ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಶುವೈದ್ಯರನ್ನು ಅವಹೇಳನ ಮಾಡಿದ ಎಚ್.ಡಿ ರೇವಣ್ಣ ಕ್ಷಮಾಪಣೆಗೆ ಪಶು ವೈದ್ಯರ ಪಟ್ಟು

|
Google Oneindia Kannada News

ಬೆಂಗಳೂರು ಏಪ್ರಿಲ್‌ 27: ಹಾಸನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಜಿ ಸಚಿವರಾದ ಎಚ್. ಡಿ ರೇವಣ್ಣ ಅವರು ಹಾಸನ ತಾಲ್ಲೂಕು ಪಂಚಾಯತಿಯ ಪ್ರಭಾರ ಅಧಿಕಾರಿ ಡಾ. ಯಶವಂತ್‌ ಅವರನ್ನು ಏಕವಚನದಲ್ಲಿ ನಿಂದಿಸಿ, ಪಶುವೈದ್ಯರನ್ನು ಅವಹೇಳನಕಾರಿಯಾಗಿ ಮಾತನಾಡಿಸಿರುವುದಕ್ಕೆ ಕರ್ನಾಟಕ ಪಶುವೈದ್ಯಕೀಯ ಸಂಘ ತೀವ್ರವಾಗಿ ಖಂಡಿಸಿದೆ. ಅಲ್ಲದೆ ಈ ಕೂಡಲೇ ಹೆಚ್.ಡಿ ರೇವಣ್ಣ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಏಪ್ರಿಲ್ 30 ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಪಶುವೈದ್ಯಕೀಯ ಸಂಘ, "ಮಾಜಿ ಸಚಿವರಾದ ಎಚ್.ಡಿ ರೇವಣ್ಣ ರವರು ಜಾನುವಾರುಗಳನ್ನು ಚಿಕಿತ್ಸೆ ನೀಡುವ ಪಶುವೈದ್ಯರನ್ನು ದನಗಳಿಗೆ ಹೋಲಿಸಿ, ದನದ ಡಾಕ್ಟರ್, ದನ ಕಾಯಿ ಅಂತೆಲ್ಲಾ ಅವಾಚ್ಯ ಶಬ್ದಗಳನ್ನು ಉಪಯೋಗಿಸಿ, ಪಶುವೈದ್ಯರಿಗೆ ಮತ್ತು ರೈತರ ಸಂಪತ್ತಾದ ಜಾನುವಾರುಗಳಿಗೆ ಅವಹೇಳನ ಮಾಡಿದ್ದಾರೆ. ಮಣ್ಣಿನ ಮಗನೆಂದು ಖ್ಯಾತಿಯನ್ನು ಪಡೆದ ಈ ದೇಶದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮಗನಾಗಿ ಇಂತಹ ಮಾತುಗಳನ್ನು ಆಡಿರುವುದು ನಿಜವಾಗಿಯೂ ಬೇಸರ ತಂದಿದೆ. ಮನು ಕುಲದ ರೈತರ ಜನಾಂಗಕ್ಕೆ ಹಾಗೂ ಹೈನುಗಾರಿಕೆಯನ್ನೆ ಸ್ವಾವಲಂಬಿ ಜೀವನಕ್ಕಾಗಿ ಅವಲಂಬಿಸಿರುವ ನಮ್ಮ ರೈತಾಪಿ ಜನರಿಗೆ ಅವಮಾನ ಮಾಡಿದ್ದಾರೆ," ಎಂದು ಪಶುವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ. ಎಸ್‌.ಸಿ. ಸುರೇಶ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Karnataka Veterinary Medical Association demands apology from HD Ravanna for insulting veterinarians

ಇದೇ ವಿಚಾರವಾಗಿ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಡಾ. ಶಿವರಾಮ್‌ ಎ.ಡಿ, "ಮಾಜಿ ಸಚಿವರಾದ ಎಚ್ ಡಿ ರೇವಣ್ಣ ನಿಂದಿಸಿರುವ ರೀತಿ ಸರಿಯಲ್ಲ. ರೈತರ ಸೇವೆ ಸಲ್ಲಿಸುತ್ತಿರುವ ನಾವು ದನದ ಡಾಕ್ಟರ್‌ ಎಂದು ಕರೆಸಿಕೊಳ್ಳಲು ಸಂತಸವಾಗುತ್ತದೆ. 5 ವರ್ಷಗಳ ಕಾಲ ಪದವಿಯನ್ನು ನೆರವೇರಿಸಿ ನಾವು ಈ ಹುದ್ದೇಗೇರಿರುತ್ತೇವೆ. ಪಶುವೈದ್ಯರು ದನಗಳಿಗಷ್ಟೆ ನಾವು ಚಿಕಿತ್ಸೆ ಮಾಡುವುದಿಲ್ಲ. ಕಾಡು ಪ್ರಾಣಿಗಳಾದಂತಹ ಹುಲಿ, ಸಿಂಹ, ಆನೆ, ಚಿರತೆ, ಹಾಗೂ ಸಾಕು ಪ್ರಾಣಿಗಳಿಗೂ ಕೂಡ ಚಿಕಿತ್ಸೆ ಮಾಡಿದ್ದೇವೆ, ಮಾಡುತ್ತಿದ್ದೇವೆ. ತಾವು ಸಚಿವರಾಗಿದ್ದಾಗ ತಮ್ಮ ತಮ್ಮ ಮನೆಯಲ್ಲಿ ದನಗಳನ್ನು ಸಾಕಿದ್ದಿರಿ. ಬೆಳಿಗ್ಗೆ ಎದ್ದು ಅವುಗಳನ್ನು ಗೋವುಗಳೆಂದು ನಮಸ್ಕಾರ ಮಾಡಿ ಹೊರಡುತ್ತಿದ್ದೀರಿ, ಅದು ನಿಮಗೆ ಅರಿವಿಲ್ಲದಂತೆ ಆಗಿದೆ. ಗೋವುಗಳನ್ನು ಸಾಕಿದಂತೆ ಹುಲಿ, ಸಿಂಹ, ಆನೆಗಳನ್ನು ಸಾಕಿ ಅವುಗಳಿಗೂ ಸಹ ನಾವೇ ಬಂದು ಚಿಕಿತ್ಸೆ ನೀಡುತ್ತೇವೆ. ಆಗ ನಮ್ಮನ್ನು ನೀವು ದನದ ಡಾಕ್ಟರ್ ಅನ್ನುವುದರ ಬದಲು ಹುಲಿ ಡಾಕ್ಟರ್ ಎಂದು ಕರೆಯಿರಿ," ಎಂದು ಹೇಳಿದ್ದಾರೆ.

