ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನವಮಿ ನೆಪದಲ್ಲಿ 'ಶೋಲೆ' ಬೆಟ್ಟಕ್ಕೆ ಮರುಪ್ರಯಾಣ

ರಾಮದೇವರ ಬೆಟ್ಟದಲ್ಲಿ ಸದ್ಯದಲ್ಲೇ 'ತ್ರೀ ಡಿ ವರ್ಚುವಲ್ ರಿಯಾಲಿಟಿ ವಿಲೇಜ್' ಅನ್ನು ನಿರ್ಮಾಣ ಮಾಡಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ನಿರ್ಧರಿಸಿದೆ. ಸುಮಾರು ಏಳೂವರೆ ಕೋಟಿ ವೆಚ್ಚದಲ್ಲಿ ಈ ಯೋಜನೆ ಸಾಕಾರ ರೂಪ ಪಡೆದುಕೊಳ್ಳಲಿದೆ.

|
Google Oneindia Kannada News

ಹೆಸರಾಂತ ಹಿಂದಿ ಸಿನಿಮಾ ಶೋಲೆ ಶೂಟಿಂಗ್ ನಡೆದಿದ್ದ ರಾಮದೇವರ ಬೆಟ್ಟ ಈಗ ಮತ್ತೆ ಸುದ್ದಿಯಲ್ಲಿದೆ. ರಾಮನವಮಿಯಂದೇ ಆ ಸ್ಥಳ ಮತ್ತೆ ಚರ್ಚೆಗೆ ಬಂದಿರುವುದು ಕಾಕತಾಳೀಯವಷ್ಟೇ.

ರಾಮದೇವರ ಬೆಟ್ಟದಲ್ಲಿ ಸದ್ಯದಲ್ಲೇ 'ತ್ರೀ ಡಿ ವರ್ಚುವಲ್ ರಿಯಾಲಿಟಿ ವಿಲೇಜ್' ಅನ್ನು ನಿರ್ಮಾಣ ಮಾಡಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ನಿರ್ಧರಿಸಿದೆ. ಸುಮಾರು ಏಳೂವರೆ ಕೋಟಿ ವೆಚ್ಚದಲ್ಲಿ ಈ ಯೋಜನೆ ಸಾಕಾರ ರೂಪ ಪಡೆದುಕೊಳ್ಳಲಿದೆ.[ರಾಮದೇವರ ಬೆಟ್ಟ 15 ರಣಹದ್ದುಗಳ ಅಭಯಾರಣ್ಯ]

ಇದೇ ರಾಮದೇವರ ಬೆಟ್ಟದಲ್ಲೇ ಶೋಲೆ ಚಿತ್ರದ ವಿಲನ್ ಗಬ್ಬರ್ ಸಿಂಗ್ ಇದ್ದ ಜಾಗ. ಈ ಸ್ಥಳದಲ್ಲಿ ಕ್ಲೈಮ್ಯಾಕ್ಸ್ ಸಹ ಶೂಟ್ ಮಾಡಲಾಗಿತ್ತು. ಅಲ್ಲಿ ಒಂದು ಹಳ್ಳಿಯ ಸೆಟ್ ಅನ್ನೂ ಸೃಷ್ಟಿಸಲಾಗಿತ್ತು. ಈಗ ಅದೇ ಹಳ್ಳಿಯನ್ನು ಮತ್ತೆ ಸೃಷ್ಟಿಸಲು ಮುಂದಾಗಿದೆ ಕರ್ನಾಟಕ ರಾಜ್ಯ ಸರ್ಕಾರ.

ಹಾಗಾಗರೆ, ಈ ರಾಮದೇವರ ಬೆಟ್ಟ ವಿಶೇಷವೇನು? ಇಲ್ಲಿ ಸೃಷ್ಟಿಯಾಗಲಿರುವ ಯೋಜನೆ ಬಗ್ಗೆ ಪ್ರವಾಸೋದ್ಯಮ ಅಧಿಕಾರಿಗಳು ಏನು ಹೇಳುತ್ತಾರೆ ಎಂಬುದರ ಸಂಕ್ಷಿಪ್ತ ರೂಪ ಇಲ್ಲಿದೆ.

