ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವಾಲಯಗಳ ಸ್ವಾಯತ್ತತೆ, ಬಿಜೆಪಿ ಸರಕಾರ ಭಸ್ಮವಾಗಲಿದೆ; ಡಿ.ಕೆ. ಶಿವಕುಮಾರ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 31: "ರಾಜ್ಯದ ದೇವಾಲಯಗಳು ಜನರ ಆಸ್ತಿ. ಬಿಜೆಪಿ ಸರ್ಕಾರ ಈ ಆಸ್ತಿಯನ್ನು ಬಿಜೆಪಿ ಹಾಗೂ ಸಂಘ- ಪರಿವಾರದ ಕಾರ್ಯಕರ್ತರಿಗೆ ಹಸ್ತಾಂತರ ಮಾಡಲು ಮುಂದಾಗಿದೆ. ಇದು ಹಿಂದೂ ವಿರೋಧಿ ನೀತಿಯಾಗಿದ್ದು, ರಾಜ್ಯದ ಜನ ಹಾಗೂ ಆ ದೇವರು ಬಿಜೆಪಿಯನ್ನು ಕ್ಷಮಿಸುವುದಿಲ್ಲ. ಈ ನಿರ್ಧಾರದಿಂದ ಬಿಜೆಪಿ ಸರ್ಕಾರ ಸುಟ್ಟು ಭಸ್ಮವಾಗಲಿದೆ. ಕಾಂಗ್ರೆಸ್ ಹಿಂದೂ ವಿರೋಧಿಯಲ್ಲ, ಬಿಜೆಪಿ ನಿಜವಾದ ಹಿಂದೂ ವಿರೋಧಿ," ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

"ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪರಂಪರೆಯನ್ನು ಬುಡಮೇಲು ಮಾಡಲು ಸರಕಾರ ಹೊರಟಿದೆ. ಒಂದೆರಡು ದೇವಾಲಯಗಳು, ಮಠಗಳನ್ನು ಬಿಟ್ಟರೆ ಉಳಿದೆಲ್ಲವೂ ಸರ್ಕಾರದ ನಿಯಂತ್ರಣದಲ್ಲಿದೆ. ಎಲ್ಲ ದೇವಾಲಯಗಳಲ್ಲಿ ಜನರು ಕೋಟ್ಯಂತರ ರೂಪಾಯಿಯನ್ನು ಹುಂಡಿಗೆ ಹಾಕುತ್ತಾರೆ. ದೇವಾಲಯ ಇವತ್ತಿನದ್ದಲ್ಲ, ನೂರಾರು ವರ್ಷಗಳ ಆಸ್ತಿ. ಇದನ್ನು ತಮ್ಮ ಕಾರ್ಯಕರ್ತರಿಗೆ ಹಂಚಲು ಬಿಜೆಪಿ ಸರಕಾರ ಹೊರಟಿದೆ," ಎಂದು ಆರೋಪಿಸಿದ್ದಾರೆ.

"ನಾವು ಕೂಡ ಹಿಂದೂಗಳು. ಹಿಂದೂ ಧರ್ಮ ಹಾಗೂ ಸಂಸ್ಕೃತಿಯಲ್ಲಿ ನಂಬಿಕೆ ಇಟ್ಟಿರುವವರು. ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜನಪರವಾದ ಒಂದೇ ಒಂದು ಯೋಜನೆಯನ್ನು ನೀಡಲಿಲ್ಲ. ನಮ್ಮ ಸರ್ಕಾರ ಕೊಟ್ಟ ಕಾರ್ಯಕ್ರಮಗಳು ಹಾಗೂ ಬಿಜೆಪಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ. ನಾವು ಅದಕ್ಕೆ ಸಿದ್ಧ. ಈಗ ಚುನಾವಣೆಯಲ್ಲಿ ಸೋಲುತ್ತಿದ್ದೇವೆ ಎಂಬ ಕಾರಣಕ್ಕೆ ಇವರು ಗೋಹತ್ಯೆ, ಮತಾಂತರ ನಿಷೇಧ, ದೇವಾಲಯಗಳ ಸ್ವಾಯತ್ತತೆ ಕಾನೂನು ತರುತ್ತಿದ್ದಾರೆ. ಚುನಾವಣೆ ಸೋಲನ್ನು ಮರೆಮಾಚಲು, ಜನರನ್ನು ಭಾವನಾತ್ಮಕವಾಗಿ ಹಿಡಿದಿಡಲು ಪ್ರಯತ್ನಿಸುತ್ತಿದ್ದು, ನಾವು ಇದಕ್ಕೆ ಅವಕಾಶ ನೀಡುವುದಿಲ್ಲ," ಎಂದರು.

