ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆ.ಜಿ ಹಳ್ಳಿ ಗಲಭೆ ಪ್ರಕರಣದ ಆರೋಪಿ ನವೀನ್ ಬಿಜೆಪಿ ಬೆಂಬಲಿಗ: ಡಿ.ಕೆ. ಶಿವಕುಮಾರ್

|
Google Oneindia Kannada News

ಬೆಂಗಳೂರು, ಆಗಸ್ಟ್ 12: ಕೆಜಿ ಹಳ್ಳಿ ಮತ್ತು ಡಿ.ಜೆ. ಹಳ್ಳಿಯಲ್ಲಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅದರ ಹಿಂದಿನ ಸತ್ಯಾಸತ್ಯತೆಗಳನ್ನು ತಿಳಿಯಲು ಕಾಂಗ್ರೆಸ್ ತನ್ನದೇ ಸಮಿತಿಯೊಂದನ್ನು ರಚಿಸಿದೆ.

Recommended Video

ಸ್ವಯಂ ಪ್ರೇರಿತರಾಗಿ ಪೊಲೀಸರು ದೂರು ದಾಖಲು ಮಾಡಬೇಕಿತ್ತು | Oneindia Kannada

ಕೆ.ಜಿ ಹಳ್ಳಿ ಘಟನೆಗೆ ಮೂಲ ಕಾರಣಕರ್ತಾಗಿರುವ ನವೀನ್ ಬಿಜೆಪಿಯ ಕಟ್ಟಾ ಬೆಂಬಲಿಗನಾಗಿದ್ದು, ಇಡೀ ಪ್ರಕರಣದ ಸತ್ಯಶೋಧನೆಗೆ ಡಾ. ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ಆರು ಹಿರಿಯ ಸದಸ್ಯರ ಕಾಂಗ್ರೆಸ್ ಸತ್ಯಶೋಧನಾ ಸಮಿತಿ ರಚಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು.

ಬೆಂಗಳೂರು ಗಲಭೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದೇನು?ಬೆಂಗಳೂರು ಗಲಭೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದೇನು?

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, 'ಈ ಘಟನೆಗೂ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೂ ಯಾವುದೇ ಸಂಬಂಧವಿಲ್ಲ. ಆರೋಪಿ ನವೀನ್, ಶ್ರೀನಿವಾಸ ಅವರ ಸಂಬಂಧಿಯಾಗಿದ್ದರೂ ಆತ ಮೊದಲಿನಿಂದಲೂ ಬಿಜೆಪಿಯ ಕಟ್ಟಾ ಬೆಂಬಲಿಗ. ಅವನಿಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ' ಎಂದರು. ಮುಂದೆ ಓದಿ.

ಮೂವರು ಮಾಜಿ ಗೃಹ ಸಚಿವರು

ಮೂವರು ಮಾಜಿ ಗೃಹ ಸಚಿವರು

ಇದು ಪೂರ್ವನಿಯೋಜಿತ ಕೃತ್ಯ. ಇದರ ಸತ್ಯಾಂಶ ಕಂಡುಕೊಳ್ಳಲು ಪರಮೇಶ್ವರ್ ಅವರ ನೇತೃತ್ವದಲ್ಲಿ ಮೂವರು ಮಾಜಿ ಗೃಹ ಸಚಿವರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಕೆ.ಜೆ ಜಾರ್ಜ್, ರಾಮಲಿಂಗಾರೆಡ್ಡಿ, ಬಿ.ಕೆ ಹರಿಪ್ರಸಾದ್, ಕೃಷ್ಣಭೈರೇಗೌಡ, ನಾಸೀರ್ ಅಹಮದ್ ಅವರು ಇದ್ದಾರೆ ಎಂದು ತಿಳಿಸಿದರು.

'ನಿನ್ನೆ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿಯಲ್ಲಿ ನಡೆದ ಘಟನೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಅದೇ ರೀತಿ ಒಂದು ಧರ್ಮದ ವಿಚಾರವಾಗಿ ನೀಡಿರುವ ಹೇಳಿಕೆಯನ್ನೂ ಖಂಡಿಸುತ್ತೇವೆ. ಪ್ರಚೋದನಕಾರಿ ಹೇಳಿಕೆ ಪ್ರಕಟಿಸಿರುವ ನವೀನ್ ಬಿಜೆಪಿಯ ಬೆಂಬಲಿಗ. ಆತ ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ತಾನು ಬಿಜೆಪಿಗೆ ಮತ ಹಾಕಿದ್ದು, ಈ ಬಾರಿ ಬಿಜೆಪಿ ಜಯ ಗಳಿಸಿದೆ ಎಂದು ಬರೆದುಕೊಂಡಿದ್ದ. ಈತ ಶಾಸಕ ಶ್ರೀನಿವಾಸ ಅವರ ಸಂಬಂಧಿಯಾಗಿದ್ದರೂ, ಅವರೊಡನೆ ರಾಜಕೀಯ ಸಂಬಂಧ ಹೊಂದಿಲ್ಲ ಎಂದರು.