ಏಳು ಬೆಟ್ಟಗಳಲ್ಲೊಂದು ಬೆಟ್ಟ

ಏಳು ಬೆಟ್ಟಗಳಲ್ಲೊಂದು ಬೆಟ್ಟ

ರಾಮದೇವರ ಬೆಟ್ಟ ರಾಮನಗರದ ಜಿಲ್ಲೆಯಲ್ಲಿ ಇರುವ ಏಳು ಪ್ರಮುಖ ಬೆಟ್ಟಗಳಲ್ಲೊಂದು. ಸುಮಾರು 10 ಕಿ.ಮೀ. ತ್ರಿಜ್ಯ (ರೇಡಿಯಸ್) ನಲ್ಲಿ ಈ ಬೆಟ್ಟಗಳು ಕಾಣ ಸಿಗುತ್ತವೆ. ಇವುಗಳಲ್ಲಿನ ಪ್ರಮುಖ ಬೆಟ್ಟವೇ ರಾಮದೇವರ ಬೆಟ್ಟ. ಬೆಂಗಳೂರಿನಿಂದ ನೈರುತ್ಯ ದಿಕ್ಕಿಗೆ ಸುಮಾರು 50 ಕಿ.ಮೀ. ದೂರದಲ್ಲಿರುವ ಈ ಬೆಟ್ಟವು ದೇಶದ ಏಕೈಕ ರಣಹದ್ದು ಸಂರಕ್ಷಿತಾ ವಲಯ. 2012ರಲ್ಲಿಯೇ ಕರ್ನಾಟಕ ಸರ್ಕಾರ ಇದನ್ನು ಹದ್ದುಗಳ ಸಂರಕ್ಷಣಾ ಪ್ರದೇಶವೆಂದು ಘೋಷಿಸಿದೆ.

ಜಟಾಯು ಕ್ಷೇತ್ರ

ಜಟಾಯು ಕ್ಷೇತ್ರ

ಈ ಜಾಗಕ್ಕೆ ರಾಮಾಯಣದ ಐತಿಹ್ಯವಿರುವುದರಿಂದಲೇ ಈ ಪ್ರಾಂತ್ಯಕ್ಕೆ ರಾಮನಗರ ಹಾಗೂ ಈ ಬೆಟ್ಟಕ್ಕೆ ರಾಮದೇವರ ಬೆಟ್ಟ ಎಂಬ ಹೆಸರು ಬಂದಿರುವುದು. ಇಲ್ಲಿ ಶ್ರೀರಾಮನ ಗುಡಿಯೊಂದಿದೆ. ಸೀತಾ ಮಾತೆಯು ಶ್ರೀರಾಮನ ತೊಡೆಯ ಮೇಲೆ ಕುಳಿತಿರುವ ವಿಗ್ರಹವನ್ನು ನಾವಿಲ್ಲಿ ನೋಡಬಹುದು. ಸ್ಥಳ ಪುರಾಣದ ಪ್ರಕಾರ, ರಾವಣನು ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ, ಜಟಾಯು ಎಂಬ ರಣಹದ್ದು, ಸೀತೆಯನ್ನು ಕಾಪಾಡಲು ರಾವಣನೊಂದಿಗೆ ಹೋರಾಡಿತ್ತು. ಆದರೆ, ರಾವಣನಿಂದ ಮಾರಣಾಂತಿಕ ಪೆಟ್ಟು ತಿಂದ ಅದು ಕೆಳಗೆ ಬಿದ್ದು ರಾಮನು ಬರುವವರೆಗೂ ಜೀವ ಹಿಡಿದುಕೊಂಡಿತ್ತು. ಸೀತೆಯನ್ನು ಹುಡುಕುತ್ತಾ ಬಂದ ರಾಮನಿಗೆ ನಡೆದ ವೃತ್ತಾಂತವನ್ನೆಲ್ಲಾ ಹೇಳಿದ ನಂತರ ಅದು ವೀರಮರಣ ಅಪ್ಪಿತು. ಈ ಪ್ರದೇಶದಲ್ಲಿ ಅತಿ ಹೆಚ್ಚು ರಣ ಹದ್ದುಗಳಿರುವುದು ಇದಕ್ಕೆ ಜಟಾಯು ಇಲ್ಲಿದ್ದ ಎನ್ನುವುದಕ್ಕೆ ಸಾಕ್ಷಿ ಎನ್ನಲಾಗುತ್ತದೆ.[ರಾಮದೇವರ ಬೆಟ್ಟದಲ್ಲಿ ವಿಶಿಷ್ಟ ಪಕ್ಷಿಧಾಮ]