KPCC President DK Shivakumar Outrage Against Govt Decision on Autonomy of Temple Trusts In Karnataka

"ಈ ರೀತಿ ಮಾಡಿದರೆ ಜನ ಮತ ಹಾಕುತ್ತಾರೆ ಎಂಬ ಭ್ರಮೆಯಿಂದ ಮುಖ್ಯಮಂತ್ರಿಗಳು ಹೊರಬರಬೇಕು. ದೇವಾಲಯಗಳಲ್ಲಿ ಈಗ ನಡೆದುಕೊಂಡು ಹೋಗುತ್ತಿರುವ ಆಚರಣೆಯನ್ನು ಮುಂದುವರಿಸಬೇಕು. ಇಲ್ಲದಿದ್ದರೆ ನಿಮ್ಮ ಪಕ್ಷ, ಸರಕಾರ ಸುಟ್ಟು ಹೋಗುತ್ತದೆ. ನಾವು ಹಿಂದೂ ವಿರೋಧಿಗಳಲ್ಲ, ನೀವು ನಿಜವಾದ ಹಿಂದೂ ವಿರೋಧಿಗಳು. ದೇವಾಲಯ ನಿಮ್ಮ ಆಸ್ತಿಯಲ್ಲ, ರಾಜ್ಯದ ಜನರ ಆಸ್ತಿ," ಎಂದು ಆಕ್ರೋಶ ವ್ಯಕ್ತಪಡಿಸಿದರು.

"ದೇವರು, ದೇವಾಲಯಗಳನ್ನೇ ಮಾರಲು ಹೋರಟಿರುವ ನೀವು ಎಂತಹ ಕ್ರೂರ ಕೃತ್ಯಕ್ಕೆ ಕೈ ಹಾಕಿದ್ದೀರಿ. ಮುಂದಿನ ತಿಂಗಳು 4ರಂದು ನಾವು ಪಕ್ಷದ ನಾಯಕರ ಸಭೆಯಲ್ಲಿ ಈ ವಿಚಾರವಾಗಿ ಚರ್ಚೆ ಮಾಡಿ ಒಮ್ಮತದ ನಿರ್ಧಾರಕ್ಕೆ ಬರುತ್ತೇವೆ".

KPCC President DK Shivakumar Outrage Against Govt Decision on Autonomy of Temple Trusts In Karnataka

ದೇವಾಲಯಗಳನ್ನು ಭಕ್ತಾದಿಗಳಿಗೆ ನೀಡುತ್ತಿದ್ದೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, "ಕಬ್ಬಾಳಮ್ಮ ದೇವಾಲಯದಲ್ಲಿ ಏನಾಗುತ್ತಿತ್ತು, ನಾನು ಅದರ ಜವಾಬ್ದಾರಿ ತೆಗೆದುಕೊಂಡ ಮೇಲೆ ಅಲ್ಲಿ ಎಷ್ಟು ಅಭಿವೃದ್ಧಿಯಾಗಿದೆ. ನಮ್ಮ ಬನಶಂಕರಿ ದೇವಾಲಯ, ಕಾಡು ಮಲ್ಲೇಶ್ವರ ದೇವಾಲಯಗಳು ಸರ್ಕಾರದ ನಿಯಂತ್ರಣದಲ್ಲಿವೆ. ಕಳೆದ ಬಾರಿ ಅವರು ಸಮಿತಿ ರಚಿಸಿದರು. ಅದು ಏನಾಯ್ತು? ಎಂಬುದನ್ನು ನೋಡಿ," ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

"ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಯನ್ನು ಸರ್ಕಾರ ಸಂಘ ಪರಿವಾರದವರಿಗೆ ನೀಡಿದೆ. ಈಗ ದೇವಾಲಯಗಳನ್ನು ಹಸ್ತಾಂತರಿಸುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಹಿತಾಸಕ್ತಿ, ಹಿಂದೂಗಳು ಹಾಗೂ ಧಾರ್ಮಿಕ ವಿಚಾರಗಳ ಸಂಬಂಧ ಕೈಗೊಂಡಿರುವ ಜನವಿರೋಧಿ ನಿರ್ಧಾರಗಳನ್ನು ವಾಪಸ್ ತೆಗೆದುಕೊಳ್ಳುತ್ತೇವೆ," ಎಂದರು.

