ಕರಕುಶಲಕರ್ಮಿಗಳ ಅಭಿವೃದ್ದಿಗೆ 200 ಕೋಟಿ ರು ಬೇಡಿಕೆ: ರಾಘವೇಂದ್ರ ಶೆಟ್ಟಿ
ಬೆಂಗಳೂರು ನವಂಬರ್ 26: ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ದಿ ನಿಗಮ ನಿಯಮಿತದ ನೂತನ ಅಧ್ಯಕ್ಷರಾಗಿ ಡಾ ಬೇಳೂರು ರಾಘವೇಂದ್ರ ಶೆಟ್ಟಿ ಅವರು ಗುರುವಾರ(ನ.26)ದಂದು ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿ, ''ಮುಂದಿನ 2 ವರ್ಷಗಳಲ್ಲಿ ಕರಕುಶಲ ಅಭಿವೃದ್ದಿ ನಿಗಮದ ಹೊಸ ಯೋಜನೆಗಳಿಗೆ 200 ಕೋಟಿ ರೂಪಾಯಿಗಳ ಅನುದಾನ ನೀಡುವಂತೆ ಕೇಂದ್ರದ ಜವಳಿ ಮಂತ್ರಾಲಯಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು''ಎಂದರು.
ಇಂದು ಬಿಜೆಪಿ ರಾಜ್ಯಉಪಾಧ್ಯಕ್ಷ ಬಿ ವೈ ವಿಜಯೇಂದ್ರ, ಮಹಾತ್ಮಗಾಂಧಿ ಸೇವಾಟ್ರಸ್ಟ್ ನ ಸಂಸ್ಥಾಪಕರು ವಿನಯ ಗುರೂಜಿ ಅವಧೂತರು ಹಾಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಮಾನಂದ ನಾಯ್ಕ್ ಅವರ ಉಪಸ್ಥಿತಿಯಲ್ಲಿ ಅಧಿಕಾರ ಸ್ವೀಕರಿಸಿದರು.
ನಂತರ ಮಾತನಾಡಿದ ಅವರು, ರಾಜ್ಯದ ಕರಕುಶಲಕರ್ಮಿಗಳಿಗೆ ಆಧುನಿಕ ತಂತ್ರಜ್ಞಾನ ಅಳವಡಿಕೆ ಹಾಗೂ ಮಾರಾಟಕ್ಕೆ ಸೂಕ್ತ ವೇದಿಕೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿಕೊಡಲಾಗಿದೆ. ಇದಕ್ಕೆ ಸೂಕ್ತವಾಗಿ ಸ್ಪಂದಿಸುವ ನಿರೀಕ್ಷೆಯಿದ್ದು ನಿಗಮದ ಅಭಿವೃದ್ದಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ತಾರಾ ಅನುರಾಧ ಮತ್ತು ಅನೇಕ ಗಣ್ಯರು ಶುಭ ಕೋರಿದರು.