ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಗು ರಕ್ಷಿಸಲು ಆಟೋ ಚಾಲಕರಾದ ಪೊಲೀಸರು!

|
Google Oneindia Kannada News

ಬೆಂಗಳೂರು, ಆ.14 : ಮಗುವನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ದುಷ್ಕರ್ಮಿಗಳನ್ನು ಪೊಲೀಸರು ನಾಲ್ಕು ಗಂಟೆಯಲ್ಲಿಯೇ ಬಂಧಿಸಿದ್ದಾರೆ. ಅಪಹರಣಕಾರರ ಮೇಲೆ ಪೊಲೀಸರು ಗುಂಡಿನದ ದಾಳಿ ನಡೆಸಿದ್ದು, ಗಾಯಗೊಂಡ ಆರೋಪಿಗಳನ್ನು ಮಲ್ಲೇಶ್ವರಂ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಗುವನ್ನು ಅಪಹರಿಸಿದ್ದ ಆರೋಪಿಗಳನ್ನು ರಾಜಸ್ತಾನ ಮೂಲದ ಧರ್ಮರಾಂ (21) ಹಾಗೂ ಜಿತೇಂದ್ರ (23) ಎಂದು ಗುರುತಿಸಲಾಗಿದೆ. ಕಾರ್ಯಾಚರಣೆ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರಿಂದ ಕಾಟನ್‌ಪೇಟೆ ಠಾಣೆಯ ಅಫ್ಜಲ್‌ ಅಲಿ ಮತ್ತು ಮುನಿರಾಜು ಎಂಬ ಕಾನ್‌ಸ್ಟೆಬಲ್‌ಗಳು ಗಾಯ­ಗೊಂಡಿದ್ದಾರೆ.

police

ಆರೋಪಿಗಳು ಕಾಟನ್‌ಪೇಟೆ ಸಮೀಪದ ಸುಬ್ರಹ್ಮಣ್ಯ ಕಾಲೊನಿ ನಿವಾಸಿ ಅಮನ್‌ ರಾಂ ಅವರ ಮಗ ವಿಕಾಸ್‌ (6)ನನ್ನು ಅಪಹ­ರಿಸಿ, 30 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮಗುವನ್ನು ರಕ್ಷಿಸಿ, ಪೋಷಕರಿಗೆ ಒಪ್ಪಿಸಿದ್ದಾರೆ.

ಘಟನೆಯ ವಿವರ : ಅಮನ್‌ ರಾಂ ಅವರ ಮಕ್ಕಳಾದ ವಿಕಾಸ್‌ ಮತ್ತು ಆತನ ತಂಗಿ ತಮನ್ನಾ ರಾಜಾಜಿ­ನಗರದ ವೀನಸ್‌ ಇಂಟರ್‌ ನ್ಯಾಷನಲ್ ಶಾಲೆಯಲ್ಲಿ ಓದುತ್ತಿದ್ದಾರೆ. ಬುಧವಾರ ಸಂಜೆ 4.30ರ ಸುಮಾರಿಗೆ ಅವರು ಶಾಲಾ ವಾಹನದಲ್ಲಿ ಮನೆ ಬಳಿ ಬಂದಿಳಿದ್ದರು. ಈ ಸಮಯದಲ್ಲಿ ಅಲ್ಲಿಗೆ ಬೈಕ್‌ನಲ್ಲಿ ಬಂದ ಆರೋಪಿಗಳು, ವಿಕಾಸ್‌ನನ್ನು ಅಪಹರಿಸಿದ್ದರು.

ಕೆಲವು ಹೊತ್ತಿನ ಬಳಿಕ ಅಮನ್‌ ರಾಂ ಅವರಿಗೆ ಕರೆ ಮಾಡಿದ ಅಪಹರಣಕಾರರು 30 ಲಕ್ಷ ಹಣ ಕೊಟ್ಟರೆ ಮಗುವನ್ನು ಸುರಕ್ಷಿತವಾಗಿ ನೀಡುತ್ತೇವೆ. ಪೊಲೀಸರಿಗೆ ದೂರು ಕೊಟ್ಟರೆ ಮಗುವನ್ನು ಕೊಲ್ಲುವ ಬೆದರಿಕೆ ಹಾಕಿದ್ದರು. ಈ ಕುರಿತು ಅಮನ್‌ ರಾಂ 5.30ರ ವೇಳೆಗೆ ಕಾಟನ್‌ಪೇಟೆ ಪೊಲೀಸರಿಗೆ ದೂರು ನೀಡಿದರು.

ಪಶ್ಚಿಮ ವಿಭಾಗದ ಡಿಸಿಪಿ ಲಾಬೂರಾಮ್ ಅವರು ಇನ್‌­ಸ್ಪೆಕ್ಟರ್‌ಗಳಾದ ಬಿ.ಸುನಿಲ್ ಕುಮಾರ್, ಕೆ.ಪಿ.­ಸತ್ಯ­ನಾರಾಯಣ, ಬಾಳೇಗೌಡ ಹಾಗೂ ಆರ್‌.­ಪ್ರಕಾಶ್ ನೇತೃತ್ವದಲ್ಲಿ ಮಗುವನ್ನು ರಕ್ಷಿಸಿ, ಅಪಹರಣಕಾರರನ್ನು ಹಿಡಿಯಲು ವಿಶೇಷ ತಂಡವನ್ನು ರಚಿಸಿದರು.