ಮತಾಂತರ ನಿಷೇಧ ಕಾಯ್ದೆ ಜಾರಿಗೆ ವಿಶೇಷ ಟಾಸ್ಕ್‌ಫೋರ್ಸ್ ರಚನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, "ಅದು ಸಾಧ್ಯವಿಲ್ಲ. ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ತರಲು ಮುಂದಾಗಿದೆ. ಈ ರಾಜ್ಯದಲ್ಲಿ ಕಾನೂನು ಇದೆ. ಸರಕಾರದ ನಿಲುವಿನ ವಿರುದ್ಧ ಜನರ ಮುಂದೆ ಹೋಗಿ ಹೋರಾಡುತ್ತೇವೆ. ನಾವು ಅಧಿಕಾರಕ್ಕೆ ಬಂದ ನಂತರ ಈ ಎಲ್ಲ ನಿರ್ಧಾರವನ್ನು ಹಿಂಪಡೆಯುತ್ತೇವೆ,'' ಎಂದರು.

ಆರ್‌ಎಸ್‌ಎಸ್ ನಾಯಕರನ್ನು ಓಲೈಸಲು ಈ ರೀತಿ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗೆ, "ಬಿಜೆಪಿ ನಾಯಕತ್ವದ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿ, ನಮ್ಮವರನ್ನೆಲ್ಲ ಕರೆದುಕೊಂಡು ಹೋಗಿ ಸರ್ಕಾರ ಮಾಡಿದ್ದಾರೆ. ಆದರೆ ಇಂತಹ ನಿರ್ಧಾರಗಳನ್ನು ರಾಜ್ಯದ ಜನ ಯಾವ ಕಾರಣಕ್ಕೂ ಕ್ಷಮಿಸುವುದಿಲ್ಲ, ದೇವರೂ ಕ್ಷಮಿಸುವುದಿಲ್ಲ,'' ಎಂದು ಉತ್ತರಿಸಿದರು.

ಡಿ.ಕೆ. ಶಿವಕುಮಾರ್ ಬೆಕ್ಕಿನ ಕನಸಲ್ಲಿ ಇಲಿ ಕಂಡಿದ್ದಾರೆ ಎಂಬ ಸಿಎಂ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, "ಅವರು ಮುಖ್ಯಮಂತ್ರಿ ಆಗಿರುವ ಸಂತೋಷದಲ್ಲಿ ತೇಲಾಡುತ್ತಿದ್ದಾರೆ. ನಾವು ಬೇಸರ ಮಾಡಿಕೊಳ್ಳುವುದಿಲ್ಲ. ಅವರಿಗೆ ಜನ ಅಗತ್ಯ ಸಮಯದಲ್ಲಿ ಉತ್ತರ ಕೊಡುತ್ತಿದ್ದು, ಮುಂದೆಯೂ ನೀಡುತ್ತಾರೆ. ಅವರು ನನ್ನ ಬಗ್ಗೆ ಏನಾದರೂ ಹೇಳಲಿ, ನನ್ನನ್ನು ಬೆಕ್ಕು, ಇಲಿ, ಹುಲಿ ಯಾವುದರ ಕಣ್ಣಿಗಾದರೂ ಹಾಕಲಿ. ಸಗಣಿಗೆ ಗರಿಕೆ ಚುಚ್ಚಿ ಪಿಳ್ಳಾರತಿ ಮಾಡಿದರೆ ಗಣೇಶ ಆಗುತ್ತದೆ. ಇಲಿ ಗಣೇಶನ ವಾಹನ. ಆದರೆ ಈ ಸರಕಾರದವರು ಹಿಂದೂ ದೇವಾಲಯ ಮಾರಾಟ ಮಾಡಲು ಹೊರಟಿರುವುದು ಸರಿಯಲ್ಲ,'' ಎಂದರು.