ದೂರು ನೀಡಿದ್ದರೂ ಕ್ರಮ ತೆಗೆದುಕೊಂಡಿರಲಿಲ್ಲ

ದೂರು ನೀಡಿದ್ದರೂ ಕ್ರಮ ತೆಗೆದುಕೊಂಡಿರಲಿಲ್ಲ

ನವೀನ್ ಮಾಡಿರುವ ಅವಹೇಳನಕಾರಿ ಕಾಮೆಂಟ್ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಅದನ್ನು ಅವರು ತೆಗೆದುಕೊಂಡಿಲ್ಲ. ಇತ್ತೀಚೆಗೆ ನಮ್ಮ ಕಾರ್ಯಕರ್ತ ಕೇಂದ್ರ ಗೃಹ ಸಚಿವರ ವಿರುದ್ಧ ಕಾಮೆಂಟ್ ಮಾಡಿದ್ದಕ್ಕೆ ಸುಮೋಟೋ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ರಾತ್ರೋರಾತ್ರಿ ಆತನನ್ನು ಬಂಧಿಸಿದ್ದರು. ನಾನು ಆತನ ಹೇಳಿಕೆಯನ್ನೂ ವಿರೋಧಿಸಿದ್ದೇನೆ. ಈಗ ದೂರು ಕೊಟ್ಟರೂ ಅದನ್ನು ತೆಗೆದುಕೊಂಡಿಲ್ಲ. ಪೊಲೀಸರು ಈ ವಿಚಾರದಲ್ಲಿ ಸರಿಯಾದ ಕ್ರಮ ಕೈಗೊಳ್ಳದಿರುವುದೇ ಈ ಎಲ್ಲ ಅನಾಹುತಗಳಿಗೆ ಕಾರಣ ಎಂದು ಆರೋಪಿಸಿದರು.

ನಮ್ಮ ಶಾಸಕರ ಮನೆ ಮೇಲೆ ದಾಳಿ ನಡೆಯುತ್ತಿದ್ದರೂ ಅವರ ರಕ್ಷಣೆಗೆ ಪೊಲೀಸರು ಮುಂದಾಗಲಿಲ್ಲ. ನವೀನ್ ಬಿಜೆಪಿಯ ಬೆಂಬಲಿಗ ಎಂಬ ಕಾರಣಕ್ಕೆ ಆತನ ವಿರುದ್ಧ ಬಹಳ ಹೊತ್ತಿನವರೆಗೂ ಪ್ರಕರಣ ದಾಖಲಿಸಿಕೊಳ್ಳಲಿಲ್ಲ. ಮೇಲಾಗಿ ಪೊಲೀಸರು ಮೂರು ಗಂಟೆ ಅಮೂಲ್ಯ ಸಮಯವನ್ನು ಹಾಳು ಮಾಡಿದ್ದರಿಂದಾಗಿ ಇಷ್ಟೆಲ್ಲ ಅನಾಹುತವಾಗಿದೆ. ಇದು ಸಂಪೂರ್ಣ ಪೊಲೀಸ್‌ ವೈಫಲ್ಯ. ಸರಕಾರದ ವೈಫಲ್ಯ ಎಂದು ಆರೋಪಿಸಿದರು.

ನಿನ್ನೆ ರಾತ್ರಿ ನಡೆದ ಗಲಭೆಯ ಕಾರಣ ಹೇಳಿದ ಸಚಿವ ಅಶೊಕ್ನಿನ್ನೆ ರಾತ್ರಿ ನಡೆದ ಗಲಭೆಯ ಕಾರಣ ಹೇಳಿದ ಸಚಿವ ಅಶೊಕ್

