಕೊಳದ ನೀರನ್ನು ರಾಸಾಯನಿಕ ರಹಿತವಾಗಿ ಸಂಸ್ಕರಿಸಲಾಗುತ್ತದೆ.

English summary
The Karnataka State Pollution Control Board chairman Vaman Acharya drinks purified and recycled water at Ramagondanahalli. The TZED Homes ia an apartment with 76 homes at R Narayanapura, Ramagondanahalli, Behind Sigma Tech Park, Whitefield, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X