KPCC President DK Shivakumar Outrage Against Govt Decision on Autonomy of Temple Trusts In Karnataka

ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ:
ಕರ್ನಾಟಕ ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿನ ಗೆಲುವು ಕೇವಲ ಕಾಂಗ್ರೆಸ್ ಪಕ್ಷದ್ದಲ್ಲ, ಇಡೀ ರಾಜ್ಯದ ಜನರ ಗೆಲವು. ಜನ ಬಿಜೆಪಿ ಆಡಳಿತ ನೋಡಿದ್ದು, ಬದಲಾವಣೆ ಬಯಸಿದ್ದಾರೆ. ರಾಜ್ಯ ಕಾಂಗ್ರೆಸ್ ಕಾರ್ಯಕರ್ತರು ಅತ್ಯುತ್ತಮ ಕೆಲಸ ಮಾಡಿದ್ದು, ಮತದಾರರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು, ರಾಜ್ಯದಲ್ಲಿ ಬದಲಾವಣೆ ಗಾಳಿ ಆರಂಭವಾಗಿದೆ. ಉತ್ತಮ ಆಡಳಿತ ನೀಡುವ ಸರ್ಕಾರ ಬರಬೇಕು. ಬಿಜೆಪಿ ಯಾವ ಕಾರಣಕ್ಕೆ ನಾಯಕತ್ವ ಬದಲಾವಣೆ ಮಾಡುತ್ತಿದೆ, ಅವರು ಎಷ್ಟು ಜನ ಮುಖ್ಯಮಂತ್ರಿ ಮಾಡುತ್ತಾರೆ ಎಂಬುದರ ಬಗ್ಗೆ ನಾವು ಚರ್ಚೆ ಮಾಡುವುದಿಲ್ಲ. ಅದು ಅವರಿಗೆ ಬಿಟ್ಟ ವಿಚಾರ. ಆದರೆ ಜನ ಬಿಜೆಪಿ ಸರ್ಕಾರ ಕಿತ್ತೊಗೆದು ಪರ್ಯಾಯ ಸರ್ಕಾರವನ್ನು ಬಯಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

2023ರ ಚುನಾವಣೆಗೆ ಇದು ಮುನ್ಸೂಚನೆಯೇ ಎಂಬ ಪ್ರಶ್ನೆಗೆ, "ಇದು ಕೇವಲ ನಗರ ಸ್ಥಳೀಯ ಸಂಸ್ಥೆಗಳ ವಿಚಾರ ಮಾತ್ರವಲ್ಲ. ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿಗಳ ಜಿಲ್ಲೆಯ ಜನರೇ ಬದಲಾವಣೆ ಬಯಸಿ ಕಾಂಗ್ರೆಸ್‌ಗೆ ಮತ ನೀಡಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಚುನಾಯಿತ ಪ್ರತಿನಿಧಿಗಳು ಕೂಡ ಕಾಂಗ್ರೆಸ್ ಪರವಾಗಿ ನಿಂತಿದ್ದಾರೆ. ಬಿಜೆಪಿ ಸರ್ಕಾರ ತಮಗೆ ಸಿಕ್ಕ ಅವಕಾಶದಲ್ಲಿ ವಿಫಲರಾಗಿದ್ದು, ಜನ ಕಾಂಗ್ರೆಸ್ ಸರ್ಕಾರವನ್ನು ಬಯಸುತ್ತಿದ್ದಾರೆ,'' ಎಂದರು.

ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯ
2022ಕ್ಕೆ ನಾವು ಹೆಜ್ಜೆ ಇಡುತ್ತಿದ್ದು, 2 ವರ್ಷಗಳ ಕಾಲ ನಾವು ಕಷ್ಟ ಅನುಭವಿಸಿದ್ದೇವೆ. ದೀಪ ಹಚ್ಚಿ, ಚಪ್ಪಾಳೆ ಹೊಡೆದು, ಜಾಗಟೆ ಬಾರಿಸಿದರೂ ಯಾವ ಪರಿಹಾರ ಸಿಗಲಿಲ್ಲ. ಈ ಹೊಸ ವರ್ಷ ರಾಜ್ಯದ ಜನತೆಗೆ ನೆಮ್ಮದಿ, ಆರೋಗ್ಯ ಸಿಗಲಿ. ಮಕ್ಕಳಿಗೆ ವಿದ್ಯಾಭ್ಯಾಸ ಸಿಗಲಿ, ಎಲ್ಲರಿಗೂ ಮಂಗಳವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ರಾಜ್ಯದ ಜನರಿಗೆ ಶುಭ ಕೋರುತ್ತೇನೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

Recommended Video

South Africa vs India: ಭಾರತದ ಐತಿಹಾಸಿಕ ಜಯ ನೋಡಿ ಪಾಕಿಸ್ತಾನ ಹೇಳಿದ್ದೇನು | Oneindia Kannada

English summary
KPCC President DK Shivakumar expressed Outrage Against State Govt Decision on autonomy of temple trusts in Karnataka. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X