ಹೊಸ ತಂತ್ರಜ್ಞಾನದ ಅಳವಡಿಕೆ

ಹೊಸ ತಂತ್ರಜ್ಞಾನದ ಅಳವಡಿಕೆ

ಇಲ್ಲಿ ತಲೆಯೆತ್ತಲಿರುವ ಶೋಲೆ ತ್ರೀ ಡಿ ವಿಲೇಜ್ ಪ್ರಕಾರ, ನವೀನ ಬಗೆಯ ದೃಶ್ಯ ಶ್ರಾವ್ಯ ತಂತ್ರಜ್ಞಾನ, ಹಳ್ಳಿಯ ಮರುಸೃಷ್ಟಿ, ಲೇಸರ್ ತಂತ್ರಜ್ಞಾನ, ವರ್ಚುವಲ್ ರಿಯಾಲಿಟಿ 3ಡಿ ತಂತ್ರಜ್ಞಾನ, ಮಲ್ಪಿಪಲ್ ಸೀನ್ಸ್ ಆಯಾಮಗಳನ್ನು ಉಪಯೋಗಿಸಿಕೊಂಡು ಹಳ್ಳಿಯನ್ನು ಮರು ಸೃಷ್ಟಿ ಮಾಡಲಾಗುವುದು ಎಂದು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಉದಾಹರಣೆಗೆ, ಶೋಲೆ ಚಿತ್ರದ ವಿಲನ್ ಬಾಯಿಂದ ಹೊರಡುವ, ಖ್ಯಾತ ಸಂಭಾಷಣೆಯಾದ ''ಅರೆ ವೋ ಕಾಲಿಯಾ, ಕಿತನೇ ಆದ್ಮಿ ಥೇ ರೇ'' ಎಂದು ಕೇಳುವ ಡೈಲಾಗ್ ಅನ್ನು ಇಲ್ಲಿ ಅಳವಡಿಸಲಾಗುತ್ತದೆ. ಹೊಸದಾಗಿ ಸೃಷ್ಟಿಯಾಗುವ ಹಳ್ಳಿಯನ್ನು ನೋಡಬರುವರನ್ನು ಉದ್ದೇಶಿಸಿ ಕೇಳಿದ ಹಾಗೆ ಈ ಡೈಲಾಗ್ ದೊಡ್ಡದಾಗಿ ಕೇಳಿಬರುತ್ತದೆ.
ಇದಕ್ಕೆ ಪ್ರೇಕ್ಷಕರು ಶೋಲೆ ಚಿತ್ರದಲ್ಲಿರುವಂತೆಯೇ , ''ದೋ ಸರ್ಕಾರ್'' ಎನ್ನುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ಗಬ್ಬರ್, ''ವೋ ದೋ... ಔರ್ ತುಮ್ ತೀನ್'' ಎಂದು ಹೇಳುತ್ತಾರೆ. ಈ ಪ್ರತಿಕ್ರಿಯೆಯನ್ನು ಹೊಸದಾಗಿ ಸೃಷ್ಟಿಸಲಾಗುತ್ತದೆ. ಇಂಥ ಹಲವಾರು ಮುದ ನೀಡುವ ಮನರಂಜನಾ ವಿಧಾನಗಳು ಹೊಸದಾಗಿ ಸೃಷ್ಟಿಯಾಗುವ ಹಳ್ಳಿಯಲ್ಲಿರಲಿದೆ'' ಎನ್ನುತ್ತಾರೆ ಅಧಿಕಾರಿಗಳು.