"ಪಶುವೈದ್ಯ ಪದವಿದರರು ಹಾಗೂ ಪಶು ವೈದ್ಯಕೀಯ ವೃತ್ತಿಯಲ್ಲಿದ್ದುಕೊಂಡು ಪ್ರಾಣಿಗಳಿಗೆ ಚಿಕಿತ್ಸೆ ನೀಡುತ್ತಿರುವಂತಹ 110 ಕ್ಕೂ ಹೆಚ್ಚು ಪಶುವೈದ್ಯರು ಐ.ಎ.ಎಸ್. / ಕೆ.ಎ.ಎಸ್. ಪರಿಕ್ಷೆ ಪಾಸು ಮಾಡಿ ಅತ್ಯುನ್ನತ ಪದವಿಗಳನ್ನು ಪಡೆದು ರಾಜ್ಯದಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇದು ತಮ್ಮ ಗಮನಕ್ಕೆ ಇರಲಿ. ಮೂಕ ಪ್ರಾಣಿಗಳಿಗೆ ಚಿಕಿತ್ಸೆ ನೀಡಲು ಬುದ್ಧಿವಂತಿಕೆ ಬೇಕು. ಪದವಿಗೆ ಸೇರಿದ ಪ್ರತಿಯೊಬ್ಬ ವೈದ್ಯರು ಸಹ ಸಮಾಜದಲ್ಲಿ ಪ್ರಪ್ರಥಮ ಪ್ರಜೆಗಳು ಅವರೆಲ್ಲರೂ ಕೂಡ ಉತ್ತಮ ಅಂಕಗಳನ್ನು ಪಡೆದು ಪದವಿಗೆ ಸೇರಿರುತ್ತಾರೆ ಎಂಬುದು ಕೂಡ ತಾವು ತಿಳಿದುಕೊಳ್ಳಬೇಕಾಗುತ್ತದೆ," ಎಂದು ಸಂಘದ ಕಾರ್ಯದರ್ಶಿಗಳಾದ ಡಾ. ಗೋವಿಂದಪ್ಪ. ಪಿ ಹೇಳಿದ್ದಾರೆ.

Karnataka Veterinary Medical Association demands apology from HD Ravanna for insulting veterinarians

ಶಾಸಕರಾಗಿ ಅನೇಕ ಬಾರಿ ಮಾಜಿ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು ಹೀಗೆ ಅಮಾನವೀಯವಾಗಿ ವರ್ತಿಸಿರುವುದು ನಿಮ್ಮ ಘನತೆಗೆ ತಕ್ಕದಲ್ಲ. ಆದುದರಿಂದ ಕರ್ನಾಟಕ ಪಶುವೈದ್ಯಕೀಯ ಸಂಘವು ಈ ಮೂಲಕ ಶ್ರೀಯುತ ಎಚ್.ಡಿ ರೇವಣ್ಣ ರವರು ಬಹಿರಂಗ ಕ್ಷಮೆಯಾಚಿಸಿ, ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳಬೇಕೆಂದು ಸಂಘವು ಒತ್ತಾಯಿಸುತ್ತದೆ. ಇಲ್ಲದಿದ್ದರೆ, ದಿನಾಂಕ: 30-04-2022 ರಂದು ಪಶುವೈದ್ಯರ ದಿನದಂದು, ಸಾಂಕೇತಿಕವಾಗಿ ರಾಜ್ಯಾದ್ಯಂತ ಕಪ್ಪು ಬಟ್ಟೆಯನ್ನು ಧರಿಸುವುದರ ಮುಖಾಂತರ ಪ್ರತಿಭಟನೆ ನಡೆಸಬೇಕಾಗುತ್ತದೆ. ಅದಕ್ಕೂ ತಾವು ಪ್ರತಿಕ್ರೀಯೆ ನೀಡದಿದ್ದರೆ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

English summary
Karnataka Veterinary Medical Association demands apology from Former Minister HD Ravanna for insulting veterinarians using inappropriate words.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X