ಕರ್ನಾಟಕಕ್ಕೆ ಕೋವ್ಯಾಕ್ಸಿನ್ ಲಸಿಕೆಯ 20 ಸಾವಿರ ಡೋಸ್
ಬೆಂಗಳೂರು, ಜನವರಿ 13: ಕೋವ್ಯಾಕ್ಸಿನ್ ಲಸಿಕೆಯ 20 ಸಾವಿರ ಡೋಸ್ ಗಳು ರಾಜ್ಯಕ್ಕೆ ಬರಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವ್ಯಾಕ್ಸಿನ್ ನ ಒಂದು ವೈಲ್ ನಲ್ಲಿ 10 ಎಂಎಲ್ ಲಸಿಕೆ ಇದೆ. ಕೋವಿಶೀಲ್ಡ್ ನ ಒಂದು ವೈಲ್ ನಲ್ಲಿ 5 ಎಂಎಲ್ ಇದೆ. ಕೋವ್ಯಾಕ್ಸಿನ್ ನ ಒಂದು ವೈಲ್ ನಿಂದ 20 ಮಂದಿಗೆ ಲಸಿಕೆ ನೀಡಬಹುದು. ಎರಡು ಲಸಿಕೆಗಳ ನಡುವೆ ಇರುವ ವ್ಯತ್ಯಾಸ ಇಷ್ಟೇ. ರಾಜ್ಯದಲ್ಲಿ ಇವೆರಡೂ ಲಸಿಕೆಗಳನ್ನು ನೀಡಲಾಗುವುದು. ಆದರೆ ಲಸಿಕೆ ಪಡೆಯುವವರು ಯಾವ ಲಸಿಕೆ ಬೇಕೆಂದು ಕೇಳುವಂತಿಲ್ಲ ಎಂದರು.
54 ಬಾಕ್ಸ್, 6.48 ಲಕ್ಷ ಡೋಸ್ ಲಸಿಕೆ ಎಲ್ಲವೂ ಸುರಕ್ಷಿತ : ಸುಧಾಕರ್
ಯಾವ ಜಿಲ್ಲೆಗಳಿಗೆ ಎಷ್ಟು ಲಸಿಕೆ ನೀಡಬೇಕು, ಯಾವ ಸಿಬ್ಬಂದಿಗೆ ನೀಡಬೇಕು ಮೊದಲಾದವುಗಳ ಬಗ್ಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಜನವರಿ 16 ರಿಂದ ಲಸಿಕೆ ವಿತರಣೆ ಆರಂಭಿಸುವುದಕ್ಕೆ ಸಿದ್ಧತೆಯಾಗಿ ಎಲ್ಲ ಜಿಲ್ಲೆಗಳಿಗೆ ಲಸಿಕೆ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಚಿವ ಸಂಪುಟಕ್ಕೆ ಸೇರ್ಪಡೆಯಾಗುತ್ತಿರುವ ನೂತನ ಸಚಿವರಿಗೆ ಶುಭಾಶಯ ತಿಳಿಸುತ್ತೇನೆ. ಕೊನೆ ಗಳಿಗೆಯಲ್ಲಿ ಕೆಲವರಿಗೆ ಸಂಪುಟಕ್ಕೆ ಸೇರಲು ಸಾಧ್ಯವಾಗಿಲ್ಲ. ಅಂತಹವರಿಗೆ ಸೂಕ್ತ ಸಮಯದಲ್ಲಿ ಪಕ್ಷ ಉತ್ತಮ ಅವಕಾಶ ನೀಡಲಿದೆ. ನಮ್ಮ ಸರ್ಕಾರ ಪಾರದರ್ಶಕವಾಗಿ ಕೆಲಸ ಮಾಡಲಿದ್ದು, ಎಲ್ಲ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಕೆಲಸ ಮಾಡಲಿದೆ. ಸಂಪುಟ ಪುನಾರಚನೆ ಅಥವಾ ವಿಸ್ತರಣೆಯಾದಾಗ ಅಸಮಾಧಾನ ಸಹಜ. ಅದು ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ಭಾಗ ಎಂದರು.
ಎಲ್ಲ ಬಿಜೆಪಿ ಶಾಸಕರು ಒಗ್ಗಟ್ಟಾಗಿದ್ದಾರೆ. ಯಾರೂ ಗುಂಪುಗಾರಿಕೆ ಮಾಡುತ್ತಿಲ್ಲ. ಪಕ್ಷದ ಕೆಳಗೆ ಎಲ್ಲರೂ ಒಗ್ಗಟ್ಟಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.