ದೊಡ್ಡ ಗಾತ್ರದ ಹದ್ದುಗಳು

ದೊಡ್ಡ ಗಾತ್ರದ ಹದ್ದುಗಳು

ಇಲ್ಲಿ ಸುತ್ತಲೂ ಅರಣ್ಯದ ವಾತಾವರಣವಿದೆ. ಈ ಕಾಡನ್ನು ಇಲ್ಲಿರುವ ದೊಡ್ಡ ಸಂಖ್ಯೆ ರಣಹದ್ದುಗಳು ಕಾಪಾಡುತ್ತಿವೆ ಎಂಬ ಮಾತಿದೆ. ಸಾಮಾನ್ಯವಾಗಿ ಕಾಡುಗಳಲ್ಲಿರುವ ಮಾಂಸಾಹಾರಿ ಪ್ರಾಣಿಗಳು ತಾವು ಕೊಂದ ಪ್ರಾಣಿ ಗಳನ್ನು ಪೂರ್ತಿಯಾಗಿ ತಿನ್ನುವುದಿಲ್ಲ. ಅವು ಹೊಟ್ಟೆ ತುಂಬ ತಿಂದು ಬಿಟ್ಟ ಆಹಾರವನ್ನು ಈ ರಣಹದ್ದುಗಳು ತಿಂದು ಮುಗಿಸುತ್ತವೆ. ಹಾಗಾಗಿ, ಇಲ್ಲಿನ ಕಾಡು ಶುಚಿಯಾಗಿರುವುದರಲ್ಲಿ ಇಲ್ಲಿನ ರಣಹದ್ದುಗಲು ಪ್ರಮುಖ ಪಾತ್ರ ವಹಿಸುತ್ತವೆ ಎಂಬ ಪ್ರತೀತಿಯಿದೆ.
ಇಲ್ಲಿನ ರಣಹದ್ದುಗಳ ವಿಶೇಷವೆಂದರೆ, ಇವುಗಳು ಸುಮಾರು 5ರಿಂದ 6 ಕೆಜಿ ತೂಕ ಬರುತ್ತವೆ. ಇವುಗಳ ರೆಕ್ಕೆಗಳು ಅಗಲಿಸಿದಾಗ ಪ್ರತಿ ರೆಕ್ಕೆಯು 6ರಿಂದ 8 ಅಡಿಗಳಷ್ಟು ಚಾಚಿಕೊಳ್ಳುತ್ತವೆ. ಹೆಚ್ಚಾಗಿ ಗುಂಪುಗಳಲ್ಲಿ ಕಾಣಿಸಿಕೊಳ್ಳುವ ಇವು, 1980ರಲ್ಲಿ ವಿಶ್ವದಾದ್ಯಂತ ಸುಮಾರು 80 ಮಿಲಿಯನ್ ನಷ್ಟಿದ್ದವು ಎಂದು ಅಂಕಿ-ಅಂಶಗಳು ಹೇಳುತ್ತವೆ. ಆದರೆ, ಆನಂತರದ ವರ್ಷಗಳಲ್ಲಿ, ಇವುಗಳ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿರುವುದರಿಂದ ರಣಹದ್ದುಗಳನ್ನು ಅಳಿವಿನಂಚಿನಲ್ಲಿರುವ ಪಕ್ಷಿ ಎಂದು ಗುರುತಿಸಲಾಗಿದೆ. ಹಾಗಾಗಿ, ರಾಜ್ಯದಲ್ಲಿರುವ ಈ ರಣಹದ್ದು ಪ್ರಾಂತ್ಯವನ್ನು ರಣಹದ್ದುಗಳ ಸಂರಕ್ಷಿತ ವಲಯವೆಂದು ಘೋಷಿಸಲಾಗಿದೆ.[ರಾಮನಗರದ ರಣಹದ್ದು, ರಾಮ ದೇಗುಲ, ವಾರಾಂತ್ಯದ ಚಾರಣ]

ಇಲಾಖೆಯಿಂದ ಅನುಮತಿ ಬೇಕು

ಇಲಾಖೆಯಿಂದ ಅನುಮತಿ ಬೇಕು

ನಾವು ಇಲ್ಲಿ ಎರಡು ಪ್ರಭೇದದ ರಣಹದ್ದುಗಳನ್ನು ಕಾಣಬಹದು. ಮೊದಲನೆಯದು ಲಾಂಗ್ ಬಿಲ್ಡ್ ರಣಹದ್ದು, ಎರಡನೇದು ವೈಟ್ ಬ್ಯಾಕ್ ರಣಹದ್ದು. ಇವುಗಳು ಒಂದು ಬಾರಿಗೆ ಒಂದೇ ಮೊಟ್ಟೆಯಿಡುವ ಕಾರಣ ಇವುಗಳ ಸಂತತಿ ಬೇಗನೆ ಹೆಚ್ಚಾಗುವುದಿಲ್ಲ. ಹಾಗಾಗಿ ಸೂಕ್ಷ್ಮವಾಗಿ ಇವುಗಳನ್ನು ಕಾಪಾಡಬೇಕಾಗಿದೆ. ಕರ್ನಾಟಕ ಅರಣ್ಯ ಇಲಾಖೆ ರಾಮದೇವರ ಬೆಟ್ಟದ ಸುತ್ತಲು ಸಸಿಗಳನ್ನು ನೆಟ್ಟು ಹಸಿರನ್ನು ಹೆಚ್ಚಿಸುವ ಪ್ರಯತ್ನದಲ್ಲಿದೆ. ಈ ಜಾಗಕ್ಕೆ ಭೇಟಿ ನೀಡಲು ನಿಮಗೆ ಇಲಾಖೆಯಿಂದ ಅನುಮತಿ ಬೇಕಾಗುತ್ತದೆ. ಒಮ್ಮೆ ಭೇಟಿ ನೀಡಿ. ಇದರ ಹತ್ತಿರವೇ ಜನಪದ ಲೋಕ ಕೂಡ ಇದೆ. ಕಂಸಾಳೆ, ಡೊಳ್ಳು ಕುಣಿತ, ಮಾರಿ ಕುಣಿತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ.