ಶಾಸಕರಿಗೇ ರಕ್ಷಣೆ ನೀಡಲು ಆಗಿಲ್ಲ

ಶಾಸಕರಿಗೇ ರಕ್ಷಣೆ ನೀಡಲು ಆಗಿಲ್ಲ

ಈ ಸರ್ಕಾರಕ್ಕೆ ನಮ್ಮ ಶಾಸಕರಿಗೆ ಹಾಗೂ ಸುತ್ತಮುತ್ತಲಿನ ಜನರಿಗೆ ರಕ್ಷಣೆ ನೀಡಲು ಆಗಲಿಲ್ಲ, ಪೊಲೀಸ್ ಠಾಣೆಗೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದ ಮೇಲೆ ಈ ಸರ್ಕಾರ ಏಕಿರಬೇಕು? ಈ ಪ್ರಕರಣಕ್ಕೆ ಯಾರು ಹೊಣೆ? ಕಾನೂನನ್ನು ಕೈಗೆತ್ತಿಕೊಂಡವರ ವಿರುದ್ಧ ಕಠಿಣ ಕ್ರಮ ಜರುಗಿಸಿ.

ರಾಜ್ಯದಲ್ಲಿ ಶಾಂತಿ ಕಾಪಾಡಬೇಕು, ಯಾರೂ ಕೂಡ ಪ್ರಚೋದನೆಗೆ ಒಳಗಾಗಬಾರದು. ಇದು ಸೂಕ್ಷ್ಮ ವಿಚಾರವಾಗಿದ್ದು, ರಾಜ್ಯದ ಘನತೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಹೀಗಾಗಿ ಪಕ್ಷ, ಜಾತಿ, ಧರ್ಮಬೇಧ ಮರೆತು ಶಾಂತಿ ಕಾಪಾಡಬೇಕು. ಶಾಂತಿ ಸ್ಥಾಪನೆಗಾಗಿ ನಾವು ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ.

ಮಂತ್ರಿಗಳಿಂದ ಪ್ರಚೋದನಾಕಾರಿ ಹೇಳಿಕೆ

ಮಂತ್ರಿಗಳಿಂದ ಪ್ರಚೋದನಾಕಾರಿ ಹೇಳಿಕೆ

ಈ ವಿಚಾರದಲ್ಲಿ ಮುಖ್ಯಮಂತ್ರಿಗಳ ದಿಟ್ಟ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಆದರೆ ಅವರ ಸಂಪುಟದ ಮಂತ್ರಿಗಳು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಜನರನ್ನು ರೊಚ್ಚಿಗೇಳುವಂತೆ ಪ್ರೇರೇಪಿಸುತ್ತದೆ. ಅವರ ಹೇಳಿಕೆಗಳನ್ನು ಮುಖ್ಯಮಂತ್ರಿಗಳು ಗಮನಿಸಬೇಕು. ಕಾಂಗ್ರೆಸ್ ನಾಯಕರು ಎಲ್ಲಿದ್ದಾರೆ ಎಂದು ಬಿಜೆಪಿ ಮುಖಂಡರು ಕೇಳುತ್ತಿದ್ದಾರೆ. ಸರ್ಕಾರದಲ್ಲಿ ನಾವಿಲ್ಲ. ಆದರೆ ನಾವು ಶಾಂತಿ ಕಾಪಾಡಲು ಎಲ್ಲ ಸಹಕಾರ ನೀಡುತ್ತೇವೆ. ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ. ಆದರೆ ಅಮಾಯಕರಿಗೆ ತೊಂದರೆ ಕೊಡಬೇಡಿ.'

ತುಪ್ಪ, ಸೀಮೆಎಣ್ಣೆ ಸುರಿಯುತ್ತಿದ್ದಾರೆ

ತುಪ್ಪ, ಸೀಮೆಎಣ್ಣೆ ಸುರಿಯುತ್ತಿದ್ದಾರೆ

ನಾನು ಈಶ್ವರಪ್ಪಣ್ಣ, ಅಶೋಕಣ್ಣ, ಸಿ.ಟಿ. ರವಿಯಣ್ಣ, ಶೋಭಕ್ಕ ನೀಡಿರುವ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಯಾರು ಬೆಂಕಿಗೆ ತುಪ್ಪ, ಸೀಮೆಎಣ್ಣೆ, ಪೆಟ್ರೋಲ್ ಸುರಿಯುತ್ತಿದ್ದಾರೆ ಎಂಬುದನ್ನು ಜನ ಗಮನಿಸುತ್ತಿದ್ದಾರೆ. ಇದು ಶಾಂತಿ ಕಾಪಾಡಬೇಕಾದ ಸಮಯ. ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ರಾಜಕೀಯ ಮಾಡುವುದಿಕ್ಕೆ ಬೇರೆ ಸಂದರ್ಭ, ವಿಚಾರಗಳಿವೆ.