ಎರಡನೇ ಕರೆ : ಎರಡನೇ ಬಾರಿ ಅಮನ್‌ ರಾಂ ಅವರಿಗೆ ಕರೆ ಮಾಡಿದ ಅಪಹರಣಕಾರರು, ಹಣದೊಂದಿಗೆ ಮಂತ್ರಿ ಮಾಲ್‌ ಬಳಿ ಬರುವಂತೆ ಹೇಳಿದ್ದರು. ಆ ಸಂಗತಿಯನ್ನು ಪೊಲೀಸರಿಗೆ ತಿಳಿಸಿದ ಅಮನ್‌ ರಾಂ, ಪೊಲೀಸರ ಸೂಚನೆಯಂತೆ ಹಣದ ಬ್ಯಾಗಿನೊಂದಿಗೆ ಆಟೋದಲ್ಲಿ ಮಂತ್ರಿಮಾಲ್‌ ಕಡೆಗೆ ಹೊರಟರು.

ಆಟೋ ಓಡಿಸಿದ ಪೊಲೀಸರು : ಆಟೋ ಚಾಲಕರಂತೆ ಖಾಕಿ ಬಟ್ಟೆ ಹಾಕಿದ್ದ ಪೊಲೀಸರು ಅಮನ್ ರಾಂ ಇದ್ದ ಆಟೋದಲ್ಲಿ ಸ್ಥಳಕ್ಕೆ ತೆರಳಿದರು. ಉಳಿದ ಪೊಲೀಸರು, ನಾಲ್ಕು ಪ್ರತ್ಯೇಕ ಆಟೋಗಳಲ್ಲಿ ಅಮನ್‌ ರಾಂ ಅವರನ್ನು ಹಿಂಬಾಲಿಸಿದರು.

ಮೂರನೇ ಕರೆ : ಪುನಃ ಕರೆ ಮಾಡಿದ ಆರೋಪಿಗಳು ದೇವಯ್ಯ ಪಾರ್ಕ್‌ಗೆ ಬರುವಂತೆ ಸೂಚಿಸಿದರು. ಹಣದೊಂದಿಗೆ ಅಲ್ಲಿಗೆ ತೆರಳಿದಾಗ ಹರಿಶ್ಚಂದ್ರ ಘಾಟ್‌ ಸ್ಮಶಾನಕ್ಕೆ ಬರುವಂತೆ ತಿಳಿಸಿದರು. ನಂತರ ಅಲ್ಲಿಗೆ ಹೋದಾಗ, ಹಣದ ಬ್ಯಾಗನ್ನು ಪಾದಚಾರಿ ಮಾರ್ಗದ ಮೇಲಿಟ್ಟು ಹೋಗುವಂತೆ ಸೂಚನೆ ಕೊಟ್ಟರು.

ಅಮನ್‌ ರಾಂ ಅವರು ಬ್ಯಾಗ್‌ ಇಟ್ಟು ಹೊರಟ ತಕ್ಷಣ ಆರೋಪಿಗಳು, ಬಾಲಕನನ್ನು ಎತ್ತಿಕೊಂಡು ಅಲ್ಲಿಗೆ ಆಗಮಿಸಿದರು. ಆಗ ಪೊಲೀಸರು ಅವರನ್ನು ಹಿಡಿಯಲು ಮುಂದಾದಾಗ ಸಿಬ್ಬಂದಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದರಿಂದಾಗಿ ಇನ್‌ಸ್ಪೆಕ್ಟರ್‌­ಗಳಾದ ಸತ್ಯನಾರಾಯಣ್‌ ಹಾಗೂ ಸುನಿಲ್‌ ಕುಮಾರ್ ಅವರು ಸರ್ವಿಸ್‌ ರಿವಾಲ್ವರ್‌ನಿಂದ ಆರೋಪಿಗಳ ಕಾಲಿಗೆ ಗುಂಡು ಹೊಡೆದರು. ಧರ್ಮರಾಂನ ಬಲಗಾಲಿಗೆ ಹಾಗೂ ಜಿತೇಂದ್ರನ ಎಡಗಾಲಿಗೆ ಗುಂಡು ಹೊಕ್ಕಿದ್ದರಿಂದ ಅವರು ಅಲ್ಲೇ ಕುಸಿದು ಬಿದ್ದರು. ನಂತರ ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು.

English summary
In a dramatic action by the Bangalore police, a six-year-old boy was rescued within four hours form kidnappers and arrwsted two persons. On Wednesday afternoon, the six-year-old son of Amnaram was allegedly abducted from his house in Cottonpete, near City Railway station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X