ಹೋಗುವ ಮಾರ್ಗ ಹೀಗಿದೆ

ಹೋಗುವ ಮಾರ್ಗ ಹೀಗಿದೆ

ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಮಾರ್ಗದಲ್ಲಿ ಐವತ್ತೇ ಕಿಲೋಮೀಟರ್ ದೂರದಲ್ಲಿರುವ ಈ ಬೆಟ್ಟಕ್ಕೆ ಬರೀ ಒಂದು ಗಂಟೆ ಪ್ರಯಾಣ ಅಷ್ಟೇ. ಬೆಂಗಳೂರಿನಿಂದ ಮೈಸೂರು ಕಡೆಗೆ ಹೊರಟ ನಂತರ 48 ಕಿಮೀ ಕ್ರಮಿಸಿದ ಮೇಲೆ ನಿಮಗೆ ಸಿಗುವುದೇ ರಾಮನಗರ ಜಿಲ್ಲಾ ಕೇಂದ್ರ.
ಅಲ್ಲಿಂದ ರಾಮದೇವರ ಬೆಟ್ಟಕ್ಕೆ ಸುಮಾರು 2 ಕಿ.ಮೀ. ಆಗುತ್ತದೆ. ರಾಮನಗರದ ಸಮೀಪಕ್ಕೆ ಬಂದ ಕೂಡಲೇ ರಾಮ ದೇವರ ಬೆಟ್ಟಕ್ಕೆ ಹೋಗುವ ದಾರಿ ಎಂಬ ದೊಡ್ಡ ಬೋರ್ಡ್ ಹಾಕಲಾಗಿದೆ. ಆ ಬೋರ್ಡಿನಲ್ಲಿ ಸೂಚಿಸಲಾಗಿರುವ ದಾರಿಯನ್ನು ಅನುಸರಿಸಿ ಸಾಗಿದರೆ, 2 ಕಿಮೀ. ದಾಟುವಷ್ಟರಲ್ಲಿ ನೀವು ರಾಮದೇವರ ಬೆಟ್ಟದ ಹತ್ತಿರಕ್ಕೆ ಬಂದಿರುತ್ತೀರಿ.
ಇದು ಸಮುದ್ರ ಮಟ್ಟದಿಂದ 3066 ಅಡಿ ಎತ್ತರದಲ್ಲಿದೆ. ಇಲ್ಲಿರುವ ಬೆಟ್ಟ ಪ್ರದೇಶಗಳೆಂದರೆ ಶಿವರಾಮಗಿರಿ, ಯತಿರಾಜಗಿರಿ, ಸೋಮಗಿರಿ, ಕೃಷ್ಣಗಿರಿ, ರೇವಣ್ಣ ಸಿದ್ದೇಶ್ವರ ಬೆಟ್ಟ, ಜಲ ಸಿದ್ದೇಶ್ವರ ಬೆಟ್ಟ, ಸಿಡಿಲುಕಲ್ಲು ಬೆಟ್ಟ, ಕಾಕಾಸುರ ಬೆಟ್ಟ, ಕೊಪ್ಪತಗಿರಿ ಇನ್ನೂ ಅನೇಕ ಸಣ್ಣಪುಟ್ಟ ಬೆಟ್ಟಗಳಿವೆ.

English summary
₹7.5 crore proposal is on the anvil to establish “Sholay the 3D Virtual Reality Village’ for cine lovers on a locale at Ramadevara Betta of Ramanagara district, that was popularly known as Ramgad as picturised in the film.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X