ತಪ್ಪು ಮಾಡಿದವರನ್ನು ರಕ್ಷಿಸುವುದಿಲ್ಲ

ತಪ್ಪು ಮಾಡಿದವರನ್ನು ರಕ್ಷಿಸುವುದಿಲ್ಲ

ನಮ್ಮ ಸರಕಾರ ಅಧಿಕಾರದಲ್ಲಿ ಇದ್ದಾಗ ಬರೀ ಎಸ್ಡಿಪಿಐ, ಪಿಎಫ್ಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನಷ್ಟೆ ವಾಪಸ್ಸು ಪಡೆದಿಲ್ಲ. ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳ ವಿರುದ್ಧವೂ ದಾಖಲಿಸಿದ್ದ ಬರೀ ರಾಜಕೀಯ ಪ್ರೇರಿತ ಮೊಕದ್ದಮೆಗಳನ್ನು ಸಹ ವಾಪಸ್ಸು ಪಡೆದಿದೆ. ಈಗ ಯಾರಾದರೂ ತಪ್ಪು ಮಾಡಿದ್ದರೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿ. ನಾವೇನೂ ಬೇಡ ಅಂದಿಲ್ಲ. ತಪ್ಪು ಮಾಡಿದ ಯಾರನ್ನೂ ಕಾಂಗ್ರೆಸ್ ರಕ್ಷಿಸುವುದಿಲ್ಲ, ಬೆಂಬಲಿಸುವುದಿಲ್ಲ.

ಕೆ.ಜಿ ಹಳ್ಳಿಗೆ ಶಿವಕುಮಾರ್ ಭೇಟಿ

ಕೆ.ಜಿ ಹಳ್ಳಿಗೆ ಶಿವಕುಮಾರ್ ಭೇಟಿ

ಮಧ್ಯಾಹ್ನ ಗಲಭೆ ಪೀಡಿತ ಕೆ.ಜಿ ಹಳ್ಳಿಗೆ ಭೇಟಿ ನೀಡಿದ ಡಿ.ಕೆ ಶಿವಕುಮಾರ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ನಿವಾಸ ಮತ್ತು ದಾಳಿಗೆ ಒಳಗಾದ ಪೊಲೀಸ್ ಠಾಣೆಯನ್ನು ಪರಿಶೀಲಿಸಿದರು.

'ಈ ದಾಳಿಯನ್ನು ಯಾರೇ ಮಾಡಿರಲಿ ಅದು ತಪ್ಪು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ. ಇಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆ ಇಲ್ಲ. ಇಲ್ಲಿ ನಾವು ಸೌಹಾರ್ದತೆ ಕಾಪಾಡುವುದು ಮುಖ್ಯ. ಈ ಹಿಂದೆ ಮುಸ್ಲಿಂ ಬಾಂಧವರು ದೇವಾಲಯವನ್ನು ರಕ್ಷಿಸಲು ಮುಂದಾಗಿದ್ದನ್ನು ನಾವು ನೋಡಿದ್ದೇವೆ. ಹೀಗಾಗಿ ಯಾರೋ ಕಿಡಿಗೇಡಿಗಳು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂರುವುದು ಸರಿಯಲ್ಲ.

ಬಿಜೆಪಿಯವರು ಇದಕ್ಕೆ ರಾಜಕೀಯ ಬಣ್ಣ ಹಚ್ಚಿ ಲಾಭ ಮಾಡಲು ಹೊರಟಿದ್ದಾರೆ. ಮುಖ್ಯಮಂತ್ರಿ ಒಬ್ಬರು ಬಿಟ್ಟರೆ ಉಳಿದವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದೆಲ್ಲ ಬಿಜೆಪಿಯ ರಾಜಕೀಯ ಪಿತೂರಿ' ಎಂದು ಟೀಕಿಸಿದರು.

ಬೆಂಗಳೂರು ಗಲಭೆ: ಗುಪ್ತಚರ ಇಲಾಖೆ ವೈಫಲ್ಯ ಕಾರಣ ಎಂದ ತನ್ವೀರ್ ಸೇಠ್ಬೆಂಗಳೂರು ಗಲಭೆ: ಗುಪ್ತಚರ ಇಲಾಖೆ ವೈಫಲ್ಯ ಕಾರಣ ಎಂದ ತನ್ವೀರ್ ಸೇಠ್

English summary
KPCC president DK Shivakumar said, Congress has formed fact finding committee to know the reality behind KG Halli and DJ Halli violence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X